ಪೆಟ್ರೋಲ್‌ನಲ್ಲಿ ಶೇ.31.2 ಎಥೆನಾಲ್ ಪತ್ತೆ? ಕೇಂದ್ರದ ವಿರುದ್ಧ ಪರಮೇಶ್ವರ್ ಕಿಡಿ
x

ಕರ್ನಾಟಕದ ಪೆಟ್ರೋಲ್ ಮಾದರಿಗಳಲ್ಲಿ ಶೇ.31.2ರಷ್ಟು ಎಥೆನಾಲ್ ಪತ್ತೆಯಾಗಿದೆ ಎಂದು ಪರಮೇಶ್ವರ್ ಆರೋಪಿಸಿದ್ದಾರೆ.

ಪೆಟ್ರೋಲ್‌ನಲ್ಲಿ ಶೇ.31.2 ಎಥೆನಾಲ್ ಪತ್ತೆ? ಕೇಂದ್ರದ ವಿರುದ್ಧ ಪರಮೇಶ್ವರ್ ಕಿಡಿ

ಪೆಟ್ರೋಲ್‌ನಲ್ಲಿ ಎಥೆನಾಲ್ ಪ್ರಮಾಣ ಶೇ.20ಕ್ಕಿಂತ ಹೆಚ್ಚಾದರೆ E 20 ಇಂಧನಕ್ಕೆ ಹೊಂದಿಕೊಳ್ಳುವ ವಾಹನಗಳಿಗೂ ಸಮಸ್ಯೆಯಾಗಬಹುದು ಎಂದು ರಿಜ್ವಾನ್ ಅರ್ಷದ್ ಆತಂಕ ವ್ಯಕ್ತಪಡಿಸಿದ್ದಾರೆ.


Click the Play button to hear this message in audio format

ಪೆಟ್ರೋಲ್‌ನಲ್ಲಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಎಥೆನಾಲ್ ಮಿಶ್ರಣ ಮಾಡಲಾಗುತ್ತಿದೆ ಎಂಬ ಆರೋಪ ಕರ್ನಾಟಕದಲ್ಲಿ ರಾಜಕೀಯ ಚರ್ಚೆಗೆ ಕಾರಣವಾಗಿದೆ. ರಾಜ್ಯದಲ್ಲಿ ನಡೆಸಿದ ಸ್ವತಂತ್ರ ಪರೀಕ್ಷೆಗಳಲ್ಲಿ ಪೆಟ್ರೋಲ್‌ನಲ್ಲಿ ಶೇ.31.2ರಷ್ಟು ಎಥೆನಾಲ್ ಅಂಶ ಪತ್ತೆಯಾಗಿದೆ ಎಂದು ಸಚಿವ ಜಿ. ಪರಮೇಶ್ವರ್ ಆರೋಪಿಸಿದ್ದಾರೆ. ಈ ಮೂಲಕ ಕೇಂದ್ರ ಸರ್ಕಾರದ ಇ20 (E20) ಇಂಧನ ನೀತಿಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಅವರು, ವಾಹನಗಳ ಸುರಕ್ಷತೆ ಮತ್ತು ಗ್ರಾಹಕರ ಹಿತಾಸಕ್ತಿಗೆ ಯಾರು ಹೊಣೆ ಎಂದು ಪ್ರಶ್ನಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಪರಮೇಶ್ವರ್, ಕೇಂದ್ರ ಸರ್ಕಾರ ಜನರ ಮೇಲೆ ಇ20 ಪೆಟ್ರೋಲ್ ನೀತಿಯನ್ನು ಹೇರಿದೆ. ಆದರೆ ಕರ್ನಾಟಕದಲ್ಲಿ ನಡೆಸಿದ ಸ್ವತಂತ್ರ ಪರೀಕ್ಷೆಗಳಲ್ಲಿ ಶೇ.31.2ರಷ್ಟು ಎಥೆನಾಲ್ ಅಂಶ ಪತ್ತೆಯಾಗಿರುವುದು ಗಂಭೀರ ಆತಂಕ ಮೂಡಿಸಿದೆ ಎಂದು ಹೇಳಿದ್ದಾರೆ.

