ಮೈತ್ರಿಪಕ್ಷದಲ್ಲಿ ಬಗೆಹರಿಯದ ರಾಜ್ಯಸಭೆ, ಪರಿಷತ್ ಅಭ್ಯರ್ಥಿಗಳ ಆಯ್ಕೆ ಗೊಂದಲ
x

ಮೈತ್ರಿಪಕ್ಷದಲ್ಲಿ ಬಗೆಹರಿಯದ ರಾಜ್ಯಸಭೆ, ಪರಿಷತ್ ಅಭ್ಯರ್ಥಿಗಳ ಆಯ್ಕೆ ಗೊಂದಲ

ಉಭಯ ಪಕ್ಷಗಳಿಗೂ ಸಮ್ಮತಿಯಾಗುವಂತಹ ಬೆಂಗಳೂರಿನ ಹೊಟೇಲ್ ಉದ್ಯಮಿಯೊಬ್ಬರಿಗೆ ಟಿಕೆಟ್ ನೀಡುವ ಬಗ್ಗೆಯೂ ತೆರೆಮರೆಯಲ್ಲಿ ಚರ್ಚೆಗಳು ನಡೆಯುತ್ತಿವೆ.


ರಾಜ್ಯಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಲು ನಾಳೆ (ಸೋಮವಾರ) ಕೊನೆಯ ದಿನವಾಗಿದ್ದರೂ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಕೂಟದಲ್ಲಿ ಅಭ್ಯರ್ಥಿಗಳ ಆಯ್ಕೆ ಕಸರತ್ತು ಮುಂದುವರಿದಿದೆ. ಅಭ್ಯರ್ಥಿಗಳ ಪಟ್ಟಿಗೆ ಹೈಕಮಾಂಡ್ ಮಟ್ಟದಲ್ಲಿ ಮುದ್ರೆ ಬೀಳದ ಹಿನ್ನೆಲೆಯಲ್ಲಿ ಉಭಯ ಪಕ್ಷಗಳ ನಾಯಕರಲ್ಲಿ ತಳಮಳ ಸೃಷ್ಟಿಸಿದೆ.

ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರನ್ನು ಎನ್ಡಿಎ ಅಭ್ಯರ್ಥಿಯಾಗಿ ಮತ್ತೊಮ್ಮೆ ರಾಜ್ಯಸಭೆಗೆ ಕಳುಹಿಸುವ ಕುರಿತು ಬಿಜೆಪಿ ಹೈಕಮಾಂಡ್ ಇನ್ನೂ ತನ್ನ ಅಂತಿಮ ನಿರ್ಧಾರ ಪ್ರಕಟಿಸದೇ ಇರುವುದು ಕುತೂಹಲ ಮೂಡಿಸಿದೆ. ಇಂದು ಮಧ್ಯಾಹ್ನದ ಬಳಿಕ ಹೈಕಮಾಂಡ್ನಿಂದ ಅಧಿಕೃತ ಪಟ್ಟಿ ಘೋಷಣೆಯಾಗುವ ಸಾಧ್ಯತೆ ಇದೆ.

ಹೊಟೇಲ್ ಉದ್ಯಮಿ ಹೆಸರು ಚರ್ಚೆ?

ವಯೋಸಹಜ ಕಾರಣಗಳಿಂದ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಸ್ಪರ್ಧಿಸಲು ಒಪ್ಪದಿದ್ದರೆ, ಮೈತ್ರಿಗೆ ಧಕ್ಕೆಯಾಗದಂತೆ ಉಭಯ ಪಕ್ಷಗಳಿಗೂ ಸಮ್ಮತಿಯಾಗುವಂತಹ ಬೆಂಗಳೂರಿನ ಹೊಟೇಲ್ ಉದ್ಯಮಿಯೊಬ್ಬರಿಗೆ ಟಿಕೆಟ್ ನೀಡುವ ಬಗ್ಗೆಯೂ ತೆರೆಮರೆಯಲ್ಲಿ ಚರ್ಚೆಗಳು ನಡೆಯುತ್ತಿವೆ ಎಂದು ಮೂಲಗಳು ತಿಳಿಸಿವೆ.

ರಾಜ್ಯಸಭೆ ರೇಸ್‌ನಲ್ಲಿ ಯಾರಿದ್ದಾರೆ?

