ಕ್ವಿನ್ ಸಿಟಿ ಯೋಜನೆಗೆ ವೇಗ: 50 ಸಾವಿರ ಕೋಟಿ ರೂ. ಬಂಡವಾಳ ಆಕರ್ಷಿಸುವ ಗುರಿ
x

ಕ್ವಿನ್ ಸಿಟಿ ಯೋಜನೆಗೆ ವೇಗ: 50 ಸಾವಿರ ಕೋಟಿ ರೂ. ಬಂಡವಾಳ ಆಕರ್ಷಿಸುವ ಗುರಿ

ಫೆಬ್ರವರಿ-ಮಾರ್ಚ್ ವೇಳೆಗೆ ಕ್ವಿನ್‌ಸಿಟಿ ಯೋಜನೆಯಲ್ಲಿ ನಿರ್ಣಾಯಕ ಪ್ರಗತಿ ಸಾಧಿಸಬೇಕೆಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.


Click the Play button to hear this message in audio format

ರಾಜ್ಯ ಸರ್ಕಾರದ ಅತ್ಯಂತ ಮಹತ್ವಾಕಾಂಕ್ಷಿ ಯೋಜನೆಯಾದ ಕ್ವಿನ್ ಸಿಟಿ ನಿರ್ಮಾಣಕ್ಕೆ ವೇಗ ನೀಡಲು ಸರ್ಕಾರ ಸಜ್ಜಾಗಿದೆ. ಈ ಯೋಜನೆಯು ರಾಜ್ಯದ ಕೈಗಾರಿಕಾ ಭೂಪಟದಲ್ಲಿ ಹೊಸ ಸಂಚಲನ ಮೂಡಿಸಲಿದ್ದು, ಮುಂದಿನ ಫೆಬ್ರವರಿ-ಮಾರ್ಚ್ ವೇಳೆಗೆ ಯೋಜನೆಯಲ್ಲಿ ನಿರ್ಣಾಯಕ ಪ್ರಗತಿ ಸಾಧಿಸಬೇಕೆಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಬೆಂಗಳೂರಿನ ಖನಿಜ ಭವನದಲ್ಲಿ ನಡೆದ ಯೋಜನೆಯ ಪರಾಮರ್ಶನಾ ಸಭೆಯಲ್ಲಿ ಮಾತನಾಡಿದ ಅವರು, ಕ್ವಿನ್ ಸಿಟಿ ಯೋಜನೆ ಸರ್ಕಾರದ ಕನಸಿನ ಕೂಸಾಗಿದೆ. ಈ ಯೋಜನೆಯನ್ನು ಸಮಯಬದ್ಧವಾಗಿ ಪೂರ್ಣಗೊಳಿಸಲು ಇಲಾಖೆಯು ಸಮರೋಪಾದಿಯಲ್ಲಿ ಕೆಲಸ ಮಾಡಬೇಕೆಂದು ತಾಕೀತು ಮಾಡಿದರು.

ಯೋಜನೆಯ ಪ್ರಗತಿಯನ್ನು ವೇಗಗೊಳಿಸಲು ಕೆಐಎಡಿಬಿ ಅಧಿಕಾರಿಗಳಿಗೆ 24x7 ಮಾದರಿಯಲ್ಲಿ ಕೆಲಸ ಮಾಡಲು ಸಚಿವರು ನಿರ್ದೇಶನ ನೀಡಿದ್ದಾರೆ. ಪ್ರತೀ 15 ದಿನಗಳಿಗೊಮ್ಮೆ ಯೋಜನೆಯ ಪ್ರಗತಿಯ ಕುರಿತು ಖುದ್ದು ವರದಿಯನ್ನು ಸಲ್ಲಿಸಬೇಕೆಂದು ಸೂಚಿಸಿದ್ದಾರೆ. ಭೂಸ್ವಾಧೀನ, ಸಂಪರ್ಕ ರಸ್ತೆಗಳ ನಿರ್ಮಾಣ, ಚರಂಡಿ ವ್ಯವಸ್ಥೆ ಮತ್ತು ಅಗತ್ಯ ಮೂಲಸೌಕರ್ಯಗಳಿಗಾಗಿ ಸ್ಥಳದಲ್ಲೇ ಪರಿಹಾರಗಳನ್ನು ಕಂಡುಕೊಳ್ಳಲು ಕೈಗಾರಿಕಾ ಇಲಾಖೆಯು ಪ್ರತ್ಯೇಕ ತಂಡವನ್ನೇ ರಚಿಸಬೇಕು. ಯೋಜನಾ ಪ್ರದೇಶದಲ್ಲೇ ಈ ತಂಡದ ಸಿಬ್ಬಂದಿ ಕಾರ್ಯನಿರತರಾಗಬೇಕೆಂದು ಸೂಚನೆ ನೀಡಿದ್ದಾರೆ.

