ಡಿ.ಕೆ. ಶಿವಕುಮಾರ್ ಸಾರಥ್ಯದ ಸರ್ಕಾರ ಅಸ್ತಿತ್ವಕ್ಕೆ: ಸಂಪುಟದಲ್ಲಿ ಅಹಿಂದಕ್ಕೆ ಆದ್ಯತೆ
x

ಡಿ.ಕೆ. ಶಿವಕುಮಾರ್ ಸಾರಥ್ಯದ ಸರ್ಕಾರ ಅಸ್ತಿತ್ವಕ್ಕೆ: ಸಂಪುಟದಲ್ಲಿ ಅಹಿಂದಕ್ಕೆ ಆದ್ಯತೆ

ಸಚಿವ ಸ್ಥಾನಗಳನ್ನು ಎಲ್ಲಾ ಸಮುದಾಯಗಳಿಗೂ ಹಂಚಿಕೆ ಮಾಡಲಾಗಿದೆ. ಈ ಮೂಲಕ ಅಹಿಂದಕ್ಕೆ ಆದ್ಯತೆ ನೀಡಿದಂತಾಗಿದೆ. ಡಿ.ಕೆ.ಶಿವಕುಮಾರ್‌ ಸೇರಿ 14 ಮಂದಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.


Click the Play button to hear this message in audio format

ರಾಜ್ಯ ರಾಜಕೀಯ ಇತಿಹಾಸದಲ್ಲಿ ಒಂದು ಹೊಸ ಶಕೆ ಆರಂಭವಾಗಿದೆ. ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಮತ್ತು ಜಿ. ಪರಮೇಶ್ವರ್ ಅವರು ಉಪಮುಖ್ಯಮಂತ್ರಿಯಾಗಿ ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದಾರೆ. ರಾಜ್ಯದ ಅಭಿವೃದ್ಧಿ ಮತ್ತು ಆಡಳಿತಾತ್ಮಕ ದಕ್ಷತೆಯನ್ನು ಗಮನದಲ್ಲಿಟ್ಟುಕೊಂಡು, ಹಿರಿಯ ಮತ್ತು ಅನುಭವಿ ಶಾಸಕರನ್ನು ಒಳಗೊಂಡ ಸಚಿವ ಸಂಪುಟ ದರ್ಜೆಯ ಸಚಿವರ ಪಟ್ಟಿಯನ್ನು ಅಂತಿಮಗೊಳಿಸಲಾಗಿದೆ.

ರಾಜ್ಯದ ಆಡಳಿತವನ್ನು ಮುನ್ನಡೆಸಲು ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ರಾಜ್ಯದ ಅನುಭವಿ ನಾಯಕರಾದ ಜಿ. ಪರಮೇಶ್ವರ್ ಅವರು ಉಪಮುಖ್ಯಮಂತ್ರಿಯಾಗಲಿದ್ದಾರೆ. ಪಕ್ಷದ ಬಲವರ್ಧನೆಗೆ ಮತ್ತು ಸಮರ್ಥ ಆಡಳಿತ ನೀಡಲು ಹೆಚ್ಚಿನ ಬಲ ನೀಡಲಿದೆ ಏನ್ನಲಾಗಿದೆ.

