ಬೈಕ್ ಟ್ಯಾಕ್ಸಿಗಳಿಗೆ ರಾಜ್ಯ ಸರ್ಕಾರದಿಂದ ಬ್ರೇಕ್; ಸುಪ್ರೀಂಕೋರ್ಟ್‌ಗೆ ಅಫಿಡವಿಟ್
x

ಬೈಕ್ ಟ್ಯಾಕ್ಸಿಗೆ ಅನುಮತಿ ನೀಡಲು ಸಾಧ್ಯವಿಲ್ಲ ಎಂದು ಕರ್ನಾಟಕ ಸರ್ಕಾರ ಸುಪ್ರೀಂಕೋರ್ಟ್‌ಗೆ ತಿಳಿಸಿದೆ.

ಬೈಕ್ ಟ್ಯಾಕ್ಸಿಗಳಿಗೆ ರಾಜ್ಯ ಸರ್ಕಾರದಿಂದ ಬ್ರೇಕ್; ಸುಪ್ರೀಂಕೋರ್ಟ್‌ಗೆ ಅಫಿಡವಿಟ್

ಬೈಕ್ ಟ್ಯಾಕ್ಸಿಗೆ ಅನುಮತಿ ನೀಡಲು ಸಾಧ್ಯವಿಲ್ಲ ಎಂದು ಕರ್ನಾಟಕ ಸರ್ಕಾರ ಸುಪ್ರೀಂಕೋರ್ಟ್‌ಗೆ ತಿಳಿಸಿದೆ. ಬೆಂಗಳೂರಿನಲ್ಲಿ ಅನಧಿಕೃತ ಬೈಕ್ ಟ್ಯಾಕ್ಸಿಗಳ ವಿರುದ್ಧ ಕಾರ್ಯಾಚರಣೆ ಮುಂದುವರಿದಿದೆ.


Click the Play button to hear this message in audio format

ರಾಜ್ಯದಲ್ಲಿ ಅನುಮತಿಯಿಲ್ಲದೆ ಕಾರ್ಯನಿರ್ವಹಿಸುತ್ತಿರುವ ಬೈಕ್ ಟ್ಯಾಕ್ಸಿಗಳ ವಿರುದ್ಧ ಸಾರಿಗೆ ಇಲಾಖೆ ಕಾರ್ಯಾಚರಣೆ ಮುಂದುವರಿಸಿರುವ ಬೆನ್ನಲ್ಲೇ, ರಾಜ್ಯ ಸರ್ಕಾರವೂ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ. ದ್ವಿಚಕ್ರ ವಾಹನಗಳನ್ನು ವಾಣಿಜ್ಯ ಟ್ಯಾಕ್ಸಿ ಸೇವೆಗೆ ಬಳಸಲು ಅನುಮತಿ ನೀಡಲು ಸಾಧ್ಯವಿಲ್ಲ ಎಂದು ಕರ್ನಾಟಕ ಸರ್ಕಾರ ಸುಪ್ರೀಂಕೋರ್ಟ್‌ಗೆ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ತಿಳಿಸಿದೆ.

ಕರ್ನಾಟಕ ಹೈಕೋರ್ಟ್‌ನ ಆದೇಶವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೊರೆ ಹೋಗಿರುವ ಸರ್ಕಾರ, ಬೈಕ್ ಟ್ಯಾಕ್ಸಿಗಳಿಗೆ ಅನುಮತಿ ನೀಡುವುದರಿಂದ ಎದುರಾಗಬಹುದಾದ ಸುರಕ್ಷತಾ ಸಮಸ್ಯೆಗಳನ್ನು ಪ್ರಮುಖವಾಗಿ ಉಲ್ಲೇಖಿಸಿದೆ. ಪ್ರಯಾಣಿಕರ ಸುರಕ್ಷತೆ ಹಾಗೂ ಸಾರ್ವಜನಿಕ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಇಂತಹ ಸೇವೆಗಳಿಗೆ ಅವಕಾಶ ನೀಡುವುದು ಸೂಕ್ತವಲ್ಲ ಎಂಬುದು ಸರ್ಕಾರದ ವಾದವಾಗಿದೆ.

ಸುರಕ್ಷತೆ, ವಿಮೆ ಕುರಿತು ಸರ್ಕಾರದ ಆತಂಕ

ಬೈಕ್ ಟ್ಯಾಕ್ಸಿಗಳಲ್ಲಿ ಪ್ರಯಾಣಿಸುವವರ ಸುರಕ್ಷತೆಯ ಬಗ್ಗೆ ಸರ್ಕಾರ ಕಳವಳ ವ್ಯಕ್ತಪಡಿಸಿದೆ. ವಾಣಿಜ್ಯ ಪ್ರಯಾಣಿಕರ ಸೇವೆಗೆ ಬಳಸುವ ದ್ವಿಚಕ್ರ ವಾಹನಗಳಿಗೆ ಅಗತ್ಯವಾದ ವಿಮಾ ರಕ್ಷಣೆ ಮತ್ತು ಸುರಕ್ಷತಾ ವ್ಯವಸ್ಥೆಗಳ ಕುರಿತು ಸರ್ಕಾರ ಪ್ರಶ್ನೆ ಎತ್ತಿದೆ.

