x

ಉದ್ಯಾನವನಗಳ ಶೇ.5ರಷ್ಟು ಭೂಮಿ ಬಳಕೆ: ಯಲ್ಲಪ್ಪ ರೆಡ್ಡಿ ತೀವ್ರ ವಿರೋಧ

ಶೇಕಡಾ 5ರಷ್ಟು ಉದ್ಯಾನವನದ ಭೂಮಿ ಪರಭಾರೆ ಮಾಡುವ ಸರ್ಕಾರದ ನಿರ್ಧಾರದ ವಿರುದ್ಧ ಪರಿಸರ ತಜ್ಞ ಡಾ.ಎ.ಎನ್. ಯಲ್ಲಪ್ಪ ರೆಡ್ಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.‌ ಸರ್ಕಾರ ನಿರ್ಧಾರ ವಾಪಸು ಪಡೆದುಕೊಳ್ಳಬೇಕೆಂದು ಆಗ್ರಹಿಸಿದ್ದಾರೆ.


Click the Play button to hear this message in audio format

ರಾಜ್ಯದ ಸರ್ಕಾರಿ ಉದ್ಯಾನವನಗಳ ಶೇ.5ರಷ್ಟು ಭೂಮಿಯನ್ನು ರಸ್ತೆ, ಮೂಲಸೌಕರ್ಯ ಹಾಗೂ ಇತರ ಯೋಜನೆಗಳಿಗೆ ಬಳಸಲು ಅವಕಾಶ ನೀಡುವ ಸರ್ಕಾರದ ನಿರ್ಧಾರಕ್ಕೆ ಪರಿಸರ ತಜ್ಞ ಹಾಗೂ ಅರಣ್ಯ ಇಲಾಖೆಯ ಮಾಜಿ ಕಾರ್ಯದರ್ಶಿ ಡಾ. ಎ.ಎನ್. ಯಲ್ಲಪ್ಪ ರೆಡ್ಡಿ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಉದ್ಯಾನವನಗಳ ಭೂಮಿಯನ್ನು ಇತರ ಉದ್ದೇಶಗಳಿಗೆ ಬಳಸಲು ಅವಕಾಶ ಕಲ್ಪಿಸುವುದು ಪರಿಸರ ಮತ್ತು ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾಗಿದೆ ಎಂದು ಅವರು ಹೇಳಿದ್ದಾರೆ.

ದ ಫೆಡರಲ್ ಕರ್ನಾಟಕ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅವರು, ‘ಕರ್ನಾಟಕ ಸರ್ಕಾರಿ ಉದ್ಯಾನವನಗಳ (ಸಂರಕ್ಷಣೆ) ಕಾಯ್ದೆ’ಗೆ ತಿದ್ದುಪಡಿ ತಂದು ಉದ್ಯಾನವನಗಳ ಜಾಗವನ್ನು ವಿವಿಧ ಯೋಜನೆಗಳಿಗೆ ಬಳಸಲು ಅವಕಾಶ ನೀಡಿರುವ ಕ್ರಮವನ್ನು ಪ್ರಶ್ನಿಸಿದರು. ಈ ಸಂಬಂಧ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿರುವುದಾಗಿಯೂ ತಿಳಿಸಿದರು.

ಪ್ರಾಣವಾಯುವನ್ನೇ ಕಸಿದುಕೊಳ್ಳುವ ಪ್ರಯತ್ನ ಎಂದ ಯಲ್ಲಪ್ಪ ರೆಡ್ಡಿ

ಮನುಷ್ಯನ ಬದುಕಿಗೆ ಪ್ರಾಣವಾಯು ಮತ್ತು ಜೀವಜಲ ಅತ್ಯಗತ್ಯ. ನಗರಗಳಲ್ಲಿ ಮರಗಳು, ಹಸಿರು ಪ್ರದೇಶಗಳು ಮತ್ತು ಉದ್ಯಾನವನಗಳು ಈ ಅಗತ್ಯಗಳನ್ನು ಉಳಿಸಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಇಂತಹ ಸಂದರ್ಭದಲ್ಲಿ ಉದ್ಯಾನವನಗಳ ಭೂಮಿಯನ್ನು ಕಡಿತಗೊಳಿಸುವ ಕ್ರಮ ಕೈಗೊಳ್ಳುವುದು ಸರಿಯಲ್ಲ ಎಂದು ಯಲ್ಲಪ್ಪ ರೆಡ್ಡಿ ಅಭಿಪ್ರಾಯಪಟ್ಟರು.

