
ಸಾಂದರ್ಭಿಕ ಚಿತ್ರ
ಪವರ್ ಕಾರಿಡರ್‌ಗೆ ಡಿ.ಕೆ.ಶಿವಕುಮಾರ್ ಜೊತೆ ಆಧ್ಯಾತ್ಮಿಕ ಶಕ್ತಿಗಳ ಪ್ರವೇಶ
ಡಿ.ಕೆ.ಶಿವಕುಮಾರ್ ಅವರ ಈ ಪ್ರಮಾಣ ವಚನ ಸಮಾರಂಭದಲ್ಲಿ ಹಲವು ವರ್ಷಗಳ ಬಳಿಕ ಒಂದು ಅಪರೂಪದ ವಿಶೇಷತೆ ಕಂಡುಬಂತು. ವಿವಿಧ ಮಠಗಳ ಸುಮಾರು 50ಕ್ಕೂ ಹೆಚ್ಚು ಸ್ವಾಮೀಜಿಗಳಿಗೆ ಅಧಿಕೃತ ಆಹ್ವಾನ ನೀಡಲಾಗಿತ್ತು.
ಕರ್ನಾಟಕದ ಅಧಿಕಾರದ ಕಾರಿಡಾರ್‌ಗಳಲ್ಲಿ ಮತ್ತೆ ಸ್ವಾಮೀಜಿಗಳ ಪ್ರಭಾವ ಹೆಚ್ಚಾಗ್ತಿದೆಯಾ? ಜ್ಯೋತಿಷ್ಯ, ಯಾಗ-ಯಜ್ಞ, ವಾಸ್ತು ಸಲಹೆಗಳೆಲ್ಲವೂ ರಾಜ್ಯ ರಾಜಕೀಯ ರಂಗದಲ್ಲಿ ಮತ್ತೆ ಸದ್ದು ಮಾಡುತ್ತಿದೆಯೇ? ಇಂದು ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ, ರಾಜಕೀಯ ವಲಯದಲ್ಲಿ ಇಂತಹದ್ದೊಂದು ಭಾರಿ ಚರ್ಚೆ ಮುನ್ನೆಲೆಗೆ ಬಂದಿದೆ!
ಹತ್ತಾರು ರಾಜಕೀಯ ಲೆಕ್ಕಾಚಾರ, ದೆಹಲಿ ಮಟ್ಟದ ಹೈಡ್ರಾಮಾಗಳಿಗೆ ಕೊನೆಗೂ ತೆರೆ ಬಿದ್ದಿದ್ದು, ಕಾಂಗ್ರೆಸ್‌ನ 'ಟ್ರಬಲ್ ಶೂಟರ್' ಡಿ.ಕೆ. ಶಿವಕುಮಾರ್ ಅವರು ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಇಂದು ಸಂಜೆ 4.05ರ ನಿಗದಿತ ಮುಹೂರ್ತದಂತೆ ರಾಜಭವನದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ, ರಾಜ್ಯಪಾಲ ಥಾವರ್‌ಚಂದ್ ಗೆಹಲೋಟ್ ಅವರು ಡಿಕೆಶಿಗೆ ಅಧಿಕಾರದ ರಹಸ್ಯ ಬೋಧಿಸಿದರು. ಈ ಮೂಲಕ ಕರ್ನಾಟಕ ಕಾಂಗ್ರೆಸ್ ಸರ್ಕಾರದ ಎರಡನೇ ಇನ್ನಿಂಗ್ಸ್ ಅಧಿಕೃತವಾಗಿ ಆರಂಭವಾಗಿದೆ.
ಶಿಷ್ಟಾಚಾರವೋ? ಮಠಾಧೀಶರ ಪ್ರಭಾವವೋ?
