ನೂತನ ಸರ್ಕಾರ ರಚನೆ ಕಸರತ್ತು; ದೆಹಲಿಗೆ ಹಾರಿದ ಸಚಿವ ಆಕಾಂಕ್ಷಿಗಳ ದಂಡು
x
ನವದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಜತೆಗೆ ಸಿದ್ದರಾಮಯ್ಯ ಹಾಗೂ ಸಚಿವಾಕಾಂಕ್ಷಿಗಳು ಇದ್ದರು.

ನೂತನ ಸರ್ಕಾರ ರಚನೆ ಕಸರತ್ತು; ದೆಹಲಿಗೆ ಹಾರಿದ ಸಚಿವ ಆಕಾಂಕ್ಷಿಗಳ ದಂಡು

ಕಳೆದ ಕೆಲ ತಿಂಗಳಿಂದ ಹಿರಿಯ ಶಾಸಕರು ಸಚಿವ ಸ್ಥಾನಕ್ಕಾಗಿ ಲಾಬಿ ನಡೆಸಿದ್ದರು. ಸರ್ಕಾರದಲ್ಲಿ ಹೊಸಬರಿಗೆ ಅವಕಾಶ ನೀಡುವ ಕುರಿತಂತೆ ಚರ್ಚೆಯೂ ನಡೆದಿತ್ತು. ಈ ಹಿನ್ನೆಲೆ ಹಿರಿಯ-ಕಿರಿಯ ಶಾಸಕರಿಂದ ಹೈಕಮಾಂಡ್‌ ಬಳಿ ಲಾಭಿ ಶುರುವಾಗಿದೆ.


ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ಅಂಗೀಕಾರವಾಗಿ ಸಂಪುಟ ವಿಸರ್ಜನೆಯಾದ ಬೆನ್ನಲ್ಲೇ ಹೊಸ ಸರ್ಕಾರ ರಚನೆಯ ಕಸರತ್ತು ತೀವ್ರಗೊಂಡಿದೆ. ನಾಳೆ ನಡೆಯುವ ಸಿಎಲ್‌ಪಿ ಸಭೆಯಲ್ಲಿ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ನಡೆಯಲಿದೆ. ಹೊಸ ಸಿಎಂ ನೇತೃತ್ವದಲ್ಲಿ ಸಚಿವ ಸಂಪುಟ ರಚನೆಯಾಗಲಿದ್ದು, ಆಕಾಂಕ್ಷಿಗಳಲ್ಲಿ ಲಾಬಿ ಜೋರಾಗಿದೆ.

ಕಾಂಗ್ರೆಸ್ ನಾಯಕರಾದ ಕೆ.ಎಚ್. ಮುನಿಯಪ್ಪ, ಪ್ರಿಯಾಂಕ್ ಖರ್ಗೆ ಹಾಗೂ ಎನ್.ಎಸ್. ಬೋಸರಾಜು ಸೇರಿ ಹಲವು ಮುಖಂಡರು ಶುಕ್ರವಾರ ಮುಂಜಾನೆ 3 ಗಂಟೆ ವಿಮಾನದಲ್ಲೇ ದೆಹಲಿಗೆ ಹಾರಿದ್ದಾರೆ. ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರಾಗಿದ್ದವರು ತಮ್ಮ ಸ್ಥಾನ ಭದ್ರಪಡಿಸಿಕೊಳ್ಳಲು ಹೈಕಮಾಂಡ್ ನಾಯಕರ ಮನೆ ಬಾಗಿಲು ತಟ್ಟುತ್ತಿದ್ದಾರೆ.

ಕಳೆದ ಕೆಲ ತಿಂಗಳಿಂದ ಹಿರಿಯ ಶಾಸಕರು ಸಚಿವ ಸ್ಥಾನಕ್ಕಾಗಿ ಲಾಬಿ ನಡೆಸಿದ್ದರು. ಸರ್ಕಾರದಲ್ಲಿ ಹೊಸಬರಿಗೆ ಅವಕಾಶ ನೀಡುವ ಕುರಿತಂತೆ ಚರ್ಚೆಯೂ ನಡೆದಿತ್ತು. ಈ ಚರ್ಚೆಗಳ ಹಿನ್ನೆಲೆಯಲ್ಲಿ ಹಿರಿಯ-ಕಿರಿಯ ಶಾಸಕರು ದೆಹಲಿಗೆ ಎಡತಾಕುತ್ತಿದ್ದು, ಸಚಿವ ಸ್ಥಾನಕ್ಕಾಗಿ ಲಾಬಿ ನಡೆಸುತ್ತಿದ್ದಾರೆ.

ಯಾರಿಗೆಲ್ಲ ಸಿಗಲಿದೆ ನೂತನ ಸಂಪುಟದಲ್ಲಿ ಸ್ಥಾನ?

