ಮಿತಿಮೀರಿದ ಎಥೆನಾಲ್ ಮಿಶ್ರಣ ಆರೋಪ; ಸರ್ಕಾರಕ್ಕೆ ತೈಲ ಕಂಪನಿಗಳ ತಿರುಗೇಟು
x

ಮಿತಿಮೀರಿದ ಎಥೆನಾಲ್ ಮಿಶ್ರಣ ಆರೋಪ; ಸರ್ಕಾರಕ್ಕೆ ತೈಲ ಕಂಪನಿಗಳ ತಿರುಗೇಟು

ಸರ್ಕಾರ ನಡೆಸಿರುವ ಪರೀಕ್ಷೆಗಳು ಮತ್ತು ಬಿಡುಗಡೆ ಮಾಡಿರುವ ಅಂಕಿ-ಅಂಶಗಳು ದೇಶದಲ್ಲಿ ಚಾಲ್ತಿಯಲ್ಲಿರುವ ಯಾವುದೇ ಶಾಸನಬದ್ಧ ನಿಯಮಗಳ ಪ್ರಕಾರ ನಡೆದಿಲ್ಲ ಎಂದು ತೈಲ ಕಂಪನಿಗಳು ತಿರಸ್ಕರಿಸಿವೆ.


Click the Play button to hear this message in audio format

ಇಂಧನ ಮಾರುಕಟ್ಟೆಯಲ್ಲಿ ಭಾರಿ ಸಂಚಲನ ಪೆಟ್ರೋಲ್‌ನಲ್ಲಿ ಅಧಿಕ ಪ್ರಮಾಣದ ಎಥೆನಾಲ್ ಮಿಶ್ರಣದ ವಿವಾದವು ಈಗ ರಾಜ್ಯ ಸರ್ಕಾರ ಮತ್ತು ದೇಶದ ಮುಂಚೂಣಿ ತೈಲ ಮಾರುಕಟ್ಟೆ ಕಂಪನಿಗಳ ನಡುವಿನ ನೇರ ಆರ್ಥಿಕ, ಕಾನೂನಾತ್ಮಕ ಹಾಗೂ ತಾಂತ್ರಿಕ ಕದನವಾಗಿ ಮಾರ್ಪಟ್ಟಿದೆ. ಸರ್ಕಾರದ ಪ್ರಕಾರ ಇದು ಗ್ರಾಹಕರಿಗೆ ಎಸಗಲಾದ ನೇರ ವಂಚನೆಯಾದರೆ, ತೈಲ ಕಂಪನಿಗಳ ಪ್ರಕಾರ ಇದು ಅವೈಜ್ಞಾನಿಕ ಮತ್ತು ನಿಯಮಬಾಹಿರ ಆರೋಪವಾಗಿದೆ.

