
ಮಾಜಿ ಸಿಎಂ ಸಿದ್ದರಾಮಯ್ಯ
ಗ್ಯಾರಂಟಿಗಳು ನಿಲ್ಲಲ್ಲ, ವಿಪಕ್ಷಗಳ ಅಪಪ್ರಚಾರಕ್ಕೆ ಕಿವಿಗೊಡಬೇಡಿ: ಮಾಜಿ ಸಿಎಂ ಸಿದ್ದರಾಮಯ್ಯ
ಐದು ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೆ ತಂದಿದ್ದರೂ ರಾಜ್ಯದ ಆರ್ಥಿಕತೆಯ ಮೇಲೆ ಯಾವುದೇ ದುಷ್ಪರಿಣಾಮ ಬೀರದಂತೆ ಸಮರ್ಥವಾಗಿ ನಿಭಾಯಿಸಲಾಗಿದೆ ಎಂದು ಅಂಕಿ-ಅಂಶಗಳ ಸಹಿತ ತಿರುಗೇಟು ನೀಡಿದ್ದಾರೆ.
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ 'ಪಂಚ ಗ್ಯಾರಂಟಿ' ಯೋಜನೆಗಳನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ. ಮುಂದಿನ ಎರಡು ವರ್ಷ ಮಾತ್ರವಲ್ಲ, ಮುಂದಿನ ಚುನಾವಣೆಯಲ್ಲಿ ಮತ್ತೆ ನಾವು ಅಧಿಕಾರಕ್ಕೆ ಬರಲಿದ್ದು, ಆ ಬಳಿಕವೂ ಈ ಯೋಜನೆಗಳು ನಿರಂತರವಾಗಿ ಮುಂದುವರಿಯಲಿವೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರೋಧ ಪಕ್ಷಗಳಿಗೆ ಖಡಕ್ ಸಂದೇಶ ನೀಡಿದ್ದಾರೆ.
ಈ ಕುರಿತು ತಮ್ಮ ಸಾಮಾಜಿಕ ಜಾಲತಾಣ (ಎಕ್ಸ್)ನಲ್ಲಿ ಪ್ರತಿಕ್ರಿಯಿಸಿರುವ ಅವರು, "ಯೋಜನೆಗಳ ಅನುಷ್ಠಾನದಲ್ಲಿ ಕಂಡುಬರುವ ಸಣ್ಣಪುಟ್ಟ ಲೋಪದೋಷಗಳನ್ನು ಸರಿಪಡಿಸುವ ಕೆಲಸ ಆರಂಭದಿಂದಲೂ ನಡೆಯುತ್ತಾ ಬಂದಿದೆ. ಫಲಾನುಭವಿಗಳು ವಿರೋಧ ಪಕ್ಷಗಳ ಯಾವುದೇ ರೀತಿಯ ಅಪಪ್ರಚಾರ ಹಾಗೂ ವದಂತಿಗಳಿಗೆ ಕಿವಿಗೊಟ್ಟು ಆತಂಕಕ್ಕೊಳಗಾಗುವ ಅಗತ್ಯವಿಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ.
'ಬಿಜೆಪಿ ಮೂಲತಃ ಬಡವರ ವಿರೋಧಿ'
ಪ್ರತಿ ಪಕ್ಷಗಳ ಟೀಕೆಗಳನ್ನು ತೀವ್ರವಾಗಿ ವಿರೋಧಿಸಿರುವ ಅವರು, "ಬಿಜೆಪಿ ಮೂಲತಃ ಬಡವರ ವಿರೋಧಿ ಪಕ್ಷವಾಗಿದೆ. ಗ್ಯಾರಂಟಿ ಯೋಜನೆಗಳು ಘೋಷಣೆಯಾದ ಮೊದಲ ದಿನದಿಂದಲೂ ಅವರು ಇದನ್ನು ವಿರೋಧಿಸುತ್ತಲೇ ಬಂದಿದ್ದಾರೆ. ಮೊದಲು ಈ ಯೋಜನೆಗಳ ಜಾರಿಯೇ ಅಸಾಧ್ಯ ಎಂದರು, ಆಮೇಲೆ ಹಣಕಾಸಿನ ಕೊರತೆಯಿಂದ ಸರ್ಕಾರ ದಿವಾಳಿಯಾಗಲಿದೆ ಎಂದು ಬಿಂಬಿಸಿದರು. ಈಗ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಲಾಗುತ್ತದೆ ಎನ್ನುವ ವದಂತಿ ಹಬ್ಬಿಸುತ್ತಿದ್ದಾರೆ. ಇದು ಅವರ ರಾಜಕೀಯ ಹತಾಶೆಯ ಸಂಕೇತ" ಎಂದು ಕಿಡಿಕಾರಿದ್ದಾರೆ.