ಪೆಟ್ರೋಲ್‌ನಲ್ಲಿ ಹೆಚ್ಚಿನ ಪ್ರಮಾಣದ ಎಥೆನಾಲ್ ಮಿಶ್ರಣದಿಂದ ವಾಹನಗಳ ಮೈಲೇಜ್, ಇಂಧನ ಗುಣಮಟ್ಟ, ವಾಹನಗಳ ಸುರಕ್ಷತೆ ಹಾಗೂ ಗ್ರಾಹಕರ ಹಕ್ಕುಗಳ ಮೇಲೆ ಪರಿಣಾಮ ಬೀರಬಹುದು ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ತಕ್ಷಣ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ರೈತರಿಗೆ ಆಗುತ್ತಿರುವ ಅನ್ಯಾಯದ ಬಗ್ಗೆಯೂ ಕಳವಳ

ಎಥೆನಾಲ್ ಉತ್ಪಾದನೆ ಮತ್ತು ಖರೀದಿ ನೀತಿಯಲ್ಲಿನ ಕೇಂದ್ರದ ನಿರ್ಧಾರಗಳ ಬಗ್ಗೆಯೂ ಪರಮೇಶ್ವರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಬ್ಬಿನಿಂದ ಉತ್ಪಾದಿಸುವ ಕೆಲವು ಎಥೆನಾಲ್ ಉತ್ಪನ್ನಗಳ ಖರೀದಿಗೆ ಕೇಂದ್ರ ನಿರ್ಬಂಧ ವಿಧಿಸಿರುವುದರಿಂದ ರೈತರಿಗೆ ತೊಂದರೆಯಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಈಗಾಗಲೇ ತೀವ್ರ ಬರ ಪರಿಸ್ಥಿತಿಯಿಂದ ಕಂಗೆಟ್ಟಿರುವ ಕರ್ನಾಟಕದ ರೈತರಿಗೆ ಎಥೆನಾಲ್ ನೀತಿಯಿಂದ ಸಿಗಬೇಕಿದ್ದ ಲಾಭ ಎಲ್ಲಿ ಹೋಯಿತು ಎಂದು ಪ್ರಶ್ನಿಸಿದ್ದಾರೆ. ವಾಹನ ಸವಾರರು ಹೆಚ್ಚುವರಿ ವೆಚ್ಚ ಮತ್ತು ಅಪಾಯ ಎದುರಿಸುತ್ತಿರುವಾಗ ರೈತರ ಹಿತಾಸಕ್ತಿಯನ್ನೂ ಕಡೆಗಣಿಸಲಾಗುತ್ತಿದೆ ಎಂದು ಟೀಕಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಈ ವಿಚಾರವಾಗಿ ಜನರಿಗೆ ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಪೆಟ್ರೋಲ್ ಬಂಕ್‌ಗಳಲ್ಲಿ ಎಥೆನಾಲ್ ಮಿಶ್ರಣದ ಪ್ರಮಾಣವನ್ನು ಕಡ್ಡಾಯವಾಗಿ ಸಾರ್ವಜನಿಕವಾಗಿ ಪ್ರಕಟಿಸಬೇಕು ಮತ್ತು ವಾಹನಗಳಿಗೆ ಹಾನಿಯಾಗದಂತೆ ಸೂಕ್ತ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

63 ಪೆಟ್ರೋಲ್ ಮಾದರಿಗಳ ಪರೀಕ್ಷೆ: ರಿಜ್ವಾನ್ ಅರ್ಷದ್

ಇನ್ನೊಂದೆಡೆ, ರಾಜ್ಯದಲ್ಲಿ ಹೆಚ್ಚಿನ ಎಥೆನಾಲ್ ಮಿಶ್ರಿತ ಪೆಟ್ರೋಲ್ ಬಳಕೆಯಿಂದ ವಾಹನಗಳ ಬಿಡಿಭಾಗಗಳಿಗೆ ಹಾನಿಯಾಗುವ ಸಾಧ್ಯತೆಯಿದೆ ಎಂದು ಸಚಿವ ರಿಜ್ವಾನ್ ಅರ್ಷದ್ ಎಚ್ಚರಿಕೆ ನೀಡಿದ್ದಾರೆ.

ಪೆಟ್ರೋಲ್ ಮಾದರಿಗಳ ಪರೀಕ್ಷೆ ಕುರಿತು ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಪ್ರತಿಯೊಂದು ಜಿಲ್ಲೆ ಸೇರಿದಂತೆ ವಿವಿಧ ಸ್ಥಳಗಳಿಂದ ಹಾಗೂ ಪ್ರಮುಖ ತೈಲ ಕಂಪನಿಗಳಿಂದ ಒಟ್ಟು 63 ಪೆಟ್ರೋಲ್ ಮಾದರಿಗಳನ್ನು ಸಂಗ್ರಹಿಸಲಾಗಿದೆ ಎಂದು ತಿಳಿಸಿದ್ದಾರೆ.