ಕೇಂದ್ರ ಸರ್ಕಾರದ ಮಾರ್ಗಸೂಚಿ ಪ್ರಕಾರ ದೇಶದಲ್ಲಿ ಪ್ರಸ್ತುತ ಪೆಟ್ರೋಲ್‌ನಲ್ಲಿ ಗರಿಷ್ಠ ಶೇಕಡಾ 20 ರಷ್ಟು ಮಾತ್ರ ಎಥೆನಾಲ್ ಮಿಶ್ರಣ ಮಾಡಲು ಕಾನೂನುಬದ್ಧ ಅವಕಾಶವಿದೆ. ಆದರೆ, ಕಾನೂನು ಮಾಪನಶಾಸ್ತ್ರ ಇಲಾಖೆಯು ರಾಜ್ಯದ 7 ಪ್ರಮುಖ ಜಿಲ್ಲೆಗಳಾದ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ತುಮಕೂರು, ಮಂಗಳೂರು ಭಾಗಗಳ ಚಿಲ್ಲರೆ ಪೆಟ್ರೋಲ್ ಬಂಕ್‌ಗಳಿಂದ ಸಂಗ್ರಹಿಸಿದ ಸ್ಯಾಂಪಲ್‌ಗಳನ್ನು ಪ್ರಯೋಗಾಲಯಕ್ಕೆ ಒಳಪಡಿಸಿದಾಗ, ಪೆಟ್ರೋಲ್‌ನಲ್ಲಿ ಎಥೆನಾಲ್ ಪ್ರಮಾಣವು ಶೇ. 26 ರಿಂದ ಬರೋಬ್ಬರಿ ಶೇ. 31.2 ರವರೆಗೆ ಇರುವುದು ಪತ್ತೆಯಾಗಿದೆ ಎಂದು ಆಹಾರ, ನಾಗರಿಕ ಸರಬರಾಜು, ಗ್ರಾಹಕರ ವ್ಯವಹಾರಗಳ ರಿಜ್ವಾನ್ ಅರ್ಷದ್ ತಿಳಿಸಿದ್ದಾರೆ. ಮಿತಿಗಿಂತ ಹೆಚ್ಚುವರಿ ಎಥೆನಾಲ್ ಬೆರೆಸುವುದರಿಂದ ವಾಹನಗಳ ಎಂಜಿನ್ ಹಾಳಾಗುವುದಲ್ಲದೆ, ಮೈಲೇಜ್ ಗಣನೀಯವಾಗಿ ಕುಸಿಯುತ್ತದೆ. ಇದು ಗ್ರಾಹಕರಿಗೆ ಆರ್ಥಿಕ ವಂಚನೆಯಾಗಿದ್ದು, ತೈಲ ಕಂಪನಿಗಳ ವಿರುದ್ಧ ಕ್ರಿಮಿನಲ್ ಮತ್ತು ನಿಯಂತ್ರಣ ಕಾಯ್ದೆಯಡಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದರು.

ಎಥೆನಾಲ್ ಮಿತಿ ಮೀರಿದರೆ ವಾಹನಗಳ ಮೇಲಾಗುವ ಪರಿಣಾಮವೇನು?

ಸಾಮಾನ್ಯವಾಗಿ ಭಾರತದಲ್ಲಿ ಪ್ರಸ್ತುತ ಚಾಲ್ತಿಯಲ್ಲಿರುವ ಬಹುತೇಕ ಹಳೆಯ ಮತ್ತು ಮಧ್ಯಮ ಶ್ರೇಣಿಯ ವಾಹನಗಳು E10 (ಶೇ. 10 ಎಥೆನಾಲ್) ಅಥವಾ ಗರಿಷ್ಠ E20 (ಶೇ. 20 ಎಥೆನಾಲ್) ಇಂಧನಕ್ಕೆ ಮಾತ್ರ ಹೊಂದಿಕೊಳ್ಳುವಂತೆ ವಿನ್ಯಾಸಗೊಂಡಿವೆ. ಎಥೆನಾಲ್ ಪ್ರಮಾಣ ಶೇ. 20ಕ್ಕಿಂತ ಹೆಚ್ಚಾದರೆ (ಶೇ. 25 ರಿಂದ 31ರವರೆಗೆ ತಲುಪಿದರೆ) ಎಥೆನಾಲ್ ತೇವಾಂಶವನ್ನು ಹೀರಿಕೊಳ್ಳುವ ಗುಣ ಹೊಂದಿರುವುದರಿಂದ, ಇಂಧನ ಪೈಪ್‌ಗಳು, ಕಾರ್ಬ್ಯುರೇಟರ್ ಹಾಗೂ ಫ್ಯೂಯಲ್ ಇಂಜೆಕ್ಟರ್‌ಗಳು ತುಕ್ಕು ಹಿಡಿಯುತ್ತವೆ. ಅಧಿಕ ಎಥೆನಾಲ್ ಸಾಂದ್ರತೆಯು ಇಂಧನ ಟ್ಯಾಂಕ್‌ನ ರಬ್ಬರ್ ಸೀಲ್‌ಗಳು ಮತ್ತು ಪ್ಲಾಸ್ಟಿಕ್ ಲೈನಿಂಗ್‌ಗಳನ್ನು ಕರಗಿಸಿಬಿಡುತ್ತದೆ. ಎಥೆನಾಲ್‌ನಲ್ಲಿ ಪೆಟ್ರೋಲ್‌ಗಿಂತ ಕಡಿಮೆ ಶಕ್ತಿ ಸಾಂದ್ರತೆ ಇರುವುದರಿಂದ ವಾಹನದ ಮೈಲೇಜ್ ಕನಿಷ್ಠ ಶೇ. 10 ರಿಂದ 15ರಷ್ಟು ತಕ್ಷಣವೇ ಕುಸಿಯುತ್ತದೆ.

