ರಾಜ್ಯದಲ್ಲಿ ಪ್ರತಿಭಟನೆಗಳ ಕಾವು ತೀವ್ರ; ಜೆಡಿಎಸ್ ಮುಂದೆ ಮಂಕಾದ ಬಿಜೆಪಿ
17 ಮಂದಿ ಬಿಜೆಪಿ ಸಂಸದರಿದ್ದರೂ ಕೇಂದ್ರದಿಂದ ಬರಬೇಕಾದ ಬಾಕಿ ಬರ ಪರಿಹಾರ ತರಲಿಲ್ಲ. ಹೀಗಿರುವಾಗ, ಬಿಜೆಪಿ ಪ್ರತಿಭಟನೆಯಲ್ಲಿ ಅರ್ಥವಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ. ಗುಟ್ಕಾ ನಿಷೇಧ ವಿರೋಧಿಸಿ ದಾವಣಗೆರೆ ಬಂದ್ ಆಚರಿಸಲಾಗಿದೆ. ಇಸಿಐ ವಿರುದ್ಧ ಎಸ್‌ಐಆರ್ ವಿರೋಧಿ ಒಕ್ಕೂಟ ಪ್ರತಿಭಟನೆ ನಡೆಸಿದೆ.
ರಾಜ್ಯದಲ್ಲಿ ವಿಪಕ್ಷಗಳ ಪ್ರತಿಭಟನೆ ಕಾವು ತೀವ್ರಗೊಂಡಿದೆ. ವಾಲ್ಮೀಕಿ ಹಗರಣದಲ್ಲಿ ಸಚಿವ ಬಿ.ನಾಗೇಂದ್ರ ರಾಜೀನಾಮೆ ನಂತರವೂ ಬಿಜೆಪಿ ನಾಯಕರು ಪಾದಯಾತ್ರೆ ಆರಂಭಿಸಿದ್ದು, ಪಕ್ಷದೊಳಗೆ ಹಾಗೂ ಮೈತ್ರಿ ಪಕ್ಷದಲ್ಲೇ ಅಪಸ್ವರಗಳು ಕೇಳಿ ಬಂದಿವೆ.
ರಾಯಚೂರಿನಿಂದ ಬಳ್ಳಾರಿವರೆಗೆ ಆಯೋಜಿಸಿದ್ದ ಪಾದಯಾತ್ರೆಯ ಮುಖ್ಯ ಉದ್ದೇಶ ಬಿ.ನಾಗೇಂದ್ರ ರಾಜೀನಾಮೆ ಪಡೆಯುವುದಾಗಿತ್ತು. ಈಗ ರಾಜೀನಾಮೆ ಪಡೆದರೂ ಬರ ಪರಿಹಾರ, ಕೆಪಿಎಸ್ಸಿ ಅಕ್ರಮ ಹಾಗೂ ನೈಸ್ ಹಗರಣ ಮುಂದಿಟ್ಟುಕೊಂಡು ಪಾದಯಾತ್ರೆಗೆ ಮುಂದಾಗಿರುವುದು ಟೀಕೆಗೆ ಗುರಿಯಾಗಿದೆ.
ರಾಜ್ಯದಲ್ಲಿ 17 ಮಂದಿ ಬಿಜೆಪಿ ಸಂಸದರಿದ್ದರೂ ಕೇಂದ್ರದಿಂದ ಬರಬೇಕಾದ 14,700 ಕೋಟಿಗೂ ಅಧಿಕ ಬಾಕಿ ಬರ ಪರಿಹಾರ ತರಲು ಆಗಿಲ್ಲ. ಹೀಗಿರುವಾಗ, ರಾಜ್ಯ ಸರ್ಕಾರದ ವಿರುದ್ಧವೇ ಬಿಜೆಪಿ ಬರ ವಿಚಾರದಲ್ಲಿ ಪ್ರತಿಭಟನೆ ನಡೆಸುತ್ತಿರುವುದನ್ನು ಕಾಂಗ್ರೆಸ್ ಟೀಕಿಸಿದೆ. ಈ ಮಧ್ಯೆ, ರಾಜಕೀಯ ಪಕ್ಷಗಳ ಕಚೇರಿಗಳಿಗೆ ಮುತ್ತಿಗೆ ಹಾಕುವ ಪರಿಪಾಠವು ಪೊಲೀಸರಿಗೆ ದೊಡ್ಡ ತಲೆನೋವು ತಂದೊಡ್ಡಿದೆ.
