There is no Rajya Sabha craze, party organisation will not stop even in 93: Former Prime Minister HDD Khadaks message
x
ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ

ಬಿಡದಿ ರೈತ ಪರ ಹೋರಾಟಕ್ಕಿಳಿದ ಮಾಜಿ ಪ್ರಧಾನಿ: ಟೌನ್‌ಶಿಪ್ ಹೆಸರಿನಲ್ಲಿ ಭೂ ದಂಧೆ; ಎಚ್‌.ಡಿ.ದೇವೇಗೌಡ ಆಕ್ರೋಶ

ಸತ್ಯಶೋಧನ ಸಮಿತಿ ವರದಿ ಏಕೆ ಬಹಿರಂಗವಾಗಿಲ್ಲ, ಅದರಲ್ಲಿನ ಸತ್ಯ ಹೊರಗೆ ಬಂತೇ. ಅಂದು ಜನರು ವಿರೋಧ ಮಾಡಿದ್ದಕ್ಕೆ ಕುಮಾರಸ್ವಾಮಿಯವರು ಐದು ಟೌನ್ ಶಿಪ್ ಯೋಜನೆಗಳನ್ನು ಕೈಬಿಟ್ಟರು. ಈಗಲೂ ಕೂಡ ಬಿಡದಿ ಟೌನ್ ಶಿಪ್ ಯೋಜನೆಗೆ ಜನರ ವಿರೋಧವಿದೆ ಎಂದು ದೇವೇಗೌಡರು ಹೇಳಿದರು.


ಬಿಡದಿ ಟೌನ್ ಶಿಪ್ ಯೋಜನೆ ಇದೀಗ ರಾಜಕೀಯ ಜಟಾಪಟಿಗೆ ಕಾರಣವಾಗಿದೆ. ಟೌನ್‌ಶಿಪ್‌ ಹೆಸರಲ್ಲಿ ರೈತರ ಫಲವತ್ತಾದ ಭೂಮಿ ಕಸಿದುಕೊಳ್ಳಲು ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ ಎಂದು ಜೆಡಿಎಸ್‌ ಗುಡುಗಿದರೆ, ಟೌನ್‌ಶಿಪ್‌ ಯೋಜನೆ ಅನುಷ್ಠಾನಗೊಳಿಸಿಯೇ ತೀರುತ್ತೇವೆ ಎಂದು ಕಾಂಗ್ರೆಸ್‌ ನಾಯಕರು ಹೇಳುತ್ತಿದ್ದಾರೆ. ಅದರಲ್ಲಿ ಟೌನ್‌ ಶಿಪ್‌ ಯೋಜನೆ ವಿಚಾರ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್‌ ಇಬ್ಬರಿಗೂ ಪ್ರತಿಷ್ಠೆಯ ವಿಷಯವಾಗಿ ಮಾರ್ಪಟ್ಟಿದೆ. ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ವಾಗ್ದಾಳಿ ಬೆನ್ನಲ್ಲೇ ಮಾಜಿ ಪ್ರಧಾನಿ ಹಾಗೂ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಅವರು ಬಿಡದಿ ಟೌನ್‌ಶಿಪ್‌ ಯೋಜನೆ ವಿರುದ್ಧದ ರೈತರ ಹೋರಾಟಕ್ಕೆ ಸಾಥ್‌ ನೀಡಿದ್ದಾರೆ.

