x

On Record: Exclusive| ಸೈಬರ್‌ ಕ್ರೈಂ ನಿಯಂತ್ರಣಕ್ಕೆ ಆದ್ಯತೆ, ಡ್ರಗ್ಸ್‌ ಮುಕ್ತ ಕರ್ನಾಟಕ; DGP ಡಾ. ಸಲೀಮ್‌ ಮೆಗಾ ಪ್ಲಾನ್

ಕಳೆದ ವರ್ಷ ಜೂನ್‌ನಲ್ಲಿ ಆರಂಭಿಸಲಾದ 'ಮನೆ ಮನೆಗೆ ಪೊಲೀಸ್‌' ಕಾರ್ಯಕ್ರಮದಡಿ ಬೀಟ್‌ ಪೊಲೀಸರು ಮನೆಗಳಿಗೆ ಭೇಟಿ ನೀಡಿ ಕುಟುಂಬಗಳ ಮಾಹಿತಿ ಸಂಗ್ರಹಿಸಿದ್ದಾರೆ.


Click the Play button to hear this message in audio format

ಕರ್ನಾಟಕದಲ್ಲಿ ಪೊಲೀಸ್‌ ವ್ಯವಸ್ಥೆಯನ್ನು ಮತ್ತಷ್ಟು ಜನಸ್ನೇಹಿಯಾಗಿಸಲು ನಾಗರಿಕರ ಸಹಭಾಗಿತ್ವಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಮತ್ತು ಮಹಾನಿರೀಕ್ಷಕ ಎಂ.ಎಸ್. ಸಲೀಂ ತಿಳಿಸಿದ್ದಾರೆ. ದಿ ಫೆಡರಲ್ ಕರ್ನಾಟಕಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಅವರು ರಾಜ್ಯದ ಪೊಲೀಸ್‌ ಇಲಾಖೆಯ ಕಾರ್ಯವೈಖರಿ, ಅಪರಾಧ ನಿಯಂತ್ರಣ, ಸಂಚಾರ ನಿರ್ವಹಣೆ ಮತ್ತು ಸಾರ್ವಜನಿಕರ ಸುರಕ್ಷತೆಗೆ ಕೈಗೊಂಡಿರುವ ಕ್ರಮಗಳ ಕುರಿತು ವಿವರಿಸಿದ್ದಾರೆ.

ಪೊಲೀಸರು ಸಾರ್ವಜನಿಕರೊಂದಿಗೆ ಉತ್ತಮ ಸಂಬಂಧ ಬೆಳೆಸಿಕೊಂಡು, ಅವರ ಸಮಸ್ಯೆಗಳನ್ನು ಆಲಿಸಿದಾಗ ಅಪರಾಧ ನಿಯಂತ್ರಣ ಹೆಚ್ಚು ಪರಿಣಾಮಕಾರಿಯಾಗುತ್ತದೆ. ಈ ಉದ್ದೇಶದಿಂದ ರಾಜ್ಯಾದ್ಯಂತ ನಾಗರಿಕರ ಸಹಭಾಗಿತ್ವವನ್ನು ಹೆಚ್ಚಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಅವರು ಹೇಳಿದ್ದಾರೆ.

ಮನೆ ಮನೆಗೆ ಪೊಲೀಸ್‌ ಕಾರ್ಯಕ್ರಮ

ಕಳೆದ ವರ್ಷ ಜೂನ್‌ನಲ್ಲಿ ಆರಂಭಿಸಲಾದ 'ಮನೆ ಮನೆಗೆ ಪೊಲೀಸ್‌' ಕಾರ್ಯಕ್ರಮದಡಿ ಬೀಟ್‌ ಪೊಲೀಸರು ಮನೆಗಳಿಗೆ ಭೇಟಿ ನೀಡಿ ಕುಟುಂಬಗಳ ಮಾಹಿತಿ ಸಂಗ್ರಹಿಸಿದ್ದಾರೆ. ಸ್ಥಳೀಯ ಪೊಲೀಸ್‌ ಠಾಣೆಯ ಅಧಿಕಾರಿಗಳು ಮತ್ತು ಬೀಟ್‌ ಪೊಲೀಸರ ಸಂಪರ್ಕ ಸಂಖ್ಯೆಗಳನ್ನೂ ಸಾರ್ವಜನಿಕರಿಗೆ ಒದಗಿಸಲಾಗಿದೆ.