ತಲಾವಾರು ಆದಾಯದಲ್ಲಿಮೊದಲ ಸ್ಥಾನ
ಐದು ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೆ ತಂದಿದ್ದರೂ ರಾಜ್ಯದ ಆರ್ಥಿಕತೆಯ ಮೇಲೆ ಯಾವುದೇ ದುಷ್ಪರಿಣಾಮ ಬೀರದಂತೆ ಸಮರ್ಥವಾಗಿ ನಿಭಾಯಿಸಲಾಗಿದೆ ಎಂದು ಅಂಕಿ-ಅಂಶಗಳ ಸಹಿತ ತಿರುಗೇಟು ನೀಡಿದ್ದು, "ಇಂದು ಕರ್ನಾಟಕ ರಾಜ್ಯವು ತಲಾವಾರು ಆದಾಯದಲ್ಲಿ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ. ಇನ್ನು ಜಿಎಸ್‌ಟಿ ಸಂಗ್ರಹದಲ್ಲಿ ಮಹಾರಾಷ್ಟ್ರದ ನಂತರ ದೇಶದಲ್ಲೇ ಎರಡನೇ ಅತಿ ದೊಡ್ಡ ರಾಜ್ಯವಾಗಿ ಹೊರಹೊಮ್ಮಿದೆ. ಒಂದು ವೇಳೆ ಸರ್ಕಾರದ ಖಜಾನೆ ಖಾಲಿಯಾಗಿದ್ದರೆ ಅಥವಾ ಸರ್ಕಾರ ದಿವಾಳಿ ಸ್ಥಿತಿಯಲ್ಲಿದ್ದರೆ ಈ ರೀತಿಯ ಐತಿಹಾಸಿಕ ಸಾಧನೆ ಮಾಡಲು ಸಾಧ್ಯವಿತ್ತೇ" ಎಂದು ಪ್ರಶ್ನಿಸಿದ್ದಾರೆ.
ಯೋಜನೆಗಳ ನಕಲು ಹೊಡೆದ ವಿಪಕ್ಷಗಳು
ಕರ್ನಾಟಕದ ಗ್ಯಾರಂಟಿಗಳನ್ನು ಟೀಕಿಸುವ ಬಿಜೆಪಿ, ಅಧಿಕಾರ ಹಿಡಿಯಲು ಬೇರೆ ರಾಜ್ಯಗಳಲ್ಲಿ ಇದೇ ಮಾದರಿಯನ್ನು ನಕಲು ಮಾಡಿದೆ. ಮಧ್ಯಪ್ರದೇಶ, ಬಿಹಾರ ಮತ್ತು ಪಶ್ಚಿಮ ಬಂಗಾಳದಂತಹ ರಾಜ್ಯಗಳಲ್ಲಿ ಇದೇ ಯೋಜನೆಗಳನ್ನು ನಕಲು ಮಾಡಿ ಅವರು ಅಧಿಕಾರಕ್ಕೆ ಬಂದಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ನಮಗೆ ನೀತಿ ಪಾಠ ಹೇಳುವ ಯಾವ ನೈತಿಕತೆ ಅವರಿಗಿದೆ? ಕೆಲವು ರಾಜ್ಯಗಳಲ್ಲಿ ಚುನಾವಣೆಗೆ ಮುನ್ನ ಭರವಸೆ ನೀಡಿದರೂ, ಅಧಿಕಾರಕ್ಕೆ ಬಂದ ಮೇಲೆ ಅವುಗಳನ್ನು ಸಂಪೂರ್ಣವಾಗಿ ಜಾರಿಗೊಳಿಸಲು ಅವರಿಂದ ಸಾಧ್ಯವಾಗುತ್ತಿಲ್ಲ ಎಂದು ಲೇವಡಿ ಮಾಡಿದರು.
ಅನರ್ಹರ ಪಾಲಾಗುವುದನ್ನು ತಡೆಯಲು ಕ್ರಮ
ಗ್ಯಾರಂಟಿ ಯೋಜನೆಗಳ ದುರುಪಯೋಗದ ಬಗ್ಗೆ ಎಚ್ಚರಿಕೆ ನೀಡಿ, ಯೋಜನೆಗಳು ಕೇವಲ ನಿಜವಾದ ಅರ್ಹ ಫಲಾನುಭವಿಗಳಿಗೆ ಮಾತ್ರ ತಲುಪಬೇಕು. ಅನರ್ಹರ ಪಾಲಾಗುವುದನ್ನು ತಡೆಯುವುದು ಚುನಾಯಿತ ಸರ್ಕಾರದ ಆದ್ಯ ಕರ್ತವ್ಯವಾಗಿದೆ. ಜನರು ಕೂಡ ಈ ಬಗ್ಗೆ ಜವಾಬ್ದಾರಿಯಿಂದ ಯೋಚಿಸಬೇಕು. ದುರಾಸೆಗೆ ಬಿದ್ದು ಸರ್ಕಾರಕ್ಕೆ ತಪ್ಪು ಮಾಹಿತಿ ನೀಡಿ ಗ್ಯಾರಂಟಿ ಲಾಭ ಪಡೆಯುವುದು ಕಾನೂನು ಉಲ್ಲಂಘನೆ ಅಷ್ಟೇ ಅಲ್ಲ, ರಾಜ್ಯದ ಜನತೆಗೆ ಮಾಡುವ ದ್ರೋಹವಾಗಿದೆ. ಈ ನಿಟ್ಟಿನಲ್ಲಿ ವಿರೋಧ ಪಕ್ಷಗಳು ರಾಜಕೀಯ ಲಾಭಕ್ಕಾಗಿ ಅಪಪ್ರಚಾರ ಮಾಡುವುದನ್ನು ಬಿಟ್ಟು, ಅರ್ಹರಿಗೆ ಯೋಜನೆ ತಲುಪಿಸಲು ಸರ್ಕಾರದೊಂದಿಗೆ ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ.