ತೈಲ ಕಂಪನಿಗಳ ಒಕ್ಕೂಟದ ಜಂಟಿ ತಿರುಗೇಟು

ರಾಜ್ಯ ಸರ್ಕಾರದ ಆರೋಪಕ್ಕೆ ದೇಶದ ಬಿಗ್ ತ್ರೀ ಸರ್ಕಾರಿ ತೈಲ ಕಂಪನಿಗಳಾದ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್, ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ತಕ್ಷಣವೇ ಒಗ್ಗೂಡಿ ಜಂಟಿ ಪ್ರಕಟಣೆಯ ಮೂಲಕ ತೀಕ್ಷ್ಣ ತಿರುಗೇಟು ನೀಡಿವೆ. ಸರ್ಕಾರ ನಡೆಸಿರುವ ಪರೀಕ್ಷೆಗಳು ಮತ್ತು ಬಿಡುಗಡೆ ಮಾಡಿರುವ ಅಂಕಿ-ಅಂಶಗಳು ದೇಶದಲ್ಲಿ ಚಾಲ್ತಿಯಲ್ಲಿರುವ ಯಾವುದೇ ಶಾಸನಬದ್ಧ ನಿಯಮಗಳ ಪ್ರಕಾರ ನಡೆದಿಲ್ಲ ಎಂದು ಕಂಪನಿಗಳು ನೇರವಾಗಿ ತಿರಸ್ಕರಿಸಿವೆ. ಕರ್ನಾಟಕ ಸೇರಿದಂತೆ ಇಡೀ ದೇಶದಲ್ಲಿ ಪೂರೈಕೆಯಾಗುವ ಪೆಟ್ರೋಲ್ ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ ನ ಐಎಸ್‌ 17021 ಕಠಿಣ ಮಾನದಂಡಗಳಿಗೆ ಅನುಗುಣವಾಗಿಯೇ ಇದೆ. ಸ್ವಯಂಚಾಲಿತ ಮತ್ತು ಕಂಪ್ಯೂಟರೀಕೃತ ಡಿಪೋಗಳಲ್ಲಿ ಎಥೆನಾಲ್ ಮಿಶ್ರಣವಾಗುವುದರಿಂದ, ತಾಂತ್ರಿಕವಾಗಿ ಶೇ. 20ರ ಮಿತಿಯನ್ನು ಮೀರಿ ಎಥೆನಾಲ್ ಬೆರೆಸಲು ಸಾಧ್ಯವೇ ಇಲ್ಲ ಎಂದು ಕಂಪನಿಗಳು ಪ್ರತಿಪಾದಿಸಿವೆ.

