Womens Reservation| ಪಂಚಾಯ್ತಿಯಿಂದ ಪಾರ್ಲಿಮೆಂಟ್‌ವರೆಗೆ ಮಹಿಳಾ ಪ್ರಾತಿನಿಧ್ಯಕ್ಕೆ ಕರ್ನಾಟಕದ್ದೇ ಬುನಾದಿ
x
ಮಹಿಳಾ ಸಬಲೀಕರಣ ಸಾಂದರ್ಭಿಕ ಚಿತ್ರ

Women's Reservation| ಪಂಚಾಯ್ತಿಯಿಂದ ಪಾರ್ಲಿಮೆಂಟ್‌ವರೆಗೆ ಮಹಿಳಾ ಪ್ರಾತಿನಿಧ್ಯಕ್ಕೆ ಕರ್ನಾಟಕದ್ದೇ ಬುನಾದಿ

ಮಹಿಳೆಯರಿಗೆ ಮೀಸಲಾತಿ ಒದಗಿಸಿದ ಕರ್ನಾಟಕದ ಕ್ರಮದಿಂದ ಪ್ರೇರಣೆಗೊಂಡ ಕೇಂದ್ರ ಸರ್ಕಾರ 1992-93ರಲ್ಲಿ ಕೇಂದ್ರ ಸರ್ಕಾರವು ಸಂವಿಧಾನದ 73 ಮತ್ತು 74ನೇ ತಿದ್ದುಪಡಿ ಮೂಲಕ ಶೇ. 33ರಷ್ಟು ಮಹಿಳಾ ಮೀಸಲಾತಿ ಕಡ್ಡಾಯ ಮಾಡಿತು.


ಶಾಸನಸಭೆಗಳಲ್ಲಿ ಮಹಿಳೆಯರಿಗೆ ರಾಜಕೀಯ ಮೀಸಲಾತಿ ಕಲ್ಪಿಸಿದ ವಿಚಾರದಲ್ಲಿ ಕರ್ನಾಟಕವು ರಾಷ್ಟ್ರಮಟ್ಟದಲ್ಲಿ ಮಹಿಳಾ ಪ್ರಾತಿನಿಧ್ಯದ ಚರ್ಚೆಗೆ ಬುನಾದಿಯಾಗಿದೆ.

1980 ರ ದಶಕದಲ್ಲೇ ಕರ್ನಾಟಕದ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ಕಲ್ಪಿಸಿದ ಖ್ಯಾತಿ ಕರ್ನಾಟಕಕ್ಕೆ ಸಲ್ಲಲಿದೆ. ಮೂರು ದಶಕಗಳ ಅವಿರತ ಪ್ರಯತ್ನದಿಂದ ರಾಷ್ಟ್ರಮಟ್ಟದಲ್ಲಿ ಮಹಿಳಾ ಮೀಸಲಾತಿ ಮಸೂದೆ 2023 ರ ವಿಶೇಷ ಅಧಿವೇಶನದಲ್ಲಿ ಅಂಗೀಕರಿಸಿದ್ದು, 2029 ರ ಲೋಕಸಭೆ ಚುನಾವಣೆ ನಂತರ ಮೀಸಲಾತಿ ಜಾರಿಗೊಳಿಸುವ ಸಂಬಂಧ ಅಧಿವೇಶನದಲ್ಲಿ ಚರ್ಚೆ ನಡೆಯುತ್ತಿದೆ. ಪಂಚಾಯತ್ ರಾಜ್ ವ್ಯವಸ್ಥೆಯಿಂದ ಸಂಸತ್ತಿನವರೆಗೆ ಮಹಿಳಾ ಮೀಸಲಾತಿ ನಡೆದು ಬಂದ ಹಾದಿಯ ಕುರಿತು ವಿವರ ಇಲ್ಲಿದೆ.