ಹೊಸ ಸಂಪುಟ ರಚನೆಗೆ ಸಂಬಂಧಿಸಿದಂತೆ ʼಕೈʼ ಪಾಳಯದಲ್ಲಿ ಭಾರಿ ಚರ್ಚೆಗಳು ನಡೆಯುತ್ತಿದ್ದು, ಹಳೆಯ ಸಂಪುಟದಲ್ಲಿದ್ದ 11ರಿಂದ 13 ಶಾಸಕರು ಮತ್ತೆ ಸಚಿವರಾಗುವ ಪೂರ್ಣ ವಿಶ್ವಾಸದಲ್ಲಿದ್ದಾರೆ ಎನ್ನಲಾಗಿದೆ.

ನೂತನ ಸಂಪುಟದಲ್ಲಿ ಕೃಷ್ಣಭೈರೇಗೌಡ, ಪ್ರಿಯಾಂಕ್ ಖರ್ಗೆ, ಸತೀಶ್ ಜಾರಕಿಹೊಳಿ, ಕೆ.ಜೆ. ಜಾರ್ಜ್, ಈಶ್ವರ ಖಂಡ್ರೆ, ಎಂ.ಬಿ. ಪಾಟೀಲ್, ಡಾ. ಜಿ. ಪರಮೇಶ್ವರ್, ಎಚ್.ಕೆ. ಪಾಟೀಲ್, ಶಿವರಾಜ ತಂಗಡಗಿ, ಕೆ.ಎಚ್. ಮುನಿಯಪ್ಪ, ಮಂಕಾಳು ವೈದ್ಯ, ಸಂತೋಷ್ ಲಾಡ್ ಹಾಗೂ ದಿನೇಶ್ ಗುಂಡೂರಾವ್ ಅವರು ಸ್ಥಾನ ಪಡೆಯುವ ವಿಶ್ವಾಸವಿದೆ.

ಈ ಪಟ್ಟಿಯ ಹೊರತಾಗಿಯೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ತಮ್ಮ ಆಪ್ತ ವಲಯದ ಕೆಲ ಹೊಸ ಮುಖಗಳನ್ನು ಸಂಪುಟಕ್ಕೆ ಪರಿಗಣಿಸುವ ಸಾಧ್ಯತೆ ದಟ್ಟವಾಗಿದೆ. ಒಟ್ಟು 29 ಸಚಿವರ ಪೈಕಿ ಕೇವಲ 11 ರಿಂದ 13 ಮಂದಿ ಹಳಬರಿಗೆ ಪುನರಾಯ್ಕೆಯ ಭಾಗ್ಯ ಸಿಗಲಿದ್ದು, ಉಳಿದ ಸ್ಥಾನಗಳಿಗೆ ಭಾರಿ ಪೈಪೋಟಿ ಏರ್ಪಟ್ಟಿದೆ.

ಹೈಕಮಾಂಡ್ ನೀಡಲಿದೆಯೇ ಗ್ರೀನ್ ಸಿಗ್ನಲ್?

ಇಂದು ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೇರಿದಂತೆ ಪ್ರಮುಖ ವರಿಷ್ಠರನ್ನು ಡಿ.ಕೆ. ಶಿವಕುಮಾರ್ ಭೇಟಿ ಮಾಡಲಿದ್ದಾರೆ. ಈ ಉನ್ನತ ಮಟ್ಟದ ಸಭೆಯಲ್ಲಿ ನಾಳಿನ ಶಾಸಕಾಂಗ ಪಕ್ಷದ ಸಭೆಯ ಸಿದ್ಧತೆ ಹಾಗೂ ಹೊಸ ಸರ್ಕಾರದ ರಚನೆ ಕುರಿತು ಅತ್ಯಂತ ಪ್ರಮುಖ ಚರ್ಚೆಗಳು ನಡೆಯಲಿವೆ.

ಹೊಸದಾಗಿ ಯಾರೆಲ್ಲಾ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಬೇಕು, ನೂತನ ಸಿಎಂ ಜೊತೆಗೆ ಮೊದಲ ಹಂತದಲ್ಲಿ ಎಷ್ಟು ಜನ ಸಚಿವರು ಅಧಿಕಾರ ವಹಿಸಿಕೊಳ್ಳಬೇಕು ಎಂಬ ಗೊಂದಲಗಳಿಗೆ ಸಭೆಯಲ್ಲಿ ತೆರೆ ಬೀಳಲಿದೆ.

ಹೈಕಮಾಂಡ್ನಿಂದ ಸೂಕ್ತ ನಿರ್ದೇಶನ ಹಾಗೂ ಸಲಹೆ ಪಡೆದ ಬಳಿಕವೇ ಡಿ.ಕೆ. ಶಿವಕುಮಾರ್ ಮುಂದಿನ ಹೆಜ್ಜೆ ಇಡಲಿದ್ದಾರೆ. ಒಟ್ಟಿನಲ್ಲಿ ರಾಜ್ಯ ರಾಜಕಾರಣದ ಮುಂದಿನ ದಿಕ್ಸೂಚಿ ಇಂದು ದೆಹಲಿಯಲ್ಲಿ ನಿರ್ಧಾರವಾಗಲಿದ್ದು, ಇಡೀ ರಾಜ್ಯದ ಕಣ್ಣು ಹೈಕಮಾಂಡ್ ನಡೆಯತ್ತ ನೆಟ್ಟಿದೆ.

Read More
Next Story