ಶಾಸನಬದ್ಧ ಆರು ಸ್ಯಾಂಪಲ್‌ಗಳ ನಿಯಮ ಉಲ್ಲಂಘನೆಯ ಆರೋಪ

ತೈಲ ಕಂಪನಿಗಳ ಪ್ರಕಾರ, ಇಂಧನ ಗುಣಮಟ್ಟ ಪರೀಕ್ಷೆ ನಡೆಸಲು ಕೇಂದ್ರ ಸರ್ಕಾರವು ಅಗತ್ಯ ವಸ್ತುಗಳ ಕಾಯ್ದೆ 1955, ಮೋಟಾರ್ ಸ್ಪಿರಿಟ್ ಮತ್ತು ಹೈ-ಸ್ಪೀಡ್ ಡೀಸೆಲ್ ನಿಯಂತ್ರಣ ಆದೇಶ 2005 ಹಾಗೂ ಮಾರ್ಕೆಟಿಂಗ್ ಡಿಸಿಪ್ಲಿನ್ ಮಾರ್ಗಸೂಚಿ 2024 ಅಡಿಯಲ್ಲಿ ಅತ್ಯಂತ ಕಟ್ಟುನಿಟ್ಟಾದ ನಿಯಮಾವಳಿಗಳನ್ನು ರೂಪಿಸಿದೆ. ಯಾವುದೇ ಬಂಕ್‌ನಲ್ಲಿ ತಪಾಸಣೆ ನಡೆಸುವಾಗ ಕೆಲವೊಂದನ್ನು ಕಡ್ಡಾಯವಾಗಿ ಪಾಲಿಸಬೇಕು. ತಪಾಸಣೆಯ ವೇಳೆ ಒಟ್ಟು 1 ಲೀಟರ್ ಸಾಮರ್ಥ್ಯದ 6 ಪ್ರತ್ಯೇಕ ಬಾಟಲಿಗಳಲ್ಲಿ ಸ್ಯಾಂಪಲ್ ಸಂಗ್ರಹಿಸಬೇಕು. ಇವುಗಳಲ್ಲಿ 2 ಸ್ಯಾಂಪಲ್‌ಗಳನ್ನು ಬಂಕ್ ಡೀಲರ್‌ಗೆ ನೀಡಬೇಕು, 2 ಸ್ಯಾಂಪಲ್‌ಗಳನ್ನು ತೈಲ ಕಂಪನಿ/ಇಲಾಖೆ ಇಟ್ಟುಕೊಳ್ಳಬೇಕು ಹಾಗೂ ಕೊನೆಯ 2 ಸ್ಯಾಂಪಲ್‌ಗಳನ್ನು ಮಾತ್ರ ಪರೀಕ್ಷೆಗೆ ಅಧಿಕೃತ ಪ್ರಯೋಗಾಲಯಕ್ಕೆ ಕಳುಹಿಸಬೇಕು. ಸ್ಯಾಂಪಲ್ ಸಂಗ್ರಹಿಸಿದ ಬಾಟಲಿಗಳಿಗೆ ಸ್ಥಳದಲ್ಲೇ ಸೀಲ್ ಮಾಡಿ, ಇಲಾಖೆಯ ಅಧಿಕಾರಿ, ತೈಲ ಕಂಪನಿಯ ಪ್ರತಿನಿಧಿ ಮತ್ತು ಪೆಟ್ರೋಲ್ ಬಂಕ್ ಡೀಲರ್ ಮೂವರೂ ಜಂಟಿಯಾಗಿ ಸಹಿ ಮಾಡಬೇಕು ಎಂದು ಹೇಳಿವೆ.

ಕಾರ್ಯಾಚರಣೆಯಲ್ಲಾದ ಲೋಪಗಳೇನು?

