
ಪೆಟ್ರೋಲ್ ಬಂಕ್ಗಳಲ್ಲಿ ಮಿತಿಮೀರಿದ ಎಥೆನಾಲ್ ಮಿಶ್ರಣ; ಕೇಂದ್ರಕ್ಕೆ ರಾಜ್ಯ ಪತ್ರ
ವಾಹನ ಸವಾರರಹಿತಾಸಕ್ತಿಯನ್ನು ಕಾಪಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ತಕ್ಷಣವೇ ಮಧ್ಯಪ್ರವೇಶಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಚಿವ ರಿಜ್ವಾನ್ ಅರ್ಷದ್ ಪತ್ರದಲ್ಲಿ ಒತ್ತಾಯಿಸಿದ್ದಾರೆ.
ರಾಜ್ಯದ ವಿವಿಧ ಪೆಟ್ರೋಲ್ ಬಂಕ್ಗಳಲ್ಲಿ ಕೇಂದ್ರ ಸರ್ಕಾರವು ನಿಗದಿಪಡಿಸಿದ ಮಿತಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಎಥೆನಾಲ್ ಮಿಶ್ರಣ ಮಾಡಲಾಗುತ್ತಿದೆ ಮತ್ತು ಇಂಧನ ವಿತರಣಾ ಯಂತ್ರಗಳ (ಡಿಸ್ಪೆನ್ಸರ್) ಅಳತೆಯಲ್ಲಿಯೂ ಭಾರಿ ವ್ಯತ್ಯಾಸ ಕಂಡುಬಂದಿದೆ ಎಂದು ಗಂಭೀರ ಆರೋಪ ಮಾಡಿರುವ ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ರಿಜ್ವಾನ್ ಅರ್ಷದ್ ಅವರು, ಈ ಕುರಿತು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಅವರಿಗೆ ಸವಿವರವಾದ ಪತ್ರ ಬರೆದಿದ್ದಾರೆ. ವಾಹನ ಸವಾರರು ಮತ್ತು ಜನಸಾಮಾನ್ಯರ ಹಿತಾಸಕ್ತಿಯನ್ನು ಕಾಪಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ತಕ್ಷಣವೇ ಮಧ್ಯಪ್ರವೇಶಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ಪತ್ರದಲ್ಲಿ ಬಲವಾಗಿ ಒತ್ತಾಯಿಸಿದ್ದಾರೆ.
ಕಳೆದ ಕೆಲವು ತಿಂಗಳುಗಳಿಂದ ರಾಜ್ಯಾದ್ಯಂತ ವಾಹನ ಸವಾರರಿಂದ ವಾಹನಗಳ ಮೈಲೇಜ್ನಲ್ಲಿ ಭಾರಿ ಕುಸಿತ, ಪದೇ ಪದೇ ಎಂಜಿನ್ ದುರಸ್ತಿಗೆ ಬರುತ್ತಿರುವುದು ಹಾಗೂ ಪಾವತಿಸಿದ ಹಣಕ್ಕೆ ತಕ್ಕಂತೆ ಪೂರ್ಣ ಪ್ರಮಾಣದ ಇಂಧನ ಪೂರೈಕೆಯಾಗದೆ ಕಡಿಮೆ ಪ್ರಮಾಣದ ಇಂಧನ ದೊರೆಯುತ್ತಿದೆ ಎಂಬ ಕುರಿತು ಸಾರ್ವಜನಿಕರಿಂದ ವ್ಯಾಪಕ ದೂರುಗಳು