ಆರ್‌ಎಸ್‌ಎಸ್ ಚಟುವಟಿಕೆಗೆ ಕಡಿವಾಣ? ಹೊಸ ವಿಧೇಯಕಕ್ಕೆ ಸಚಿವ ಸಂಪುಟ ಅಸ್ತು
x

ಆರ್‌ಎಸ್‌ಎಸ್ ಚಟುವಟಿಕೆಗೆ ಕಡಿವಾಣ? ಹೊಸ ವಿಧೇಯಕಕ್ಕೆ ಸಚಿವ ಸಂಪುಟ ಅಸ್ತು

ಆರ್‌ಎಸ್‌ಎಸ್‌ ಸೇರಿದಂತೆ ನೋಂದಣಿ ಇಲ್ಲದ ಅಥವಾ ನಿರ್ದಿಷ್ಟ ಸೈದ್ಧಾಂತಿಕ ಹಿನ್ನೆಲೆಯುಳ್ಳ ಸಂಘಟನೆಗಳ ಕಾರ್ಯ ಚಟುವಟಿಕೆಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ವಿಧೇಯಕವನ್ನು ತರಲಾಗುತ್ತಿದೆ ಎನ್ನಲಾಗಿದೆ.


Click the Play button to hear this message in audio format

ರಾಜ್ಯ ಸರ್ಕಾರವು ಸಾರ್ವಜನಿಕ ಸ್ಥಳಗಳ ಬಳಕೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಮತ್ತು ಅಪಾರ್ಟ್ಮೆಂಟ್ ಮಾಲೀಕರ ಬಹುಕಾಲದ ಬೇಡಿಕೆಯನ್ನು ಈಡೇರಿಸುವ ನಿಟ್ಟಿನಲ್ಲಿ ಎರಡು ಪ್ರಮುಖ ನಿರ್ಧಾರಗಳನ್ನು ಕೈಗೊಂಡಿದೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ 'ಕರ್ನಾಟಕ ರಾಜ್ಯ ಸಾರ್ವಜನಿಕ ಪ್ರದೇಶ, ಪ್ರವೇಶ ನಿಯಂತ್ರಣ ವಿಧೇಯಕ 2026' ಮತ್ತು 'ಕರ್ನಾಟಕ ಅಪಾರ್ಟ್ಮೆಂಟ್ (ಮಾಲೀಕತ್ವ ಮತ್ತು ಆಡಳಿತ) ವಿಧೇಯಕ'ಕ್ಕೆ ಮಹತ್ವದ ಅನುಮೋದನೆ ದೊರೆತಿದೆ.

ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ಸಾರ್ವಜನಿಕ ಸ್ಥಳಗಳಲ್ಲಿ ನಡೆಯುವ ವಿವಿಧ ಸಂಘಟನೆಗಳ ಕಾರ್ಯಕ್ರಮಗಳು ಕಾನೂನು ಮತ್ತು ಸುವ್ಯವಸ್ಥೆಯ ಚರ್ಚೆಗೆ ಗ್ರಾಸವಾಗುತ್ತಿವೆ. ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಸೇರಿದಂತೆ ನೋಂದಣಿ ಇಲ್ಲದ ಅಥವಾ ನಿರ್ದಿಷ್ಟ ಸೈದ್ಧಾಂತಿಕ ಹಿನ್ನೆಲೆಯುಳ್ಳ ಸಂಘಟನೆಗಳ ಕಾರ್ಯಚಟುವಟಿಕೆಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಈ ವಿಧೇಯಕವನ್ನು ತರಲಾಗುತ್ತಿದೆ ಎಂದು ರಾಜಕೀಯ ವಲಯದಲ್ಲಿ ವ್ಯಾಖ್ಯಾನಿಸಲಾಗುತ್ತಿದೆ.

