Monsoon in the state: Bridges flooded, heavy inflow into reservoirs
x

ಶಿವಮೊಗ್ಗದ ಗಾಜನೂರು ಜಲಾಶಯದಿಂದ 15 ಸಾವಿರ ಕ್ಯೂಸೆಕ್‌ ನೀರನ್ನು ತುಂಗಾ ನದಿಗೆ ಹರಿಸಲಾಯಿತು.

ರಾಜ್ಯದಲ್ಲಿ ಮುಂಗಾರು ಆರ್ಭಟ: ಸೇತುವೆಗಳು ಜಲಾವೃತ, ಜಲಾಶಯಗಳಿಗೆ ಭಾರಿ ಒಳಹರಿವು

ಕೊಡಗಿನಲ್ಲಿ ಬಿರುಗಾಳಿ ಮಳೆ ಮುಂದುವರಿದಿದ್ದು, ಹವಾಮಾನ ಇಲಾಖೆ ಜು. 9ರವರೆಗೆ ಆರೆಂಜ್ ಅಲರ್ಟ್ ಘೋಷಿಸಿದೆ. ಹಾರಂಗಿ ಜಲಾಶಯದ ನೀರಿನ ಮಟ್ಟ ಒಂದೇ ದಿನದಲ್ಲಿ 4 ಅಡಿ ಏರಿಕೆಯಾಗಿದೆ.


Click the Play button to hear this message in audio format

ರಾಜ್ಯದಲ್ಲಿ ಮುಂಗಾರು ಮಳೆಯ ಅಬ್ಬರ ಜೋರಾಗಿದೆ. ಕರಾವಳಿ, ಮಲೆನಾಡು ಹಾಗೂ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ವರುಣನ ಆರ್ಭಟಕ್ಕೆ ಜನಜೀವನ ತಲ್ಲಣಗೊಂಡಿದೆ. ನದಿಗಳು ಉಕ್ಕಿ ಹರಿಯುತ್ತಿದ್ದು, ಪ್ರಮುಖ ಜಲಾಶಯಗಳಿಗೆ ಭಾರಿ ಪ್ರಮಾಣದ ನೀರು ಹರಿದು ಬರುತ್ತಿದೆ. ಮಳೆ ಹಾನಿ ಮತ್ತು ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ.

ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಬೆಳಗಾವಿ ಜಿಲ್ಲೆಯ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಕೃಷ್ಣಾ ನದಿಯ ಒಳಹರಿವು ಒಂದೇ ದಿನದಲ್ಲಿ 15 ಸಾವಿರದಿಂದ 60 ಸಾವಿರ ಕ್ಯೂಸೆಕ್‌ಗೆ ಏರಿಕೆಯಾಗಿದೆ. ಚಿಕ್ಕೋಡಿ ತಾಲೂಕಿನ ಕಲ್ಲೋಳ-ಯಡೂರು ಸೇತುವೆ ಸೇರಿದಂತೆ ಒಟ್ಟು ನಾಲ್ಕು ಸೇತುವೆಗಳು ಮುಳುಗಡೆಯಾಗಿವೆ. ನಿಪ್ಪಾಣಿಯಲ್ಲಿ ದೂದಾಗಂಗಾ-ವೇದಗಂಗಾ ನದಿಯ ಅಬ್ಬರಕ್ಕೆ ಕಾರದಗಾ-ಬೋಜ್ ಸೇತುವೆ ಜಲಾವೃತಗೊಂಡು ಸಂಪರ್ಕ ಕಡಿತಗೊಂಡಿದೆ.