ಇದರಿಂದ ಸ್ಥಳೀಯವಾಗಿ ನಡೆಯುವ ಅಪರಾಧಗಳು ಮತ್ತು ಕಾನೂನುಬಾಹಿರ ಚಟುವಟಿಕೆಗಳ ಬಗ್ಗೆ ಪೊಲೀಸರಿಗೆ ಮಾಹಿತಿ ತಲುಪಿಸಲು ಅನುಕೂಲವಾಗಿದೆ. ಸಾರ್ವಜನಿಕರು ಪೊಲೀಸರೊಂದಿಗೆ ನೇರ ಸಂಪರ್ಕ ಹೊಂದಲು ಈ ವ್ಯವಸ್ಥೆ ಸಹಕಾರಿಯಾಗಿದೆ ಎಂದು ಸಲೀಂ ತಿಳಿಸಿದ್ದಾರೆ.

ಒಂಟಿಯಾಗಿ ವಾಸಿಸುವ ಹಿರಿಯ ನಾಗರಿಕರಿಗೆ 'ಆಸರೆ'

ಒಂಟಿಯಾಗಿ ವಾಸಿಸುವ ಹಿರಿಯ ನಾಗರಿಕರ ಸುರಕ್ಷತೆಗಾಗಿ 'ಆಸರೆ' ಯೋಜನೆಯನ್ನು ಜಾರಿಗೊಳಿಸಲಾಗಿದೆ. ಈ ಯೋಜನೆಯಡಿ ಹಿರಿಯ ನಾಗರಿಕರನ್ನು ಗುರುತಿಸಿ, ಅವರಿಗೆ ವಿಶೇಷ ರಕ್ಷಣೆ ಒದಗಿಸಲಾಗುತ್ತಿದೆ.

ಪೊಲೀಸರು ವಾರಕ್ಕೊಮ್ಮೆ ಅವರ ಮನೆಗಳಿಗೆ ಭೇಟಿ ನೀಡಿ ಸಮಸ್ಯೆಗಳನ್ನು ಆಲಿಸುತ್ತಾರೆ. ಅಗತ್ಯವಿದ್ದಲ್ಲಿ ದೈನಂದಿನ ಸಣ್ಣಪುಟ್ಟ ಕೆಲಸಗಳಲ್ಲಿಯೂ ನೆರವು ನೀಡುತ್ತಾರೆ. ಹಿರಿಯರು ತಾವೇ ಪೊಲೀಸರನ್ನು ಸಂಪರ್ಕಿಸುವುದಕ್ಕಾಗಿ ಕಾಯದೆ, ಪೊಲೀಸರು ಅವರ ಬಳಿಗೆ ತೆರಳಿ ಸಹಾಯ ಮಾಡುವ ವ್ಯವಸ್ಥೆ ಇದಾಗಿದೆ ಎಂದು ಅವರು ವಿವರಿಸಿದ್ದಾರೆ.

ಸಂತ್ರಸ್ತರಿಗೆ ನ್ಯಾಯ ಒದಗಿಸಲು ವಿಶೇಷ ಗಮನ

ಅಪರಾಧ ಪ್ರಕರಣಗಳಲ್ಲಿ ಆರೋಪಿಗಳ ಮೇಲೆ ಮಾತ್ರ ಗಮನಹರಿಸುವುದಕ್ಕಿಂತ ಸಂತ್ರಸ್ತರ ಹಕ್ಕುಗಳು ಮತ್ತು ಸಮಸ್ಯೆಗಳಿಗೂ ಆದ್ಯತೆ ನೀಡುವ ಕಾರ್ಯವಿಧಾನವನ್ನು ರೂಪಿಸಲಾಗುತ್ತಿದೆ ಎಂದು ಡಿಜಿಪಿ ಹೇಳಿದ್ದಾರೆ.

