ಕಸ್ತೂರಿ ರಂಗನ್ ವರದಿ: ಕೇಂದ್ರದ 7ನೇ ಕರಡು ಅಧಿಸೂಚನೆ ತಿರಸ್ಕರಿಸಲು ರಾಜ್ಯ ಸರ್ಕಾರ ನಿರ್ಧಾರ
x

ಕಸ್ತೂರಿ ರಂಗನ್ ವರದಿ: ಕೇಂದ್ರದ 7ನೇ ಕರಡು ಅಧಿಸೂಚನೆ ತಿರಸ್ಕರಿಸಲು ರಾಜ್ಯ ಸರ್ಕಾರ ನಿರ್ಧಾರ

ಕಸ್ತೂರಿ ರಂಗನ್ ವರದಿ ಜಾರಿಯಾದರೆ ಸ್ಥಳೀಯರ ಜೀವನಾಧಾರಿತ ಕೃಷಿ, ತೋಟಗಾರಿಕೆ, ಮನೆ ನಿರ್ಮಾಣ ಹಾಗೂ ಅಗತ್ಯ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳಿಗೆ ಅಡ್ಡಿ ಉಂಟಾಗಲಿದೆ ಎಂಬ ಆತಂಕ ಮಲೆನಾಡು ಭಾಗದ ಜನರನ್ನು ಕಾಡುತ್ತಿದೆ.


ಪಶ್ಚಿಮ ಘಟ್ಟಗಳ ರಕ್ಷಣೆಗಾಗಿ ಕೇಂದ್ರ ಸರ್ಕಾರ ಹೊರಡಿಸಿರುವ ಡಾ.ಕಸ್ತೂರಿ ರಂಗನ್ ವರದಿಯ 7ನೇ ಕರಡು ಅಧಿಸೂಚನೆಯನ್ನು ಸಂಪೂರ್ಣ ತಿರಸ್ಕರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ವಿಧಾನಸಭೆಯಲ್ಲಿ ಗುರುವಾರ ನಿಯಮ 69 ರಡಿ ಕೇಂದ್ರ ಸರ್ಕಾರದ ಏಳನೇ ಕರಡು ಅಧಿಸೂಚನೆ ತಿರಸ್ಕರಿಸುವಂತೆ ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ವಿಷಯ ಪ್ರಸ್ತಾಪಿಸಿ, ಕೇಂದ್ರದ ವಿರುದ್ಧ ನಿರ್ಣಯ ಅಂಗೀಕಾರಕ್ಕೆ ಒತ್ತಾಯಿಸಿದರು. ಇದಕ್ಕೆ ಶಾಸಕರಾದ ಎಚ್.ಡಿ. ತಮ್ಮಯ್ಯ ಹಾಗೂ ಟಿ.ಡಿ. ರಾಜೇಗೌಡ ಅವರು ಕೂಡ ದನಿಗೂಡಿಸಿದರು.

ಪಶ್ಚಿಮ ಘಟ್ಟ ಹಾಗೂ ಮಲೆನಾಡು ಭಾಗದ ನಿವಾಸಿಗಳು, ರೈತರ ಮೇಲೆ ಈ ವರದಿ ಬೀರುವ ಮಾರಕ ಪರಿಣಾಮ ಬೀರಲಿದೆ. ಕಸ್ತೂರಿ ರಂಗನ್ ವರದಿ ಜಾರಿಯಾದರೆ ಸ್ಥಳೀಯರ ಜೀವನಾಧಾರಿತ ಕೃಷಿ, ತೋಟಗಾರಿಕೆ, ಮನೆ ನಿರ್ಮಾಣ ಹಾಗೂ ಅಗತ್ಯ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳಿಗೆ ಅಡ್ಡಿ ಉಂಟಾಗಲಿದೆ. ಇದರಿಂದ ಈ ಭಾಗದ ಜನರು ಸಂಕಷ್ಟಕ್ಕೆ ಸಿಲುಕಲಿದ್ದು, ಸರ್ಕಾರ ಯಾವುದೇ ಕಾರಣಕ್ಕೂ ಅಧಿಸೂಚನೆ ಒಪ್ಪಬಾರದು ಎಂದು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅರಣ್ಯ ಸಚಿವ ರಾಮಲಿಂಗಾರೆಡ್ಡಿ, ಕಸ್ತೂರಿ ರಂಗನ್ ವರದಿ ತಿರಸ್ಕರಿಸಲು ರಾಜ್ಯ ಸರ್ಕಾರದಿಂದ ಶಿಫಾರಸು ಮಾಡುತ್ತೇವೆ ಎಂದು ಘೋಷಿಸಿದರು.