ಕೆಪಿಎಸ್ಸಿ ಅಕ್ರಮದಲ್ಲಿ ಭಾಗಿಯಾದ ಆರೋಪದ ಮೇಲೆ ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಜೆಡಿಎಸ್ ಕಾರ್ಯಕರ್ತರು ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ್ದು, ಪೊಲೀಸರು ಬಂಧಿಸಿದ್ದಾರೆ. ಇನ್ನೊಂದೆಡೆ, ವಕೀಲರು ಕೂಡ ಪ್ರಿಯಾಂಕ್ ಖರ್ಗೆ ರಾಜೀನಾಮೆಗೆ ಒತ್ತಾಯಿಸಿ ಕೆಪಿಎಸ್‌ಸಿ ಎದುರು ಪ್ರತಿಭಟನೆ ನಡೆಸಿದ್ದಾರೆ. ಎಇಇ ನೇಮಕಾತಿ ಪ್ರಕ್ರಿಯೆಲ್ಲಿ ಸಾಕಷ್ಟು ಅಕ್ರಮಗಳಾಗಿವೆ. ಇದರ ಹೊಣೆ ಹೊತ್ತು ಪ್ರಿಯಾಂಕ್ ಖರ್ಗೆ ರಾಜೀನಾಮೆ ನೀಡಬೇಕು ಎಂದಿದ್ದಾರೆ. ಪಶು ವೈದ್ಯಾಧಿಕಾರಿಗಳ ನೇಮಕಾತಿ ಅಕ್ರಮದ ತನಿಖೆ ನಡೆಸುತ್ತಿರುವ ಸಿಐಡಿ ಅಧಿಕಾರಿಗಳಿಗೆ ಈಗ ಮಹತ್ವದ ಸಾಕ್ಷ್ಯಗಳು ಲಭ್ಯವಾಗಿವೆ. ಆರು ಅಭ್ಯರ್ಥಿಗಳು ಹುದ್ದೆಗಾಗಿ ಹಣ ನೀಡಿರುವುನ್ನು ಒಪ್ಪಿಕೊಂಡಿದ್ದಾರೆ.
ಗುಟ್ಕಾ ನಿಷೇಧ ವಿರೋಧಿಸಿ ದಾವಣಗೆರೆ ಬಂದ್
ಭದ್ರಾ ಮೇಲ್ದಂಡೆ ಯೋಜನೆ ನೀರು ಬಿಡುಗಡೆ ಆದೇಶ ಮತ್ತು ರಾಜ್ಯ ಸರ್ಕಾರ ಗುಟ್ಕಾ, ಪಾನ್ ಮಸಾಲ ಮಾರಾಟ ಹಾಗೂ ಬಳಕೆಗೆ ನಿಷೇಧ ಹೇರಿರುವುದರಿಂದ ಅಡಿಕೆ ಬೆಲೆ ದಿಢೀರ್ ಕುಸಿದಿದ್ದು, ಇದನ್ನು ಖಂಡಿಸಿ ಬಿಜೆಪಿ ಯುವ ಮೋರ್ಚಾ ಹಾಗೂ ರೈತರು ದಾವಣಗೆರೆ ಬಂದ್ ಆಚರಿಸಿದ್ದಾರೆ.
