Quantum Technology | Global scientists praise state
x
ಸಾಂದರ್ಭಿಕ ಚಿತ್ರ

ಬೆಂಗಳೂರಿನಲ್ಲಿ ತಲೆ ಎತ್ತಲಿದೆ 'ಕ್ವಾಂಟಮ್ ಸಿಟಿ': 2028ರೊಳಗೆ ನಿರ್ಮಾಣ, 20 ಬಿಲಿಯನ್ ಡಾಲರ್ ಆರ್ಥಿಕತೆಯ ಗುರಿ!

ಬೆಂಗಳೂರಿನ ಹೆಸರಘಟ್ಟದ ಸಮೀಪ ಕ್ವಾಂಟಮ್ ಸಿಟಿ ನಿರ್ಮಾಣಕ್ಕಾಗಿ ಮಂಜೂರಾಗಿರುವ 6.23 ಎಕರೆ ಭೂಮಿಯನ್ನು ಸೋಮವಾರ ಅಧಿಕಾರಿಗಳೊಂದಿಗೆ ಸಚಿವರು ಪರಿಶೀಲನೆ ನಡೆಸಿದರು.


Click the Play button to hear this message in audio format

ಕರ್ನಾಟಕವನ್ನು ಕ್ವಾಂಟಮ್ ತಂತ್ರಜ್ಞಾನದ ಜಾಗತಿಕ ಕೇಂದ್ರವನ್ನಾಗಿಸುವ ಮಹತ್ವಾಕಾಂಕ್ಷೆಯ 'ಕ್ವಾಂಟಮ್ ಸಿಟಿ' ಯೋಜನೆಯನ್ನು 2028ರ ಒಳಗಾಗಿ ಗಮನಾರ್ಹ ಪ್ರಗತಿಯೊಂದಿಗೆ ಸಾಕಾರಗೊಳಿಸುವ ಗುರಿಯನ್ನು ರಾಜ್ಯ ಸರ್ಕಾರ ಹೊಂದಿದೆ. 2035ರ ವೇಳೆಗೆ ರಾಜ್ಯದಲ್ಲಿ 20 ಬಿಲಿಯನ್ ಡಾಲರ್ ಮೊತ್ತದ 'ಕ್ವಾಂಟಮ್ ಆರ್ಥಿಕತೆ'ಯನ್ನು ಸೃಷ್ಟಿಸುವ ಸರ್ಕಾರದ ದೂರದೃಷ್ಟಿಗೆ ಈ ಯೋಜನೆ ಭದ್ರ ಬುನಾದಿಯಾಗಲಿದೆ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್. ಎಸ್. ಬೋಸರಾಜು ತಿಳಿಸಿದ್ದಾರೆ.

ಬೆಂಗಳೂರಿನ ಹೆಸರಘಟ್ಟದ ಸಮೀಪ ಕ್ವಾಂಟಮ್ ಸಿಟಿ ನಿರ್ಮಾಣಕ್ಕಾಗಿ ಮಂಜೂರಾಗಿರುವ 6.23 ಎಕರೆ ಭೂಮಿಯನ್ನು ಸೋಮವಾರ ಅಧಿಕಾರಿಗಳೊಂದಿಗೆ ಸಚಿವರು ಪರಿಶೀಲನೆ ನಡೆಸಿದರು. ಈ ಯೋಜನೆಯಿಂದ ಸಂಶೋಧಕರಿಗೆ ಮತ್ತು ಉದ್ಯಮಿಗಳಿಗೆ ಒಂದೇ ಸೂರಿನಡಿ ಎಲ್ಲ ರೀತಿಯ ತಾಂತ್ರಿಕ ಬೆಂಬಲ ಸಿಗುವಂತೆ ಮಾಡಲಾಗುವುದು ಎಂದು ಸಚಿವರು ವಿವರಿಸಿದರು.

ಏನೇನಿರಲಿದೆ ಕ್ವಾಂಟಮ್ ಸಿಟಿಯಲ್ಲಿ?