ಸುಮಾರು 900 ಉದ್ಯಾನವನಗಳಿದ್ದು, ಅವುಗಳಲ್ಲಿನ ಶೇ.5ರಷ್ಟು ಭೂಮಿಯನ್ನು ಇತರ ಉದ್ದೇಶಗಳಿಗೆ ಬಳಸಲು ಅವಕಾಶ ನೀಡಿದರೆ ಅದರ ಹಿಂದಿನ ಉದ್ದೇಶವೇನು ಎಂಬ ಪ್ರಶ್ನೆಯನ್ನು ಅವರು ಎತ್ತಿದರು. ಸಾರ್ವಜನಿಕರ ಹಸಿರು ಪ್ರದೇಶಗಳನ್ನು ಕಡಿತಗೊಳಿಸುವ ಬದಲು ಅವುಗಳನ್ನು ಮತ್ತಷ್ಟು ಸಂರಕ್ಷಿಸುವುದು ಸರ್ಕಾರದ ಆದ್ಯತೆಯಾಗಬೇಕು ಎಂದು ಹೇಳಿದರು.

ಅಭಿವೃದ್ಧಿ ಎಂದರೆ ರಸ್ತೆ, ವಾಣಿಜ್ಯ ಕಟ್ಟಡಗಳು ಅಥವಾ ಇತರ ನಿರ್ಮಾಣ ಕಾಮಗಾರಿಗಳಿಗೆ ಮಾತ್ರ ಸೀಮಿತವಾಗಬಾರದು. ಜನರ ಆರೋಗ್ಯ, ಪರಿಸರ ಸುರಕ್ಷತೆ ಮತ್ತು ಬದುಕಿನ ಗುಣಮಟ್ಟಕ್ಕೂ ಸಮಾನ ಆದ್ಯತೆ ನೀಡಬೇಕು ಎಂದು ಅವರು ಹೇಳಿದರು.

ಬೆಂಗಳೂರಿನ ಹಸಿರು ನಾಶದ ಬಗ್ಗೆ ಆತಂಕ

ಬೆಂಗಳೂರಿನಲ್ಲಿ ಈಗಾಗಲೇ ದೊಡ್ಡ ಪ್ರಮಾಣದಲ್ಲಿ ಹಸಿರು ಪ್ರದೇಶ ನಾಶವಾಗಿದೆ. ನಗರದ ವಿಸ್ತರಣೆ ಮತ್ತು ಅಭಿವೃದ್ಧಿ ಕಾಮಗಾರಿಗಳ ನಡುವೆ ಮರಗಳು ಹಾಗೂ ತೆರೆದ ಪ್ರದೇಶಗಳ ಪ್ರಮಾಣ ಕಡಿಮೆಯಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಯಲ್ಲಪ್ಪ ರೆಡ್ಡಿ ಹೇಳಿದರು.

ವಾಯುಮಾಲಿನ್ಯದಿಂದ ನಗರದಲ್ಲಿ ಶ್ವಾಸಕೋಶ ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಗಳು ಹೆಚ್ಚುತ್ತಿರುವ ಸಂದರ್ಭದಲ್ಲಿ ಉದ್ಯಾನವನಗಳ ಭೂಮಿಯನ್ನೂ ಇತರ ಉದ್ದೇಶಗಳಿಗೆ ಬಳಸಲು ಅವಕಾಶ ನೀಡುವುದು ಯಾವ ರೀತಿಯ ಅಭಿವೃದ್ಧಿ ಎಂಬ ಪ್ರಶ್ನೆಯನ್ನು ಅವರು ಮುಂದಿಟ್ಟರು.

ಉದ್ಯಾನವನಗಳ ಶೇ.5ರಷ್ಟು ಜಾಗವನ್ನು ಬಳಸುವ ಕುರಿತು ಸರ್ಕಾರ ತೆಗೆದುಕೊಂಡಿರುವ ನಿರ್ಧಾರ ತನಗೆ ತೀವ್ರ ನೋವುಂಟು ಮಾಡಿದೆ ಎಂದು ಹೇಳಿದ ಅವರು, ಪ್ರಕೃತಿಯ ಮೇಲೆ ನಿರಂತರ ಒತ್ತಡ ಹೇರಿದರೆ ಅದರ ಪರಿಣಾಮವನ್ನು ಸಮಾಜವೇ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ತಜ್ಞರು ಮತ್ತು ಸಾರ್ವಜನಿಕರ ಅಭಿಪ್ರಾಯ ಪಡೆಯಬೇಕಿತ್ತು