ಕೊಡಗಿನಲ್ಲಿ ಆರೆಂಜ್ ಅಲರ್ಟ್

ಕೊಡಗಿನಲ್ಲಿ ಬಿರುಗಾಳಿ ಮಳೆ ಮುಂದುವರಿದಿದ್ದು, ಹವಾಮಾನ ಇಲಾಖೆ ಜು. 9 ರವರೆಗೆ ಆರೆಂಜ್ ಅಲರ್ಟ್ ಘೋಷಿಸಿದೆ. ಹಾರಂಗಿ ಜಲಾಶಯದ ನೀರಿನ ಮಟ್ಟ ಒಂದೇ ದಿನದಲ್ಲಿ 4 ಅಡಿ ಏರಿಕೆಯಾಗಿದೆ. ಶಿವಮೊಗ್ಗದ ಲಿಂಗನಮಕ್ಕಿ ಹಾಗೂ ಗಾಜನೂರು ಡ್ಯಾಂಗೆ ಒಳಹರಿವು ಹೆಚ್ಚಾಗಿದ್ದು, ವಿಶ್ವವಿಖ್ಯಾತ ಜೋಗ ಜಲಪಾತ ಭೋರ್ಗರೆದು ಧುಮ್ಮಿಕ್ಕುತ್ತಿದೆ.

22 ಸಾವಿರ ಕ್ಯೂಸೆಕ್ ನೀರು ಬಿಡುಗಡೆ

ಹಿಪ್ಪರಗಿ ಬ್ಯಾರೇಜ್‌ನ ಒಳಹರಿವು 30 ಸಾವಿರ ಕ್ಯೂಸೆಕ್‌ಗೆ ಏರಿಕೆಯಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಬ್ಯಾರೇಜ್‌ನ 16 ಗೇಟ್‌ಗಳನ್ನು ತೆಗೆದು 22 ಸಾವಿರ ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಖಾನಾಪುರದಲ್ಲಿ ಮಲಪ್ರಭಾ ನದಿಯ ಉಬ್ಬರಕ್ಕೆ ಪ್ರಸಿದ್ಧ ಹಬ್ಬಾನಟ್ಟಿ ಮಾರುತಿ ದೇವಸ್ಥಾನ ಭಾಗಶಃ ಮುಳುಗಡೆಯಾಗಿದೆ. ಚಿಕ್ಕಮಗಳೂರಿನ ಚಾರ್ಮಾಡಿ ಘಾಟ್‌ನಲ್ಲಿ ದಟ್ಟ ಮಂಜು ಕವಿದಿದ್ದು ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಆದರೆ ಮೂಡಿಗೆರೆಯ ತ್ರಿಪುರ, ಬಕ್ಕಿ ಗ್ರಾಮಗಳಲ್ಲಿ ಮರಗಳು ಉರುಳಿ ಬಿದ್ದು ರಸ್ತೆ ಸಂಚಾರ ಸಂಪೂರ್ಣ ಬಂದ್ ಆಗಿತ್ತು. ಹಾಸನದ ಸಕಲೇಶಪುರದಲ್ಲಿ ತಡೆಗೋಡೆ ಕುಸಿದು ಎರಡು ಮನೆಗಳು ಜಖಂಗೊಂಡಿವೆ.

ಪ್ರವಾಸಿಗರಿಗೆ ನಿರ್ಬಂಧ

ಉಡುಪಿಯ ಹೆಬ್ರಿ ತಾಲೂಕಿನ ಪ್ರಸಿದ್ಧ ಕೂಡ್ಲು ಜಲಪಾತ ಭೀಕರವಾಗಿ ಹರಿಯುತ್ತಿರುವುದರಿಂದ ಮುನ್ನೆಚ್ಚರಿಕೆಯಾಗಿ ಪ್ರವಾಸಿಗರ ಪ್ರವೇಶವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ತಡವಾಗಿ ಬಂದರೂ ಮುಂಗಾರು ಮಳೆ ಬಿರುಸುಗೊಂಡಿರುವುದು ಒಂದೆಡೆ ಆತಂಕ ಸೃಷ್ಟಿಸಿದ್ದರೆ, ಮತ್ತೊಂದೆಡೆ ರೈತರಲ್ಲಿ ಬಿತ್ತನೆ ಚಟುವಟಿಕೆಗಳಿಗೆ ಭರವಸೆ ಮೂಡಿಸಿದೆ.

Read More
Next Story