
ಉದ್ಯಾನದ ಶೇ.5ರಷ್ಟು ಜಾಗ ಸಾರ್ವಜನಿಕ ಉದ್ದೇಶಕ್ಕೆ ಬಳಕೆ; ಸಂಪುಟದ ಸಮ್ಮತಿಗೆ ಹೆಚ್ಚಿದ ವಿರೋಧ
ಉದ್ಯಾನದ ಜಾಗವನ್ನು ಗುತ್ತಿಗೆ, ಮಾರಾಟ, ಉಡುಗೊರೆ, ವಿನಿಮಯ, ಅಡಮಾನ ಅಥವಾ ಇತರ ಕಾನೂನುಬದ್ಧ ವಿಧಾನಗಳ ಮೂಲಕ ವರ್ಗಾಯಿಸಲು ಮಸೂದೆಯಲ್ಲಿ ಹಾರಿಜಾಂಟಲ್ ಅವಕಾಶ ಕಲ್ಪಿಸಲಾಗಿದೆ.
ರಾಜ್ಯದಲ್ಲಿರುವ ಸರ್ಕಾರಿ ಉದ್ಯಾನಗಳ ಜಾಗವನ್ನು ವಿವಿಧ ಸಾರ್ವಜನಿಕ ಮತ್ತು ಅಭಿವೃದ್ಧಿ ಉದ್ದೇಶಗಳಿಗೆ ಬಳಸಿಕೊಳ್ಳಲು ಅನುಕೂಲವಾಗುವಂತೆ ಚಾಲ್ತಿಯಲ್ಲಿರುವ ಕಾಯ್ದೆಗೆ ತಿದ್ದುಪಡಿ ತರಲು ರಾಜ್ಯ ಸರ್ಕಾರ ಮುಂದಾಗಿದೆ.
ತೋಟಗಾರಿಕೆ ಇಲಾಖೆ ಸಿದ್ಧಪಡಿಸಿರುವ ‘ಕರ್ನಾಟಕ ಸರ್ಕಾರಿ ಉದ್ಯಾನಗಳ (ಸಂರಕ್ಷಣೆ) ಕಾಯ್ದೆ-1975’ಕ್ಕೆ ತಿದ್ದುಪಡಿ ತರುವ ಪ್ರಸ್ತಾವನೆಗೆ ರಾಜ್ಯ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದ್ದು, ಇದೇ ಅಧಿವೇಶನದಲ್ಲಿ ಮಸೂದೆ ಮಂಡನೆಯಾಗುವ ಸಾಧ್ಯತೆಯಿದೆ. ಆದರೆ, ಸರ್ಕಾರದ ಈ ಕ್ರಮಕ್ಕೆ ಸಾರ್ವಜನಿಕ ವಲಯದಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.
ತಿದ್ದುಪಡಿ ಮಸೂದೆ ಅಂಶಗಳೇನು?
ರಾಜ್ಯದ ಪ್ರತಿಯೊಂದು ಸರ್ಕಾರಿ ಉದ್ಯಾನದ ಒಟ್ಟು ವಿಸ್ತೀರ್ಣದ ಗರಿಷ್ಠ ಶೇ 5ರಷ್ಟು ಜಾಗವನ್ನು ಸಾರ್ವಜನಿಕ ಉಪಯೋಗಕ್ಕೆ ಬಳಸಲು ಅವಕಾಶ ನೀಡಲಾಗುತ್ತದೆ. ಅಂತಹ ಜಾಗವನ್ನು ಗುತ್ತಿಗೆ, ಮಾರಾಟ, ಉಡುಗೊರೆ, ವಿನಿಮಯ, ಅಡಮಾನ ಅಥವಾ ಇತರ ಕಾನೂನುಬದ್ಧ ವಿಧಾನಗಳ ಮೂಲಕ ವರ್ಗಾಯಿಸಲು ಮಸೂದೆಯಲ್ಲಿ ಹಾರಿಜಾಂಟಲ್ ಅವಕಾಶ (ಹೊಸ ಮಾರುಕಟ್ಟೆ ಅಥವಾ ವಿಭಿನ್ನ ಉದ್ಯಮ ಕ್ಷೇತ್ರಗಳಿಗೆ ವಿಸ್ತರಣೆ) ಕಲ್ಪಿಸಲಾಗಿದೆ.
ಸರ್ಕಾರದ ವಿವಿಧ ಇಲಾಖೆಗಳು, ಶಾಸನಬದ್ಧ ಪ್ರಾಧಿಕಾರಗಳು, ಸರ್ಕಾರಿ ಸಂಸ್ಥೆಗಳು ಹಾಗೂ ಸ್ಥಳೀಯ ಪ್ರಾಧಿಕಾರಗಳಿಗೆ ಮಾತ್ರ ತಮ್ಮ ಅಗತ್ಯಗಳಿಗೆ ಈ ಜಾಗ ಬಳಸಿಕೊಳ್ಳಲು ಅವಕಾಶ ಸಿಗಲಿದೆ. ಶೇ 5ರ ಮಿತಿಯು ಕೇವಲ ಹೊಸ ಹಸ್ತಾಂತರಕ್ಕೆ ಮಾತ್ರವಲ್ಲದೆ, ಈ ಹಿಂದೆ ಈಗಾಗಲೇ ಹಸ್ತಾಂತರಿಸಲಾದ ಭೂಮಿಗೂ ಅನ್ವಯಿಸಲಿದೆ. ಆದರೆ, ತೋಟಗಾರಿಕೆ ಇಲಾಖೆಯು ತನ್ನ ಆಡಳಿತಾತ್ಮಕ ಮತ್ತು ಸಾಮಾನ್ಯ ಅಭಿವೃದ್ಧಿ ಕಾರ್ಯಗಳಿಗೆ ಬಳಸುವ ಜಾಗಕ್ಕೆ ಈ ನಿಯಮ ಅನ್ವಯಿಸುವುದಿಲ್ಲ.