ಡಿ.ಕೆ.ಶಿವಕುಮಾರ್ ಅವರ ಈ ಪ್ರಮಾಣ ವಚನ ಸಮಾರಂಭದಲ್ಲಿ ಹಲವು ವರ್ಷಗಳ ಬಳಿಕ ಒಂದು ಅಪರೂಪದ ವಿಶೇಷತೆ ಕಂಡುಬಂತು. ವಿವಿಧ ಮಠಗಳ ಸುಮಾರು 50ಕ್ಕೂ ಹೆಚ್ಚು ಸ್ವಾಮೀಜಿಗಳಿಗೆ ಅಧಿಕೃತ ಆಹ್ವಾನ ನೀಡಲಾಗಿತ್ತು. ಅಷ್ಟೇ ಅಲ್ಲ, ಸಮಾರಂಭದಲ್ಲಿ ಅವರಿಗೆ ವಿಶೇಷ ಆಸನ ವ್ಯವಸ್ಥೆಯನ್ನೂ ಮಾಡಲಾಗಿತ್ತು. ಇದು ಕೇವಲ ಶಿಷ್ಟಾಚಾರದ ಭಾಗವೇ? ಅಥವಾ ರಾಜ್ಯದ ಅಧಿಕಾರ ಕೇಂದ್ರಗಳಲ್ಲಿ ಮತ್ತೆ ಮಠಾಧೀಶರ ಪ್ರಭಾವ ಹೆಚ್ಚಾಗುತ್ತಿರುವುದರ ಸಂಕೇತವೇ ಎನ್ನುವ ಪ್ರಶ್ನೆ ಸದ್ಯ ಸಾರ್ವಜನಿಕ ವಲಯದಲ್ಲಿ ಕಾಡಲಾರಂಭಿಸಿದೆ.
ಜ್ಯೋತಿಷಿಗಳ ಸಲಹೆ: ಬದಲಾಯ್ತು ವೇದಿಕೆಯ ದಿಕ್ಕು!
ಇದರ ಮಧ್ಯೆ ಮತ್ತೊಂದು ಕುತೂಹಲಕಾರಿ ಸಂಗತಿ ಅಂದರೆ, ಪ್ರಮಾಣ ವಚನ ಕಾರ್ಯಕ್ರಮಕ್ಕಾಗಿ ವೇದಿಕೆಯ ದಿಕ್ಕನ್ನೇ ಬದಲಾಯಿಸಲಾಗಿತ್ತು! ಈ ಹಿಂದೆ ಇದೇ ಸ್ಥಳದಲ್ಲಿ ನಡೆದ ಹಲವು ಸರ್ಕಾರಿ ಕಾರ್ಯಕ್ರಮಗಳ ವೇದಿಕೆ ಪಶ್ಚಿಮ ದಿಕ್ಕಿನತ್ತ ಮುಖ ಮಾಡುತ್ತಿತ್ತು. ಆದರೆ ಈ ಬಾರಿ ಜ್ಯೋತಿಷಿಗಳ ಕಟ್ಟುನಿಟ್ಟಿನ ಸಲಹೆ ಮೇರೆಗೆ, ವೇದಿಕೆಯನ್ನು 'ಪೂರ್ವ ದಿಕ್ಕಿಗೆ' ಮುಖ ಮಾಡುವಂತೆ ಮರು ವಿನ್ಯಾಸ ಮಾಡಲಾಗಿತ್ತು ಎನ್ನಲಾಗಿದೆ.
ವಿಧಾನಸೌಧದಲ್ಲೂ ಧಾರ್ಮಿಕ ವಿಧಿವಿಧಾನ?
