Varunas storm | Orange alert for the coast, yellow alert for the hills; Moderate rain in Bengaluru too
x

ಸಾಂದರ್ಭಿಕ ಚಿತ್ರ

ವರುಣನ ಅಬ್ಬರ| ಕರಾವಳಿಗೆ ಆರೆಂಜ್, ಮಲೆನಾಡಿಗೆ ಯೆಲ್ಲೋ ಅಲರ್ಟ್; ಬೆಂಗಳೂರಿನಲ್ಲೂ ಸಾಧಾರಣ ಮಳೆ

ಕರಾವಳಿ ಜಿಲ್ಲೆಗಳಲ್ಲಿ ಮುಂಗಾರು ಮಳೆ ಅತ್ಯಂತ ತೀವ್ರ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆ ಇದೆ. ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಜು. 6ರವರೆಗೆ ಭಾರಿ ಮಳೆಯಾಗುವ ಮುನ್ಸೂಚನೆ ಇದೆ.


Click the Play button to hear this message in audio format

ರಾಜ್ಯದಲ್ಲಿ ತಣ್ಣಗಾಗಿದ್ದ ಮುಂಗಾರು ಮಾರುತಗಳು ಜುಲೈ ಆರಂಭದ ಬೆನ್ನಲ್ಲೇ ಮತ್ತೆ ಚುರುಕುಗೊಂಡಿದ್ದು, ಕರಾವಳಿ ಮತ್ತು ಮಲೆನಾಡು ಸೇರಿದಂತೆ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ವರುಣನ ಆರ್ಭಟ ಜೋರಾಗಿದೆ. ಮುಂದಿನ ಕೆಲವು ದಿನಗಳ ಕಾಲ ರಾಜ್ಯದ ವಿವಿಧ ಭಾಗಗಳಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ನೀಡಿದೆ. ಜೂನ್ ತಿಂಗಳ ಮಳೆ ಕೊರತೆಯ ಆತಂಕವನ್ನು ದೂರ ಮಾಡಿರುವ ವರುಣ, ಕರಾವಳಿ ಗಡಿ ಭಾಗಗಳಲ್ಲಿ ಅಬ್ಬರಿಸಲು ಸಜ್ಜಾಗಿದ್ದಾನೆ.

ಎಲ್ಲೆಲ್ಲಿ ಆರೆಂಜ್ ಅಲರ್ಟ್?

ಕರಾವಳಿ ಜಿಲ್ಲೆಗಳಲ್ಲಿ ಮುಂಗಾರು ಮಳೆ ಅತ್ಯಂತ ತೀವ್ರ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆ ಇದೆ. ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಜು. 6ರವರೆಗೆ ಭಾರಿ ಮಳೆಯಾಗುವ ಮುನ್ಸೂಚನೆ ಇದೆ. ಮಳೆಯೊಂದಿಗೆ ಗಂಟೆಗೆ 30 ರಿಂದ 40 ಕಿ. ಮೀ. ವೇಗದಲ್ಲಿ ಬಲವಾದ ಗಾಳಿ ಬೀಸಲಿದೆ. ಸಮುದ್ರದಲ್ಲಿ ಅಲೆಗಳ ಅಬ್ಬರ ಹೆಚ್ಚಾಗಲಿದ್ದು, ಕಡಲ ತೀರದ ನಿವಾಸಿಗಳು ಮತ್ತು ಮೀನುಗಾರರು ಯಾವುದೇ ಕಾರಣಕ್ಕೂ ಕಡಲಿಗೆ ಇಳಿಯಬಾರದು ಎಂದು ಕಟ್ಟುನಿಟ್ಟಿನ ಜಾಗರೂಕತೆ ವಹಿಸಲು ಜಿಲ್ಲಾಡಳಿತಗಳು ಸೂಚಿಸಿವೆ. ಈಗಾಗಲೇ ಶಿರಸಿ–ಕುಮಟಾ ರಾಷ್ಟ್ರೀಯ ಹೆದ್ದಾರಿಯ ದೇವಿಮನೆ ಘಟ್ಟದಲ್ಲಿ ಸಣ್ಣಪುಟ್ಟ ಭೂಕುಸಿತಗಳು ವರದಿಯಾಗಿದ್ದು, ಘಾಟ್‌ಗಳಲ್ಲಿ ಪ್ರಯಾಣಿಸುವವರು ಎಚ್ಚರದಿಂದಿರಲು ಕೋರಲಾಗಿದೆ.

ಮಲೆನಾಡಿಗೆ ಯೆಲ್ಲೋ ಅಲರ್ಟ್​?