ಟೌನ್‌ಶಿಪ್‌ ಯೋಜನೆ ಹೆಸರಲ್ಲಿ ರೈತರ ಜಮೀನು ಕಿತ್ತುಕೊಂಡು ದಂಧೆ ನಡೆಸಲು ರಾಜ್ಯ ಸರ್ಕಾರ ಹೊರಟಿದೆ ಎಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಆಕ್ರೋಶ ಹೊರಹಾಕಿದ್ದಾರೆ. ಶನಿವಾರ ಬೆಂಗಳೂರಿನ ಜೆಡಿಎಸ್ ಪಕ್ಷದ ರಾಜ್ಯ ಕಚೇರಿಯಲ್ಲಿ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಡಿಸಿಎಂ ಡಿ.ಕೆ. ಶಿವಕುಮಾರ್‌ ವಿರುದ್ಧ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದಾರೆ. 'ರೈತರು ಹೊಡೆದರೆ ಹೊಡೆಸಿಕೊಳ್ಳುವೆ' ಎಂದು ಡಿಸಿಎಂ ಹೇಳಿದ್ದಾರೆ. ಅವರು ಅಲ್ಲಿಗೆ ಹೋಗಿ ರೈತರಿಂದ ಹೊಡೆಸಿಕೊಂಡು ಬರಲಿ, ಆ ಮೇಲೆ ನಾನು ಹೋಗಿ ಮಾತನಾಡುತ್ತೇನೆ ಎಂದು ಗುಡುಗಿದ್ದಾರೆ.

"ದೇವೇಗೌಡರು ಈ ಹಿಂದೆ ಸಭೆಯಲ್ಲಿ ಅಳುತ್ತಿದ್ದರು ಎಂದು ಕೆಲವರು ವ್ಯಂಗ್ಯ ಮಾಡುತ್ತಿದ್ದರು. ಆದರೆ, ಈ ವ್ಯವಸ್ಥೆಯನ್ನು ನೋಡಿ ನಾನು ನಗುತ್ತಿದ್ದೇನೆ. ಈಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ನನ್ನ ಸ್ನೇಹಿತರು ಮತ್ತು ಹಳೆಯ ಸಹೋದ್ಯೋಗಿ. ಜೊತೆಯಲ್ಲಿ ಕೆಲಸ ಮಾಡಿದ್ದೇವೆ. ಆದರೆ, ಇಲ್ಲಿ ನಡೆಯುತ್ತಿರುವುದು ಯಾರಿಗೂ ಕಾಣುತ್ತಿಲ್ಲ. ಇದು ನನಗೆ ಅತೀವ ನೋವು ತಂದಿದೆ" ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಕುಮಾರಸ್ವಾಮಿ ಅವರು ಕೇಂದ್ರದಲ್ಲಿ ಮಂತ್ರಿ ಆಗಿದ್ದಾರೆ. ಇವತ್ತು ನಾನು ಒಂದು ಇಂಗ್ಲೀಷ್ ಪೇಪರ್ ನೋಡಿದೆ. ಕುಮಾರಸ್ವಾಮಿಗೆ ಮಾಡುವುದಕ್ಕೆ ಬೇರೆ ಕೆಲಸ ಇಲ್ಲ ಎಂದು ಒಬ್ಬ ವ್ಯಕ್ತಿ ಹೇಳಿರುವ ವರದಿ ಗಮನಿಸಿದೆ. ಕುಮಾರಸ್ವಾಮಿ ಮಾಡಿದ ಬಿಡದಿ ಟೌನ್‌ಶಿಪ್‌ ಅನ್ನು ನಾನು ಮಾಡುತ್ತಿದ್ದೇನೆ ಎಂದು ಆ ವ್ಯಕ್ತಿ ಹೇಳಿದ್ದಾರೆ. ಆಗ ಕುಮಾರಸ್ವಾಮಿ ಮಾಡಲು ಹೊರಟಿದ್ದು ಏನು?, ಈ ವ್ಯಕ್ತಿ ಈಗ ಮಾಡುತ್ತಿರುವ ದಂಧೆ ಏನು ಎಂಬುದು ಜನರಿಗೆ ಅರ್ಥವಾಗಿದೆ. ಅದರ ವಿರುದ್ಧ ನಾನು ಹೋರಾಟ ಮಾಡುತ್ತೇನೆ ಎಂದು ದೇವೇಗೌಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸತ್ಯಶೋಧನಾ ಸಮಿತಿ ಏನಾಯ್ತು?