ಇಂತಹ ಮಹತ್ವದ ಕಾನೂನು ತಿದ್ದುಪಡಿ ಮಾಡುವ ಮುನ್ನ ಪರಿಸರ ತಜ್ಞರು, ಭಾರತೀಯ ವಿಜ್ಞಾನ ಸಂಸ್ಥೆ ಸೇರಿದಂತೆ ಸಂಬಂಧಿತ ಸಂಸ್ಥೆಗಳು ಹಾಗೂ ಸಾರ್ವಜನಿಕರ ಅಭಿಪ್ರಾಯವನ್ನು ಸರ್ಕಾರ ಪಡೆಯಬೇಕಿತ್ತು ಎಂದು ಯಲ್ಲಪ್ಪ ರೆಡ್ಡಿ ಹೇಳಿದರು.

ಯಾವುದೇ ವ್ಯಾಪಕ ಸಮಾಲೋಚನೆ ನಡೆಸದೆ ಕಾಯ್ದೆಗೆ ತಿದ್ದುಪಡಿ ತರುವುದು ಸರಿಯಾದ ಕ್ರಮವಲ್ಲ. ಪರಿಸರ ಮತ್ತು ನಗರಾಭಿವೃದ್ಧಿಗೆ ಸಂಬಂಧಿಸಿದ ನಿರ್ಧಾರಗಳನ್ನು ಜನರ ಅಭಿಪ್ರಾಯ ಮತ್ತು ವೈಜ್ಞಾನಿಕ ಅಧ್ಯಯನದ ಆಧಾರದ ಮೇಲೆ ತೆಗೆದುಕೊಳ್ಳಬೇಕು ಎಂದು ಅವರು ಪ್ರತಿಪಾದಿಸಿದರು.

ಈ ಕುರಿತು ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿರುವುದಾಗಿ ತಿಳಿಸಿದ ಅವರು, ಜನರಿಗೆ ಅನಾನುಕೂಲವಾಗುವ ಮತ್ತು ಬೆಂಗಳೂರಿನ ಪರಿಸರದ ಮೇಲೆ ಪ್ರತಿಕೂಲ ಪರಿಣಾಮ ಬೀರುವಂತಹ ಕ್ರಮಗಳನ್ನು ತಡೆಯುವ ಹೊಣೆಗಾರಿಕೆ ಅಧಿಕಾರಿಗಳ ಮೇಲೂ ಇದೆ ಎಂದು ಹೇಳಿದರು.

ಅಧಿಕಾರಿಗಳು ತಮ್ಮ ಅಭಿಪ್ರಾಯ ದಾಖಲಿಸಬೇಕು

ಸರ್ಕಾರ ಅಥವಾ ಸಚಿವರು ಯಾವುದೇ ಕಾನೂನು ಅಥವಾ ಯೋಜನೆಗೆ ಮುಂದಾದಾಗ ಅದರ ಸಾಧಕ-ಬಾಧಕಗಳ ಬಗ್ಗೆ ಅಧಿಕಾರಿಗಳು ಸ್ಪಷ್ಟ ಅಭಿಪ್ರಾಯ ದಾಖಲಿಸಬೇಕು ಎಂದು ಯಲ್ಲಪ್ಪ ರೆಡ್ಡಿ ಆಗ್ರಹಿಸಿದರು.

ಜನಪ್ರತಿನಿಧಿಗಳು ಚುನಾಯಿತ ಅವಧಿಗೆ ಅಧಿಕಾರದಲ್ಲಿರುತ್ತಾರೆ. ಆದರೆ ಆಡಳಿತ ವ್ಯವಸ್ಥೆಯಲ್ಲಿರುವ ಅಧಿಕಾರಿಗಳು ದೀರ್ಘಕಾಲ ಸಾರ್ವಜನಿಕ ಸೇವೆಯಲ್ಲಿ ಕಾರ್ಯನಿರ್ವಹಿಸುತ್ತಾರೆ. ಆದ್ದರಿಂದ ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾದ ಅಥವಾ ಪರಿಸರಕ್ಕೆ ಹಾನಿ ಉಂಟುಮಾಡುವ ಕ್ರಮಗಳ ಬಗ್ಗೆ ತಮ್ಮ ವೃತ್ತಿಪರ ಅಭಿಪ್ರಾಯವನ್ನು ಕಡತದಲ್ಲಿ ದಾಖಲಿಸುವ ಹೊಣೆಗಾರಿಕೆ ಅವರಿಗಿದೆ ಎಂದು ಹೇಳಿದರು.