ಸೆಪ್ಟೆಂಬರ್ ತಿಂಗಳಲ್ಲಿ ತಪಾಸಣೆ ನಡೆಸಿದಾಗ ನಿಯಮದಂತೆ ರಾಜ್ಯ ಮಟ್ಟದ ಸಂಯೋಜಕರ ಮೂಲಕ ಒಎಂಸಿ ಲ್ಯಾಬ್‌ಗಳಿಗೆ ಸ್ಯಾಂಪಲ್ ಕಳುಹಿಸಲಾಗಿತ್ತು. ಆದರೆ ಅಕ್ಟೋಬರ್ ತಿಂಗಳಲ್ಲಿ ಆಹಾರ ಮತ್ತು ಕಾನೂನು ಮಾಪನಶಾಸ್ತ್ರ ಇಲಾಖೆಯು ಏಕಪಕ್ಷೀಯವಾಗಿ ದಾಳಿ ನಡೆಸಿದೆ. ತೈಲ ಕಂಪನಿಗಳಿಗೆ ಯಾವುದೇ ಮಾಹಿತಿ ನೀಡಿಲ್ಲ, ಸ್ಥಳದಲ್ಲಿ ಅವರ ಪ್ರತಿನಿಧಿಗಳು ಇರಲಿಲ್ಲ, ಕಂಪನಿಗಳಿಗೆ ಕೌಂಟರ್‌ಪಾರ್ಟ್ ಸ್ಯಾಂಪಲ್ ನೀಡಿಲ್ಲ ಮತ್ತು ಯಾವ ಬಂಕ್‌ನಲ್ಲಿ ಎಷ್ಟು ಎಥೆನಾಲ್ ಪತ್ತೆಯಾಗಿದೆ ಎಂಬ ವಿವರವಾದ ವರದಿಯನ್ನೇ ಕಂಪನಿಗಳಿಗೆ ಹಸ್ತಾಂತರಿಸಿಲ್ಲ ಎಂದು ಒಎಂಸಿಗಳು ಆಪಾದಿಸಿವೆ.

ತೈಲ ಕಂಪನಿಗಳು ರಾಜ್ಯ ಸರ್ಕಾರದ ವರದಿಯನ್ನು ತಳ್ಳಿಹಾಕಲು ಮತ್ತೊಂದು ಪ್ರಮುಖ ಕಾರಣವೆಂದರೆ ಪ್ರಯೋಗಾಲಯದ ಮಾನ್ಯತೆಯಾಗಿದೆ. ಕೇಂದ್ರದ ನಿಯಂತ್ರಣ ಆದೇಶದ 'ಶೆಡ್ಯೂಲ್ III' ರ ಅಡಿಯಲ್ಲಿ ಅಧಿಕೃತವಾಗಿ ನೋಟಿಫೈ ಮಾಡಲಾದ ಸರ್ಕಾರಿ ಪೆಟ್ರೋಲಿಯಂ ಪ್ರಯೋಗಾಲಯಗಳ ವರದಿಯನ್ನು ಸರ್ಕಾರ ಬಳಸಿಲ್ಲ. ಬದಲಿಗೆ ಮೂರನೇ ವ್ಯಕ್ತಿಯ ಖಾಸಗಿ ಪ್ರಯೋಗಾಲಯದ ಪ್ರಮಾಣಪತ್ರಗಳನ್ನು ಮುಂದಿಟ್ಟುಕೊಂಡು ಆರೋಪ ಮಾಡಿದೆ. ಈ ಖಾಸಗಿ ಲ್ಯಾಬ್ ಸರ್ಟಿಫಿಕೇಟ್‌ಗಳಲ್ಲಿ ಪೆಟ್ರೋಲ್‌ನಲ್ಲಿರುವ ಎಥೆನಾಲ್ ಅಂಶವನ್ನು ಮರುಪರಿಶೀಲಿಸಲು ಅಗತ್ಯವಿರುವ ಯಾವುದೇ ಅಧಿಕೃತ ತಾಂತ್ರಿಕ ಅಥವಾ ರಾಸಾಯನಿಕ ವಿವರಗಳಿಲ್ಲ. ಸರ್ಕಾರದ ಈ ಲೋಪಪೂರಿತ ಕಾರ್ಯವಿಧಾನದಿಂದಾಗಿ, ಆರೋಪ ಎದುರಿಸುತ್ತಿರುವ ಪೆಟ್ರೋಲ್ ಬಂಕ್‌ಗಳಿಗಾಗಲಿ ಅಥವಾ ಕಂಪನಿಗಳಿಗಾಗಲಿ ಕಾನೂನುಬದ್ಧವಾಗಿ ಮರುಪರೀಕ್ಷೆಗೆ ಮನವಿ ಮಾಡುವ ಹಕ್ಕನ್ನೇ ಕಸಿದುಕೊಳ್ಳಲಾಗಿದೆ ಎಂದು ಒಕ್ಕೂಟ ಆರೋಪಿಸಿದೆ.

