Weather Updates | ಕರ್ನಾಟಕದಲ್ಲಿ ವರುಣನ ಅಬ್ಬರ: ಇಂದಿನಿಂದ 5 ದಿನ ಭಾರಿ ಮಳೆ; 25 ಜಿಲ್ಲೆಗಳಿಗೆ ಎಲ್ಲೋ ಅಲರ್ಟ್ ಘೋಷಣೆ!
x
ರಾಜ್ಯದಲ್ಲಿ ಭಾರೀ ಮಳೆ

Weather Updates | ಕರ್ನಾಟಕದಲ್ಲಿ ವರುಣನ ಅಬ್ಬರ: ಇಂದಿನಿಂದ 5 ದಿನ ಭಾರಿ ಮಳೆ; 25 ಜಿಲ್ಲೆಗಳಿಗೆ 'ಎಲ್ಲೋ ಅಲರ್ಟ್' ಘೋಷಣೆ!

ಕರ್ನಾಟಕದಲ್ಲಿ ಪೂರ್ವ ಮುಂಗಾರು ಚುರುಕುಗೊಂಡಿದ್ದು, ಏಪ್ರಿಲ್ 29ರಿಂದ ಮೇ 1ರವರೆಗೆ ಬೆಂಗಳೂರು ಸೇರಿದಂತೆ ರಾಜ್ಯದ 25ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ.


ರಾಜ್ಯದಲ್ಲಿ ಬೇಸಿಗೆಯ ತಾಪ ತಾರಕಕ್ಕೇರಿರುವ ಬೆನ್ನಲ್ಲೇ, ವರುಣನ ಆಗಮನವಾಗುತ್ತಿದೆ. ಪೂರ್ವ ಮುಂಗಾರು ಚುರುಕುಗೊಂಡಿದ್ದು, ಹವಾಮಾನ ಇಲಾಖೆಯು ಇಂದಿನಿಂದ ಮುಂದಿನ ಐದು ದಿನಗಳ ಕಾಲ ರಾಜ್ಯದಾದ್ಯಂತ ಮಳೆ ಮುನ್ಸೂಚನೆ ನೀಡಿದೆ. ಈಗಾಗಲೇ ಹಾಸನದಲ್ಲಿ ಕಳೆದ 32 ಗಂಟೆಗಳಲ್ಲಿ 61.5 ಮಿ.ಮೀ. ದಾಖಲೆ ಮಳೆಯಾಗಿದ್ದು, ರಾಜ್ಯದ ಇತರೆ ಜಿಲ್ಲೆಗಳಲ್ಲೂ ಮಳೆಯ ಆತಂಕ ಶುರುವಾಗಿದೆ.

ಕರಾವಳಿ ಮತ್ತು ಮಲೆನಾಡಿನಲ್ಲಿ ಮಳೆ ಹೇಗಿರಲಿದೆ?

ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮೋಡಕವಿದ ವಾತಾವರಣ ಇರಲಿದ್ದು, ಸಂಜೆ ವೇಳೆಗೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಏಪ್ರಿಲ್ 29ರಿಂದ ಇಲ್ಲಿ ಮಳೆಯ ತೀವ್ರತೆ ಹೆಚ್ಚಾಗಲಿದೆ. ಇನ್ನು ಕೊಡಗು, ಹಾಸನ, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಇಂದಿನಿಂದಲೇ ಮಳೆಯ ಲಕ್ಷಣಗಳಿದ್ದು, ಏಪ್ರಿಲ್ 29ರ ನಂತರ ಮಳೆಯ ಅಬ್ಬರ ಜೋರಾಗಲಿದೆ.

ಉತ್ತರ ಮತ್ತು ದಕ್ಷಿಣ ಒಳನಾಡು

ಬೆಳಗಾವಿ, ಧಾರವಾಡ, ಹಾವೇರಿ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಸಂಜೆ ಅಥವಾ ರಾತ್ರಿ ಗುಡುಗು ಸಹಿತ ಮಳೆಯ ನಿರೀಕ್ಷೆಯಿದೆ. ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಸದ್ಯ ಬಿಸಿಲು ಹೆಚ್ಚಿದ್ದರೂ, ಏಪ್ರಿಲ್ 29ರಿಂದ ಇಲ್ಲಿಯೂ ವರುಣನ ಸಿಂಚನ ಆರಂಭವಾಗಲಿದೆ.

ರಾಜ್ಯದಲ್ಲಿ ಏಪ್ರಿಲ್ 29ರಂದು ಬೀದರ್, ಕಲಬುರ್ಗಿ, ವಿಜಯಪುರ, ಬೆಳಗಾವಿ, ಉತ್ತರ ಕನ್ನಡ ಹಾಗೂ ಬೆಂಗಳೂರು ಸೇರಿದಂತೆ ಒಟ್ಟು 25 ಜಿಲ್ಲೆಗಳಿಗೆ 'ಎಲ್ಲೋ ಅಲರ್ಟ್' ಘೋಷಿಸಲಾಗಿದ್ದು, ಸಾಧಾರಣ ಮಳೆಯ ಮುನ್ಸೂಚನೆ ನೀಡಲಾಗಿದೆ. ಏಪ್ರಿಲ್ 30ರಂದು 24 ಜಿಲ್ಲೆಗಳಿಗೆ ಅಲರ್ಟ್ ಮುಂದುವರಿಯಲಿದ್ದು, ವಿಶೇಷವಾಗಿ ಬೀದರ್, ಬೆಳಗಾವಿ, ಬಾಗಲಕೋಟೆ, ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಮಳೆ ಸುರಿಯುವ ಸಾಧ್ಯತೆಯಿದೆ. ಇನ್ನು ಮೇ 1ರಂದು ರಾಯಚೂರು, ಕೊಪ್ಪಳ, ವಿಜಯನಗರ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು ಮತ್ತು ಮಂಡ್ಯ ಸೇರಿದಂತೆ ಒಟ್ಟು 19 ಜಿಲ್ಲೆಗಳಿಗೆ 'ಎಲ್ಲೋ ಅಲರ್ಟ್' ಜಾರಿಯಲ್ಲಿರಲಿದ್ದು, ಮಳೆಯ ಅಬ್ಬರ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಬೆಂಗಳೂರಿನಲ್ಲಿ ಹೇಗಿರಲಿದೆ ಹವಾಮಾನ?

ರಾಜಧಾನಿ ಬೆಂಗಳೂರಿನ ಮೆಜೆಸ್ಟಿಕ್, ಕಾರ್ಪೊರೇಷನ್ ಸೇರಿದಂತೆ ನಗರದ ಹಲವೆಡೆ ಈಗಾಗಲೇ ತುಂತುರು ಮಳೆ ಆರಂಭವಾಗಿದೆ. ನಾಳೆಯಿಂದ ಸತತ ನಾಲ್ಕು ದಿನಗಳ ಕಾಲ ಬೆಂಗಳೂರಿಗೆ 'ಎಲ್ಲೋ ಅಲರ್ಟ್' ಘೋಷಿಸಲಾಗಿದ್ದು, ನಗರವಾಸಿಗಳು ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.

Read More
Next Story