ಉದ್ಯಾನವನಗಳು ಸಾರ್ವಜನಿಕರ ಆಸ್ತಿ

ಉದ್ಯಾನವನಗಳು ಯಾವುದೇ ವ್ಯಕ್ತಿ ಅಥವಾ ರಾಜಕೀಯ ನಾಯಕರ ವೈಯಕ್ತಿಕ ಆಸ್ತಿಯಲ್ಲ. ಅವು ಸಾರ್ವಜನಿಕರ ಆಸ್ತಿ ಎಂದು ಯಲ್ಲಪ್ಪ ರೆಡ್ಡಿ ಹೇಳಿದರು. ಸಾರ್ವಜನಿಕರ ಬಳಕೆ ಮತ್ತು ಪರಿಸರ ಸಂರಕ್ಷಣೆಗಾಗಿ ಮೀಸಲಿರುವ ಜಾಗವನ್ನು ಬೇರೆ ಉದ್ದೇಶಗಳಿಗೆ ಬಳಸುವ ನಿರ್ಧಾರವನ್ನು ಮರುಪರಿಶೀಲಿಸಬೇಕು ಎಂದು ಆಗ್ರಹಿಸಿದರು.

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಥವಾ ಕಂದಾಯ ಸಚಿವ ಕೃಷ್ಣ ಬೈರೇಗೌಡ ಸೇರಿದಂತೆ ಯಾರೊಬ್ಬರ ವೈಯಕ್ತಿಕ ಆಸ್ತಿಯೂ ಉದ್ಯಾನವನಗಳಲ್ಲ. ಹೀಗಾಗಿ ಸಾರ್ವಜನಿಕರ ಆಸ್ತಿಯ ಸಂರಕ್ಷಣೆಗೆ ಸರ್ಕಾರ ಆದ್ಯತೆ ನೀಡಬೇಕು ಎಂದು ಹೇಳಿದರು.

ಕೃಷ್ಣ ಬೈರೇಗೌಡ ಅವರೂ ಇಂತಹ ವಿಧೇಯಕ ಅಥವಾ ತಿದ್ದುಪಡಿಯ ಬಗ್ಗೆ ಪ್ರಶ್ನಿಸಬೇಕಿತ್ತು ಎಂದು ಯಲ್ಲಪ್ಪ ರೆಡ್ಡಿ ಅಭಿಪ್ರಾಯಪಟ್ಟರು.

ಜನರು ಎಚ್ಚೆತ್ತುಕೊಳ್ಳಬೇಕು

ಉದ್ಯಾನವನಗಳ ಸಂರಕ್ಷಣೆಗೆ ಸಾರ್ವಜನಿಕರು ಮುಂದೆ ಬರಬೇಕು ಎಂದು ಯಲ್ಲಪ್ಪ ರೆಡ್ಡಿ ಕರೆ ನೀಡಿದರು. ಆಯಾ ಉದ್ಯಾನವನಗಳ ಸುತ್ತಮುತ್ತ ವಾಸಿಸುವ ಜನರು, ಮಕ್ಕಳು ಮತ್ತು ಸ್ಥಳೀಯ ಸಮುದಾಯಗಳು ಹಸಿರು ಪ್ರದೇಶ ಉಳಿಸುವ ಕುರಿತು ಜಾಗೃತಿ ಮೂಡಿಸಬೇಕು ಎಂದು ಹೇಳಿದರು.

ಮರಗಳನ್ನು ಕಡಿಯುವುದು ಮತ್ತು ಹಸಿರು ಪ್ರದೇಶಗಳನ್ನು ನಾಶಪಡಿಸುವುದರ ಪರಿಣಾಮವನ್ನು ಮುಂದಿನ ಪೀಳಿಗೆಯೂ ಎದುರಿಸಬೇಕಾಗುತ್ತದೆ. ಆದ್ದರಿಂದ ಅಭಿವೃದ್ಧಿಯ ಹೆಸರಿನಲ್ಲಿ ಪ್ರಕೃತಿಯೊಂದಿಗೆ ಆಟವಾಡಬಾರದು ಎಂದು ಎಚ್ಚರಿಸಿದರು.

Read More
Next Story