x

ಪೆಟ್ರೋಲ್ ಬಂಕ್ ಗಳಲ್ಲಿ ಭಾರಿ ಮೋಸ ಪತ್ತೆ: ಅಧಿಕಾರಿಗಳ ಪರಿಶೀಲನೆಯಲ್ಲಿ ತೈಲದ ಅಕ್ರಮ ಪತ್ತೆ

ಗ್ರಾಹಕರು ಇಂಧನ ಅಳತೆಯಲ್ಲಿನ ಯಾವುದೇ ಪ್ರಮಾಣದ ವ್ಯತ್ಯಾಸಗಳು ಅಥವಾ ಕಾನೂನು ಮಾಪನಶಾಸ್ತ್ರಕ್ಕೆ ಸಂಬಂಧಿಸಿದ ಇತರ ಯಾವುದೇ ದೂರುಗಳನ್ನು ನೇರವಾಗಿ ದಾಖಲಿಸಲು ಅನುಕೂಲವಾಗುವಂತೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ.


Click the Play button to hear this message in audio format

ಕರ್ನಾಟಕದ ಇತಿಹಾಸದಲ್ಲೇ ಮೊದಲ ಬಾರಿಗೆ ಕಾನೂನು ಮಾಪನಶಾಸ್ತ್ರ ಇಲಾಖೆಯ ಅಧಿಕಾರಿಗಳು ರಾಜ್ಯಾದ್ಯಂತ ಪೆಟ್ರೋಲ್ ಬಂಕ್‌ಗಳ ಮೇಲೆ ಬೃಹತ್ ಪ್ರಮಾಣದ ದಿಢೀರ್ ದಾಳಿ ನಡೆಸಿದ್ದಾರೆ. ಈ ತಪಾಸಣೆಯ ವೇಳೆ ಆಘಾತಕಾರಿ ಅಂಶಗಳು ಬೆಳಕಿಗೆ ಬಂದಿದ್ದು, ಪರಿಶೀಲನೆಗೊಳಗಾದ ಬಂಕ್‌ಗಳ ಪೈಕಿ ಶೇಕಡಾ 95ರಷ್ಟು ಪೆಟ್ರೋಲ್ ಪಂಪುಗಳಲ್ಲಿ ನಿಖರವಾದ ಅಳತೆಯಲ್ಲಿ ಇಂಧನ ವಿತರಣೆ ಆಗುತ್ತಿಲ್ಲ ಎಂಬುದು ಸಾಬೀತಾಗಿದೆ.

ಈ ಕುರಿತು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ರಿಜ್ವಾನ್ ಅರ್ಷದ್ ಅವರು 'ಫೆಡರಲ್ ಕರ್ನಾಟಕ'ಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ದಾಳಿಯ ಸಂಪೂರ್ಣ ವಿವರಗಳನ್ನು ಮತ್ತು ಸರ್ಕಾರದ ಮುಂದಿನ ಕಟ್ಟುನಿಟ್ಟಿನ ಕ್ರಮಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.