ಕೇಳಿಬಂದಿದ್ದವು. ಈ ದೂರುಗಳನ್ನು ಗಂಭೀರವಾಗಿ ಪರಿಗಣಿಸಿದ ರಾಜ್ಯ ಸರ್ಕಾರವು ಕಳೆದ ಸೆಪ್ಟೆಂಬರ್ ತಿಂಗಳಿನಲ್ಲಿ ರಾಜ್ಯದ ಒಟ್ಟು 63 ಪೆಟ್ರೋಲ್ ಬಂಕ್ಗಳಿಂದ ಇಂಧನ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಿತ್ತು. ಆದರೆ, ತೈಲ ಮಾರುಕಟ್ಟೆ ಕಂಪನಿಗಳ ಸ್ವಂತ ಪ್ರಯೋಗಾಲಯಗಳು ನೀಡಿದ 42 ಪರೀಕ್ಷಾ ವರದಿಗಳಲ್ಲಿ ಪೆಟ್ರೋಲ್ನಲ್ಲಿರುವ ಎಥೆನಾಲ್ ಪ್ರಮಾಣವನ್ನು ಉಲ್ಲೇಖಿಸಿರಲಿಲ್ಲ ಎಂಬ ಅಂಶ ಬೆಳಕಿಗೆ ಬಂದಿದೆ. ತೈಲ ಕಂಪನಿಗಳ ವರದಿಯಲ್ಲಿ ಪಾರದರ್ಶಕತೆಯ ಕೊರತೆ ಕಂಡುಬಂದ ಹಿನ್ನೆಲೆಯಲ್ಲಿ, ರಾಜ್ಯ ಸರ್ಕಾರವು ರಾಷ್ಟ್ರೀಯ ಪರೀಕ್ಷಾ ಮತ್ತು ಮಾಪನಾಂಕ ನಿರ್ಣಯ ಪ್ರಯೋಗಾಲಯಗಳ ಮಾನ್ಯತಾ ಮಂಡಳಿ ಮಾನ್ಯತೆ ಪಡೆದ ಸ್ವತಂತ್ರ ಪ್ರಯೋಗಾಲಯಗಳಲ್ಲಿ 14 ಮಾದರಿಗಳನ್ನು ವಿಶೇಷ ಪರೀಕ್ಷೆಗೆ ಒಳಪಡಿಸಿತು. ಈ ಸ್ವತಂತ್ರ ಪರೀಕ್ಷೆಯ ಫಲಿತಾಂಶಗಳು ಅತ್ಯಂತ ಆಘಾತಕಾರಿಯಾಗಿದ್ದು, ಪರೀಕ್ಷಿಸಲಾದ 14 ಮಾದರಿಗಳ ಪೈಕಿ ಬರೋಬ್ಬರಿ 11 ಮಾದರಿಗಳಲ್ಲಿ ಸರ್ಕಾರ ನಿಗದಿಪಡಿಸಿದ ಶೇ. 20ರ ಮಿತಿಗಿಂತಲೂ ಹೆಚ್ಚಿನ ಪ್ರಮಾಣದ ಎಥೆನಾಲ್ ಇರುವುದು ದೃಢಪಟ್ಟಿದೆ. ಕೆಲವು ಮಾದರಿಗಳಲ್ಲಿ ಎಥೆನಾಲ್ ಪ್ರಮಾಣವು ಗರಿಷ್ಠ ಶೇ. 31.2 ರವರೆಗೆ ಇರುವುದು ಪತ್ತೆಯಾಗಿದೆ. ಇದಕ್ಕೂ ಮಿಗಿಲಾಗಿ, ಸಾಮಾನ್ಯ ಪೆಟ್ರೋಲ್ ಮಾತ್ರವಲ್ಲದೆ ಹೆಚ್ಚಿನ ದಕ್ಷತೆ ಮತ್ತು ಗುಣಮಟ್ಟದ ಭರವಸೆಯೊಂದಿಗೆ ಲೀಟರ್ಗೆ 120 ರಿಂದ 140 ರೂಪಾಯಿ ದುಬಾರಿ ಬೆಲೆಗೆ ಮಾರಾಟ ಮಾಡಲಾಗುವ ಪ್ರೀಮಿಯಂ ಪೆಟ್ರೋಲ್ನಲ್ಲಿಯೂ ನಿಗದಿಗಿಂತ ಹೆಚ್ಚಿನ ಪ್ರಮಾಣದ ಎಥೆನಾಲ್ ಮಿಶ್ರಣ ಕಂಡುಬಂದಿದೆ ಎಂದು ಸಚಿವ ರಿಜ್ವಾನ್ ಅರ್ಷದ್ ಅವರು ಕೇಂದ್ರ ಸಚಿವರಿಗೆ ಬರೆದಿರುವ ಪತ್ರದಲ್ಲಿ ಗಮನ ಸೆಳೆದಿದ್ದಾರೆ.