ಮಹಿಳಾ ಮೀಸಲಾತಿಗೆ ಕರ್ನಾಟಕವೇ ಮಾದರಿ

ದೇಶದ ಇತರ ರಾಜ್ಯಗಳು ಮಹಿಳಾ ಮೀಸಲಾತಿಯ ಬಗ್ಗೆ ಯೋಚಿಸುವ ಮೊದಲೇ ಕರ್ನಾಟಕವು ಈ ನಿಟ್ಟಿನಲ್ಲಿ ಕ್ರಾಂತಿಕಾರಿ ನಿರ್ಧಾರ ಕೈಗೊಂಡಿತ್ತು. 1983-85ರಲ್ಲಿ ಅಂದಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಮತ್ತು ಪಂಚಾಯತ್ ರಾಜ್ ಸಚಿವ ಅಬ್ದುಲ್ ನಜೀರ್ ಸಾಬ್ ನೇತೃತ್ವದಲ್ಲಿ ಮಹಿಳಾ ಮೀಸಲಾತಿಗೆ ಮುನ್ನಡಿ ಬರೆಯಲಾಯಿತು. 1985ರಲ್ಲಿ ಮಂಡಲ ಪಂಚಾಯಿತಿ ಹಾಗೂ ಜಿಲ್ಲಾ ಪರಿಷತ್‌ಗಳಲ್ಲಿ ಮಹಿಳೆಯರಿಗೆ ಶೇ. 25ರಷ್ಟು ಮೀಸಲಾತಿ ಒದಗಿಸಲಾಯಿತು. ಮಹಿಳೆಯರಿಗೆ ಮೀಸಲಾತಿ ಒದಗಿಸಿದ ಕರ್ನಾಟಕದ ಕ್ರಮದಿಂದ ಪ್ರೇರಣೆಗೊಂಡ ಕೇಂದ್ರ ಸರ್ಕಾರ 1992-93ರಲ್ಲಿ ಕೇಂದ್ರ ಸರ್ಕಾರವು ಸಂವಿಧಾನದ 73 ಮತ್ತು 74ನೇ ತಿದ್ದುಪಡಿ ಮೂಲಕ ಶೇ. 33ರಷ್ಟು ಮಹಿಳಾ ಮೀಸಲಾತಿ ಕಡ್ಡಾಯ ಮಾಡಿತು. ಅದು ಸಾಕಾರವಾಗಲಿಲ್ಲ. ಈ ಮಧ್ಯೆ, 2010 ರಲ್ಲಿ ಸ್ಥಳೀಯ ಸಂಸ್ಥೆಗಳ ಮಹಿಳಾ ಮೀಸಲಾತಿಯನ್ನು ಕರ್ನಾಟಕವು ಶೇ. 50ಕ್ಕೆ ಹೆಚ್ಚಿಸಿತು. ಆ ಮೂಲಕ ಆಡಳಿತದಲ್ಲಿ ಮಹಿಳೆಯರು ಸಕ್ರಿಯವಾಗಿ ಪಾಲ್ಗೊಳ್ಳುವಂತಾಯಿತು.

ಕರ್ನಾಟಕದಲ್ಲಿ ರಾಜಕೀಯ ಮತ್ತು ಉದ್ಯೋಗ ಕ್ಷೇತ್ರದಲ್ಲಿ ಮಹಿಳೆಯರಿಗೆ ಮೀಸಲಾತಿ ಒದಗಿಸಿದೆ. ಇದು ಆಶಾದಾಯಕವಾದರೂ ಆಡಳಿತಾತ್ಮಕ ಮತ್ತು ಸಾಮಾಜಿಕ ಲೋಪಗಳಿಂದಾಗಿ ಮಹಿಳಾ ಮೀಸಲಾತಿ ಅನುಷ್ಠಾನ ಹಿನ್ನಡೆ ಅನುಭವಿಸುತ್ತಿದೆ.