ಕಾರ್ಯಾಚರಣೆಯ ಸಂಪೂರ್ಣ ವಿವರ ಮತ್ತು ದಂಡದ ಬಿಸಿ

ರಾಜ್ಯದಲ್ಲಿ ಒಟ್ಟು 5946 ಪೆಟ್ರೋಲ್ ಬಂಕ್‌ಗಳು ಕಾರ್ಯನಿರ್ವಹಿಸುತ್ತಿವೆ. ಪೆಟ್ರೋಲ್ ಬಂಕ್‌ಗಳಲ್ಲಿನ ಇಂಧನ ವಿತರಣಾ ಘಟಕಗಳ ಮರುಸತ್ಯಾಪನೆಯನ್ನು ಕಟ್ಟುನಿಟ್ಟಾಗಿ ಕೈಗೊಳ್ಳುವಂತೆ ಸಚಿವರು ನೀಡಿದ ಆದೇಶದ ಮೇರೆಗೆ, ಕಳೆದ ಎಂಟು ದಿನಗಳಿಂದ ಎಲ್ಲಾ ಜಿಲ್ಲೆಗಳ ಪ್ರಮುಖ ಕಂಪನಿಗಳಿಗೆ ಸೇರಿದ 805 ಪೆಟ್ರೋಲ್ ಪಂಪುಗಳ ಮೇಲೆ ಅಧಿಕಾರಿಗಳು ನಿರಂತರ ತಪಾಸಣೆ ನಡೆಸಿದ್ದಾರೆ. ಈ ಪೈಕಿ ಬರೋಬ್ಬರಿ 768 ಬಂಕ್‌ಗಳಲ್ಲಿ ನಿಖರತೆಯ ಕೊರತೆ ಇರುವುದು ಪತ್ತೆಯಾಗಿದೆ. ಕೇಂದ್ರ ಸರ್ಕಾರದ ನಿಯಮದ ಪ್ರಕಾರ ಐದು ಲೀಟರ್ ಇಂಧನದಲ್ಲಿ ಕೇವಲ ಶೇ. 0.5ರಷ್ಟು ಮಾತ್ರ ವ್ಯತ್ಯಾಸ ಇರಲು ಅವಕಾಶವಿದೆ. ಸಣ್ಣಪುಟ್ಟ ವ್ಯತ್ಯಾಸವಿದ್ದರೆ ತಕ್ಷಣವೇ ಸರಿಪಡಿಸಿಕೊಳ್ಳುವಂತೆ ಎಚ್ಚರಿಕೆ ನೀಡಲಾಗಿದೆ. ಆದರೆ, 101 ಪೆಟ್ರೋಲ್ ಮತ್ತು ಡೀಸೆಲ್ ಪಂಪುಗಳಲ್ಲಿ ಅನುಮತಿಸಲಾದ ಮಿತಿಗಿಂತಲೂ ಅತಿ ಹೆಚ್ಚಿನ ಪ್ರಮಾಣದ ಲೋಪದೋಷಗಳು ಹಾಗೂ ಅಳತೆಯ ವ್ಯತ್ಯಾಸ ಕಂಡುಬಂದ ಹಿನ್ನೆಲೆಯಲ್ಲಿ, ಆ ಪಂಪುಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಮೊಕದ್ದಮೆ ದಾಖಲಿಸಿ ದಂಡ ವಿಧಿಸಲಾಗಿದೆ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.

ಕೇಂದ್ರ ಸರ್ಕಾರದ ನಿಯಮಗಳಿಗೆ ರಾಜ್ಯದ ವಿರೋಧ

ಇದೇ ವೇಳೆ ಸಚಿವ ರಿಜ್ವಾನ್ ಅರ್ಷದ್ ಅವರು ಕೇಂದ್ರ ಸರ್ಕಾರದ ಕೆಲವು ನೀತಿಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪೆಟ್ರೋಲ್ ಬಂಕ್‌ಗಳಲ್ಲಿ ಬಳಸಲಾಗುವ ಇಂಧನ ವಿತರಣಾ ಯಂತ್ರಗಳನ್ನು ಕನಿಷ್ಠ ವರ್ಷಕ್ಕೊಮ್ಮೆ ಕಡ್ಡಾಯವಾಗಿ ಮರುಸತ್ಯಾಪನೆ ಮಾಡಬೇಕೆಂಬ ನಿಯಮವಿತ್ತು. ಆದರೆ, ಕೇಂದ್ರ ಸರ್ಕಾರವು ಯಾವುದೇ ವೈಜ್ಞಾನಿಕ ವರದಿಯ ಆಧಾರವಿಲ್ಲದೆ ಈ ಅವಧಿಯನ್ನು ಎರಡು ವರ್ಷಕ್ಕೊಮ್ಮೆ ಮಾಡುವಂತೆ ವಿಸ್ತರಿಸಿದೆ. ಸರ್ಕಾರದ ಈ ಅವೈಜ್ಞಾನಿಕ ನಡೆಯನ್ನು ರಾಜ್ಯ ಸರ್ಕಾರ ಕಟುವಾಗಿ ವಿರೋಧಿಸುತ್ತದೆ ಎಂದಿದ್ದಾರೆ. ಅಲ್ಲದೆ, ಪೆಟ್ರೋಲ್ ಮತ್ತು ಡೀಸೆಲ್ ಪಂಪುಗಳ ಸತ್ಯಾಪನೆಯನ್ನು ಈವರೆಗೆ ಕಾನೂನು ಮಾಪನಶಾಸ್ತ್ರ ಇಲಾಖೆಯ ನುರಿತ ಅಧಿಕಾರಿಗಳೇ ಕೈಗೊಳ್ಳುತ್ತಿದ್ದರು. ಆದರೆ, ಈ ಪ್ರಕ್ರಿಯೆಯನ್ನು ಸಡಿಲಗೊಳಿಸಿ ಸಂಪೂರ್ಣವಾಗಿ ಖಾಸಗೀಕರಣ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದ್ದು, ಇದು ಗ್ರಾಹಕರಿಗೆ ಮಾಡುವ ಅನ್ಯಾಯವಾಗಿದೆ ಎಂದು ಅವರು ಕಿಡಿಕಾರಿದ್ದಾರೆ.