ಚಿತ್ತಾಪುರದಲ್ಲಿ ಆರ್‌ಎಸ್‌ಎಸ್ ಪಥಸಂಚಲನ ನಡೆಸಲು ಅನುಮತಿ ಕೋರಿದಾಗ ಉಂಟಾದ ಗೊಂದಲ ಈ ವಿಧೇಯಕದ ಮೂಲ ಕಾರಣ ಎಂದು ಹೇಳಲಾಗುತ್ತಿದೆ. ಸ್ಥಳೀಯ ಆಡಳಿತ ಅನುಮತಿ ನಿರಾಕರಿಸಿದಾಗ, ಸಂಘಟನೆಯು ಹೈಕೋರ್ಟ್ ಮೆಟ್ಟಿಲೇರಿತ್ತು. ನ್ಯಾಯಾಲಯದ ಆದೇಶದ ಮೇರೆಗೆ ಅಂತಿಮವಾಗಿ ಪಥಸಂಚಲನ ಹಾಗೂ ಕಾರ್ಯಕ್ರಮಗಳು ನಡೆದವು. ಇಂತಹ ಸಂದರ್ಭಗಳಲ್ಲಿ ಸರ್ಕಾರಿ ನಿಯಂತ್ರಣವನ್ನು ಬಲಪಡಿಸಲು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ಸಂಘಟನೆಗಳು ಬೇಕಾಬಿಟ್ಟಿಯಾಗಿ ಕಾರ್ಯಕ್ರಮ ಆಯೋಜಿಸುವುದನ್ನು ತಡೆಯಲು ಈ ಹೊಸ ಕಾನೂನು ಸಹಕಾರಿಯಾಗಲಿದೆ.

ವಿಧೇಯಕದ ಪ್ರಮುಖ ಅಂಶಗಳು

ಸಾರ್ವಜನಿಕ ಸ್ಥಳಗಳಲ್ಲಿ ಸಂಘಟನೆಗಳು ಕಾರ್ಯಕ್ರಮ ನಡೆಸುವಾಗ ಅನುಸರಿಸಬೇಕಾದ ಕಟ್ಟುನಿಟ್ಟಿನ ನಿಯಮಗಳನ್ನು ರೂಪಿಸುವುದು. ನೋಂದಣಿ ಇಲ್ಲದ ಸಂಘಟನೆಗಳ ಸಾರ್ವಜನಿಕ ಚಟುವಟಿಕೆಗಳ ಮೇಲೆ ಪರೋಕ್ಷವಾಗಿ ನಿಗಾ ಇಡುವುದು ಮತ್ತು ನಿರ್ಬಂಧಗಳನ್ನು ವಿಧಿಸುವುದು. ಕೇವಲ ಸ್ಥಳೀಯ ಪೊಲೀಸ್ ಠಾಣೆಯ ಅನುಮತಿಯಷ್ಟೇ ಸಾಲದು, ಸರ್ಕಾರ ನಿಗದಿಪಡಿಸಿದ ಸ್ಪಷ್ಟ ಮಾರ್ಗಸೂಚಿಗಳನ್ನು ಪಾಲಿಸುವುದು ಕಡ್ಡಾಯವಾಗಲಿದೆ. ಈ ವಿಧೇಯಕದ ಮೂಲಕ ರಾಜ್ಯದಲ್ಲಿ ಅನಿರ್ಬಂಧಿತವಾಗಿ ನಡೆಯುವ ಮೆರವಣಿಗೆಗಳು, ಪಥಸಂಚಲನಗಳು ಮತ್ತು ಸಾರ್ವಜನಿಕ ಸಭೆಗಳಿಗೆ ಕಠಿಣ ನಿಯಮಾವಳಿಗಳನ್ನು ಜಾರಿಗೆ ತರಲು ಸರ್ಕಾರ ಸಜ್ಜಾಗಿದೆ.

ಅಪಾರ್ಟ್ಮೆಂಟ್ ಮಾಲೀಕರ ಸಂಕಷ್ಟಕ್ಕೆ ಮುಕ್ತಿ

ಸಚಿವ ಸಂಪುಟ ಸಭೆಯ ಮತ್ತೊಂದು ಪ್ರಮುಖ ನಿರ್ಧಾರ 'ಕರ್ನಾಟಕ ಅಪಾರ್ಟ್ಮೆಂಟ್ (ಮಾಲೀಕತ್ವ ಮತ್ತು ಆಡಳಿತ) ವಿಧೇಯಕ'. ರಾಜಧಾನಿ ಬೆಂಗಳೂರು ಸೇರಿದಂತೆ ಅನೇಕ ನಗರಗಳಲ್ಲಿ ಅಪಾರ್ಟ್ಮೆಂಟ್ ನಿವಾಸಿಗಳು ನಿರ್ವಹಣಾ ಶುಲ್ಕ, ಆಡಳಿತ ಮಂಡಳಿಯ ದರ್ಪ ಹಾಗೂ ಮೂಲಭೂತ ಸೌಕರ್ಯಗಳ ಕೊರತೆಯಿಂದ ಕಂಗೆಟ್ಟಿದ್ದಾರೆ.

ಕಳೆದ ತಿಂಗಳು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಬೆಂಗಳೂರಿನ ಅಪಾರ್ಟ್ಮೆಂಟ್ ಮಾಲೀಕರ ಒಕ್ಕೂಟದೊಂದಿಗೆ ಸಭೆ ನಡೆಸಿ, ಅವರ ಸಮಸ್ಯೆಗಳನ್ನು ಆಲಿಸಿದ್ದರು. ಬೃಹತ್ ಅಪಾರ್ಟ್ಮೆಂಟ್ ಸಂಕೀರ್ಣಗಳಲ್ಲಿ ಮಾಲೀಕರ ಹಕ್ಕುಗಳನ್ನು ರಕ್ಷಿಸಲು ಹಳೆಯ ಕಾನೂನಿನಲ್ಲಿ ಬದಲಾವಣೆ ಅಗತ್ಯವಿರುವುದನ್ನು ಅವರು ಮನಗಂಡಿದ್ದರು. ಅದರ ಫಲವಾಗಿಯೇ ಈಗ ಈ ಹೊಸ ವಿಧೇಯಕವನ್ನು ಅಧಿವೇಶನದಲ್ಲಿ ಮಂಡಿಸಲು ತೀರ್ಮಾನಿಸಲಾಗಿದೆ. ಅಪಾರ್ಟ್ಮೆಂಟ್ ನಿರ್ವಹಣಾ ಸಮಿತಿಗಳ ಆರ್ಥಿಕ ವಹಿವಾಟು ಹಾಗೂ ನಿರ್ಧಾರಗಳಲ್ಲಿ ಪಾರದರ್ಶಕತೆ ತರುವುದು. ಅಪಾರ್ಟ್ಮೆಂಟ್ ನಿರ್ಮಾಣ ಸಂಸ್ಥೆಗಳು ಮತ್ತು ಮಾಲೀಕರ ನಡುವಿನ ಸಂಘರ್ಷಕ್ಕೆ ಕಾನೂನು ಬದ್ಧ ಪರಿಹಾರ ಒದಗಿಸುವುದಾಗಿದೆ. ಏಕಪಕ್ಷೀಯವಾಗಿ ನಿರ್ವಹಣಾ ಶುಲ್ಕ ಹೆಚ್ಚಿಸುವುದಕ್ಕೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ನಿಯಮಾವಳಿ ರೂಪಿಸುವುದು ಸಹ ವಿಧೇಯಕ ಉದ್ದೇಶವಾಗಿದೆ.

ಸರ್ಕಾರವು ಈ ಎರಡೂ ವಿಧೇಯಕಗಳನ್ನು ಮುಂಬರುವ ಅಧಿವೇಶನದಲ್ಲೇ ಮಂಡಿಸಿ, ಅಂಗೀಕಾರ ಪಡೆಯಲು ತೀರ್ಮಾನಿಸಿದೆ. 'ಸಾರ್ವಜನಿಕ ಪ್ರದೇಶ ವಿಧೇಯಕ'ವು ಪ್ರತಿಪಕ್ಷಗಳ ತೀವ್ರ ವಿರೋಧಕ್ಕೆ ಕಾರಣವಾಗುವ ಸಾಧ್ಯತೆಯಿದೆ. ಆರ್‌ಎಸ್‌ಎಸ್‌ನಂತಹ ಸಂಘಟನೆಗಳನ್ನು ಗುರಿಯಾಗಿಸಿಕೊಂಡು ಈ ಕಾನೂನು ತರಲಾಗುತ್ತಿದೆ ಎಂದು ಬಿಜೆಪಿ ಆರೋಪಿಸುವ ಸಾಧ್ಯತೆ ದಟ್ಟವಾಗಿದೆ.

Read More
Next Story