ವಿಧಾನಸೌಧದ ಮುಂದೆ ‘ಉರ್ದು ಹಬ್ಬ’ ಆಚರಣೆ ನಿರ್ಧಾರ ವಿವಾದ; ಪರ-ವಿರೋಧ ಚರ್ಚೆ ಜೋರು
ಕನ್ನಡಿಗರ ಅಸ್ಮಿತೆಯ ಸಂಕೇತವಾದ ವಿಧಾನಸೌಧದಲ್ಲಿ ಇಂತಹ ಕಾರ್ಯಕ್ರಮ ಮಾಡುವುದು ಅಲ್ಪಸಂಖ್ಯಾತರ ತುಷ್ಟೀಕರಣ ಮತ್ತು ಕನ್ನಡದ ಭಾವನೆಗೆ ಧಕ್ಕೆ ಎಂದು ಬಿಜೆಪಿ ಹಾಗೂ ಕನ್ನಡಪರ ಸಂಘಟನೆಗಳು ತೀವ್ರವಾಗಿ ಖಂಡಿಸಿವೆ.
ಬೆಂಗಳೂರಿನ ವಿಧಾನಸೌಧದ ಮೆಟ್ಟಿಲುಗಳ ಮೇಲೆ ‘ಉರ್ದು ಹಬ್ಬ’ ಆಚರಿಸಲು ಮುಂದಾಗಿರುವ ರಾಜ್ಯ ಸರ್ಕಾರದ ನಿರ್ಧಾರವು ರಾಜ್ಯ ರಾಜಕಾರಣದಲ್ಲಿ ತೀವ್ರ ವಿವಾದಕ್ಕೆ ಕಾರಣವಾಗಿದೆ.
ಉರ್ದು ಭಾಷೆಯು ಭಾರತದ ಮಣ್ಣಿನಲ್ಲೇ ಜನ್ಮತಾಳಿದ ಭಾಷೆಯಾಗಿದ್ದು, ಶೈಕ್ಷಣಿಕ ಹಾಗೂ ಸಾಹಿತ್ಯಿಕ ಕ್ಷೇತ್ರಕ್ಕೆ ದೊಡ್ಡ ಕೊಡುಗೆ ನೀಡಿದೆ. ಸಂವಿಧಾನದ 8ನೇ ಅನುಸೂಚಿಯಲ್ಲಿ ಮಾನ್ಯತೆ ಪಡೆದ ಭಾಷೆಯಾಗಿರುವುದರಿಂದ ಇದನ್ನು ವಿರೋಧಿಸುವುದರಲ್ಲಿ ಅರ್ಥವಿಲ್ಲ ಎಂದು ಸಾಹಿತ್ಯಾಸಕ್ತರು ಹಾಗೂ ಪ್ರಗತಿಪರರು ಸಮರ್ಥಿಸಿಕೊಂಡಿದ್ದಾರೆ. ಕನ್ನಡಿಗರ ಅಸ್ಮಿತೆಯ ಸಂಕೇತವಾದ ವಿಧಾನಸೌಧದಲ್ಲಿ ಇಂತಹ ಕಾರ್ಯಕ್ರಮ ಮಾಡುವುದು ಅಲ್ಪಸಂಖ್ಯಾತರ ತುಷ್ಟೀಕರಣ ಮತ್ತು ಕನ್ನಡದ ಭಾವನೆಗೆ ಧಕ್ಕೆ ಎಂದು ಬಿಜೆಪಿ ಹಾಗೂ ಕನ್ನಡಪರ ಸಂಘಟನೆಗಳು ತೀವ್ರವಾಗಿ ಖಂಡಿಸಿವೆ.
ವಿವಾದ ತಾರಕಕ್ಕೇರುತ್ತಿದ್ದಂತೆ ಪ್ರತಿಕ್ರಿಯಿಸಿರುವ ಮುಖಂಡರು, ಸರ್ಕಾರದ ವತಿಯಿಂದ ಅಂತಹ ಯಾವುದೇ ಅಧಿಕೃತ ಅನುಮತಿ ನೀಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ, ಹಿಂದಿನ ಆರ್ಸಿಬಿ ವಿಜಯೋತ್ಸವದ ಉದಾಹರಣೆಗಳನ್ನು ಮುನ್ನೆಲೆಗೆ ತಂದು ಸಾರ್ವಜನಿಕರು ಪ್ರಶ್ನೆಗಳನ್ನು ಎತ್ತುತ್ತಿದ್ದಾರೆ.
ಪಶುವೈದ್ಯಾಧಿಕಾರಿ ನೇಮಕಾತಿ ಅಕ್ರಮ: ಇ.ಡಿ ತನಿಖೆ ಚುರುಕು
400 ಪಶುವೈದ್ಯಾಧಿಕಾರಿಗಳ ನೇಮಕಾತಿಯಲ್ಲಿ ನಡೆದ ಭಾರಿ ಅಕ್ರಮಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ತನಿಖೆಯನ್ನು ತೀವ್ರಗೊಳಿಸಿದೆ.