ವಾಹನ ಸವಾರರ ಮೇಲೆ ಆರ್ಥಿಕ ಹೊರೆ
ವಾಹನ ತಯಾರಕರು E20 (ಶೇ. 20 ಎಥೆನಾಲ್ ಮಿಶ್ರಿತ) ಇಂಧನಕ್ಕೆ ತಕ್ಕಂತೆ ನೂತನ ವಾಹನಗಳನ್ನು ವಿನ್ಯಾಸಗೊಳಿಸುತ್ತಿದ್ದರೂ, ರಸ್ತೆಯಲ್ಲಿ ಸಂಚರಿಸುತ್ತಿರುವ ಕೋಟ್ಯಂತರ ಹಳೆಯ ವಾಹನಗಳು ಇನ್ನೂ E10 ಅಥವಾ ಎಥೆನಾಲ್ ರಹಿತ ಇಂಧನಕ್ಕೆ ಮಾತ್ರ ಹೊಂದಿಕೊಳ್ಳುವಂತಿವೆ. ಇಂತಹ ಪರಿಸ್ಥಿತಿಯಲ್ಲಿ, ನಿಗದಿತ ಶೇ. 20ಕ್ಕಿಂತ ಅಧಿಕ ಅಂದರೆ ಶೇ. 31.2ರವರೆಗೆ ಎಥೆನಾಲ್ ಮಿಶ್ರಿತ ಇಂಧನವನ್ನು ಬಳಸುವುದರಿಂದ ವಾಹನಗಳ ಇಂಧನ ಕೊಳವೆಗಳು, ಇಂಜೆಕ್ಟರ್ಗಳು ಮತ್ತು ಎಂಜಿನ್ ಭಾಗಗಳು ತುಕ್ಕು ಹಿಡಿಯುವುದು ಹಾಗೂ ಹಾನಿಗೊಳಗಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಇದರ ಜೊತೆಗೆ ಇಂಧನ ದಕ್ಷತೆ (ಮೈಲೇಜ್) ಕುಸಿಯುವುದರಿಂದ ಗ್ರಾಹಕರು ಹೆಚ್ಚುವರಿ ಇಂಧನ ಖರೀದಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದ್ದು, ದುಬಾರಿ ಪ್ರೀಮಿಯಂ ಪೆಟ್ರೋಲ್ ಹಾಕಿಸುವ ಗ್ರಾಹಕರಿಗೂ ಮೋಸವಾಗುತ್ತಿದೆ ಎಂಬ ಆತಂಕವನ್ನು ಪತ್ರದಲ್ಲಿ ವ್ಯಕ್ತಪಡಿಸಲಾಗಿದೆ.
ಅಳತೆ ಯಂತ್ರಗಳಲ್ಲೂ ಭಾರಿ ದೋಷ
ಎಥೆನಾಲ್ ಮಿಶ್ರಣದ ಅಕ್ರಮದ ಜೊತೆಜೊತೆಗೆ, ಪೆಟ್ರೋಲ್ ಬಂಕ್ಗಳಲ್ಲಿನ ಇಂಧನ ವಿತರಣಾ ಯಂತ್ರಗಳ ಅಳತೆಯಲ್ಲಿಯೂ ದೊಡ್ಡ ಮಟ್ಟದ ವ್ಯತ್ಯಾಸಗಳು ಪತ್ತೆಯಾಗಿವೆ. ರಾಜ್ಯ ಕಾನೂನು ಮಾಪನಶಾಸ್ತ್ರ ಇಲಾಖೆಯು ರಾಜ್ಯದ 805 ಪೆಟ್ರೋಲ್ ಬಂಕ್ಗಳಲ್ಲಿ ವ್ಯಾಪಕ ತಪಾಸಣೆ ನಡೆಸಿದ್ದು, ಈ ಪೈಕಿ 768 ಬಂಕ್ಗಳ ಯಂತ್ರಗಳಿಗೆ ತಕ್ಷಣವೇ ಮರು-ಮಾಪನಾಂಕ ನಿರ್ಣಯ ಅಗತ್ಯವಿರುವುದು ಕಂಡುಬಂದಿದೆ. ತಪಾಸಣೆ ವೇಳೆ ಒಟ್ಟು 3,071 ಇಂಧನ ವಿತರಣಾ ನಾಜಲ್ಗಳನ್ನು ಪರಿಶೀಲಿಸಲಾಗಿದ್ದು, ಅವುಗಳಲ್ಲಿ ಬರೋಬ್ಬರಿ 2,618 ನಾಜಲ್ಗಳ ಅಳತೆಯಲ್ಲಿ ವ್ಯತ್ಯಾಸ ಇರುವುದು ಬಯಲಾಗಿದೆ. ಅಂದರೆ, ಶೇ. 85ಕ್ಕೂ ಹೆಚ್ಚು ನಾಜಲ್ಗಳಲ್ಲಿ ನಿಖರತೆ ಇಲ್ಲದಿರುವುದು ಕಂಡುಬಂದಿದ್ದು, ನಿಯಮ ಉಲ್ಲಂಘಿಸಿದ 101 ಪೆಟ್ರೋಲ್ ಬಂಕ್ಗಳ ವಿರುದ್ಧ ಪ್ರಕರಣ ದಾಖಲಿಸಿ ಒಟ್ಟು 6.66 ಲಕ್ಷ ರೂಪಾಯಿ ದಂಡ ವಸೂಲಿ ಮಾಡಲಾಗಿದೆ ಎಂದು ಸಚಿವರು ಅಂಕಿಅಂಶಗಳ ಸಮೇತ ವಿವರಿಸಿದ್ದಾರೆ.