ಇಷ್ಟಕ್ಕೇ ಇದು ಮುಗಿದಿಲ್ಲ! ವಿಧಾನಸೌಧದಲ್ಲಿರುವ ಮುಖ್ಯಮಂತ್ರಿಗಳ ಕಚೇರಿಯನ್ನು ಪೊಲೀಸರ ಸಮ್ಮುಖದಲ್ಲೇ ಪ್ರಸಿದ್ಧ ಜ್ಯೋತಿಷಿ ಡಾ. ಆರಾಧ್ಯ ಪರಿಶೀಲಿಸಿದ್ದಾರೆ. ಕಚೇರಿ ಪ್ರವೇಶಕ್ಕೂ ಮುನ್ನ ವಿಶೇಷ ಪೂಜೆ ಹಾಗೂ ಧಾರ್ಮಿಕ ವಿಧಿವಿಧಾನಗಳನ್ನು ನಡೆಸುವಂತೆ ಅವರು ಸಲಹೆ ನೀಡಿದ್ದಾರೆ ಎನ್ನಲಾಗುತ್ತಿದ್ದು, ಆಡಳಿತ ಕೇಂದ್ರದಲ್ಲಿ ವೈಜ್ಞಾನಿಕತೆಗಿಂತ ದೈವಶಕ್ತಿಯೇ ಮೇಲುಗೈ ಸಾಧಿಸುತ್ತಿದೆಯೇ ಎಂಬ ಚರ್ಚೆ ಶುರುವಾಗಿದೆ.
ಸಿಎಂ ಗದ್ದುಗೆಗಾಗಿ ನಡೆದಿತ್ತಾ 'ರಾಜಶ್ಯಾಮಲ ಯಾಗ'?
ಡಿ.ಕೆ.ಶಿವಕುಮಾರ್ ಮತ್ತು ಆಧ್ಯಾತ್ಮಿಕ ಆಚರಣೆಗಳ ಸಂಬಂಧ ಇಂದಿನದ್ದಲ್ಲ. ಮುಖ್ಯಮಂತ್ರಿಯಾಗುವ ಕನಸಿನೊಂದಿಗೆ ಅವರು ತಮ್ಮ ಆಪ್ತ ಹಾಗೂ ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಜೆ.ಎಸ್. ಆಂಜನೇಯಲು ನೇತೃತ್ವದಲ್ಲಿ ಭರ್ಜರಿ 'ರಾಜಶ್ಯಾಮಲ ಯಾಗ' ನಡೆಸಿದ್ದರು. ಯಾಗಕ್ಕೂ ಮುನ್ನ ಸತತ 108 ದಿನಗಳ ಕಾಲ ಲಿಂಗಕ್ಕೆ ಹಾಲಾಭಿಷೇಕ ಮಾಡಲಾಗಿತ್ತು. 109ನೇ ದಿನ ಬಳ್ಳಾರಿಯ ಬಾಲಾಜಿ ಕ್ಯಾಂಪ್ ನ ಶಿವನ ದೇವಸ್ಥಾನದಲ್ಲಿ ರಾಜಶ್ಯಾಮಲ ಯಾಗ ಮಾಡಲಾಗಿತ್ತು. ಇದರ ಜೊತೆಗೆ ಸುದರ್ಶನ ಹಾಗೂ ಗಣಪತಿ ಸೇರಿದಂತೆ ಐದು ಯಾಗಗಳನ್ನು ಆಯೋಜಿಸಲಾಗಿತ್ತು. ಈ ಯಾಗ ಮಾಡಿದರೆ ಸಂಕಷ್ಟ ದೂರವಾಗಿ ದೊಡ್ಡ ಹುದ್ದೆ ಸಿಗುತ್ತದೆ ಎಂಬ ಬಲವಾದ ನಂಬಿಕೆ ಇದೆ.