ಬೆಂಗಳೂರು ನಗರದ ಮೇಲಿನ ಒತ್ತಡ ಕಡಿಮೆ ಮಾಡಲು ಅಂದು ಕುಮಾರಸ್ವಾಮಿ ಅವರು ಐದು ಟೌನ್ ಶಿಪ್ ಗಳನ್ನು ಮಾಡಲು ಹೊರಟಿದ್ದರು. ಆಗ ಕಾಂಗ್ರೆಸ್ ನಾಯಕರು ಅಪಪ್ರಚಾರ ನಡೆಸಿ, ಕುಮಾರಸ್ವಾಮಿಯವರು ಭೂಮಿ ಹೊಡೆಯಲು ಹೊರಟಿದ್ದಾರೆ ಎಂದು ಆರೋಪಿಸಿದ್ದರು. ಈ ಬಗ್ಗೆ ಸತ್ಯಶೋಧನಾ ಸಮಿತಿ ರಚಿಸಿ ತನಿಖೆ ಮಾಡಿಸಿದರು. ಆದರೆ, ಇಂದು ಅವರ ಸತ್ಯಶೋಧನ ಸಮಿತಿ ವರದಿ ಏಕೆ ಬಹಿರಂಗವಾಗಿಲ್ಲ, ಅದರಲ್ಲಿನ ಸತ್ಯ ಹೊರಗೆ ಬಂತೇ. ಅಂದು ಜನರು ವಿರೋಧ ಮಾಡಿದ್ದಕ್ಕೆ ಕುಮಾರಸ್ವಾಮಿಯವರು ಐದು ಟೌನ್ ಶಿಪ್ ಯೋಜನೆಗಳನ್ನು ಕೈಬಿಟ್ಟರು. ಈಗಲೂ ಕೂಡ ಬಿಡದಿ ಟೌನ್ ಶಿಪ್ ಯೋಜನೆಗೆ ಜನರ ಆಕ್ರೋಶ, ವಿರೋಧವಿದೆ. ಹೀಗಾಗಿ ಯೋಜನೆಯನ್ನು ತಕ್ಷಣವೇ ಕೈಬಿಡಬೇಕು ಎನ್ನುವುದು ನನ್ನ ಆಗ್ರಹವಾಗಿದೆ ಎಂದು ದೇವೇಗೌಡರು ಹೇಳಿದ್ದಾರೆ.

ಈಗ ಬೆಂಗಳೂರು ಜವಾಬ್ದಾರಿ ಹಾಗೂ ನೀರಾವರಿ ಜವಾಬ್ದಾರಿಯನ್ನು ಒಬ್ಬರೇ ವಹಿಸಿಕೊಂಡಿದ್ದಾರೆ. ಅದರ ಜೊತೆಗೆ ರಾಷ್ಟ್ರೀಯ ಪಕ್ಷದ ಜವಾಬ್ದಾರಿ ಕೂಡ ಅವರೇ ಹೊತ್ತುಕೊಂಡಿದ್ದಾರೆ. ಏನೋ ಮುಖ್ಯಮಂತ್ರಿ ಆಗಬೇಕೆಂದು ಒಡಂಬಡಿಕೆ ಆಗಿದೆಯಂತೆ. ನಿಮ್ಮಗಳ ಮುಂದೆ ಮನರಂಜನೆ ಮಾಡುತ್ತಿದ್ದಾರೆ. ಬಿಡದಿಯ ರೈತರು ಕಣ್ಣೀರಿನಲ್ಲಿ ಕೈ ತೊಡೆಯುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

20 ಸಾವಿರ ಎಕರೆ ಭೂಮಿ ಯಾರ ಹೆಸರಲ್ಲಿದೆ?