ಪ್ರತಿ ತಿಂಗಳ ಮೂರನೇ ಭಾನುವಾರ ಪೊಲೀಸ್‌ ಠಾಣೆಗಳಲ್ಲಿ 'ಸಂತ್ರಸ್ತರ ದಿನ' ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ದೂರುಗಳ ಸ್ಥಿತಿ, ತನಿಖೆಯ ಪ್ರಗತಿ, ಪ್ರಕರಣಗಳ ವಿಲೇವಾರಿ ಮತ್ತು ಕಳವಾದ ಆಸ್ತಿಯ ಮರುಪಡೆಯುವಿಕೆ ಸೇರಿದಂತೆ ಸಂತ್ರಸ್ತರಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಶೀಲಿಸಲಾಗುತ್ತದೆ.

ರಾಜ್ಯಾದ್ಯಂತ ಸಂಚಾರ ನಿರ್ವಹಣೆಗೆ ತಂತ್ರಜ್ಞಾನ

ಹಿಂದೆ ಆಧುನಿಕ ಸಂಚಾರ ನಿರ್ವಹಣಾ ವ್ಯವಸ್ಥೆಗಳು ಮುಖ್ಯವಾಗಿ ಬೆಂಗಳೂರು ಮತ್ತು ಮೈಸೂರು ನಗರಗಳಿಗೆ ಸೀಮಿತವಾಗಿದ್ದವು. ಈಗ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಇಂಟೆಲಿಜೆಂಟ್ ಟ್ರಾಫಿಕ್ ಮ್ಯಾನೇಜ್‌ಮೆಂಟ್ ಸಿಸ್ಟಮ್‌ (ಐಟಿಎಂಎಸ್‌) ಪರಿಚಯಿಸಲಾಗಿದೆ ಎಂದು ಸಲೀಂ ತಿಳಿಸಿದ್ದಾರೆ.

ಸಂಚಾರ ನಿಯಮ ಉಲ್ಲಂಘನೆ ಮಾಡಿದವರ ಮನೆಗಳಿಗೆ ನೋಟಿಸ್‌ ತಲುಪಿಸುವ ವ್ಯವಸ್ಥೆ ಹಾಗೂ ಕಣ್ಗಾವಲು ಮತ್ತು ಸಂಚಾರ ನಿಯಂತ್ರಣ ಕ್ಯಾಮೆರಾಗಳನ್ನು ವಿವಿಧ ಜಿಲ್ಲೆಗಳಲ್ಲಿ ಅಳವಡಿಸಲಾಗಿದೆ.

ಬೆಂಗಳೂರು ಮೆಟ್ರೋ ಯೋಜನೆಗಳ ಮುಂದಿನ ಹಂತಗಳು ಪೂರ್ಣಗೊಂಡು ಸಾರ್ವಜನಿಕ ಸಾರಿಗೆ ಬಳಕೆ ಹೆಚ್ಚಾದರೆ, ಮುಂದಿನ ಎರಡು-ಮೂರು ವರ್ಷಗಳಲ್ಲಿ ನಗರದ ಸಂಚಾರ ದಟ್ಟಣೆ ಗಣನೀಯವಾಗಿ ಕಡಿಮೆಯಾಗುವ ನಿರೀಕ್ಷೆಯಿದೆ ಎಂದು ಅವರು ಹೇಳಿದ್ದಾರೆ.

ಐಟಿ ವಲಯಗಳಲ್ಲಿ ಏಕಾಂಗಿಯಾಗಿ ಕಾರು ಬಳಸುವ ಬದಲು ಕಾರ್‌ಪೂಲಿಂಗ್‌ ಮತ್ತು ಸಾರ್ವಜನಿಕ ಸಾರಿಗೆಯನ್ನು ಹೆಚ್ಚು ಬಳಸುವುದರಿಂದ ವಾಹನಗಳ ಸಂಖ್ಯೆಯನ್ನು ಕಡಿಮೆ ಮಾಡಿ, ಪ್ರಯಾಣದ ಸಮಯವನ್ನು ಉಳಿಸಬಹುದು ಎಂದು ಸಲಹೆ ನೀಡಿದ್ದಾರೆ.