ಸಚಿವರ ತಂಡ

ಸಚಿವ ಸಂಪುಟದಲ್ಲಿ ಸ್ಥಾನ ಪಡೆದಿರುವ ಪ್ರಮುಖ ನಾಯಕರೆಂದರೆ ಎಂ.ಬಿ. ಪಾಟೀಲ್, ಕೆ.ಜೆ. ಜಾರ್ಜ್, ಕೆ.ಎಚ್. ಮುನಿಯಪ್ಪ, ರಾಮಲಿಂಗಾರೆಡ್ಡಿ, ಸತೀಶ್ ಜಾರಕಿಹೊಳಿ ಮತ್ತು ಕೃಷ್ಣಬೈರೇಗೌಡ ಅವರಂತಹ ಹಿರಿಯ ನಾಯಕರು ಸಂಪುಟಕ್ಕೆ ಸೇರ್ಪಡೆಗೊಂಡಿದ್ದಾರೆ. ಇವರ ದಶಕಗಳ ರಾಜಕೀಯ ಅನುಭವವು ಕಠಿಣ ನಿರ್ಧಾರಗಳನ್ನು ಕೈಗೊಳ್ಳಲು ಸರ್ಕಾರಕ್ಕೆ ಸಹಕಾರಿಯಾಗಲಿದೆ. ಸ್ಪೀಕರ್ ಸ್ಥಾನಕ್ಕೆ ರಾಜೀನಾಮೆ ನೀಡಿದ ಯು.ಟಿ. ಖಾದರ್ ಅವರ ಸೇರ್ಪಡೆ ಸಂಪುಟಕ್ಕೆ ಹೆಚ್ಚಿನ ಶಕ್ತಿ ತುಂಬಿದೆ. ಇವರೊಂದಿಗೆ ಪ್ರಿಯಾಂಕ್ ಖರ್ಗೆ, ಶರಣಪ್ರಕಾಶ್ ಪಾಟೀಲ್, ಬೈರತಿ ಸುರೇಶ್ ಮತ್ತು ಈಶ್ವರ್ ಖಂಡ್ರೆ ಅವರಂತಹ ಸಮರ್ಥ ನಾಯಕರು ಸ್ಥಾನ ಪಡೆದಿದ್ದಾರೆ. ಯತೀಂದ್ರ ಸಿದ್ದರಾಮಯ್ಯ ಅವರಂತಹ ಯುವ ನಾಯಕರು ಸಂಪುಟದಲ್ಲಿರುವುದು, ಸರ್ಕಾರದ ಆಲೋಚನಾ ಕ್ರಮದಲ್ಲಿ ಹೊಸತನವನ್ನು ತರುವ ನಿರೀಕ್ಷೆಯನ್ನು ಮೂಡಿಸಿದೆ.

ಈ ಸಚಿವ ಸಂಪುಟವು ಪ್ರಾದೇಶಿಕ ಸಮತೋಲನ ಮತ್ತು ಸಾಮಾಜಿಕ ನ್ಯಾಯದ ಆಧಾರದ ಮೇಲೆ ರಚನೆಯಾಗಿರುವುದು ಸ್ಪಷ್ಟವಾಗಿದೆ. ಹಿರಿಯ ನಾಯಕರ ಅನುಭವ ಮತ್ತು ಯುವ ನಾಯಕರ ಉತ್ಸಾಹದ ಈ ಸಮಿಶ್ರಣ, ರಾಜ್ಯದ ಮೂಲಸೌಕರ್ಯ ಅಭಿವೃದ್ಧಿ, ಸಾಮಾಜಿಕ ಕಲ್ಯಾಣ ಮತ್ತು ಆರ್ಥಿಕ ಸುಧಾರಣೆಗಳಿಗೆ ಹೆಚ್ಚಿನ ಆದ್ಯತೆ ನೀಡಲಿದೆ.

