ಪಡಿತರದಾರರಿಗೆ ಗುಡ್‌ನ್ಯೂಸ್; ಇ-ಕೆವೈಸಿಗೆ ಗಡುವು- ನವೆಂಬರ್ 30ರವರೆಗೆ ವಿಸ್ತರಣೆ
x

ಪಡಿತರ ಚೀಟಿದಾರರಿಗೆ ಗುಡ್‌ನ್ಯೂಸ್! ಇ-ಕೆವೈಸಿ ಗಡುವನ್ನು ನವೆಂಬರ್ 30ರವರೆಗೆ ವಿಸ್ತರಿಸಲಾಗಿದೆ. ಅನ್ನಸೇವೆ ಆ್ಯಪ್ ಅಥವಾ ನ್ಯಾಯಬೆಲೆ ಅಂಗಡಿಯಲ್ಲಿ ಇ-ಕೆವೈಸಿ ಮಾಡಿಸಿಕೊಳ್ಳಬಹುದು.

ಪಡಿತರದಾರರಿಗೆ ಗುಡ್‌ನ್ಯೂಸ್; ಇ-ಕೆವೈಸಿಗೆ ಗಡುವು- ನವೆಂಬರ್ 30ರವರೆಗೆ ವಿಸ್ತರಣೆ

ಪಡಿತರ ಚೀಟಿದಾರರು ಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಲು ಎರಡು ಆಯ್ಕೆಗಳನ್ನು ನೀಡಲಾಗಿದೆ. ಮೊದಲನೆಯದಾಗಿ, ಮನೆಯಲ್ಲೇ ಕುಳಿತು ಅನ್ನಸೇವೆ ಮೊಬೈಲ್ ಆ್ಯಪ್ ಮೂಲಕ ಇ-ಕೆವೈಸಿ ಮಾಡಿಸಿಕೊಳ್ಳಬಹುದು.


Click the Play button to hear this message in audio format

ರಾಜ್ಯದ ಪಡಿತರ ಚೀಟಿದಾರರಿಗೆ ಆಹಾರ ಇಲಾಖೆ ಮತ್ತೊಮ್ಮೆ ಸಿಹಿಸುದ್ದಿ ನೀಡಿದೆ. ಪಡಿತರ ಚೀಟಿಗೆ ಇ-ಕೆವೈಸಿ (e-KYC) ಮಾಡಿಸಿಕೊಳ್ಳಲು ನೀಡಲಾಗಿದ್ದ ಗಡುವನ್ನು ನವೆಂಬರ್ 30ರವರೆಗೆ ವಿಸ್ತರಿಸಲಾಗಿದೆ. ಈ ಹಿಂದೆ ನವೆಂಬರ್ 10 ಕೊನೆಯ ದಿನಾಂಕ ಎಂದು ನಿಗದಿಪಡಿಸಲಾಗಿತ್ತು. ಆದರೆ, ಫಲಾನುಭವಿಗಳ ಅನುಕೂಲ ಹಾಗೂ ಹಿತದೃಷ್ಟಿಯಿಂದ ಗಡುವು ವಿಸ್ತರಿಸುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಆಹಾರ ಇಲಾಖೆ ತಿಳಿಸಿದೆ. ಹೀಗಾಗಿ, ಇನ್ನೂ ಇ-ಕೆವೈಸಿ ಪೂರ್ಣಗೊಳಿಸದ ಪಡಿತರದಾರರಿಗೆ ಹೆಚ್ಚುವರಿ ಕಾಲಾವಕಾಶ ಸಿಕ್ಕಂತಾಗಿದೆ.

ಎರಡು ವಿಧಾನಗಳಲ್ಲಿ ಇ-ಕೆವೈಸಿ ಮಾಡಿಸಿಕೊಳ್ಳಬಹುದು

ಪಡಿತರ ಚೀಟಿದಾರರು ಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಲು ಎರಡು ಆಯ್ಕೆಗಳನ್ನು ನೀಡಲಾಗಿದೆ. ಮೊದಲನೆಯದಾಗಿ, ಮನೆಯಲ್ಲೇ ಕುಳಿತು ಅನ್ನಸೇವೆ ಮೊಬೈಲ್ ಆ್ಯಪ್ ಮೂಲಕ ಇ-ಕೆವೈಸಿ ಮಾಡಿಸಿಕೊಳ್ಳಬಹುದು. ಇಲ್ಲವೇ ತಮ್ಮ ಹತ್ತಿರದ ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡಿ ಪ್ರಕ್ರಿಯೆ ಪೂರ್ಣಗೊಳಿಸಬಹುದು. ನವೆಂಬರ್ 30ರ ಅಂತಿಮ ಗಡುವಿನೊಳಗೆ ಎಲ್ಲ ಫಲಾನುಭವಿಗಳು ಇ-ಕೆವೈಸಿ ಮಾಡಿಸಿಕೊಳ್ಳುವಂತೆ ಇಲಾಖೆ ಮನವಿ ಮಾಡಿದೆ.