ಕಟ್ಟುನಿಟ್ಟಿನ ಮೌಲ್ಯಮಾಪನ ವ್ಯವಸ್ಥೆ
ಉದ್ಯಾನಗಳ ಜಾಗವನ್ನು ಸುಲಭವಾಗಿ ಹಸ್ತಾಂತರಿಸುವ ಪರಿಪಾಠವನ್ನು ತಡೆಯಲು ಮಸೂದೆಯಲ್ಲಿ ಕಟ್ಟುನಿಟ್ಟಿನ ನಿಯಮಗಳನ್ನೂ ರೂಪಿಸಲಾಗಿದೆ.
ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ನೇತೃತ್ವದ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ವಿಷಯ ತಜ್ಞರನ್ನೊಳಗೊಂಡ ಅಧಿಕೃತ ಮೌಲ್ಯಮಾಪನ ವ್ಯವಸ್ಥೆ ರೂಪಿಸಲಾಗುತ್ತದೆ. ಈ ಸಮಿತಿಯು ಭೂ ಬಳಕೆಯ ಅಗತ್ಯ ಹಾಗೂ ಪರಿಸರದ ಮೇಲಾಗುವ ಪರಿಣಾಮವನ್ನು ಸಮಗ್ರವಾಗಿ ಅಧ್ಯಯನ ಮಾಡಿದ ನಂತರವೇ ಸರ್ಕಾರಕ್ಕೆ ಶಿಫಾರಸು ಮಾಡಲಿದೆ.
ತೋಟಗಾರಿಕಾ ಯೋಜನೆಗಳಾದ ಕೊಯ್ಲಿನ ನಂತರದ ಸಂಸ್ಕರಣಾ ಕೇಂದ್ರ, ಕೋಲ್ಡ್ ಸ್ಟೋರೇಜ್ ಹಾಗೂ ಕೃಷಿ ಆಧಾರಿತ ಕೈಗಾರಿಕೆಗಳಿಗೆ ಜಾಗ ನೀಡಬೇಕಾದರೆ ಅತ್ಯಗತ್ಯ ಹಾಗೂ ಸಾರ್ವಜನಿಕ ಹಿತಾಸಕ್ತಿಯಿಂದ ಕೂಡಿರುವುದನ್ನು ಸಮರ್ಥಿಸುವ ದಾಖಲೆಗಳನ್ನು ಒದಗಿಸಬೇಕು.
ಸಾರ್ವಜನಿಕರ ತೀವ್ರ ಆಕ್ರೋಶ
ಉದ್ಯಾನದ ಜಾಗವನ್ನು ಸಾರ್ವಜನಿಕ ಉದ್ದೇಶಕ್ಕೆ ಬಳಸುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ನಾಗರಿಕ ಸಂಘಟನೆಗಳು ಹಾಗೂ ಪರಿಸರ ಪ್ರೇಮಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ನಗರಗಳಲ್ಲಿ ಹಸಿರು ಪ್ರದೇಶ ಕಡಿಮೆಯಾಗಿದೆ. ಈಗ ಉದ್ಯಾನಗಳ ತಿದ್ದುಪಡಿ ಕಾಯ್ದೆಯಿಂದ ಈಗಿರುವ ಉದ್ಯಾನಗಳು ಕೂಡ ವಾಣಿಜ್ಯೀಕರಣವಾಗುವ ಅಪಾಯವಿದೆ. ವಾಯುವಿಹಾರ, ಮಕ್ಕಳ ಆಟ ಮತ್ತು ಹಿರಿಯರ ವ್ಯಾಯಾಮಕ್ಕೆ ಮೀಸಲಾದ ಜಾಗವು ಅಭಿವೃದ್ಧಿ ಹೆಸರಿನಲ್ಲಿ ಕಬಳಿಕೆಯಾಗಬಹುದು. ಇಂದು ಶೇ 5ರಷ್ಟು ಜಾಗದ ಬಳಕೆಗೆ ಅನುಮತಿ ಸಿಕ್ಕರೆ ಮುಂದಿನ ದಿನಗಳಲ್ಲಿ ಅದರ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇರಲಿದೆ ಎಂದು ಆತಂಕ ಎದುರಾಗಿದೆ.
ಸರ್ಕಾರದ ಸಮರ್ಥನೆ ಏನು?
ಉದ್ಯಾನದ ಶೇ 5ರಷ್ಟು ಜಾಗವನ್ನು ಕಟ್ಟುನಿಟ್ಟಿನ ಮಿತಿಯೊಳಗೆ ಬಳಸಿದರೆ ಉಳಿದ ಶೇ 95ರಷ್ಟು ಪರಿಸರವನ್ನು ಸಂರಕ್ಷಿಸಬಹುದಾಗಿದೆ. ಹಿರಿಯ ಅಧಿಕಾರಿಗಳು ಹಾಗೂ ತಜ್ಞರ ಮೌಲ್ಯಮಾಪನದ ನಂತರವೇ ಅತ್ಯಗತ್ಯ ಸಾರ್ವಜನಿಕ ಯೋಜನೆಗಳಿಗೆ ಅನುಮತಿ ನೀಡುವುದರಿಂದ ದುರ್ಬಳಕೆಗೆ ಅವಕಾಶ ಇರುವುದಿಲ್ಲ ಎಂದು ಸರ್ಕಾರ ಹೇಳುತ್ತಿದೆ.