ಸಿಎಂ ಸಿದ್ದರಾಮಯ್ಯ ವಿರುದ್ಧವೂ ವಾಗ್ದಾಳಿ ನಡೆಸಿದ ದೇವೇಗೌಡರು, ಸಿದ್ದರಾಮಯ್ಯನವರೇ, ನೀವು ನನ್ನ ಜೊತೆ ಕೆಲಸ ಮಾಡಿದ್ದೀರಿ. ನಿಮ್ಮ ಸಾಮಾಜಿಕ ನ್ಯಾಯದ ಮಾತಿನ ಬಗ್ಗೆ ನನಗೂ ಅರಿವಿದೆ. ಬೆಂಗಳೂರು ಸುತ್ತಮುತ್ತ ಸುಮಾರು 20 ಸಾವಿರ ಎಕರೆ ಭೂಮಿ ಯಾರ ಹೆಸರಿನಲ್ಲಿದೆ ಎಂಬುದನ್ನು ತನಿಖೆ ಮಾಡಿ ಎಂದು ಈಗಾಗಲೇ ಪತ್ರ ಬರೆದಿದ್ದೇನೆ. ಸಿದ್ದರಾಮಯ್ಯನವರೇ ಬೆಂಗಳೂರು ನಗರದ ಹೊಣೆ ಹೊತ್ತಿರುವವರ ಒತ್ತಡಕ್ಕೆ ಮಣಿದು ಜನರ ಸಮಸ್ಯೆಯನ್ನು ನೀವು ಕೇಳುತ್ತಿಲ್ಲ. ಬಿಡದಿ ರೈತರ ಸಮಸ್ಯೆಯನ್ನು ಯಾರಾದರೂ ಹೋಗಿ ಕೇಳಿದ್ದೀರಾ ಎಂದು ಪ್ರಶ್ನಿಸಿದ್ದಾರೆ.

ಟೌನ್ ಶಿಪ್ ಹೆಸರಿನಲ್ಲಿ ಫಲವತ್ತಾದ ಭೂಮಿಯನ್ನು ಹೊಡೆಯಲು ಹೊರಟಿದ್ದಾರೆ. ಭೂಮಿಯನ್ನು ಕಿತ್ತುಕೊಂಡು ಯಾರಿಗೆ ಕೊಡಲು ಹೊರಟಿದ್ದಾರೆ ಎಂಬುದನ್ನು ಸರ್ಕಾರ ಹೇಳಬೇಕು. ಭಾಗದಲ್ಲಿ ರೈತರು ದೊಡ್ಡ ಮಟ್ಟದ ಹೈನುಗಾರಿಕೆ, ತೋಟಗಾರಿಕೆ ಮಾಡುತ್ತಿದ್ದಾರೆ. ದೊಡ್ಡ ಪ್ರಮಾಣದಲ್ಲಿ ರೈತರು ನಿತ್ಯವೂ ಡೇರಿಗೆ ಹಾಲನ್ನು ನೀಡುತ್ತಿದ್ದಾರೆ. ಹಿಂದೆ ಕುಮಾರಸ್ವಾಮಿ ಅವರು 250 ಕೋಟಿ ವೆಚ್ಚದಲ್ಲಿ ನೀರಾವರಿ ಯೋಜನೆ ಮಾಡಿ ಈ ಭಾಗಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ. ಇಂತಹ ನೀರಾವರಿ ಜಾಗವನ್ನು ಕಿತ್ತುಕೊಳ್ಳಲು ನಿಮ್ಮ ಪಕ್ಷದ ಅಧ್ಯಕ್ಷರು ಹೊರಟಿದ್ದಾರೆ. ನೀವು ನನ್ನ ಜೊತೆ ಕೆಲಸ ಮಾಡಿದ್ದೀರಿ. ಬಡವರು ಹಿಂದುಳಿದವರ ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡಿದ್ದೀರಿ. ನೀವು ಅದರ ಬಗ್ಗೆ ನಿರ್ಧಾರ ಕೈಗೊಳ್ಳುವ ಸಮಯ ಇದಾಗಿದೆ. ಬೆಂಗಳೂರು ಹೊಣೆಗಾರಿಕೆ ಗೊತ್ತಿರುವ ವ್ಯಕ್ತಿಯ ಒತ್ತಡಕ್ಕೆ ಮಣಿದು ಜನಸಾಮಾನ್ಯರಿಗೆ ಅನ್ಯಾಯ ಮಾಡಬೇಡಿ. ಬಿಡದಿ ರೈತರು ಕಣ್ಣೀರು ಹಾಕುತ್ತಿದ್ದಾರೆ ಎಂದು ದೇವೇಗೌಡರು ಹೇಳಿದ್ದಾರೆ.