ಮಲೆನಾಡು ಮತ್ತು ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಮಳೆಯ ಪ್ರಮಾಣ ಹೆಚ್ಚಾಗಲಿದ್ದು, ಜನಜೀವನಕ್ಕೆ ಅಡಚಣೆಯಾಗುವ ಸಾಧ್ಯತೆ ಇದೆ. ಮಲೆನಾಡು ಜಿಲ್ಲೆಗಳಾದ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಮತ್ತು ಕೊಡಗು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಲಕ್ಷಣಗಳಿದ್ದು, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಜು. 4 ರಿಂದ ಇಲ್ಲಿ ಮಳೆ ಇನ್ನಷ್ಟು ಚುರುಕಾಗಲಿವೆ. ಉತ್ತರ ಒಳನಾಡು ಜಿಲ್ಲೆಗಳಾದ ಬೆಳಗಾವಿ ಮತ್ತು ಧಾರವಾಡ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಭಾರಿ ಮಳೆಯಾಗುವ ನಿರೀಕ್ಷೆಯಿದೆ.

ಎಲ್ಲೆಲ್ಲಿ ಸಾಧಾರಣ ಮಳೆ

ಬಾಗಲಕೋಟೆ, ಬೀದರ್, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಾಪುರ ಮತ್ತು ಯಾದಗಿರಿ ಜಿಲ್ಲೆಗಳ ಹಲವು ಸ್ಥಳಗಳಲ್ಲಿ ಗಂಟೆಗೆ 30 ರಿಂದ 40 ಕಿ.ಮೀ. ವೇಗದ ಗಾಳಿಯೊಂದಿಗೆ ಹಗುರದಿಂದ ಮಳೆಯಾಗಲಿದೆ.

ಬೆಂಗಳೂರಿನಲ್ಲಿ ಸಾಧಾರಣ ಮಳೆ

ರಾಜಧಾನಿ ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಮೋಡಕವಿದ ವಾತಾವರಣ ಮುಂದುವರಿಯಲಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಬಳ್ಳಾರಿ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ತುಮಕೂರು ಮತ್ತು ವಿಜಯನಗರ ಜಿಲ್ಲೆಗಳಲ್ಲಿ ತೇವಾಂಶಭರಿತ ಬಲವಾದ ಗಾಳಿ ಬೀಸಲಿದ್ದು, ಸಂಜೆ ಅಥವಾ ರಾತ್ರಿಯ ಅವಧಿಯಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.

ಸುರಕ್ಷತಾ ಮಾರ್ಗಸೂಚಿಗಳು

ಗಾಳಿ-ಮಳೆಯ ಆರ್ಭಟ ಇರುವುದರಿಂದ ಸಾರ್ವಜನಿಕರು ಹಳೆಯ, ದುರ್ಬಲ ಕಟ್ಟಡಗಳು ಹಾಗೂ ವಿದ್ಯುತ್ ಕಂಬ, ಟ್ರಾನ್ಸ್‌ಫಾರ್ಮರ್‌ಗಳಿಂದ ದೂರವಿರಬೇಕು. ಕೃಷಿ ಚಟುವಟಿಕೆಗಳಿಗೆ ಈ ಮಳೆ ಪೂರಕವಾಗಿದ್ದರೂ, ದಾಳಿಂಬೆ, ಬಾಳೆ, ಕಬ್ಬು ಮತ್ತು ತರಕಾರಿ ಬೆಳೆಗಳಿಗೆ ಗಾಳಿಯಿಂದ ಹಾನಿಯಾಗದಂತೆ ಯಾಂತ್ರಿಕ ಆಸರೆ ನೀಡಲು ಕೃಷಿ ವಿಜ್ಞಾನಿಗಳು ಸಲಹೆ ನೀಡಿದ್ದಾರೆ. ತೋಟಗಾರಿಕಾ ಬೆಳೆಗಳಿಗೆ ತಕ್ಷಣಕ್ಕೆ ಕೀಟನಾಶಕ ಸಿಂಪಡಿಸದಂತೆ ಸೂಚಿಸಲಾಗಿದೆ. ಕರಾವಳಿ ಹಾಗೂ ಮಲೆನಾಡಿನ ಜಲಪಾತಗಳು, ನದಿ ತೀರಗಳು ಹಾಗೂ ಅಪಾಯಕಾರಿ ಪ್ರವಾಸಿ ತಾಣಗಳಿಗೆ ಭೇಟಿ ನೀಡುವುದನ್ನು ತಾತ್ಕಾಲಿಕವಾಗಿ ಮುಂದೂಡುವುದು ಸೂಕ್ತ.

Read More
Next Story