ದ್ವಿಚಕ್ರ ವಾಹನಗಳು ಅಪಘಾತಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚು. ಅಪಘಾತ ಸಂಭವಿಸಿದ ಸಂದರ್ಭದಲ್ಲಿ ಪ್ರಯಾಣಿಕರಿಗೆ ಗಂಭೀರ ಗಾಯಗಳು ಅಥವಾ ಪ್ರಾಣಹಾನಿಯಾಗುವ ಅಪಾಯವೂ ಇರುವುದರಿಂದ, ಇಂತಹ ಸೇವೆಗಳಿಗೆ ಅನುಮತಿ ನೀಡುವ ವಿಚಾರದಲ್ಲಿ ಎಚ್ಚರಿಕೆ ಅಗತ್ಯ ಎಂದು ಸರ್ಕಾರ ತನ್ನ ನಿಲುವಿನಲ್ಲಿ ತಿಳಿಸಿದೆ.

ಮೋಟಾರು ವಾಹನ ಕಾಯ್ದೆಯಲ್ಲಿ ಬೈಕ್ ಟ್ಯಾಕ್ಸಿಗೆ ಸ್ಪಷ್ಟ ಉಲ್ಲೇಖವಿಲ್ಲ

ಕೇಂದ್ರ ಮೋಟಾರು ವಾಹನ ಕಾಯ್ದೆಯಲ್ಲಿ ‘ಬೈಕ್ ಟ್ಯಾಕ್ಸಿ’ ಎಂಬ ಸೇವೆಗೆ ಸ್ಪಷ್ಟವಾದ ಕಾನೂನು ವ್ಯಾಖ್ಯಾನ ಅಥವಾ ನಿರ್ದಿಷ್ಟ ನಿಯಮಗಳಿಲ್ಲ ಎಂಬ ಅಂಶವನ್ನೂ ರಾಜ್ಯ ಸರ್ಕಾರ ಸುಪ್ರೀಂಕೋರ್ಟ್ ಗಮನಕ್ಕೆ ತಂದಿದೆ. ದ್ವಿಚಕ್ರ ವಾಹನಗಳನ್ನು ಪ್ರಯಾಣಿಕರನ್ನು ಸಾಗಿಸುವ ವಾಣಿಜ್ಯ ಟ್ಯಾಕ್ಸಿಗಳಾಗಿ ಬಳಸಲು ಪ್ರಸ್ತುತ ಕಾನೂನು ಚೌಕಟ್ಟಿನಲ್ಲಿ ಸ್ಪಷ್ಟ ಅವಕಾಶವಿಲ್ಲ ಎಂಬುದು ಸರ್ಕಾರದ ವಾದವಾಗಿದೆ.

ಬೆಂಗಳೂರಿನಲ್ಲಿ ಬೈಕ್ ಟ್ಯಾಕ್ಸಿಗಳ ವಿರುದ್ಧ ಕಾರ್ಯಾಚರಣೆ

ಇತ್ತ, ಅನಧಿಕೃತ ಬೈಕ್ ಟ್ಯಾಕ್ಸಿಗಳ ವಿರುದ್ಧ ಸಾರಿಗೆ ಇಲಾಖೆಯ ಜಾರಿ ವಿಭಾಗದ ಕಾರ್ಯಾಚರಣೆ ಬೆಂಗಳೂರಿನಲ್ಲಿ ಮತ್ತಷ್ಟು ಚುರುಕುಗೊಂಡಿದೆ. ಓಲಾ, ಊಬರ್, ರ‍್ಯಾಪಿಡೋ ಸೇರಿದಂತೆ ವಿವಿಧ ಆ್ಯಪ್ ಆಧಾರಿತ ಸೇವೆಗಳ ಮೂಲಕ ಸಂಚರಿಸುತ್ತಿರುವ ಅನುಮತಿಯಿಲ್ಲದ ಬೈಕ್ ಟ್ಯಾಕ್ಸಿಗಳನ್ನು ಅಧಿಕಾರಿಗಳು ಗುರಿಯಾಗಿಸಿಕೊಂಡಿದ್ದಾರೆ.

ಕೋರಮಂಗಲ ಆರ್‌ಟಿಒ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ತೀವ್ರಗೊಂಡಿದ್ದು, ಒಂದೇ ದಿನ 85ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.

2 ದಿನದಲ್ಲಿ ನೂರಾರು ಬೈಕ್‌ಗಳು ಜಪ್ತಿ

ಅನಧಿಕೃತ ಬೈಕ್ ಟ್ಯಾಕ್ಸಿಗಳ ನಿಯಂತ್ರಣಕ್ಕಾಗಿ ಸಾರಿಗೆ ಇಲಾಖೆ 11 ವಿಶೇಷ ತಂಡಗಳನ್ನು ರಚಿಸಿದೆ. ಕಾರ್ಯಾಚರಣೆಯ ಮೊದಲ ದಿನವೇ 256 ಬೈಕ್‌ಗಳನ್ನು ವಶಕ್ಕೆ ಪಡೆಯಲಾಗಿತ್ತು. ಇದೀಗ ಎರಡನೇ ದಿನವೂ ದಾಳಿ ಮುಂದುವರಿದಿದ್ದು, 85ಕ್ಕೂ ಹೆಚ್ಚು ವಾಹನಗಳನ್ನು ಜಪ್ತಿ ಮಾಡಲಾಗಿದೆ. ಸುಪ್ರೀಂಕೋರ್ಟ್‌ನಲ್ಲಿ ಬೈಕ್ ಟ್ಯಾಕ್ಸಿಗಳ ಕಾನೂನುಬದ್ಧತೆಯ ಕುರಿತು ವಿಚಾರಣೆ ನಡೆಯುತ್ತಿರುವ ಸಂದರ್ಭದಲ್ಲೇ ರಾಜ್ಯದಲ್ಲಿ ಸಾರಿಗೆ ಇಲಾಖೆ ನಡೆಸುತ್ತಿರುವ ನಿರಂತರ ಕಾರ್ಯಾಚರಣೆ ಮಹತ್ವ ಪಡೆದುಕೊಂಡಿದೆ.

Read More
Next Story