ಇವಿಎಂಗೆ ವಿದಾಯ| ಕರ್ನಾಟಕ ಮತಪತ್ರ ಮಸೂದೆಗೆ ರಾಜ್ಯಪಾಲರ ಸಮ್ಮತಿ
x

ಇವಿಎಂಗೆ ವಿದಾಯ| ಕರ್ನಾಟಕ ಮತಪತ್ರ ಮಸೂದೆಗೆ ರಾಜ್ಯಪಾಲರ ಸಮ್ಮತಿ

ಇವಿಎಂ ಬಳಕೆಗಿಂತ ಮತಪತ್ರದ ಬಳಕೆಯಲ್ಲಿ ಮತದಾರರ ರಹಸ್ಯ, ಮತದಾನದ ಪಾವಿತ್ರ್ಯವನ್ನು ಹೆಚ್ಚು ಪರಿಣಾಮಕಾರಿಯಾಗಿ ಮತ್ತು ಅಕ್ರಮಗಳಿಲ್ಲದೆ ಪಾರದರ್ಶಕವಾಗಿ ನಡೆಸಬಹುದು ಎಂಬುದು ಸರ್ಕಾರದ ವಾದವಾಗಿದೆ.


Click the Play button to hear this message in audio format

ಕೇಂದ್ರ ಸರ್ಕಾರದ ವಿರುದ್ಧ ವೋಟ್‌ ಚೋರಿ ಆರೋಪ ಮಾಡಿ ವಿದ್ಯುನ್ಮಾನ ಮತಯಂತ್ರಗಳ ಬದಲು ಬ್ಯಾಲೆಟ್‌ ಪೇಪರ್‌ ಬಳಸುವ ಕರ್ನಾಟಕ ಸರ್ಕಾರದ ನಿರ್ಧಾರಕ್ಕೆ ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್‌ ಅವರು ಒಪ್ಪಿಗೆ ಮುದ್ರೆ ಒತ್ತಿದ್ದಾರೆ. ಕರ್ನಾಟಕ ಸರ್ಕಾರ ಮಂಡನೆ ಮಾಡಿದ್ದ ಮಹತ್ವದ ʼಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ತಿದ್ದುಪಡಿ) ವಿಧೇಯಕ’ಕ್ಕೆ ರಾಜ್ಯಪಾಲರು ಅಂಕಿತ ಹಾಕಿದ್ದು, ಕಾಯ್ದೆ ಜಾರಿಗೆ ಬಂದಿದೆ.

ವಿದ್ಯುನ್ಮಾನ ಮತಯಂತ್ರಗಳ ವಿಶ್ವಾಸಾರ್ಹತೆ ಪ್ರಶ್ನಿಸಿದ್ದ ಕಾಂಗ್ರೆಸ್‌ ನೇತೃತ್ವದ ಸರ್ಕಾರಕ್ಕೆ ಇದರಿಂದ ಜಯ ಸಿಕ್ಕಂತಾಗಿದೆ. ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರು ಚುನಾವಣಾ ಆಯೋಗದ ವಿರುದ್ಧ ವೋಟ್‌ ಚೋರಿ ಆರೋಪ ಮಾಡಿದ್ದರು. ಕರ್ನಾಟಕದ ಮಹಾದೇವಪುರ, ಕಲಬುರಗಿಯ ಆಳಂದದಲ್ಲಿ ವೋಟ್‌ ಚೋರಿ ನಡೆದಿರುವ ಬಗ್ಗೆ ದಾಖಲೆ ಬಿಡುಗಡೆ ಮಾಡಿದ್ದರು. ಇದು ರಾಷ್ಟ್ರವ್ಯಾಪಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಇದರ ಬೆನ್ನಲ್ಲೇ ಕರ್ನಾಟಕ ಸರ್ಕಾರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಬ್ಯಾಲೆಟ್‌ ಪೇಪರ್‌ ಬಳಸಲು ತೀರ್ಮಾನಿಸಿ, ವಿಧೇಯಕ ತಂದಿತ್ತು.