893 ಪರೀಕ್ಷೆಗಳ ಅಂಕಿ-ಅಂಶ ಬಿಡುಗಡೆ ಮಾಡಿದ ಐಒಸಿಎಲ್‌

ಈ ಗೊಂದಲಗಳಿಗೆ ತೆರೆ ಎಳೆಯಲು ಮುಂದಾಗಿರುವ ಅತಿದೊಡ್ಡ ತೈಲ ಕಂಪನಿ ಇಂಡಿಯನ್ ಆಯಿಲ್ ಕಾರ್ಪೊರೇಷನ್, ತನ್ನ ಸಾಮಾಜಿಕ ಜಾಲತಾಣ ಎಕ್ಸ್‌ ಖಾತೆಯಲ್ಲಿ ಮಹತ್ವದ ಅಂಕಿ-ಅಂಶಗಳನ್ನು ಹಂಚಿಕೊಂಡಿದೆ. ಇತ್ತೀಚೆಗೆ ದೇಶದ 27 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಟ್ಟು 893 ಸ್ಯಾಂಪಲ್‌ಗಳನ್ನು ಕಟ್ಟುನಿಟ್ಟಿನ ಗುಣಮಟ್ಟ ಪರೀಕ್ಷೆಗೆ ಒಳಪಡಿಸಲಾಗಿದೆ. ಇದರಲ್ಲಿ ಕರ್ನಾಟಕದ 56 ಪೆಟ್ರೋಲ್ ಮಾದರಿಗಳೂ ಸೇರಿವೆ. ಪರೀಕ್ಷಿಸಲಾದ ಎಲ್ಲಾ ಸ್ಯಾಂಪಲ್‌ಗಳಲ್ಲೂ ಎಥೆನಾಲ್ ಅಂಶವು ನಿಗದಿತ ಶೇ. 19 ರಿಂದ ಶೇ. 21 ರ ಮಿತಿಯೊಳಗೇ ಇರುವುದು ದೃಢಪಟ್ಟಿದೆ ಎಂದು ಸ್ಪಷ್ಟಪಡಿಸಿದೆ. ಅಲ್ಲದೆ, "ಗ್ರಾಹಕರಲ್ಲಿ ಉಂಟಾಗಿರುವ ಅನುಮಾನ ಮತ್ತು ಆತಂಕವನ್ನು ನಿವಾರಿಸಲು ನಾವು ಬದ್ಧರಾಗಿದ್ದೇವೆ. ರಾಜ್ಯ ಸರ್ಕಾರವು ಯಾವುದೇ ಕ್ಷಣದಲ್ಲಾದರೂ ನಮ್ಮೊಂದಿಗೆ ಬಂದು, ಅಧಿಕೃತ ನಿಯಮಾವಳಿಗಳ ಪ್ರಕಾರ ಜಂಟಿ ಮತ್ತು ಪಾರದರ್ಶಕ ಪ್ರಯೋಗಾಲಯ ಪರೀಕ್ಷೆಯನ್ನು ನಡೆಸಲಿ ಎಂದು ತೈಲ ಕಂಪನಿಗಳು ಸರ್ಕಾರಕ್ಕೆ ಮುಕ್ತ ಸವಾಲು ಹಾಕಿವೆ.

Read More
Next Story