ವಿಶ್ವದರ್ಜೆಯ ಸೌಕರ್ಯಗಳಿಗೆ ಆದ್ಯತೆ

ಕ್ವಿನ್ ಸಿಟಿ ಕೇವಲ ಒಂದು ಕೈಗಾರಿಕಾ ಪ್ರದೇಶವಲ್ಲ, ಅದು ಜಾಗತಿಕ ಮಟ್ಟದ ಉದ್ಯಮಗಳು, ಪ್ರತಿಷ್ಠಿತ ವಿಶ್ವವಿದ್ಯಾಲಯಗಳು, ಕಾನೂನು ಶಾಲೆಗಳು, ಐಐಎಸ್‌ಸಿಯಂತಹ ಸಂಶೋಧನಾ ಸಂಸ್ಥೆಗಳು, ಅತ್ಯಾಧುನಿಕ ಆಸ್ಪತ್ರೆಗಳು ಮತ್ತು ನವೋದ್ಯಮಗಳ ಸಂಗಮವಾಗಲಿದೆ. ನಾವು ಒದಗಿಸುವ ಸೌಕರ್ಯಗಳು ವಿಶ್ವದರ್ಜೆಯದ್ದಾಗಿರಬೇಕು. ಹೂಡಿಕೆದಾರರಿಗೆ ಉತ್ಕೃಷ್ಟ ವಸತಿ ಸೌಕರ್ಯ, ಕಾಮನ್ ಫೆಸಿಲಿಟಿ ಸೆಂಟರ್, ಕ್ರೀಡಾ ಸಂಕೀರ್ಣ, ಉದ್ಯಾನಗಳು ಮತ್ತು ನಿರಂತರ ವಿದ್ಯುತ್ ಸಂಪರ್ಕ ಕಲ್ಪಿಸುವುದು ನಮ್ಮ ಆದ್ಯತೆ. ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಅಗತ್ಯಬಿದ್ದರೆ ಹೆಚ್ಚುವರಿಯಾಗಿ ಚೀಫ್ ಎಂಜಿನಿಯರ್ ಹುದ್ದೆಯನ್ನು ಸೃಷ್ಟಿಸಲಾಗುವುದು ಎಂದು ಭರವಸೆ ನೀಡಿದರು.