ಆನ್‌ಲೈನ್ ಡ್ಯಾಶ್‌ಬೋರ್ಡ್ ಮತ್ತು ಸಹಾಯವಾಣಿ

ಪೆಟ್ರೋಲ್ ಬಂಕ್‌ಗಳಲ್ಲಿ ನಡೆಯುವ ವಂಚನೆಗೆ ಕಡಿವಾಣ ಹಾಕಲು ಮತ್ತು ಪಾರದರ್ಶಕತೆ ಕಾಯ್ದುಕೊಳ್ಳಲು ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಶೀಘ್ರದಲ್ಲೇ ಕರ್ನಾಟಕದ ಪ್ರತಿಯೊಂದು ಪೆಟ್ರೋಲ್ ಪಂಪಿನ ಬಗ್ಗೆ ಸರ್ಕಾರದಿಂದ ಪ್ರಮಾಣೀಕರಿಸಲಾದ ಮಾಹಿತಿಯನ್ನು ಒದಗಿಸುವ ಆನ್‌ಲೈನ್ ಡ್ಯಾಶ್‌ಬೋರ್ಡ್ ಅನ್ನು ಪ್ರಾರಂಭಿಸಲಾಗುವುದು. ಇದರಿಂದ ಗ್ರಾಹಕರಿಗೆ ಅಗತ್ಯ ಹಾಗೂ ನಿಖರವಾದ ಮಾಹಿತಿ ಬೆರಳ ತುದಿಯಲ್ಲೇ ಲಭ್ಯವಾಗಲಿದೆ. ಇದರ ಜೊತೆಗೆ, ಗ್ರಾಹಕರು ಇಂಧನ ಅಳತೆಯಲ್ಲಿನ ಯಾವುದೇ ಪ್ರಮಾಣದ ವ್ಯತ್ಯಾಸಗಳು ಅಥವಾ ಕಾನೂನು ಮಾಪನಶಾಸ್ತ್ರಕ್ಕೆ ಸಂಬಂಧಿಸಿದ ಇತರ ಯಾವುದೇ ದೂರುಗಳನ್ನು ನೇರವಾಗಿ ದಾಖಲಿಸಲು ಅನುಕೂಲವಾಗುವಂತೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ದೂರುಗಳನ್ನು ದಾಖಲಿಸಲು ಟೋಲ್-ಫ್ರೀ ಸಹಾಯವಾಣಿ ಸಂಖ್ಯೆ 1800 599 1100 ಅನ್ನು ತೆರೆಯಲಾಗಿದ್ದು, ಗ್ರಾಹಕರು ಈ ಸಂಖ್ಯೆಗೆ ಕರೆ ಮಾಡಿ ದೂರು ನೀಡಬಹುದು ಅಥವಾ [email protected] ಎಂಬ ಇ-ಮೇಲ್ ವಿಳಾಸಕ್ಕೂ ತಮ್ಮ ದೂರುಗಳನ್ನು ಸಲ್ಲಿಸಬಹುದು ಎಂದು ಸಚಿವರು ಮಾಹಿತಿ ನೀಡಿದ್ದಾರೆ.

Read More
Next Story