
ಸ್ಪೀಕರ್ ಸ್ಥಾನಕ್ಕೆ ಯು.ಟಿ. ಖಾದರ್ ರಾಜೀನಾಮೆ: ಸಚಿವ ಸಂಪುಟ ಸೇರ್ಪಡೆ ಪಕ್ಕಾ
ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಭೇಟಿಯಾಗಿ, ಕಳೆದ ಮೂರು ವರ್ಷಗಳ ಅವಧಿಯಲ್ಲಿ ಸ್ಪೀಕರ್ ಆಗಿ ಕಾರ್ಯನಿರ್ವಹಿಸಲು ಸಹಕರಿಸಿದಕ್ಕಾಗಿ ಧನ್ಯವಾದಗಳನ್ನು ಅರ್ಪಿಸಿದರು.
ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ಅಸ್ತಿತ್ವಕ್ಕೆ ಬರಲಿರುವ ನೂತನ ಸರ್ಕಾರದಲ್ಲಿ ಸಚಿವ ಸ್ಥಾನ ಖಚಿತವಾಗಿರುವ ಹಿನ್ನೆಲೆಯಲ್ಲಿ ವಿಧಾನಸಭಾ ಸ್ಪೀಕರ್ ಸ್ಥಾನಕ್ಕೆ ಯು.ಟಿ. ಖಾದರ್ ರಾಜೀನಾಮೆ ನೀಡಿದ್ದಾರೆ. ಸಭಾಧ್ಯಕ್ಷರಾಗಿ ಸಂಸದೀಯ ಮೌಲ್ಯಗಳನ್ನು ಎತ್ತಿಹಿಡಿದಿದ್ದ ಯು.ಟಿ. ಖಾದರ್, ತಮ್ಮ ಸ್ಥಾನಕ್ಕೆ ತೆರೆ ಎಳೆದಿದ್ದಾರೆ. ಡಿ.ಕೆ. ಶಿವಕುಮಾರ್ ಅವರಿಂದ ಸಚಿವ ಸಂಪುಟಕ್ಕೆ ಸೇರ್ಪಡೆಯಾಗುವಂತೆ ಅಧಿಕೃತ ಕರೆ ಬಂದ ಬೆನ್ನಲ್ಲೇ, ಖಾದರ್ ತಮ್ಮ ರಾಜೀನಾಮೆ ಪತ್ರವನ್ನು ಸಿದ್ಧಪಡಿಸಿದರು. ಲೋಕಭವನಕ್ಕೆ ತೆರಳಿ ಸಭಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಪತ್ರವನ್ನು ಸಲ್ಲಿಸುವ ಮೂಲಕ ಅವರು ಸಾಂವಿಧಾನಿಕ ಜವಾಬ್ದಾರಿಯಿಂದ ಮುಕ್ತರಾಗಿದ್ದಾರೆ. ನಂತರ, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಭೇಟಿಯಾಗಿ, ಕಳೆದ ಮೂರು ವರ್ಷಗಳ ಅವಧಿಯಲ್ಲಿ ಸ್ಪೀಕರ್ ಆಗಿ ಕಾರ್ಯನಿರ್ವಹಿಸಲು ಸಹಕರಿಸಿದಕ್ಕಾಗಿ ಧನ್ಯವಾದಗಳನ್ನು ಅರ್ಪಿಸಿದರು. ಈ ಭೇಟಿಯು ರಾಜಕೀಯ ಶಿಷ್ಟಾಚಾರದ ಭಾಗವಾಗಿದ್ದರೂ, ಮುಂದಿನ ಸಚಿವ ಸಂಪುಟ ರಚನೆಯ ಪ್ರಕ್ರಿಯೆಗೆ ಚಾಲನೆ ನೀಡಿದಂತಾಗಿದೆ.