ರಾಜ್ಯ ಸರ್ಕಾರವು ತಿದ್ದುಪಡಿ ಮಸೂದೆಯನ್ನು ವಿಧಾನಮಂಡಲ ಅಧಿವೇಶನದಲ್ಲಿ ಮಂಡಿಸಿದಾಗ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ತೀವ್ರ ವಾಕ್ಸಮರ ನಡೆದಿತ್ತು. ಪ್ರತಿಪಕ್ಷಗಳು ಇವಿಎಂ ಬಳಕೆ ಪರವಾಗಿ ವಾದಿಸಿದರೆ, ಆಡಳಿತ ಪಕ್ಷವು ಚುನಾವಣಾ ಪಾರದರ್ಶಕತೆ ನಿಟ್ಟಿನಲ್ಲಿ ಮತಪತ್ರದ ಪರ ನಿಂತಿತ್ತು. ವಿಧಾನಮಂಡಲದಲ್ಲಿ ಮಸೂದೆಗೆ ಅನುಮೋದನೆ ದೊರೆತ ಬಳಿಕ ಈ ವಿಧೇಯಕವನ್ನು ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಲಾಗಿತ್ತು. ರಾಜ್ಯ ಸರ್ಕಾರ ಕಳುಹಿಸಿಕೊಟ್ಟಿದ್ದ 11 ಮಸೂದೆಗಳಲ್ಲಿ 10 ಕ್ಕೆ ಅಂಕಿತ ಹಾಕಿ, ಮತಪತ್ರ ಬಳಕೆಯ ಮಸೂದೆಯನ್ನು ತಡೆ ಹಿಡಿದಿದ್ದರು. ರಾಜ್ಯಪಾಲರು ಈ ಬಗ್ಗೆ ಕೆಲವು ಸ್ಪಷ್ಟನೆಗಳನ್ನು ಕೋರಿದ್ದರಿಂದ ವಿಧೇಯಕಕ್ಕೆ ಅಂಕಿತ ಬಿದ್ದಿರಲಿಲ್ಲ. ರಾಜ್ಯ ಸರ್ಕಾರ ನೀಡಿದ ಸ್ಪಷ್ಟನೆಗಳನ್ನು ಸುದೀರ್ಘವಾಗಿ ಪರಿಶೀಲಿಸಿದ ಬಳಿಕ ರಾಜ್ಯಪಾಲರು ಅಂಕಿತ ಹಾಕಿದ್ದು, ಈ ಸಂಬಂಧ ರಾಜ್ಯ ಸರ್ಕಾರ ಗೆಜೆಟ್‌ ಅಧಿಸೂಚನೆ ಹೊರಡಿಸಿದೆ. ಆ ಮೂಲಕ ಮಸೂದೆಯೂ ಕಾನೂನಾಗಿ ಜಾರಿಗೊಂಡಿದೆ.

ಬದಲಾವಣೆಯ ಪ್ರಮುಖ ಉದ್ದೇಶಗಳು

ಈ ಹೊಸ ಕಾಯ್ದೆಯ ಹಿಂದೆ ಸರ್ಕಾರವು ಮೂರು ಪ್ರಮುಖ ಉದ್ದೇಶಗಳನ್ನು ಹೊಂದಿದೆ. ಸಂವಿಧಾನದ 326ನೇ ವಿಧಿಯಡಿ ಪ್ರತಿ ಪ್ರಜೆಗೆ ಮತದಾನದ ಹಕ್ಕಿದೆ. ಈ ಪ್ರಕ್ರಿಯೆಯು ಯಾವುದೇ ಅಕ್ರಮಗಳಿಲ್ಲದೆ ಪಾರದರ್ಶಕವಾಗಿ ನಡೆಯುವುದನ್ನು ಖಚಿತಪಡಿಸಿಕೊಳ್ಳುವುದು ಸರ್ಕಾರದ ಮೊದಲ ಆದ್ಯತೆ.