ಇಂದಿನಿಂದ ನನ್ನ ಹೋರಾಟ ಆರಂಭ

ಜನರಿಂದ ತೀವ್ರ ವಿರೋಧ ಬಂದರೂ ಟೌನ್‌ಶಿಪ್ ಮಾಡಿ ತೀರುತ್ತೇನೆ ಎಂದು ಆ ವ್ಯಕ್ತಿ ಹಠ ಮಾಡುತ್ತಿದ್ದಾರೆ. ಈ ಬಗ್ಗೆ ನಾನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದೇನೆ. ಇವತ್ತಿನಿಂದ ನನ್ನ ಹೋರಾಟ ಆರಂಭವಾಗಿದೆ. ಬೆಂಗಳೂರು ಸುತ್ತಮುತ್ತ ಬಡವರ ಜಮೀನನ್ನು ಕಿತ್ತುಕೊಳ್ಳುವ ಶಕ್ತಿಗಳನ್ನು ಮಟ್ಟ ಹಾಕಬೇಕಿದೆ. ಬಿಡಿಎ ಸೇರಿದಂತೆ ಎಲ್ಲೆಲ್ಲಿ ಅಕ್ರಮ ನಡೆದಿದೆಯೋ ಅಲ್ಲೆಲ್ಲ ನಾನು ಹೋರಾಟ ನಡೆಸುತ್ತೇನೆ. ಈ ಬಗ್ಗೆ ಮುಖ್ಯಮಂತ್ರಿಗೆ ಬರೆದಿರುವ ಪತ್ರದಲ್ಲಿ ಸ್ಪಷ್ಟವಾಗಿ ತಿಳಿಸಿದ್ದೇನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ.

ಸಿದ್ದರಾಮಯ್ಯ ಅವರೇ ಬಿಡದಿಗೆ ಬನ್ನಿ ಎಂದ ಎಚ್‌ಡಿಡಿ

ಬಿಡದಿಯ ರೈತರ ಪರಿಸ್ಥಿತಿಯನ್ನು ಒಮ್ಮೆ ನೀವೇ ಖುದ್ದಾಗಿ ನೋಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದ ದೇವೇಗೌಡರು; ನಾನು ಬರುತ್ತೇನೆ, ನೀವು ಬನ್ನಿ. ಸ್ಥಳಕ್ಕೆ ಭೇಟಿ ನೀಡೋಣ. ಈವರೆಗೂ ಸ್ಥಳೀಯ ಶಾಸಕರು ತಹಶೀಲ್ದಾರರು, ಜಿಲ್ಲಾಧಿಕಾರಿಗಳು ಆ ಜನರ ಸಮಸ್ಯೆಯನ್ನು ಕೇಳಿಲ್ಲ. ಇಲ್ಲಿ ದಂಧೆ ನಡೆಯುತ್ತಿದೆ. ರೈತರ ಭೂಮಿಯನ್ನು ಕಿತ್ತುಕೊಂಡು ದಂಧೆ ಮಾಡುತ್ತಿದ್ದಾರೆ. ಕನಕಪುರದಲ್ಲಿ ಎಷ್ಟು ಜಮೀನು ವಶಕ್ಕೆ ತೆಗೆದುಕೊಂಡಿದ್ದಾರೆ ಎಂಬ ಬಗ್ಗೆ ನನ್ನ ಬಳಿ ಮಾಹಿತಿ ಇದೆ ಎಂದು ಯಾರೊಬ್ಬರ ಹೆಸರು ಹೇಳದೆಯೇ ಮಾಜಿ ಪ್ರಧಾನಿಗಳು ವಾಗ್ದಾಳಿ ನಡೆಸಿದ್ದಾರೆ.

Read More
Next Story