ಯು.ಟಿ. ಖಾದರ್ ಅವರು ಕೇವಲ ಶಾಸಕರಲ್ಲ, ಅವರು ಆಡಳಿತದ ಸಾರವನ್ನು ಅರಿತ ಹಿರಿಯ ಅನುಭವಿ. ಹಿಂದೆ ಆರೋಗ್ಯ ಸಚಿವರಾಗಿ ಸೇವೆ ಸಲ್ಲಿಸಿದಾಗ ಅವರು ಕೈಗೊಂಡ ಜನಪರ ಯೋಜನೆಗಳು ರಾಜ್ಯದ ಗಮನ ಸೆಳೆದಿದ್ದವು. ಈ ಅನುಭವವೇ ಅವರಿಗೆ ಈಗ ಸಚಿವ ಸಂಪುಟದಲ್ಲಿ ಪ್ರಮುಖ ಸ್ಥಾನ ಸಿಗಲು ಕಾರಣವಾಗಿದೆ. ಅವರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸುವುದು ಬಹುತೇಕ ಖಚಿತವಾಗಿರುವ ಹಿನ್ನೆಲೆಯಲ್ಲಿ, ಆರೋಗ್ಯ ಅಥವಾ ವಸತಿ ಖಾತೆಯ ಮೇಲೆ ಅವರು ಕಣ್ಣಿಟ್ಟಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ಈ ಕುರಿತು ಮಾತನಾಡಿದ ಯು.ಟಿ. ಖಾದರ್, ತಮ್ಮ ರಾಜಕೀಯ ಮುತ್ಸದ್ದಿತನವನ್ನು ಪ್ರದರ್ಶಿಸಿದ್ದಾರೆ. ನಾನು ಯಾವುದೇ ನಿರ್ದಿಷ್ಟ ಖಾತೆಗೆ ಹಠ ಹಿಡಿದಿಲ್ಲ. ಪಕ್ಷದ ಹೈಕಮಾಂಡ್ ಮತ್ತು ನಾಯಕರು ನನಗೆ ನೀಡುವ ಯಾವುದೇ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಲು ನಾನು ಸಿದ್ಧ ಎಂದು ಅವರು ಹೇಳಿದ್ದಾರೆ. ವಿಶೇಷವಾಗಿ, ಉಪಮುಖ್ಯಮಂತ್ರಿ ಸ್ಥಾನ ಕೊಟ್ಟರೂ ನಿಭಾಯಿಸಲು ಸಿದ್ಧನಿದ್ದೇನೆ. ನನಗೆ ಬರುವ ಯಾವುದೇ ಬಾಲ್ ಅನ್ನು ಬ್ಯಾಟಿಂಗ್ ಮಾಡಲು ಸಿದ್ಧ ಎಂಬ ಅವರ ಹೇಳಿಕೆ, ಪಕ್ಷದ ಬಗೆಗಿನ ಅವರ ಬದ್ಧತೆಯನ್ನು ಎತ್ತಿ ತೋರಿಸುತ್ತದೆ. ಅವರ ಈ ಹೇಳಿಕೆಯು ಕಾರ್ಯಕರ್ತರಲ್ಲಿ ಹೊಸ ಹುರುಪು ತುಂಬಿದೆ.
ಯು.ಟಿ. ಖಾದರ್ ಅವರು ಸಚಿವರಾಗುವುದು ಖಚಿತವಾಗುತ್ತಿದ್ದಂತೆ, ಬೆಂಗಳೂರಿನ ಗಾಲ್ಫ್ ಗ್ರೌಂಡ್ ಬಳಿಯಿರುವ ಅವರ ನಿವಾಸದ ಮುಂದೆ ಬೆಂಬಲಿಗರ ದಂಡು ಹರಿದುಬಂದಿದೆ. ಪಟಾಕಿ ಸಿಡಿಸಿ, ಸಿಹಿ ಹಂಚಿ ಅಭಿಮಾನಿಗಳು ಸಂಭ್ರಮಾಚರಣೆ ನಡೆಸುತ್ತಿದ್ದಾರೆ. ತಮ್ಮ ನಾಯಕನಿಗೆ ರಾಜ್ಯ ಮಟ್ಟದಲ್ಲಿ ದೊಡ್ಡ ಜವಾಬ್ದಾರಿ ಸಿಗುತ್ತಿರುವುದು ಕರಾವಳಿ ಭಾಗದ ಕಾರ್ಯಕರ್ತರಲ್ಲಿ ಹೆಚ್ಚಿನ ಉತ್ಸಾಹ ಮೂಡಿಸಿದೆ.
ಖಾದರ್ ಅವರ ರಾಜೀನಾಮೆಯಿಂದ ಸ್ಪೀಕರ್ ಹುದ್ದೆ ತೆರವಾಗಿದ್ದು, ಈಗ ಆ ಸ್ಥಾನವನ್ನು ಯಾರು ಅಲಂಕರಿಸುತ್ತಾರೆ ಎಂಬುದು ಕುತೂಹಲದ ವಿಷಯವಾಗಿದೆ. ಹೊಸ ಸರ್ಕಾರದ ಮುಂದೆ ರಾಜ್ಯದ ಅಭಿವೃದ್ಧಿ, ಜನಪರ ಯೋಜನೆಗಳ ಜಾರಿ ಮತ್ತು ವಿಪಕ್ಷಗಳ ಸವಾಲುಗಳನ್ನು ಎದುರಿಸುವ ಜವಾಬ್ದಾರಿಯಿದೆ. ಈ ನಿಟ್ಟಿನಲ್ಲಿ ಖಾದರ್ ಅವರಂತಹ ಸಮತೋಲಿತ ನಾಯಕರ ಅಗತ್ಯ ಸರ್ಕಾರಕ್ಕೆ ಹೆಚ್ಚಾಗಿದೆ.