ಸ್ಥಳೀಯ ಮಟ್ಟದ ಚುನಾವಣೆಗಳಲ್ಲಿ ಮತದಾರರ ಮೇಲೆ ಸ್ಥಳೀಯರು ಹಾಗೂ ಬೆದರಿಕೆ ಹಾಕುವವರ ಪ್ರಭಾವ ಇರುತ್ತದೆ. ಇವಿಎಂ ಬಳಕೆಗಿಂತ ಮತಪತ್ರದ ಬಳಕೆಯಲ್ಲಿ ಮತದಾರರ ರಹಸ್ಯ ಮತದಾನದ ಪಾವಿತ್ರ್ಯವನ್ನು ಹೆಚ್ಚು ಪರಿಣಾಮಕಾರಿಯಾಗಿ ಕಾಪಾಡಬಹುದು ಎಂಬುದು ಸರ್ಕಾರದ ವಾದವಾಗಿದೆ. ಇತ್ತೀಚಿನ ವರ್ಷಗಳಲ್ಲಿ ಇವಿಎಂ ಕಾರ್ಯನಿರ್ವಹಣೆ ಬಗ್ಗೆ ತಾಂತ್ರಿಕವಾಗಿ ಮತ್ತು ರಾಜಕೀಯವಾಗಿ ಹಲವಾರು ಅನುಮಾನಗಳು ಹುಟ್ಟಿಕೊಂಡಿದ್ದವು. ಇವಿಎಂಗಳ ಬಗ್ಗೆ ಜನಸಾಮಾನ್ಯರಲ್ಲಿರುವ ಗೊಂದಲಗಳನ್ನು ನಿವಾರಿಸಿ, ಚುನಾವಣಾ ಪ್ರಕ್ರಿಯೆ ಮೇಲೆ ನಂಬಿಕೆ ಮೂಡಿಸಲು ಸದೃಢ ರಹಸ್ಯ ಮತದಾನ ಪದ್ಧತಿ ಅನಿವಾರ್ಯ ಎಂದು ತಿದ್ದುಪಡಿ ಮಸೂದೆಯಲ್ಲಿ ಪ್ರಸ್ತಾಪಿಸಲಾಗಿದೆ.

ಮತದಾರರ ಪಟ್ಟಿ ಸಿದ್ಧಪಡಿಸುವಲ್ಲಿ ಆಡಳಿತಾತ್ಮಕ ಬದಲಾವಣೆ

ಈ ಕಾಯ್ದೆಯು ಚುನಾವಣಾ ಪ್ರಕ್ರಿಯೆಯಲ್ಲಿ ಮತ್ತೊಂದು ಪ್ರಮುಖ ಆಡಳಿತಾತ್ಮಕ ಬದಲಾವಣೆಯನ್ನು ತಂದಿದೆ. ಇದುವರೆಗೆ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಿಗೆ ಕೇಂದ್ರ ಚುನಾವಣಾ ಆಯೋಗ ಸಿದ್ಧಪಡಿಸಿದ ವಿಧಾನಸಭೆಯ ಮತದಾರರ ಪಟ್ಟಿಯನ್ನೇ ಆಧಾರವಾಗಿ ಬಳಸಲಾಗುತ್ತಿತ್ತು. ಇನ್ನು ಮುಂದೆ, ಕೇಂದ್ರ ಚುನಾವಣಾ ಆಯೋಗದ ಪಟ್ಟಿಯನ್ನು ಅಳವಡಿಸಿಕೊಳ್ಳುವ ಪದ್ಧತಿ ಕೈಬಿಡಲಾಗಿದೆ. ರಾಜ್ಯ ಚುನಾವಣಾ ಆಯೋಗವೇ ಸ್ವತಂತ್ರವಾಗಿ ಮತದಾರರ ಪಟ್ಟಿ ಸಿದ್ಧಪಡಿಸಲಿದೆ. ಜಿಲ್ಲಾ ಪಂಚಾಯತಿಯ ಪ್ರತಿಯೊಂದು ಮತ ಕ್ಷೇತ್ರದಲ್ಲಿ ಮತದಾರರ ಪಟ್ಟಿ ಸಿದ್ಧಪಡಿಸುವ ಜವಾಬ್ದಾರಿಯನ್ನು ಉಪ ವಿಭಾಗಾಧಿಕಾರಿಗಳಿಗೆ ನೀಡಲಾಗಿದೆ. ಇವರು ರಾಜ್ಯ ಚುನಾವಣಾ ಆಯೋಗದ ನೇರ ಮೇಲ್ವಿಚಾರಣೆ ಮತ್ತು ನಿಯಂತ್ರಣದಲ್ಲಿ ಕೆಲಸ ಮಾಡಲಿದ್ದಾರೆ.