ರಾಜ್ಯದ ಎಲ್ಲ 31 ಜಿಲ್ಲೆಗಳಲ್ಲೂ ಅನ್ನಸೇವೆ ಆ್ಯಪ್ ಸೌಲಭ್ಯ

ನ್ಯಾಯಬೆಲೆ ಅಂಗಡಿಗಳ ಮುಂದೆ ಸರದಿಯಲ್ಲಿ ನಿಲ್ಲುವುದನ್ನು ತಪ್ಪಿಸುವ ಉದ್ದೇಶದಿಂದ ಆಹಾರ ಇಲಾಖೆ ಅನ್ನಸೇವೆ ಆ್ಯಪ್ ಸೇವೆಯನ್ನು ರಾಜ್ಯದ ಎಲ್ಲ 31 ಜಿಲ್ಲೆಗಳಿಗೂ ವಿಸ್ತರಿಸಿದೆ. ಕೇಂದ್ರ ಸರ್ಕಾರದ ನಿಯಮದ ಪ್ರಕಾರ ಪ್ರತಿ ಐದು ವರ್ಷಕ್ಕೊಮ್ಮೆ ಪಡಿತರ ಚೀಟಿದಾರರು ಇ-ಕೆವೈಸಿ ಮಾಡಿಸಿಕೊಳ್ಳುವುದು ಕಡ್ಡಾಯವಾಗಿದೆ. ಹಿರಿಯ ನಾಗರಿಕರು ಹಾಗೂ ಮಕ್ಕಳ ಅನುಕೂಲಕ್ಕಾಗಿ ಮುಖ ಗುರುತಿಸುವಿಕೆ (ಫೇಸ್ ಆಥೆಂಟಿಕೇಷನ್) ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ. ಉದ್ಯೋಗ ಅರಸಿ ನಗರ ಪ್ರದೇಶಗಳಿಗೆ ವಲಸೆ ಹೋದವರು ಇ-ಕೆವೈಸಿಗಾಗಿ ತಮ್ಮ ಊರಿಗೆ ಹಿಂದಿರುಗುವ ಅನಿವಾರ್ಯತೆಯನ್ನೂ ಈ ಆ್ಯಪ್ ತಪ್ಪಿಸಲಿದೆ.

ಅನ್ನಸೇವೆ ಆ್ಯಪ್ ಮೂಲಕ ಇ-ಕೆವೈಸಿ ಮಾಡುವುದು ಹೇಗೆ?

ಅನ್ನಸೇವೆ ಆ್ಯಪ್ ಮೂಲಕ ಇ-ಕೆವೈಸಿ ಪೂರ್ಣಗೊಳಿಸಲು ಪಡಿತರ ಚೀಟಿ ಹಾಗೂ ಅದಕ್ಕೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ ಅಗತ್ಯವಿದೆ. ಮೊದಲು ಮೊಬೈಲ್‌ನಲ್ಲಿ ಅನ್ನಸೇವೆ ಆ್ಯಪ್ ತೆರೆಯಬೇಕು. ಲಾಗಿನ್ ಆಯ್ಕೆಯಲ್ಲಿ ಸ್ವಯಂ ಅಥವಾ ನಾಗರಿಕ ಎಂಬುದನ್ನು ಆಯ್ಕೆ ಮಾಡಿಕೊಂಡು, ತಮ್ಮ ಜಿಲ್ಲೆಯನ್ನು ಆರಿಸಬೇಕು. ಬಳಿಕ ಪಡಿತರ ಚೀಟಿ ಸಂಖ್ಯೆ ಮತ್ತು ಅದಕ್ಕೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಯನ್ನು ನಮೂದಿಸಿ, ಮೊಬೈಲ್‌ಗೆ ಬರುವ ಒಟಿಪಿ ದಾಖಲಿಸಬೇಕು.

ಮುಂದಿನ ಪುಟದಲ್ಲಿ ಕುಟುಂಬದ ಸದಸ್ಯರ ವಿವರಗಳು ಕಾಣಿಸಿಕೊಳ್ಳಲಿದ್ದು, ಇ-ಕೆವೈಸಿ ಮಾಡಿಸಬೇಕಾದ ಸದಸ್ಯರನ್ನು ಆಯ್ಕೆ ಮಾಡಬೇಕು. ನಂತರ ಆ್ಯಪ್ ಸೂಚನೆಯಂತೆ ಮುಖ ಗುರುತಿಸುವಿಕೆ ಪ್ರಕ್ರಿಯೆ ಪೂರ್ಣಗೊಳಿಸಬೇಕು. ಕೊನೆಯಲ್ಲಿ 'ಇ-ಕೆವೈಸಿ ಯಶಸ್ವಿ' ಎಂಬ ಸಂದೇಶ ಬಂದರೆ ಪ್ರಕ್ರಿಯೆ ಪೂರ್ಣಗೊಂಡಂತೆ. ಆಹಾರ ಸಚಿವ ರಿಜ್ವಾನ್ ಅರ್ಷದ್ ಅವರು ಈ ಪ್ರಕ್ರಿಯೆ ಕುರಿತು ಈ ಹಿಂದೆಯೇ ವಿಡಿಯೋ ಹಂಚಿಕೊಂಡಿದ್ದರು.

Read More
Next Story