ದಕ್ಷಿಣ ಭಾರತದ ನಾಯಕರ ಕನೆಕ್ಷನ್
ಕುತೂಹಲದ ಸಂಗತಿ ಅಂದರೆ, ಈ ಹಿಂದೆ ಚಂದ್ರಬಾಬು ನಾಯ್ಡು, ಕೆ. ಚಂದ್ರಶೇಖರ ರಾವ್, ವೈ.ಎಸ್. ಜಗನ್ ಮೋಹನ್ ರೆಡ್ಡಿ ಹಾಗೂ ರೇವಂತ್ ರೆಡ್ಡಿ ಅವರಂತಹ ದಕ್ಷಿಣ ಭಾರತದ ಘಟಾನುಘಟಿ ನಾಯಕರು ಕೂಡ ಇದೇ ರಾಜಶ್ಯಾಮಲ ಯಾಗ ನಡೆಸಿ ಅಧಿಕಾರದ ಗದ್ದುಗೆ ಏರಿದ್ದರು ಎನ್ನಲಾಗಿದೆ.
ಹಳೇ ಟ್ರೆಂಡ್ ರೀ-ಎಂಟ್ರಿ!
ಇದು ಕರ್ನಾಟಕ ರಾಜಕೀಯದ ಹೊಸ ಟ್ರೆಂಡಾ ಅಂದರೆ ಖಂಡಿತ ಇಲ್ಲ. ಹಳೆಯ ಟ್ರೆಂಡ್ ರೀ ಎಂಟ್ರಿ ಕೊಟ್ಟಿದೆ ಅಷ್ಟೇ. ಕೆಲ ವರ್ಷಗಳ ಹಿಂದೆ ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಪೂಜೆ, ಪುನಸ್ಕಾರ, ವಾಸ್ತು, ಜ್ಯೋತಿಷ್ಯ ವಿಚಾರಗಳು ಪದೇ ಪದೇ ಸುದ್ದಿಯಾಗುತ್ತಿದ್ದವು. ಅದರಲ್ಲೂ 'ಹಳದಿ ಲೇಪಿಸಿದ ನಿಂಬೆಹಣ್ಣಿನ ಪ್ರಸಂಗ' ಹಾಗೂ ವಾಸ್ತುವಿನ ಹೆಸರಲ್ಲಿ ವಿಧಾನಸಭೆಯ ಒಂದು ಪ್ರವೇಶ ದ್ವಾರವನ್ನು ಮುಚ್ಚಿದ್ದ ವಿಚಾರ ದೊಡ್ಡ ವಿವಾದ ಸೃಷ್ಟಿಸಿತ್ತು.
ಆ ಸಂದರ್ಭದಲ್ಲಿ ಅಂದಿನ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತೀವ್ರ ಆಕ್ಷೇಪ ವ್ಯಕ್ತಪಡಿಸಿ, "ವಾಸ್ತು-ಜ್ಯೋತಿಷ್ಯದ ಹೆಸರಿನಲ್ಲಿ ಪ್ರಜಾಪ್ರಭುತ್ವದ ವ್ಯವಸ್ಥೆಯನ್ನೇ ಬದಲಾಯಿಸಲಾಗುತ್ತಿದೆ" ಎಂದು ಟೀಕಿಸಿದ್ದರು. ಸಿದ್ದರಾಮಯ್ಯ ಹಾಗೂ ಬಸವರಾಜ ಬೊಮ್ಮಾಯಿ ಅವರ ಆಡಳಿತಾವಧಿಯಲ್ಲಿ ಇಂತಹ ಚರ್ಚೆಗಳು ದೂರವಿದ್ದವು. ಆದರೆ ಈಗ ಡಿಕೆಶಿ ಅಧಿಕಾರಕ್ಕೆ ಬಂದಿರುವ ಹೊತ್ತಿನಲ್ಲಿ ಮತ್ತೆ ಆಧ್ಯಾತ್ಮಿಕತೆ ಮತ್ತು ರಾಜಕೀಯದ ಸಂಬಂಧ ಚರ್ಚೆಯ ಕೇಂದ್ರಬಿಂದುವಾಗಿದೆ.
ಅಜ್ಜಯ್ಯನ ಹೆಸರಲ್ಲೇ ಪ್ರಮಾಣ!
ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ತಮ್ಮ ಆರಾಧ್ಯ ದೈವ ಹಾಗೂ ಗುರುಸ್ಥಾನದಲ್ಲಿರುವ ನೊಣವಿನಕೆರೆ ಅಜ್ಜಯ್ಯನವರ ಹೆಸರಿನಲ್ಲೇ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಹೈಕಮಾಂಡ್‌ನಿಂದ ಗ್ರೀನ್ ಸಿಗ್ನಲ್ ಸಿಗುತ್ತಿದ್ದಂತೆ ಬೆಂಗಳೂರಿಗೆ ಬಂದ ಡಿ.ಕೆ.ಶಿವಕುಮಾರ್, ನೇರವಾಗಿ ಮನೆಗೆ ಹೋಗದೆ ನಾಗರಬಾವಿಯಲ್ಲಿರುವ ಅಜ್ಜಯ್ಯನವರ ಶಾಖಾ ಮಠಕ್ಕೆ ಪತ್ನಿ ಸಮೇತರಾಗಿ ಭೇಟಿ ನೀಡಿದ್ದರು. ತಡರಾತ್ರಿ 11.40 ರಿಂದ 2 ಗಂಟೆಯವರೆಗೆ ಮಠದಲ್ಲೇ ತಂಗಿದ್ದ ಡಿಕೆಶಿ ಕುಟುಂಬ ವಿಶೇಷ ಪೂಜೆ ನೆರವೇರಿಸಿದೆ. ಈ ವೇಳೆ ಅಜ್ಜಯ್ಯನವರು "ಅಧಿಕಾರ ಸಿಕ್ಕ ತಕ್ಷಣ ಅತಿಯಾದ ಸಂಭ್ರಮ ಬೇಡ" ಎಂಬ ಮಹತ್ವದ ಸಲಹೆ ನೀಡಿದ್ದಾರೆ ಎನ್ನಲಾಗಿದೆ.
ಸಾರ್ವಜನಿಕರ ನಿರೀಕ್ಷೆ ಮತ್ತು ತಜ್ಞರ ಆತಂಕ
ಒಬ್ಬ ನಾಯಕನ ವೈಯಕ್ತಿಕ ನಂಬಿಕೆ ಮತ್ತು ಸರ್ಕಾರದ ಆಡಳಿತ ವ್ಯವಸ್ಥೆ ಎರಡು ಬೇರೆ ವಿಚಾರಗಳು. ದೇವರ ಮೇಲೆ ನಂಬಿಕೆ ಇರುವುದು ಪ್ರತಿಯೊಬ್ಬರ ವೈಯಕ್ತಿಕ ಹಕ್ಕು ಹಾಗೂ ಸ್ವಾಮೀಜಿಗಳ ಆಶೀರ್ವಾದ ಪಡೆಯುವುದೂ ತಪ್ಪಲ್ಲ. ಆದರೆ ಆಡಳಿತಾತ್ಮಕ ನಿರ್ಧಾರಗಳು, ನೀತಿಗಳು ಮತ್ತು ಸರ್ಕಾರದ ಕಾರ್ಯವೈಖರಿ ವೈಜ್ಞಾನಿಕ ದೃಷ್ಟಿಕೋನ ಮತ್ತು ಸಾರ್ವಜನಿಕ ಹಿತಾಸಕ್ತಿಯ ಆಧಾರದ ಮೇಲೆ ನಡೆಯಬೇಕೆಂಬ ನಿರೀಕ್ಷೆ ಜನರಲ್ಲಿರುತ್ತದೆ. ಈ ಕುರಿತು 'ದ ಫೆಡರಲ್ ಕರ್ನಾಟಕ'ದೊಂದಿಗೆ ಮಾತನಾಡಿರುವ ಪವಾಡ ಭಂಜಕ ಹುಲಿಕಲ್ ನಟರಾಜ್ ಅವರು ಕೂಡ ತೀವ್ರ ಕಳಕಳಿ ವ್ಯಕ್ತಪಡಿಸಿದ್ದಾರೆ.