ರಾಜಕೀಯ, ಉದ್ಯೋಗದಲ್ಲಿ ಮೀಸಲಾತಿ

ಪ್ರಸ್ತುತ, ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಮಹಿಳೆಯರ ರಾಜಕೀಯ ಮೀಸಲಾತಿ ಪತಿ ಪ್ರಧಾನವಾಗಿದೆ. ಗ್ರಾಮ, ತಾಲೂಕು ಮತ್ತು ಜಿಲ್ಲಾ ಪಂಚಾಯತ್‌ಗಳಲ್ಲಿ ಮಹಿಳೆಯರಿಗೆ ಶೇ. 50ರಷ್ಟು ಸೀಟು ಲಭ್ಯವಾಗಿ ಆಯ್ಕೆಯಾದರೂ ಅಧಿಕಾರ ಚಲಾವಣೆಯ ವಿಷಯದಲ್ಲಿ ಪತಿ ಅಥವಾ ಕುಟುಂಬದ ಪುರುಷ ಸದಸ್ಯರೇ ಹೆಚ್ಚು ಸಕ್ರಿಯರಾಗಿರುವುದು ಕಂಡುಬರುತ್ತಿದೆ. ಮಹಿಳೆಯರು ಕೇವಲ ಹೆಸರಿಗೆ ಮಾತ್ರ ಅಧಿಕಾರದಲ್ಲಿದ್ದು, ಪ್ರಮುಖ ನಿರ್ಧಾರಗಳನ್ನು ಪುರುಷರೇ ತೆಗೆದುಕೊಳ್ಳುತ್ತಿರುವುದು ಮೀಸಲಾತಿಯ ಆಶಯಕ್ಕೆ ಧಕ್ಕೆ ತರುತ್ತಿದೆ.

ರಾಜ್ಯ ಸರ್ಕಾರಿ ನೌಕರಿಗಳಲ್ಲಿ ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ವಿಶೇಷ ಮೀಸಲಾತಿ ನೀಡಲಾಗುತ್ತಿದೆ. ನೇರ ನೇಮಕಾತಿಯಲ್ಲಿ ಮಹಿಳೆಯರಿಗೆ ಶೇ. 33ರಷ್ಟು ಮೀಸಲಾತಿ ಕಲ್ಪಿಸಲಾಗಿದೆ. ಹೊರಗುತ್ತಿಗೆ ನೌಕರಿಯಲ್ಲಿ ಡೇಟಾ ಎಂಟ್ರಿ ಆಪರೇಟರ್, ಚಾಲಕರು ಮತ್ತು ಗ್ರೂಪ್ ಡಿ ಹುದ್ದೆಗಳಲ್ಲೂ ಶೇ. 33ರಷ್ಟು ಮೀಸಲಾತಿ ಕಡ್ಡಾಯಗೊಳಿಸಿದೆ.

ಅನುಷ್ಠಾನಕ್ಕೆ ಇರುವ ಅಡೆತಡೆಗಳು ಏನು?

ಮೀಸಲಾತಿ ವ್ಯವಸ್ಥೆಯಲ್ಲಿ ರೊಟೇಷನ್ ಪದ್ಧತಿಯು ಮಹಿಳಾ ನಾಯಕತ್ವಕ್ಕೆ ಅಡ್ಡಿಯಾಗಿ ಪರಿಣಮಿಸಿದೆ. ಪ್ರತಿ ಚುನಾವಣೆಯಲ್ಲಿ ಮೀಸಲಾತಿ ಕ್ಷೇತ್ರಗಳು ಬದಲಾಗುವುದರಿಂದ ಉತ್ತಮವಾಗಿ ಕೆಲಸ ಮಾಡಿದ ಅನುಭವಿ ಮಹಿಳಾ ನಾಯಕಿಯರಿಗೆ ಮುಂದಿನ ಬಾರಿ ಅದೇ ಕ್ಷೇತ್ರದಲ್ಲಿ ಸ್ಪರ್ಧಿಸಲು ಅವಕಾಶ ಸಿಗದಂತಾಗಿದೆ. ಇದು ರಾಜಕೀಯದಲ್ಲಿ ಮಹಿಳೆಯರು ನಿರಂತರವಾಗಿ ಬೆಳೆಯುವುದನ್ನು ತಡೆಯುತ್ತಿದೆ.