ರಾಜ್ಯಸಭೆಯ ಒಂದು ಸ್ಥಾನಕ್ಕೆ ದೇವೇಗೌಡರು ಕಣಕ್ಕಿಳಿಯದಿದ್ದರೆ ಮಾತ್ರ ಬಿಜೆಪಿ ತನ್ನದೇ ಅಭ್ಯರ್ಥಿಯನ್ನು ಕಣಕ್ಕಿಳಿಸಲು ನಿರ್ಧರಿಸಲಿದೆ. ಸದ್ಯ ರೇಸ್ನಲ್ಲಿ ಮಾಜಿ ಸಿಎಂ ಡಿ.ವಿ. ಸದಾನಂದಗೌಡ, ಮಾಜಿ ಸಂಸದೆ ಸುಮಲತಾ ಅಂಬರೀಶ್ ಹಾಗೂ ಸಂಘಟನೆಯ ಹಿನ್ನೆಲೆಯಿಂದ ಬಂದಿರುವ ನಿರ್ಮಲ್ ಕುಮಾರ್ ಸುರಾನಾ ಅವರ ಹೆಸರು ಮುಂಚೂಣಿಯಲ್ಲಿದೆ.

ಒಂದು ವೇಳೆ ದೇವೇಗೌಡರ ಉಮೇದುವಾರಿಕೆ ಖಚಿತವಾದರೆ, ಬಿಜೆಪಿ ಕೇವಲ ವಿಧಾನಪರಿಷತ್ನ ಎರಡು ಸ್ಥಾನಗಳಿಗೆ ಮಾತ್ರ ತನ್ನ ಅಭ್ಯರ್ಥಿಗಳನ್ನು ಘೋಷಿಸಲಿದೆ.

ಮಹಿಳಾ ಮಣಿಗಳ ಮಧ್ಯೆ ತೀವ್ರ ಪೈಪೋಟಿ

ಇನ್ನೊಂದೆಡೆ, ವಿಧಾನಪರಿಷತ್ ಎರಡು ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ವಿಚಾರದಲ್ಲೂ ಬಿಜೆಪಿಯಲ್ಲಿ ಭಾರಿ ಪೈಪೋಟಿ ಶುರುವಾಗಿದೆ. ಆಕಾಂಕ್ಷಿಗಳ ದಂಡೇ ಹೈಕಮಾಂಡ್ ಮುಂದೆ ಸಾಲುಗಟ್ಟಿ ನಿಂತಿದೆ.

ನಟಿ ಶ್ರುತಿ, ಸಿ. ಮಂಜುಳಾ, ರಘು ಕೌಟಿಲ್ಯ, ಲಿಂಗರಾಜ್ ಪಾಟೀಲ್, ಎನ್. ಮಹೇಶ್, ನಳೀನ್ ಕುಮಾರ್ ಕಟೀಲ್ ಹಾಗೂ ವೇಣುಗೋಪಾಲ್ ಅವರ ಹೆಸರುಗಳು ಕೇಳಿ ಬರುತ್ತಿವೆ. ಮಹಿಳಾ ಕೋಟಾದಡಿ ಟಿಕೆಟ್ ಗಿಟ್ಟಿಸಿಕೊಳ್ಳಲು ನಟಿ ಶ್ರುತಿ ಮತ್ತು ಮಹಿಳಾ ಮೋರ್ಚಾ ಅಧ್ಯಕ್ಷೆ ಸಿ. ಮಂಜುಳಾ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ.

ಪರಿಷತ್ ಟಿಕೆಟ್ ಹಂಚಿಕೆಯಲ್ಲಿ ಸಾಮಾಜಿಕ ಸಮತೋಲನ ಕಾಯ್ದುಕೊಳ್ಳಲು ಬಿಜೆಪಿ ಮುಂದಾಗಿದೆ. ಒಬ್ಬ ಮಹಿಳೆ ಮತ್ತು ಒಬ್ಬ ಲಿಂಗಾಯತ ಅಥವಾ ಒಬಿಸಿ ಸಮುದಾಯಕ್ಕೆ ಟಿಕೆಟ್‌ ನೀಡಲು ಚಿಂತನೆ ನಡೆಸುತ್ತಿದೆ. ರಾಜ್ಯ ಕೋರ್ ಕಮಿಟಿ ಶಿಫಾರಸು ಮಾಡಿರುವ ಪಟ್ಟಿಯನ್ನು ಪಕ್ಕಕ್ಕಿಟ್ಟು, ಅಚ್ಚರಿಯಂತೆ ಹೊಸ ಮುಖಗಳಿಗೆ ಹೈಕಮಾಂಡ್ ಮಣೆ ಹಾಕುವ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ.

Read More
Next Story