
ಮೇಕೆದಾಟು| ತಮಿಳುನಾಡು ವಿಧಾನಸಭೆ ನಿರ್ಣಯಕ್ಕೆ ಬೆಲೆ ಇಲ್ಲ; ಆ.15ರೊಳಗೆ ಪರಿಷ್ಕೃತ ಡಿಪಿಆರ್ ಸಲ್ಲಿಕೆ
"ತಮಿಳುನಾಡು ತಮ್ಮ ವಿಧಾನಸಭೆಯಲ್ಲಿ ಎಷ್ಟೇ ನಿರ್ಣಯಗಳನ್ನು ಮಾಡಿಕೊಂಡರೂ ಅದಕ್ಕೆ ಯಾವುದೇ ಕಾನೂನು ಮಾನ್ಯತೆ ಇಲ್ಲ. ಯೋಜನೆಯನ್ನು ತಡೆಯುವ ಹಕ್ಕು ಅವರಿಗಿಲ್ಲ" ಎಂದು ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.
ಮೇಕೆದಾಟು ಸಮತೋಲನ ಜಲಾಶಯ ನಿರ್ಮಾಣ ಯೋಜನೆ ವಿರುದ್ಧ ತಮಿಳುನಾಡು ವಿಧಾನಸಭೆಯಲ್ಲಿ ಅಂಗೀಕರಿಸಿರುವ ನಿರ್ಣಯಕ್ಕೆ ಕರ್ನಾಟಕದ ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ತಿರುಗೇಟು ನೀಡಿದ್ದಾರೆ. "ಮೇಕೆದಾಟು ಯೋಜನೆ ತಡೆಯಲು ತಮಿಳುನಾಡಿಗೆ ಯಾವುದೇ ಕಾನೂನಾತ್ಮಕ , ತಾಂತ್ರಿಕ ಅಧಿಕಾರವಿಲ್ಲ. ರಾಜ್ಯ ಸರ್ಕಾರವು ಈ ಯೋಜನೆಯನ್ನು ಯಾವುದೇ ಕಾರಣಕ್ಕೂ ಕೈಬಿಡುವುದಿಲ್ಲ, ಖಂಡಿತವಾಗಿಯೂ ಜಾರಿಗೆ ತರಲಿದೆ" ಎಂದು ಸ್ಪಷ್ಟಪಡಿಸಿದ್ದಾರೆ.
ಕೇಂದ್ರದ ಹಸಿರು ನಿಶಾನೆ
ಬೆಂಗಳೂರಿನಲ್ಲಿ ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವರು, ಮೇಕೆದಾಟು ಯೋಜನೆಗೆ ನೆರೆ ರಾಜ್ಯಗಳ ಆಕ್ಷೇಪಣೆ ಅನಗತ್ಯ ಎಂದು ಸ್ವತಃ ಕೇಂದ್ರ ಸರ್ಕಾರವೇ ಸ್ಪಷ್ಟಪಡಿಸಿದೆ. ಯೋಜನೆಗೆ ಸಂಬಂಧಿಸಿದಂತೆ ಅಗತ್ಯ ಪರಿಷ್ಕರಣೆಗಳನ್ನು ಒಳಗೊಂಡ ವಿಸ್ತೃತ ಯೋಜನಾ ವರದಿಯನ್ನು ಸಿದ್ಧಪಡಿಸಲಾಗುತ್ತಿದ್ದು, ಆಗಸ್ಟ್ 15ರೊಳಗೆ ಕೇಂದ್ರಕ್ಕೆ ಸಲ್ಲಿಸಲಾಗುವುದು ಎಂದು ಹೇಳಿದ್ಧಾರೆ.
"ತಮಿಳುನಾಡು ತಮ್ಮ ವಿಧಾನಸಭೆಯಲ್ಲಿ ಎಷ್ಟೇ ನಿರ್ಣಯಗಳನ್ನು ಮಾಡಿಕೊಂಡರೂ ಅದಕ್ಕೆ ಯಾವುದೇ ಕಾನೂನು ಮಾನ್ಯತೆ ಇಲ್ಲ. ಯೋಜನೆಯನ್ನು ತಡೆಯುವ ಹಕ್ಕು ಅವರಿಗಿಲ್ಲ" ಎಂದು ಸಚಿವರು ಹೇಳಿದ್ದಾರೆ.
ʼಸುಪ್ರೀಂಕೋರ್ಟ್‌ನಲ್ಲಿ ತಮಿಳುನಾಡಿಗೆ ಮುಖಭಂಗʼ
ತಮಿಳುನಾಡು ಈ ಹಿಂದೆ ಮೇಕೆದಾಟು ಯೋಜನೆ ವಿರುದ್ಧ ಎರಡು ಬಾರಿ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು. ನ್ಯಾಯಾಲಯವು ಅವರ ಅರ್ಜಿಯನ್ನು ವಜಾಗೊಳಿಸಿದೆ. ಹಾಗಾಗಿ ಮೇಕೆದಾಟು ಯೋಜನೆಯನ್ನು ಮಾಡಿಯೇ ತೀರುತ್ತೇವೆ ಎಂದು ರಾಮಲಿಂಗಾ ರೆಡ್ಡಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮುಂಬರುವ ರಾಜ್ಯ ಶಾಸನಸಭೆಯ ಅಧಿವೇಶನದಲ್ಲೂ ಈ ವಿಷಯದ ಕುರಿತು ವಿಸ್ತೃತವಾಗಿ ಚರ್ಚೆ ನಡೆಸಲಿದ್ದೇವೆ." ಎಂದು ಹೇಳಿದ್ದಾರೆ.
ರಾಜ್ಯದ ಹಿತಾಸಕ್ತಿ ಕಾಯಲು ಸರ್ಕಾರ ಬದ್ಧವಾಗಿದ್ದು, ಮೇಕೆದಾಟು ಯೋಜನೆ ಅನುಷ್ಠಾನದ ಹಾದಿಯಲ್ಲಿ ಎದುರಾಗುವ ಯಾವುದೇ ಕಾನೂನು ಅಥವಾ ರಾಜಕೀಯ ಸವಾಲುಗಳನ್ನು ಎದುರಿಸಲು ಸಂಪೂರ್ಣ ಸಿದ್ಧವಾಗಿದೆ ಎಂದು ಸಚಿವರು ಭರವಸೆ ನೀಡಿದ್ದಾರೆ.