ಕ್ವಾಂಟಮ್ ತಂತ್ರಜ್ಞಾನ ಕ್ಷೇತ್ರದಲ್ಲಿ ಕರ್ನಾಟಕ ಈಗಾಗಲೇ ದೇಶದಲ್ಲೇ ಮುಂಚೂಣಿಯಲ್ಲಿದೆ. ಉದ್ದೇಶಿತ ಕ್ವಾಂಟಮ್ ಸಿಟಿಯು ಭವಿಷ್ಯದ ತಂತ್ರಜ್ಞಾನಕ್ಕೆ ಅಗತ್ಯವಿರುವ ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡಿರಲಿದೆ. ಪೈಲೆಟ್ ಫ್ಯಾಬ್ರಿಕೇಶನ್ ಲೈನ್ಸ್, ಕಾಮನ್ ಕಂಪ್ಯೂಟಿಂಗ್ ಮೂಲಸೌಕರ್ಯ, ಅತ್ಯಾಧುನಿಕ ಸಂಶೋಧನಾ ಪ್ರಯೋಗಾಲಯಗಳು, ಸ್ಟಾರ್ಟ್‌ಅಪ್‌ಗಳಿಗಾಗಿ ವಿಶೇಷ ಕೆಲಸದ ಸ್ಥಳ ಹಾಗೂ ಇನ್‌ಕ್ಯುಬೇಶನ್ ಕೇಂದ್ರಗಳು ಇಲ್ಲಿರಲಿವೆ.

ಪಿಪಿಪಿ ಮಾದರಿಯಲ್ಲಿ ಅಭಿವೃದ್ಧಿ ಹಾಗೂ ವಿಜ್ಞಾನಿಗಳೊಂದಿಗೆ ಚರ್ಚೆ

ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ಮಾದರಿಯಲ್ಲಿ ಈ ಯೋಜನೆ ಜಾರಿಗೊಳಿಸುವ ಬಗ್ಗೆ ಐಐಎಸ್‌ಸಿ ಪ್ರೊ. ಅರಿಂಧಮ್ ಘೋಷ್ ನೇತೃತ್ವದ ಟಾಸ್ಕ್ ಫೋರ್ಸ್ ಜೊತೆ ಶೀಘ್ರದಲ್ಲೇ ಸಮಾಲೋಚನೆ ನಡೆಸಲಾಗುವುದು. ಭೂಮಿ ಪರಿಶೀಲನೆಯ ಬಳಿಕ ಸಚಿವರು ಅಂತರರಾಷ್ಟ್ರೀಯ ಸೈದ್ಧಾಂತಿಕ ವಿಜ್ಞಾನ ಕೇಂದ್ರದ ಕ್ಯಾಂಪಸ್‌ಗೆ ಭೇಟಿ ನೀಡಿ, ಕ್ವಾಂಟಮ್ ಸಂಶೋಧನೆಯಲ್ಲಿ ತೊಡಗಿರುವ ವಿಜ್ಞಾನಿಗಳೊಂದಿಗೆ ಮಾತುಕತೆ ನಡೆಸಿದರು.

ಈ ಸಂದರ್ಭದಲ್ಲಿ ಕೆಸ್ಟೆಪ್ಸ್ (K-STEPS) ವ್ಯವಸ್ಥಾಪಕ ನಿರ್ದೇಶಕ ಸದಾಶಿವ ಪ್ರಭು, ಸಚಿವರ ಆಪ್ತ ಕಾರ್ಯದರ್ಶಿ ವೀರಭದ್ರ ಹಂಚಿನಾಳ್, ಐಸಿಟಿಎಸ್ ನಿರ್ದೇಶಕ ಪ್ರೊ. ರಾಜೇಶ್ ಗೋಪಕುಮಾರ್, ಪ್ರಾಜೆಕ್ಟ್ ಹೆಡ್ ಪ್ರಸನ್ನ ಸೇರಿದಂತೆ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Read More
Next Story