ಆಕ್ಷೇಪಣೆಗೆ 60 ದಿನ ಕಾಲಾವಕಾಶ

"ಕೇಂದ್ರ ಸರ್ಕಾರ ಹೊರಡಿಸಿರುವ 7ನೇ ಕರಡು ಅಧಿಸೂಚನೆಗೆ ಕಾನೂನಾತ್ಮಕವಾಗಿ ಆಕ್ಷೇಪಣೆ ಸಲ್ಲಿಸಲು 60 ದಿನಗಳ ಕಾಲಾವಕಾಶ ನೀಡಲಾಗಿದೆ. ಮಲೆನಾಡು ಭಾಗದ ಜನರ ಹಿತರಕ್ಷಣೆ ಮತ್ತು ಪರಿಸರದ ಸಮತೋಲನ ಕಾಯ್ದುಕೊಳ್ಳುವುದು ನಮ್ಮ ಜವಾಬ್ದಾರಿ. ಹೀಗಾಗಿ ರಾಜ್ಯ ಸರ್ಕಾರವು ನಿಗದಿತ ಕಾಲಮಿತಿಯೊಳಗೆ ಸೂಕ್ತ ಆಕ್ಷೇಪಣೆ ದಾಖಲಿಸಿ, ಕೇಂದ್ರದ ಅಧಿಸೂಚನೆಯನ್ನು ಅಧಿಕೃತವಾಗಿ ತಿರಸ್ಕರಿಸಲಿದೆ" ಎಂದು ಸದನಕ್ಕೆ ರಾಮಲಿಂಗಾ ರೆಡ್ಡಿ ತಿಳಿಸಿದರು.

ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯ ಹೊರಡಿಸಿದ್ದ 7ನೇ ಕರಡು ಅಧಿಸೂಚನೆ ಪ್ರಕಾರ, ದೇಶದ 6 ರಾಜ್ಯಗಳಲ್ಲಿ ಹಬ್ಬಿರುವ ಪಶ್ಚಿಮ ಘಟ್ಟದ ಒಟ್ಟು 56,825.7 ಚದರ ಕಿ.ಮೀ. ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶ ಎಂದು ಘೋಷಿಸಲು ಪ್ರಸ್ತಾಪಿಸಲಾಗಿದೆ. ಈ ಅಧಿಸೂಚನೆಯಲ್ಲಿ ಕರ್ನಾಟಕವು ಅತ್ಯಂತ ಹೆಚ್ಚಿನ ಭಾಗ ಅಂದರೆ 20,668 ಚದರ ಕಿ.ಮೀ ಹೊಂದಿದ್ದು, ಮಲೆನಾಡು ಹಾಗೂ ಕರಾವಳಿ ಭಾಗದ ನೂರಾರು ಗ್ರಾಮಗಳು ಇದರ ವ್ಯಾಪ್ತಿಗೆ ಒಳಪಡಲಿವೆ. ಹಾಗಾಗಿ, ಕೇಂದ್ರ ಸರ್ಕಾರದ ಹೊರಡಿಸಿರುವ 7ನೇ ಕರಡು ಅಧಿಸೂಚನೆಯನ್ನು ಈ ಭಾಗದ ಜನಪ್ರತಿನಿಧಿಗಳು ವಿರೋಧಿಸುತ್ತಿದ್ದಾರೆ. ಕಸ್ತೂರಿ ರಂಗನ್ ವರದಿಯ ಅಧಿಸೂಚನೆಯಲ್ಲಿ ಪರಿಸರ ರಕ್ಷಣೆಗಾಗಿ ಕೆಲವು ಉದ್ದಿಮೆ ಮತ್ತು ಯೋಜನೆಗಳನ್ನು ಸಂಪೂರ್ಣ ನಿಷೇಧಿಸಲು ಪ್ರಸ್ತಾಪಿಸಲಾಗಿದೆ.