ಪಿಎಂಎಲ್ಎ ಹಾಗೂ ಇಸಿಐಆರ್ ದಾಖಲಿಸಿಕೊಂಡಿರುವ ಅಧಿಕಾರಿಗಳು, ಮಾಜಿ ಪರೀಕ್ಷಾ ನಿಯಂತ್ರಕ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಹಾಗೂ ಮಧ್ಯವರ್ತಿ ಬಸವರಾಜ್ ಕನ್ನಾಳೆ ಅವರಿಂದ ಸ್ಫೋಟಕ ಮಾಹಿತಿ ಹೊರಹಾಕಿಸಿದ್ದಾರೆ. ಪ್ರತಿ ಹುದ್ದೆಗೆ ಆರಂಭದಲ್ಲಿ 70-80 ಲಕ್ಷ ರೂಪಾಯಿ ಬೇಡಿಕೆ ಇಟ್ಟು, ಅಂತಿಮವಾಗಿ 30-40 ಲಕ್ಷ ರೂಪಾಯಿಗೆ ಡೀಲ್ ಕುದುರಿಸಲಾಗುತ್ತಿತ್ತು.
ಡೀಲ್ ಕುದುರಿದ ಅಭ್ಯರ್ಥಿಗಳಿಂದ ಶೇ. 70-80ರಷ್ಟು ಹಣವನ್ನು ನಗದು ರೂಪದಲ್ಲಿ ಪಡೆದು, ಖಾಲಿ ಚೆಕ್ಗಳನ್ನು ಇಟ್ಟುಕೊಳ್ಳಲಾಗುತ್ತಿತ್ತು. ಪರೀಕ್ಷೆಗೆ ಮುನ್ನ ದಿನ ಅಭ್ಯರ್ಥಿಗಳಿಗೆ ಐಷಾರಾಮಿ ಹೋಟೆಲ್ಗಳಲ್ಲಿ ಕಂಠಪಾಠ ಮಾಡಿಸಿ ಪರೀಕ್ಷೆಗೆ ಕಳುಹಿಸಲಾಗುತ್ತಿತ್ತು. ಹಣ ಪಡೆದು ಅಕ್ರಮವಾಗಿ ಹುದ್ದೆ ಗಿಟ್ಟಿಸಿಕೊಂಡಿರುವ ೩೨೯ ಅಭ್ಯರ್ಥಿಗಳು ಇಡಿ ಮತ್ತು ಸಿಐಡಿ ತನಿಖಾ ವಲಯದಲ್ಲಿದ್ದು, ಹುದ್ದೆ ರದ್ದತಿ ಹಾಗೂ ಜೈಲು ಶಿಕ್ಷೆಯ ಭೀತಿಯಲ್ಲಿದ್ದಾರೆ.
‘ಅನ್ನಸೇವೆ’ ಮೊಬೈಲ್ ಆ್ಯಪ್ ಬಿಡುಗಡೆ
ಇ-ಕೆವೈಸಿ ಪ್ರಕ್ರಿಯೆಯಲ್ಲಿ ಎದುರಾಗುತ್ತಿದ್ದ ಸರ್ವರ್ ದಟ್ಟಣೆ ಹಾಗೂ ಸಾರ್ವಜನಿಕರ ಪರದಾಟ ತಪ್ಪಿಸಲು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು 'ಅನ್ನಸೇವೆ' ನೂತನ ಮೊಬೈಲ್ ಆ್ಯಪ್ ಅನ್ನು ಲೋಕಾರ್ಪಣೆ ಮಾಡಿದೆ.
ಸಚಿವ ರಿಜ್ವಾನ್ ಅರ್ಷದ್ ಅವರು ಬಿಡುಗಡೆ ಮಾಡಿರುವ ಈ ಆ್ಯಪ್ ಮೂಲಕ ಫಲಾನುಭವಿಗಳು ಮನೆಯಲ್ಲೇ ಕುಳಿತು, ಫೇಶಿಯಲ್ ರೆಕಗ್ನಿಷನ್ (ಮುಖ ಗುರುತಿಸುವಿಕೆ) ತಂತ್ರಜ್ಞಾನ ಬಳಸಿ ಕೆಲವೇ ನಿಮಿಷಗಳಲ್ಲಿ ಇ-ಕೆವೈಸಿ ಪೂರ್ಣಗೊಳಿಸಬಹುದು. ಮೊದಲ ಹಂತದಲ್ಲಿ ಬೆಂಗಳೂರು ನಗರ, ಗ್ರಾಮಾಂತರ, ಉಡುಪಿ, ಹಾವೇರಿ, ಕಾರವಾರ, ಬಳ್ಳಾರಿ, ಬೀದರ್ ಹಾಗೂ ಕೊಪ್ಪಳ ಸೇರಿದಂತೆ 8 ಜಿಲ್ಲೆಗಳಲ್ಲಿ ಈ ಸೇವೆ ಲಭ್ಯವಿದ್ದು, ಮುಂದಿನ 20 ದಿನಗಳಲ್ಲಿ ರಾಜ್ಯದ ಎಲ್ಲಾ 31 ಜಿಲ್ಲೆಗಳಿಗೆ ವಿಸ್ತರಿಸಲಾಗುತ್ತದೆ.