5 ಸಾವಿರ ಎಕರೆಯಲ್ಲಿ ಬೃಹತ್ ಹೂಡಿಕೆ

ಸುಮಾರು 5 ಸಾವಿರ ಎಕರೆ ಪ್ರದೇಶದಲ್ಲಿ ಈ ಯೋಜನೆ ಜಾರಿಯಾಗಲಿದೆ. ಹೂಡಿಕೆದಾರರಿಗೆ ಅನುಕೂಲವಾಗುವಂತೆ ಬಿಲ್ಡ್-ಟು-ಸೂಟ್ ಮಾದರಿಯ ವ್ಯವಸ್ಥೆ ಸೇರಿದಂತೆ ವಿವಿಧ ಅವಕಾಶಗಳನ್ನು ಕಲ್ಪಿಸಲಾಗುತ್ತಿದೆ. ಹೂಡಿಕೆದಾರರು ಬಂದು ನಿವೇಶನಗಳನ್ನು ಪಡೆಯುವಲ್ಲಿ ವಿಳಂಬವಾದರೆ ಅವರು ಬೇರೆ ರಾಜ್ಯಗಳತ್ತ ಮುಖ ಮಾಡುವ ಸಾಧ್ಯತೆ ಇದೆ. ಆದ್ದರಿಂದ, ಹೂಡಿಕೆದಾರರಿಗೆ ಯೋಜನೆಯ ವೈಶಿಷ್ಟ್ಯಗಳನ್ನು ಮನವರಿಕೆ ಮಾಡಿಕೊಟ್ಟು, ತ್ವರಿತವಾಗಿ ನಿವೇಶನ ಒದಗಿಸುವ ಜವಾಬ್ದಾರಿ ಕೆಐಎಡಿಬಿ ಮೇಲಿದೆ ಎಂದು ಎಚ್ಚರಿಸಿದರು. ಕ್ವಿನ್ ಸಿಟಿ ಯೋಜನೆಯ ಮೂಲಕ ರಾಜ್ಯಕ್ಕೆ ಒಟ್ಟಾರೆಯಾಗಿ 50 ಸಾವಿರ ಕೋಟಿ ರೂಪಾಯಿ ಬಂಡವಾಳ ಹರಿದು ಬರುವಂತೆ ಎಲ್ಲರೂ ಶ್ರಮಿಸಬೇಕೆಂದು ಸಚಿವರು ಕರೆ ನೀಡಿದರು. ಎರಡನೇ ಹಂತದ ಕಾಮಗಾರಿಗಳನ್ನೂ ಇದೇ ಉತ್ಸಾಹದಲ್ಲಿ ಕೈಗೆತ್ತಿಕೊಳ್ಳಬೇಕು ಎಂದು ನಿರ್ದೇಶನ ನೀಡಿದರು.

15 ದಿನಗಳಿಗೊಮ್ಮೆ ಪ್ರಗತಿ ಪರಿಶೀಲನೆ

ಪ್ರತಿ 15 ದಿನಗಳಿಗೊಮ್ಮೆ ಯೋಜನೆಯ ಪ್ರಗತಿಯ ಪರಿಶೀಲನೆ, ಯೋಜನಾ ಸ್ಥಳದಲ್ಲೇ ಕಾರ್ಯನಿರ್ವಹಿಸುವ ವಿಶೇಷ ತಂಡದ ರಚನೆ, ವಿಶ್ವದರ್ಜೆಯ ರಸ್ತೆ, ವಸತಿ, ಆಸ್ಪತ್ರೆ, ಮತ್ತು ಸಂಶೋಧನಾ ಕೇಂದ್ರಗಳ ಸ್ಥಾಪನೆ, ಐದು ತಿಂಗಳೊಳಗೆ ಯೋಜನೆಯಲ್ಲಿ ಗರಿಷ್ಠ ಮಟ್ಟದ ಪ್ರಗತಿ ಸಾಧಿಸಲು ಗುರಿ. ಸಚಿವರ ಈ ಖಡಕ್ ಸೂಚನೆ ಮತ್ತು ಸ್ಪಷ್ಟ ಗುರಿಯು ಅಧಿಕಾರಿಗಳಲ್ಲಿ ಹೊಸ ಚೈತನ್ಯ ಮೂಡಿಸಿದೆ. ರಾಜ್ಯದ ಕೈಗಾರಿಕಾ ಬೆಳವಣಿಗೆಗೆ ಈ ಯೋಜನೆ ಅತ್ಯಂತ ಮಹತ್ವದ್ದಾಗಿದ್ದು, ಮುಂಬರುವ ದಿನಗಳಲ್ಲಿ ಕರ್ನಾಟಕವು ಜಾಗತಿಕ ಹೂಡಿಕೆದಾರರ ನೆಚ್ಚಿನ ತಾಣವಾಗಿ ಹೊರಹೊಮ್ಮಲು ಕ್ವಿನ್ ಸಿಟಿ ಪ್ರಮುಖ ಪಾತ್ರ ವಹಿಸಲಿದೆ.

Read More
Next Story