2023ರ ನಂತರ ತಯಾರಾಗುತ್ತಿರುವ ವಾಹನಗಳಲ್ಲಿ ಮಾತ್ರ ಇ20 ಇಂಧನಕ್ಕೆ ಹೊಂದಿಕೊಳ್ಳುವ ತಂತ್ರಜ್ಞಾನ ಅಳವಡಿಸಲಾಗುತ್ತಿದೆ. ಹೀಗಿರುವಾಗ ದೇಶದ ಒಟ್ಟು ವಾಹನಗಳ ಪೈಕಿ ಇ20 ಇಂಧನಕ್ಕೆ ಹೊಂದಿಕೊಳ್ಳುವ ವಾಹನಗಳ ಪ್ರಮಾಣ ಅತ್ಯಂತ ಕಡಿಮೆ ಎಂದು ಹೇಳಿದ್ದಾರೆ.

ಶೇ.20ಕ್ಕಿಂತ ಹೆಚ್ಚಿನ ಎಥೆನಾಲ್ ವಾಹನಗಳಿಗೆ ಅಪಾಯ?

ಪೆಟ್ರೋಲ್‌ನಲ್ಲಿ ಎಥೆನಾಲ್ ಪ್ರಮಾಣ ಶೇ.20ಕ್ಕಿಂತ ಹೆಚ್ಚಾದರೆ ಇ20 ಇಂಧನಕ್ಕೆ ಹೊಂದಿಕೊಳ್ಳುವ ವಾಹನಗಳಿಗೂ ಸಮಸ್ಯೆಯಾಗಬಹುದು ಎಂದು ರಿಜ್ವಾನ್ ಅರ್ಷದ್ ಆತಂಕ ವ್ಯಕ್ತಪಡಿಸಿದ್ದಾರೆ. ದೇಶದ ಶೇ.99ರಷ್ಟು ವಾಹನಗಳು ಶೇ.20ಕ್ಕಿಂತ ಹೆಚ್ಚಿನ ಎಥೆನಾಲ್ ಅಂಶವಿರುವ ಇಂಧನವನ್ನು ಬಳಸಲು ಸೂಕ್ತವಾಗಿಲ್ಲ ಎಂದು ಅವರು ಹೇಳಿದ್ದಾರೆ.

ಆಟೋಮೋಟಿವ್ ರಿಸರ್ಚ್ ಅಸೋಸಿಯೇಷನ್ ಆಫ್ ಇಂಡಿಯಾ (ARAI) ವಾಹನಗಳು, ಎಂಜಿನ್‌ಗಳು, ತಂತ್ರಜ್ಞಾನಗಳು ಮತ್ತು ಇಂಧನಗಳ ಪ್ರಮಾಣೀಕರಣದ ಹೊಣೆ ಹೊತ್ತಿದೆ. ಆದರೆ ಹೆಚ್ಚಿನ ಎಥೆನಾಲ್ ಪ್ರಮಾಣದ ಇಂಧನ ಬಳಕೆಯಿಂದ ಸಾಮಾನ್ಯ ವಾಹನಗಳ ಇಂಧನ ವ್ಯವಸ್ಥೆಯಲ್ಲಿರುವ ರಬ್ಬರ್ ಭಾಗಗಳು, ಹೋಸ್‌ಗಳು, ಗ್ಯಾಸ್ಕೆಟ್‌ಗಳು, ಸೀಲ್‌ಗಳು ಮತ್ತು ಓ-ರಿಂಗ್‌ಗಳು ಸವೆಯುವ ಸಾಧ್ಯತೆಯಿದೆ ಎಂದು ಎಚ್ಚರಿಸಿದ್ದಾರೆ.

ಪೆಟ್ರೋಲ್‌ನಲ್ಲಿನ ಎಥೆನಾಲ್ ಪ್ರಮಾಣದ ಕುರಿತು ಕರ್ನಾಟಕ ಸರ್ಕಾರ ನಡೆಸಿರುವ ಪರೀಕ್ಷೆಗಳ ವರದಿ ಮತ್ತು ಕೇಂದ್ರದ ಮುಂದಿನ ಕ್ರಮಗಳ ಬಗ್ಗೆ ಈಗ ಕುತೂಹಲ ಮೂಡಿದೆ.

Read More
Next Story