ವಾಣಿಜ್ಯ ಗಣಿಗಾರಿಕೆ, ಕಲ್ಲು ಗಣಿಗಾರಿಕೆ ಮತ್ತು ಮರಳು ಗಣಿಗಾರಿಕೆ, ಹೊಸ ಥರ್ಮಲ್ ಪವರ್ ಪ್ಲಾಂಟ್ಗಳ ಸ್ಥಾಪನೆ, ಹೆಚ್ಚು ಮಾಲಿನ್ಯ ಉಂಟುಮಾಡುವ ಕೈಗಾರಿಕೆಗಳ ಸ್ಥಾಪನೆ, ದೊಡ್ಡ ಮಟ್ಟದ ನಿರ್ಮಾಣ ಯೋಜನೆಗಳು ಹಾಗೂ ಟೌನ್ಶಿಪ್ಗಳ ನಿರ್ಮಾಣಕ್ಕೆ ನಿರ್ಬಂಧ ಹೇರಲಾಗಿದೆ. ಆದರೆ, ಜಲವಿದ್ಯುತ್ ಯೋಜನೆಗಳನ್ನು ಕಟ್ಟುನಿಟ್ಟಾದ ನಿಯಮಾವಳಿಗಳ ಅಡಿಯಲ್ಲಿ ನಿರ್ಮಿಸಲು ಅನುಮತಿ ನೀಡಲಾಗಿದೆ. ಉಳಿದಂತೆ ಕೃಷಿ, ತೋಟಗಾರಿಕೆ, ಮಳೆನೀರು ಕೊಯ್ಲು ಮತ್ತು ಸ್ಥಳೀಯರ ದೈನಂದಿನ ಜೀವನೋಪಾಯದ ಚಟುವಟಿಕೆಗಳಿಗೆ ಯಾವುದೇ ಸಮಸ್ಯೆ ಇರುವುದಿಲ್ಲ ಎಂದು ಅಧಿಸೂಚನೆಯಲ್ಲಿ ಸ್ಪಷ್ಟಪಡಿಸಲಾಗಿದೆ. ಆರೂ ರಾಜ್ಯಗಳ ಸಂಪೂರ್ಣ ಒಪ್ಪಂದಕ್ಕೆ ಕಾಯದೆ, ಒಪ್ಪಿಗೆ ನೀಡುವ ರಾಜ್ಯಗಳಲ್ಲಿ ಹಂತ ಹಂತವಾಗಿ ವರದಿ ಜಾರಿಗೆ ತರುವ ಪ್ರಸ್ತಾವನೆಯನ್ನೂ ಕೇಂದ್ರ ಸರ್ಕಾರ ಮುಂದಿಟ್ಟಿದೆ.

ವಿರೋಧಕ್ಕೆ ಕಾರಣವೇನು?

ಪಶ್ಚಿಮ ಘಟ್ಟ ವ್ಯಾಪ್ತಿಯ 1,500ಕ್ಕೂ ಹೆಚ್ಚು ಗ್ರಾಮಗಳು ಪರಿಸರ ಸೂಕ್ಷ್ಮ ಪ್ರದೇಶದಡಿ ಬರಲಿವೆ. ಇದರಿಂದ ಸ್ಥಳೀಯ ರೈತರು, ಗಿರಿಜನರ ದೈನಂದಿನ ಕೃಷಿ, ಭೂಮಿ ಹಕ್ಕು ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ಅಡ್ಡಿಯಾಗಲಿದೆ ಎಂಬುದು ವಿರೋಧಕ್ಕೆ ಕಾರಣವಾಗಿದೆ. ಹೊಸ ರಸ್ತೆ ನಿರ್ಮಾಣ, ಸೇತುವೆ, ಆಸ್ಪತ್ರೆ, ಶಾಲೆ, ವಿದ್ಯುತ್ ಮಾರ್ಗ ಮತ್ತು ಕುಡಿಯುವ ನೀರಿನ ಯೋಜನೆಗಳಿಗೆ ಪರಿಸರ ಇಲಾಖೆಯ ಕಠಿಣ ನಿಯಮಾವಳಿಗಳು ಅಡ್ಡಬರಲಿವೆ. ಸಣ್ಣ ಪ್ರಮಾಣದ ಉದ್ಯಮಗಳು, ಪ್ರವಾಸೋದ್ಯಮ ಮತ್ತು ಸ್ಥಳೀಯ ಕಲ್ಲು ಕ್ವಾರಿಗಳ ಮೇಲಿನ ನಿಷೇಧದಿಂದಾಗಿ ನಿರುದ್ಯೋಗ ಸಮಸ್ಯೆ ಹೆಚ್ಚಲಿದೆ ಎಂಬ ಆತಂಕವೂ ಇದೆ.

Read More
Next Story