ಕೇಂದ್ರದ ಅಧಿಸೂಚನೆ ಜಾರಿಗೊಳಿಸದಿರಲು ರಾಜ್ಯದ ದೃಢ ನಿರ್ಧಾರ
ಪೆಟ್ರೋಲ್ ಬಂಕ್ಗಳಲ್ಲಿನ ವಿತರಣಾ ಯಂತ್ರಗಳ ತಪಾಸಣೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಹೊರಡಿಸಿರುವ ಕೆಲವು ನಿಯಮಗಳ ಬಗ್ಗೆಯೂ ರಾಜ್ಯ ಸರ್ಕಾರ ತನ್ನ ಅಸಮ್ಮತಿ ವ್ಯಕ್ತಪಡಿಸಿದೆ. ಪ್ರಸ್ತುತ ಯಂತ್ರಗಳು ಕೇವಲ 9 ರಿಂದ 11 ತಿಂಗಳ ಅವಧಿಯಲ್ಲಿಯೇ ತಮ್ಮ ಅಳತೆಯ ನಿಖರತೆಯನ್ನು ಕಳೆದುಕೊಳ್ಳುತ್ತಿರುವುದು ಇಲಾಖೆಯ ತಪಾಸಣೆಯಿಂದ ಸಾಬೀತಾಗಿದೆ. ವಾಸ್ತವ ಸ್ಥಿತಿ ಹೀಗಿರುವಾಗ, ಯಂತ್ರಗಳ ತಪಾಸಣಾ ಅವಧಿಯನ್ನು 1 ವರ್ಷದಿಂದ 2 ವರ್ಷಗಳಿಗೆ ವಿಸ್ತರಿಸುವ ಹಾಗೂ ತಪಾಸಣೆಗೆ ಖಾಸಗಿ ಕೇಂದ್ರಗಳಿಗೆ ಅನುಮತಿ ನೀಡುವ ಕೇಂದ್ರ ಸರ್ಕಾರದ ಅಧಿಸೂಚನೆಗಳನ್ನು ಜಾರಿಗೊಳಿಸಿದರೆ ಗ್ರಾಹಕರಿಗೆ ಮತ್ತಷ್ಟು ಅನ್ಯಾಯವಾಗಲಿದೆ. ಆದ್ದರಿಂದ, ಗ್ರಾಹಕರ ಹಿತದೃಷ್ಟಿಯಿಂದ ಈ ಅಧಿಸೂಚನೆಗಳನ್ನು ಕರ್ನಾಟಕದಲ್ಲಿ ಜಾರಿಗೊಳಿಸದಿರಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ರಿಜ್ವಾನ್ ಅರ್ಷದ್ ಅವರು ಪತ್ರದಲ್ಲಿ ಸ್ಪಷ್ಟಪಡಿಸಿದ್ದಾರೆ.
ರಾಜ್ಯ ಸರ್ಕಾರದ 5 ಪ್ರಮುಖ ಬೇಡಿಕೆಗಳು
ರಾಜ್ಯದ ಗ್ರಾಹಕರು ಮತ್ತು ವಾಹನ ಸವಾರರನ್ನು ಗುಣಮಟ್ಟದ ಇಂಧನ ವಂಚನೆ ಹಾಗೂ ಆರ್ಥಿಕ ನಷ್ಟದಿಂದ ರಕ್ಷಿಸಲು ಕೇಂದ್ರ ಪೆಟ್ರೋಲಿಯಂ ಸಚಿವಾಲಯವು ತಕ್ಷಣವೇ ಈ ಕೆಳಗಿನ 5 ಪ್ರಮುಖ ಕ್ರಮಗಳನ್ನು ಕೈಗೊಳ್ಳಬೇಕು ಎಂದು ರಾಜ್ಯ ಸರ್ಕಾರ ಆಗ್ರಹಿಸಿದೆ. ದೇಶದ ಹಾಗೂ ರಾಜ್ಯದ ಪ್ರತಿಯೊಂದು ಪೆಟ್ರೋಲ್ ಬಂಕ್ನಲ್ಲಿಯೂ ಮಾರಾಟ ಮಾಡಲಾಗುವ ಆಯಾ ಗ್ರೇಡ್ (ಸಾಮಾನ್ಯ ಹಾಗೂ ಪ್ರೀಮಿಯಂ) ಪೆಟ್ರೋಲ್ನಲ್ಲಿ ಎಷ್ಟು ಪ್ರಮಾಣದ ಎಥೆನಾಲ್ ಮಿಶ್ರಣವಿದೆ ಎಂಬ ಮಾಹಿತಿಯನ್ನು ಗ್ರಾಹಕರಿಗೆ ಸ್ಪಷ್ಟವಾಗಿ ಕಾಣುವಂತೆ ಕಡ್ಡಾಯವಾಗಿ ಪ್ರದರ್ಶಿಸಬೇಕು. ಪೆಟ್ರೋಲ್ ಖರೀದಿಸಿದ ನಂತರ ಗ್ರಾಹಕರಿಗೆ ನೀಡಲಾಗುವ ಪ್ರತಿಯೊಂದು ರಸೀದಿ ಅಥವಾ ಬಿಲ್ನಲ್ಲಿ ಅವರು ಖರೀದಿಸಿದ ಇಂಧನದಲ್ಲಿರುವ ಎಥೆನಾಲ್ ಶೇಕಡಾವಾರು ಪ್ರಮಾಣವನ್ನು ಕಡ್ಡಾಯವಾಗಿ ನಮೂದಿಸುವ ವ್ಯವಸ್ಥೆ ತರಬೇಕು. ಇದರಿಂದ ಗ್ರಾಹಕರಿಗೆ ತಾವು ಯಾವ ಗುಣಮಟ್ಟದ ಇಂಧನ ಪಡೆಯುತ್ತಿದ್ದೇವೆ ಎಂಬ ಸ್ಪಷ್ಟತೆ ಸಿಗಲಿದೆ. ದೇಶದಲ್ಲಿರುವ ಎಲ್ಲಾ ವಾಹನಗಳು ಸಂಪೂರ್ಣವಾಗಿ E20 ಇಂಧನಕ್ಕೆ ಹೊಂದಿಕೊಳ್ಳುವವರೆಗೆ ಅಥವಾ ಹಳೆಯ ವಾಹನಗಳು ಚಾಲ್ತಿಯಲ್ಲಿರುವವರೆಗೆ, E10 ಹಾಗೂ ಎಥೆನಾಲ್ ರಹಿತ ಶುದ್ಧ ಪೆಟ್ರೋಲ್ ಅನ್ನು ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ನಿರಂತರವಾಗಿ ಲಭ್ಯವಾಗುವಂತೆ ನೋಡಿಕೊಳ್ಳಬೇಕು.
ತೈಲ ಕಂಪನಿಗಳ ಸ್ವಂತ ಪ್ರಯೋಗಾಲಯಗಳ ವರದಿಗಳ ಮೇಲೆ ಮಾತ್ರ ಅವಲಂಬಿತವಾಗದೆ, ಪಾರದರ್ಶಕತೆಯನ್ನು ಕಾಯ್ದುಕೊಳ್ಳಲು ಎನ್ಎಬಿಎಲ್ ಮಾನ್ಯತೆ ಪಡೆದ ಸ್ವತಂತ್ರ ಪ್ರಯೋಗಾಲಯಗಳ ಮೂಲಕ ಪೆಟ್ರೋಲ್ ಬಂಕ್ಗಳ ಇಂಧನ ಮಾದರಿಗಳ ನಿಯಮಿತ ತಪಾಸಣಾ ವ್ಯವಸ್ಥೆಯನ್ನು ಜಾರಿಗೊಳಿಸಬೇಕು. ಸರ್ಕಾರ ನಿಗದಿಪಡಿಸಿದ ಮಿತಿಗಿಂತ ಹೆಚ್ಚಿನ ಪ್ರಮಾಣದ ಎಥೆನಾಲ್ ಮಿಶ್ರಿತ ಇಂಧನವನ್ನು ಪೂರೈಸಿದ್ದರಿಂದ ಎಂಜಿನ್ ಹಾಗೂ ಇತರ ಭಾಗಗಳಿಗೆ ಹಾನಿಯಾಗಿ ಆರ್ಥಿಕ ನಷ್ಟ ಅನುಭವಿಸಿದ ವಾಹನ ಮಾಲೀಕರಿಗೆ ಸೂಕ್ತ ಪರಿಹಾರವನ್ನು ಒದಗಿಸಲು ಪ್ರತ್ಯೇಕ ಪರಿಹಾರ ನಿಧಿಯನ್ನು ಸ್ಥಾಪಿಸಬೇಕು ಎಂದು ಆಗ್ರಹಿಸಿದ್ದಾರೆ.