ಗುಟ್ಕಾ ನಿಷೇಧದಿಂದಾಗಿ ಮಾರುಕಟ್ಟೆಯಲ್ಲಿ ಕ್ವಿಂಟಾಲ್ ಅಡಿಕೆ ಬೆಲೆ 5 ಸಾವಿರದಿಂದ 6 ಸಾವಿರ ರೂ. ಕುಸಿದಿದ್ದು, ಬೆಳೆಗಾರರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಹಿನ್ನೆಲೆ ಮಾಜಿ ಸಚಿವ ರೇಣುಕಾಚಾರ್ಯ ನೇತೃತ್ವದಲ್ಲಿ ಟೈರ್ಗೆ ಬೆಂಕಿ ಹಚ್ಚಿ ಪ್ರತಿಭಟಿಸಲಾಯಿತು. ಭದ್ರಾ ಜಲಾಶಯದ ನೀರನ್ನು ಹಿರಿಯೂರಿಗೆ ಹರಿಸುವ ಪ್ರಸ್ತಾವನೆಗೆ ವಿರೋಧ ವ್ಯಕ್ತಪಡಿಸಿದ ರೈತರು, ದಾವಣಗೆರೆ, ಹರಿಹರ, ಚನ್ನಗಿರಿ ಹಾಗೂ ಹೊನ್ನಾಳಿ ಭಾಗದ ಭತ್ತ ಮತ್ತು ಅಡಿಕೆ ಬೆಳೆಗಳಿಗೆ ತಕ್ಷಣವೇ ಕಾಲುವೆ ನೀರು ಹರಿಸಬೇಕೆಂದು ಒತ್ತಾಯಿಸಿದ್ದಾರೆ.
ಎಸ್ಐಆರ್ ಪ್ರಕ್ರಿಯೆ ವಿರೋಧಿಸಿ ಪ್ರತಿಭಟನೆ
ಕರ್ನಾಟಕದಲ್ಲಿ ಅರ್ಹ ಮತದಾರರ ಹೆಸರನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗುತ್ತಿದೆ ಎಂದು ಆರೋಪಿಸಿ ಎಸ್ಐಆರ್ ವಿರೋಧಿ ಒಕ್ಕೂಟವು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ‘ಚುನಾವಣಾ ಆಯೋಗ ಚಲೋ’ ಹೋರಾಟ ನಡೆಸಿತು.
ನಟರಾದ ಪ್ರಕಾಶ್ ರಾಜ್, ಕಿಶೋರ್, ಸಾಹಿತಿ ಎಲ್.ಎನ್. ಮುಕುಂದರಾಜ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಆಯೋಗದ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದಾಗ ಪೊಲೀಸರು ಪ್ರತಿಭಟನಾಕಾರರನ್ನು ಬಂಧಿಸಿದರು. ನಟ ಪ್ರಕಾಶ್ ರಾಜ್ ಹೋರಾಟದ ಸಾರಥ್ಯ ವಹಿಸಿದ ಬೆನ್ನಲ್ಲೇ ಬೆಂಗಳೂರು, ಚೆನ್ನೈ ಮತ್ತು ತೆಲಂಗಾಣದ ಹಲವು ಕ್ಷೇತ್ರಗಳ ಮತದಾರರ ಪಟ್ಟಿಯಲ್ಲಿದ್ದು, ಜನಪ್ರತಿನಿಧಿ ಕಾಯ್ದೆ 1951 ರ ಉಲ್ಲಂಘನೆಯಾಗಿದೆ ಎಂಬ ಹಳೆಯ ವಿಷಯ ಚರ್ಚೆಯ ಮುನ್ನೆಲೆಗೆ ಬಂದಿದೆ.
ಎಸ್ಐಆರ್ ಪ್ರಕ್ರಿಯೆಯಲ್ಲಿ ನೋಟಿಸ್ ನೀಡಿರುವ 43 ಲಕ್ಷ ಮತದಾರರ ಪಟ್ಟಿಯನ್ನು ಕಾರಣ ಸಮೇತ ಪ್ರಕಟಿಸಬೇಕು, ಸೂಕ್ತ ದಾಖಲೆ ಸಲ್ಲಿಸಲು ಹೆಚ್ಚಿನ ಕಾಲಾವಕಾಶ ನೀಡಬೇಕು ಮತ್ತು ಯಾರೊಬ್ಬರ ಮತದಾನದ ಹಕ್ಕನ್ನೂ ಸಮರ್ಥ ಕಾರಣವಿಲ್ಲದೆ ಕಸಿದುಕೊಳ್ಳಬಾರದು ಎಂದು ಒತ್ತಾಯಿಸಲಾಗಿದೆ.