ರಾಷ್ಟ್ರಮಟ್ಟದಲ್ಲಿ ಮಹಿಳಾ ಮೀಸಲಾತಿ

ಲೋಕಸಭೆ ಹಾಗೂ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ರಾಜಕೀಯ ಮೀಸಲಾತಿ ಕಲ್ಪಿಸುವ ಪ್ರಯತ್ನಗಳು ಅನೇಕ ಬಾರಿ ರಾಜಕೀಯ ಮೇಲಾಟದಿಂದ ವಿಫಲವಾಗಿದ್ದವು. 1996 ರಲ್ಲಿ ಅಂದಿನ ಪ್ರಧಾನಿ ಎಚ್‌.ಡಿ. ದೇವೇಗೌಡ ಅವರು ಮೊದಲ ಬಾರಿಗೆ 81ನೇ ಸಂವಿಧಾನ ತಿದ್ದುಪಡಿ ಮಸೂದೆ ಮಂಡಿಸಿದರು. ಆದರೆ, ಒಮ್ಮತ ಮೂಡದ ಕಾರಣ ಅದು ಮೂಲೆಗುಂಪಾಯಿತು.

1998ರಿಂದ 2003ರ ಅವಧಿಯಲ್ಲಿ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಬರೋಬ್ಬರಿ ನಾಲ್ಕು ಬಾರಿ ಈ ಮಸೂದೆ ಮಂಡಿಸಿದರೂ, ಸದನದಲ್ಲಿ ಉಂಟಾದ ಗದ್ದಲ ಮತ್ತು ವಿರೋಧದಿಂದ ಅಂಗೀಕಾರ ಸಾಧ್ಯವಾಗಲಿಲ್ಲ. 2010 ರಲ್ಲಿ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರದಲ್ಲಿ ಮಸೂದೆಯು ರಾಜ್ಯಸಭೆಯಲ್ಲಿ ಅಂಗೀಕಾರಗೊಂಡರೂ ಲೋಕಸಭೆಯಲ್ಲಿ ಒಪ್ಪಿಗೆ ಸಿಗದ ಕಾರಣ ಮಸೂದೆಯು ಅಸಿಂಧುವಾಯಿತು.

ನಾರಿ ಶಕ್ತಿ ವಂದನ್ ಅಧಿನಿಯಮದಿಂದ ಜಾರಿ

ದಶಕಗಳ ಕಾಯುವಿಕೆ ಬಳಿಕ ಮಹಿಳಾ ಮೀಸಲಾತಿ ಮಸೂದೆಗೆ 'ನಾರಿ ಶಕ್ತಿ ವಂದನ್ ಅಧಿನಿಯಮ'ದ ಮೂಲಕ ತೆರೆ ಎಳೆಯಲಾಗಿದೆ. ಸಂವಿಧಾನದ 106 ನೇ ತಿದ್ದುಪಡಿ ಮಸೂದೆ ಜಾರಿಗೆ ತರುವ ಮೂಲಕ ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ. 33ರಷ್ಟು ಮೀಸಲಾತಿ ಒದಗಿಸುವುದನ್ನು ಖಚಿತಪಡಿಸಿದೆ. ಈ ಮೀಸಲಾತಿಯು ಮುಂಬರುವ ಜನಗಣತಿ ಮತ್ತು ಕ್ಷೇತ್ರ ಪುನರ್ವಿಂಗಡಣೆಯ ನಂತರ ಜಾರಿಗೆ ಬರಲಿದೆ. ಕರ್ನಾಟಕವು ಪಂಚಾಯತ್ ಮಟ್ಟದಲ್ಲಿ ತೋರಿದ ಯಶಸ್ಸು ಈಗ ರಾಷ್ಟ್ರಮಟ್ಟದ ಶಾಸನಸಭೆಗಳಲ್ಲೂ ಪ್ರತಿಫಲಿಸುತ್ತಿದೆ.

Read More
Next Story