ಸೈಬರ್‌ ಅಪರಾಧಗಳ ಸ್ವರೂಪ ಬದಲಾಗುತ್ತಿದೆ

ಸಾಂಪ್ರದಾಯಿಕ ಕಳ್ಳತನ, ದರೋಡೆ ಸೇರಿದಂತೆ ದೈಹಿಕ ಅಪರಾಧಗಳಿಗಿಂತ ಸೈಬರ್‌ ಅಪರಾಧಗಳತ್ತ ಅಪರಾಧಿಗಳ ಗಮನ ಹೆಚ್ಚುತ್ತಿದೆ ಎಂದು ಡಿಜಿಪಿ ಹೇಳಿದ್ದಾರೆ.

ಹೂಡಿಕೆ ವಂಚನೆ, ಫಿಶಿಂಗ್‌, ದತ್ತಾಂಶ ಕಳವು ಮತ್ತು ಬ್ಯಾಂಕ್‌ ಖಾತೆಗಳಿಗೆ ಸಂಬಂಧಿಸಿದ ವಂಚನೆಗಳು ಸೇರಿದಂತೆ ವಿವಿಧ ಸ್ವರೂಪದ ಸೈಬರ್‌ ಅಪರಾಧಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪೊಲೀಸರ ತನಿಖಾ ಸಾಮರ್ಥ್ಯವನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.

2001ರಲ್ಲಿ ಬೆಂಗಳೂರಿನಲ್ಲಿ ಸೈಬರ್‌ ಕ್ರೈಂ ಪೊಲೀಸ್‌ ಠಾಣೆ ಆರಂಭವಾಗಿದ್ದು, 2007ರಲ್ಲಿ ಸೈಬರ್‌ ಲ್ಯಾಬ್‌ ಸ್ಥಾಪಿಸಲಾಗಿದೆ. 2018ರಲ್ಲಿ ಸೈಬರ್‌ ಅಪರಾಧ ತನಿಖೆ, ತರಬೇತಿ ಮತ್ತು ಸಂಶೋಧನೆಗೆ ಸಂಬಂಧಿಸಿದ ಕೇಂದ್ರವನ್ನು ಆರಂಭಿಸಲಾಗಿದೆ ಎಂದು ಅವರು ವಿವರಿಸಿದ್ದಾರೆ.

ಈ ಉಪಕ್ರಮಗಳ ಮೂಲಕ ಸುಮಾರು 24,000 ಪೊಲೀಸ್‌ ಸಿಬ್ಬಂದಿ, ನ್ಯಾಯಾಂಗ ಅಧಿಕಾರಿಗಳು ಮತ್ತು ಪ್ರಾಸಿಕ್ಯೂಟರ್‌ಗಳಿಗೆ ತರಬೇತಿ ನೀಡಲಾಗಿದೆ ಎಂದು ಸಂದರ್ಶನದಲ್ಲಿ ತಿಳಿಸಿದ್ದಾರೆ.