ಎದುರಾಗಬಹುದಾದ ಸವಾಲುಗಳು

ಮತಪತ್ರಗಳ ಬಳಕೆ ವಿಚಾರದಲ್ಲಿ ಸಾಕಾಷ್ಟು ಸವಾಲುಗಳು ಸಹ ಎದುರಾಗಲಿವೆ. ಲಕ್ಷಾಂತರ ಮತಪತ್ರಗಳ ಮುದ್ರಣ, ಸಾಗಣೆ ಮತ್ತು ಅವುಗಳ ಸುರಕ್ಷತೆಗಾಗಿ ಸರ್ಕಾರ ಭಾರಿ ವೆಚ್ಚ ಮಾಡಬೇಕಾಗುತ್ತದೆ. ಅಲ್ಲದೆ, ಇವಿಎಂನಲ್ಲಿ ಕೆಲವು ಗಂಟೆಗಳಲ್ಲಿ ಸಿಗುತ್ತಿದ್ದ ಫಲಿತಾಂಶಕ್ಕಾಗಿ ಈಗ ದಿನಗಟ್ಟಲೆ ಕಾಯಬೇಕಾಗಬಹುದು. ಹಿಂದೆ ಮತಪತ್ರಗಳಿದ್ದ ಕಾಲದಲ್ಲಿ ಬೂತ್ ಕ್ಯಾಪ್ಚರಿಂಗ್, ಮತಪೆಟ್ಟಿಗೆಗಳ ಕಳವು ಅಥವಾ ಎಣಿಕೆಯ ಸಮಯದಲ್ಲಿ ಅಕ್ರಮಗಳಾಗುತ್ತಿದ್ದವು. ಈಗ ಮತ್ತೆ ಅದೇ ಹಳೆಯ ಸಮಸ್ಯೆಗಳು ಮರುಕಳಿಸದಂತೆ ನೋಡಿಕೊಳ್ಳುವುದು ರಾಜ್ಯ ಚುನಾವಣಾ ಆಯೋಗಕ್ಕೆ ದೊಡ್ಡ ಸವಾಲಾಗಿದೆ. ಮತಪತ್ರಗಳ ಎಣಿಕೆಗೆ ಹೆಚ್ಚಿನ ಸಂಖ್ಯೆಯ ಸಿಬ್ಬಂದಿ ಅಗತ್ಯವಿರುತ್ತದೆ. ಎಣಿಕೆಯ ಸಂದರ್ಭದಲ್ಲಿ ಗೊಂದಲಗಳು ಉಂಟಾಗುವ ಸಾಧ್ಯತೆಯೂ ಹೆಚ್ಚಿರುತ್ತದೆ. ಇವೆಲ್ಲವನ್ನೂ ನಿಭಾಯಿಸಿ ಪಾರದರ್ಶಕವಾಗಿ ಚುನಾವಣೆ ನಡೆಸುವುದು ಆಯೋಗದ ಜವಾವ್ದಾರಿಯಾಗಿದೆ.

Read More
Next Story