ಅಹಿಂದಕ್ಕೆ ಆದ್ಯತೆ

ಸಚಿವ ಸ್ಥಾನಗಳನ್ನು ಎಲ್ಲಾ ಸಮುದಾಯಗಳಿಗೂ ಹಂಚಿಕೆ ಮಾಡಲಾಗಿದೆ. ಈ ಮೂಲಕ ಅಹಿಂದಕ್ಕೆ ಆದ್ಯತೆ ನೀಡಿದಂತಾಗಿದೆ. 13 ಸಚಿವ ಸ್ಥಾನದಲ್ಲಿ ನಾಲ್ಕು ದಲಿತ ವರ್ಗಕ್ಕೆ, ಒಂದು ಒಕ್ಕಲಿಗ ಸಮುದಾಯಕ್ಕೆ, ಮೂರು ಲಿಂಗಾಯತ, ಎರಡು ಅಲ್ಪಸಂಖ್ಯಾತ, ಎರಡು ಕುರುಬ ಸಮುದಾಯಕ್ಕೆ, ಒಂದು ರೆಡ್ಡಿ ಸಮುದಾಯಕ್ಕೆ ಅವಕಾಶ ನೀಡಲಾಗಿದೆ. ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್‌ ಅವರು ಒಕ್ಕಲಿಗ ಸಮುದಾಯದವರಾಗಿದ್ದಾರೆ. ದಲಿತ ವರ್ಗದವರ ಪೈಕಿ ಬಲಗೈ ಸಮುದಾಯದ ಡಾ.ಜಿ.ಪರಮೇಶ್ವರ್‌, ಪ್ರಿಯಾಂಕ್‌ ಖರ್ಗೆ ಸಚಿವರಾಗುತ್ತಿದ್ದು, ಎಡಗೈ ಸಮುದಾಯದ ಕೆ.ಎಚ್‌.ಮುನಿಯಪ್ಪಗೆ ಅವಕಾಶ ನೀಡಲಾಗುತ್ತಿದೆ. ಎಸ್‌ಟಿ ವರ್ಗದಿಂದ ಸತೀಶ್‌ ಜಾರಕಿಹೊಳಿ ಅವರಿಗೆ ಸಚಿವ ಸ್ಥಾನ ನೀಡಲಾಗುತ್ತಿದೆ. ಲಿಂಗಾಯತ ಸಮುದಾಯದ ಎಂ.ಬಿ.ಪಾಟೀಲ್‌, ಶರಣಪ್ರಕಾಶ್‌ ಪಾಟೀಲ್‌ ಮತ್ತು ಈಶ್ವರ್‌ಖಂಡ್ರೆ ಅವರಿಗೆ ಅವಕಾಶ ನೀಡಲಾಗಿದೆ. ಒಕ್ಕಲಿಗ ಸಮುದಾಯದಲ್ಲಿ ಕೃಷ್ಣಬೈರೇಗೌಡ ಅವರಿಗೆ ಸಚಿವ ಸ್ಥಾನ ನೀಡಲಾಗುತ್ತಿದೆ. ಅಲ್ಪಸಂಖ್ಯಾತ ಸಮುದಾಯದವರಲ್ಲಿ ಯು.ಟಿ.ಖಾದರ್‌ ಮತ್ತು ಕೆ.ಜೆ.ಜಾರ್ಜ್‌ ಅವರಿಗೆ ಸಚಿವ ಸ್ಥಾನ ನೀಡಲಾಗುತ್ತಿದೆ. ರೆಡ್ಡಿ ಸಮುದಾಯದ ರಾಮಲಿಂಗಾರೆಡ್ಡಿ ಅವರಿಗೆ ಸಚಿವ ಸ್ಥಾನ ಲಭಿಸುತ್ತಿದೆ. ಇನ್ನು, ಕುರುಬ ಸಮುದಾಯದಿಂದ ಬೈರತಿ ಸುರೇಶ್‌, ಯತೀಂದ್ರ ಸಿದ್ದರಾಮಯ್ಯ ಅವರಿಗೆ ಅವಕಾಶ ನೀಡಲಾಗುತ್ತಿದೆ.

ನೂತನ ಸಚಿವರ ಮುಂದೆ ಪ್ರಸ್ತುತ ರಾಜ್ಯದ ಆರ್ಥಿಕ ಸ್ಥಿತಿಯನ್ನು ಸುಧಾರಿಸುವುದು, ಬರಗಾಲ ನಿರ್ವಹಣೆ, ಕೃಷಿ ಉತ್ತೇಜನ ಮತ್ತು ಮೂಲಸೌಕರ್ಯ ಯೋಜನೆಗಳನ್ನು ತ್ವರಿತವಾಗಿ ಪೂರ್ಣಗೊಳಿಸುವುದು ದೊಡ್ಡ ಸವಾಲಾಗಿದೆ. ಜನಸಾಮಾನ್ಯರ ನಿರೀಕ್ಷೆಗಳನ್ನು ಪೂರೈಸುವ ನಿಟ್ಟಿನಲ್ಲಿ ಈ ಹೊಸ ಸಚಿವ ಸಂಪುಟವು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

Read More
Next Story