ಪೊಲೀಸ್‌ ಸಿಬ್ಬಂದಿ ಅಪರಾಧದಲ್ಲಿ ಭಾಗಿಯಾದರೆ ಕಠಿಣ ಕ್ರಮ

ಕೆಲವು ಪೊಲೀಸ್‌ ಅಧಿಕಾರಿಗಳು ಮತ್ತು ಸಿಬ್ಬಂದಿ ಅಪರಾಧಿಗಳೊಂದಿಗೆ ಕೈಜೋಡಿಸಿರುವ ಪ್ರಕರಣಗಳು ಪತ್ತೆಯಾಗಿವೆ ಎಂದು ಸಲೀಂ ಹೇಳಿದ್ದಾರೆ. ಇತ್ತೀಚಿನ ಏಳು ಕೋಟಿ ರೂಪಾಯಿ ದರೋಡೆ ಪ್ರಕರಣದಲ್ಲಿ ಪೊಲೀಸ್‌ ಕಾನ್‌ಸ್ಟೆಬಲ್‌ ಒಬ್ಬರು ಭಾಗಿಯಾಗಿದ್ದ ಪ್ರಕರಣವನ್ನೂ ಅವರು ಉಲ್ಲೇಖಿಸಿದ್ದಾರೆ.ಸಾರ್ವಜನಿಕರ ಆಸ್ತಿ ಮತ್ತು ಜೀವದ ರಕ್ಷಣೆ ಪೊಲೀಸರ ಪ್ರಮುಖ ಜವಾಬ್ದಾರಿಯಾಗಿರುವುದರಿಂದ, ಇಲಾಖೆಯೊಳಗಿನ ಅಕ್ರಮಗಳನ್ನು ಗಂಭೀರವಾಗಿ ಪರಿಗಣಿಸಿ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.

ಮಹಿಳೆಯರ ಸುರಕ್ಷತೆ ಮತ್ತು ಕಾನೂನು ಸುವ್ಯವಸ್ಥೆ

ಬೆಂಗಳೂರು ದೇಶದ ಸುರಕ್ಷಿತ ನಗರಗಳಲ್ಲಿ ಒಂದಾಗಿದ್ದು, ಮಹಿಳೆಯರ ಸುರಕ್ಷತೆಗಾಗಿ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಡಿಜಿಪಿ ಹೇಳಿದ್ದಾರೆ. ರಾತ್ರಿ ವೇಳೆಯಲ್ಲಿಯೂ ಮಹಿಳೆಯರು ನಿರ್ಭಯವಾಗಿ ಸಂಚರಿಸುವ ವಾತಾವರಣ ನಿರ್ಮಿಸಲು ಪೊಲೀಸ್‌ ಇಲಾಖೆ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದ್ದಾರೆ.

ಸಾರ್ವಜನಿಕರ ಸಹಕಾರ, ಸಮುದಾಯದ ನಾಯಕರೊಂದಿಗಿನ ಸಂಪರ್ಕ ಮತ್ತು ತ್ವರಿತ ಪೊಲೀಸ್‌ ಪ್ರತಿಕ್ರಿಯೆಯಿಂದ ರಾಜ್ಯದಲ್ಲಿ ಹಬ್ಬ-ಹರಿದಿನಗಳ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆಯನ್ನು ಶಾಂತಿಯುತವಾಗಿ ನಿರ್ವಹಿಸಲು ಸಾಧ್ಯವಾಗಿದೆ ಎಂದು ಅವರು ಹೇಳಿದ್ದಾರೆ. ಪೊಲೀಸರ ಮೇಲಿನ ಜನರ ನಂಬಿಕೆಯೇ ಪರಿಣಾಮಕಾರಿ ಪೊಲೀಸ್‌ ವ್ಯವಸ್ಥೆಯ ಪ್ರಮುಖ ಆಧಾರ ಎಂದು ಒತ್ತಿಹೇಳಿದ್ದಾರೆ.

2028ರೊಳಗೆ ಡ್ರಗ್ಸ್‌ ಮುಕ್ತ ಕರ್ನಾಟಕ ಗುರಿ

2028ರೊಳಗೆ ಕರ್ನಾಟಕವನ್ನು ಡ್ರಗ್ಸ್‌ ಮುಕ್ತ ರಾಜ್ಯವನ್ನಾಗಿಸಲು ಪೊಲೀಸ್‌ ಇಲಾಖೆ ಪ್ರಯತ್ನಿಸುತ್ತಿದೆ ಎಂದು ಎಂ.ಎಸ್. ಸಲೀಂ ತಿಳಿಸಿದ್ದಾರೆ. ಈ ಉದ್ದೇಶಕ್ಕಾಗಿ ಆ್ಯಂಟಿ ನಾರ್ಕೋಟಿಕ್ಸ್‌ ಟಾಸ್ಕ್‌ ಫೋರ್ಸ್‌ ರಚಿಸಲಾಗಿದ್ದು, ಮಾದಕ ವಸ್ತುಗಳ ಪೂರೈಕೆ ಮತ್ತು ಬಳಕೆಯನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳಲಾಗಿದೆ.

ಯುವಜನರಲ್ಲಿ ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸಲು 'ಬೇಡ ಬ್ರೋ' ಅಭಿಯಾನ ಆರಂಭಿಸಲಾಗಿದೆ. ವ್ಯಸನದಿಂದ ಹೊರಬರಲು ನೆರವು ಅಗತ್ಯವಿರುವವರಿಗೆ ಪುನರ್ವಸತಿ ಮತ್ತು ಸಮಾಲೋಚನೆ ಒದಗಿಸುವುದರ ಜೊತೆಗೆ, ಮತ್ತೆ ವ್ಯಸನಕ್ಕೆ ಮರಳದಂತೆ ನಿಗಾ ವಹಿಸಲು 'ಸನ್ಮಿತ್ರ' ಕಾರ್ಯಕ್ರಮವನ್ನು ಜಾರಿಗೊಳಿಸಲಾಗಿದೆ.

ಮಾದಕ ವಸ್ತುಗಳ ಪೂರೈಕೆದಾರರು ಮತ್ತು ಮಾರಾಟಗಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದರ ಜೊತೆಗೆ, ಬೇರೆ ರಾಜ್ಯಗಳ ಪೊಲೀಸ್‌ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಪೊಲೀಸ್‌ ಸಿಬ್ಬಂದಿಯ ಕಲ್ಯಾಣಕ್ಕೂ ಆದ್ಯತೆ

ಪೊಲೀಸ್‌ ಸಿಬ್ಬಂದಿಯ ಮನೋಸ್ಥೈರ್ಯ ಹೆಚ್ಚಿಸಲು ಹೊಸ ಸಮವಸ್ತ್ರದ ಭಾಗವಾಗಿ ನೀಲಿ ಪೀಕ್‌ ಕ್ಯಾಪ್‌ ಪರಿಚಯಿಸಲಾಗಿದೆ. ಸಿಬ್ಬಂದಿಗೆ ವಾರದ ರಜೆ ದೊರೆಯುವಂತೆ ಹಾಗೂ ಜನ್ಮದಿನ ಮತ್ತು ವಿವಾಹ ವಾರ್ಷಿಕೋತ್ಸವದ ಸಂದರ್ಭದಲ್ಲಿ ರಜೆ ನೀಡುವ ವ್ಯವಸ್ಥೆಯನ್ನೂ ಜಾರಿಗೊಳಿಸಲಾಗಿದೆ ಎಂದು ಸಲೀಂ ಹೇಳಿದ್ದಾರೆ.

ಸಂಚಾರ ಪೊಲೀಸರಿಗೆ ಪಾಳಿಯ ಆಧಾರದಲ್ಲಿ ಕೆಲಸ ಮಾಡುವ ವ್ಯವಸ್ಥೆ ಜಾರಿಯಲ್ಲಿದ್ದು, ಕಾನೂನು ಸುವ್ಯವಸ್ಥೆ ವಿಭಾಗದ ಸಿಬ್ಬಂದಿಗೂ ಇದೇ ಮಾದರಿಯನ್ನು ವಿಸ್ತರಿಸುವ ಕುರಿತು ಚಿಂತನೆ ನಡೆದಿದೆ. ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ನಿಟ್ಟಿನಲ್ಲಿ ಸುಮಾರು 8,000 ಪೊಲೀಸ್‌ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯೂ ಪ್ರಗತಿಯಲ್ಲಿದೆ ಎಂದು ಅವರು ತಿಳಿಸಿದ್ದಾರೆ.

Read More
Next Story