ಮೇಕೆದಾಟು ಯೋಜನೆಗೆ ತಮಿಳುನಾಡು ಕಾನೂನು ಸಮರ
x

ಮೇಕೆದಾಟು ಯೋಜನೆಗೆ ತಮಿಳುನಾಡು ಕಾನೂನು ಸಮರ

ಮೇಕೆದಾಟು ಯೋಜನೆಗೆ ತಮಿಳುನಾಡು ಕಾನೂನು ಸಮರ

ರಾಜ್ಯ ವಿಧಾನ ಪರಿಷತ್ ಚುನಾವಣೆ ಮುಕ್ತಾಯವಾಗಿದ್ದು ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿದೆ. ಇದೇ ವೇಳೆ ಮೇಕೆದಾಟು ಯೋಜನೆ ತಡೆಯಲು ತಮಿಳುನಾಡು ಸರ್ಕಾರ ಕಾನೂನು ಹೋರಾಟದ ಎಚ್ಚರಿಕೆ ನೀಡಿದೆ.


Click the Play button to hear this message in audio format

ತೀವ್ರ ಕುತೂಹಲ ಕೆರಳಿಸಿದ್ದ ವಿಧಾನ ಪರಿಷತ್ತಿನ ಏಳು ಸ್ಥಾನಗಳ ಚುನಾವಣಾ ಪ್ರಕ್ರಿಯೆ ಯಶಸ್ವಿಯಾಗಿ ಮುಕ್ತಾಯಗೊಂಡಿದ್ದು, ಫಲಿತಾಂಶದ ಕ್ಷಣಗಣನೆ ಆರಂಭವಾಗಿದೆ. ಅಡ್ಡ ಮತದಾನದ ತೀವ್ರ ಭೀತಿ ಮತ್ತು ರಾಜಕೀಯ ಚರ್ಚೆಗಳ ನಡುವೆಯೇ ನಡೆದ ಈ ಚುನಾವಣೆಯಲ್ಲಿ ಶಾಸಕರು ಸಂಜೆ ವೇಳೆಗೆ ಸಂಪೂರ್ಣವಾಗಿ ಮತ ಚಲಾಯಿಸಿದ್ದಾರೆ.


ಕಾಂಗ್ರೆಸ್ ತನ್ನ ಐದು ಹಾಗೂ ಬಿಜೆಪಿ ತನ್ನ ಇಬ್ಬರು ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳುವ ವಿಶ್ವಾಸದಲ್ಲಿದ್ದು, ಜೆಡಿಎಸ್‌ನಿಂದ ಯಾರಾದರೂ ಕ್ರಾಸ್ ವೋಟಿಂಗ್ ಮಾಡಿದ್ದಾರೆಯೇ ಎಂಬ ಕುತೂಹಲ ಮೂಡಿದೆ. ಬಿಜೆಪಿಯಿಂದ ಉಚ್ಚಾಟನೆಗೊಂಡಿದ್ದ ಶಿವರಾಮ್ ಹೆಬ್ಬಾರ್ ಮತ್ತು ಎಸ್.ಟಿ. ಸೋಮಶೇಖರ್ ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಿದ್ದಾರೆ. ಇದೇ ವೇಳೆ ಬಸನಗೌಡ ಪಾಟೀಲ್ ಯತ್ನಾಳ್ ಬಿಜೆಪಿ ಪರ ಮತ ಹಾಕುವುದಾಗಿ ಬಹಿರಂಗವಾಗಿ ಘೋಷಿಸಿದ್ದಕ್ಕೆ ಕಾಂಗ್ರೆಸ್ ನಾಯಕರು ಆಕ್ಷೇಪ ವ್ಯಕ್ತಪಡಿಸಿದರೂ, ಚುನಾವಣಾಧಿಕಾರಿಗಳು ಆ ದೂರನ್ನು ತಿರಸ್ಕರಿಸಿದ್ದಾರೆ. ಮೈತ್ರಿ ಒಪ್ಪಂದದಂತೆ ಬಿಜೆಪಿ ತನ್ನ ಹೆಚ್ಚುವರಿ ಮತಗಳನ್ನು ಜೆಡಿಎಸ್‌ಗೆ ವರ್ಗಾಯಿಸಿದ್ದು, ಇತ್ತ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಮ್ಮ ಶಾಸಕರಿಗೆ ಪ್ರಿಫರೆನ್ಶಿಯಲ್ ವೋಟಿಂಗ್ ತರಬೇತಿ ನೀಡಲು ರೆಸಾರ್ಟ್ ವಾಸ್ತವ್ಯ ಹೂಡಿದ್ದಾಗಿ ಸ್ಪಷ್ಟಪಡಿಸಿದ್ದಾರೆ.

ಮೇಕೆದಾಟು ಯೋಜನೆಗೆ ತಮಿಳುನಾಡು ತಕರಾರು

ರಾಜ್ಯದ ಮಹತ್ವಾಕಾಂಕ್ಷೆಯ ಮೇಕೆದಾಟು ಕುಡಿಯುವ ನೀರಿನ ಯೋಜನೆಗೆ ತಮಿಳುನಾಡು ಸರ್ಕಾರ ಮತ್ತೆ ಕಾನೂನು ಹೋರಾಟದ ಮೂಲಕ ಅಡ್ಡಿಪಡಿಸಲು ಮುಂದಾಗಿರುವುದು ರಾಜ್ಯದ ಜನತೆಗೆ ಶಾಕ್ ನೀಡಿದೆ. ತಮಿಳುನಾಡಿನ ಹೊಸ ಸರ್ಕಾರದ ಜಂಟಿ ಅಧಿವೇಶನದಲ್ಲಿ ಮಾತನಾಡಿದ ಅಲ್ಲಿನ ರಾಜ್ಯಪಾಲರು, ಮೇಕೆದಾಟು ಯೋಜನೆಯಿಂದ ತಮಿಳುನಾಡಿನ ರೈತರಿಗೆ ತೊಂದರೆಯಾಗಲಿದ್ದು, ಇದನ್ನು ಶತಾಯಗತಾಯ ತಡೆಯಲು ಕಾನೂನು ಹೋರಾಟ ಮಾಡುವುದಾಗಿ ಅಧಿಕೃತವಾಗಿ ಘೋಷಿಸಿದ್ದಾರೆ. ತಮಿಳುನಾಡು ಸರ್ಕಾರದ ಈ ನಿಲುವು ರಾಜ್ಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ಇದು ಕೇವಲ ಕುಡಿಯುವ ನೀರಿನ ಯೋಜನೆಯಾಗಿದ್ದು ತಮಿಳುನಾಡಿಗೂ ಇದರಿಂದ ಅನುಕೂಲವಾಗಲಿದೆ ಎಂದಿದ್ದಾರೆ. ತಮಿಳುನಾಡಿಗೆ ಸೇರಬೇಕಾದ 177 ಟಿಎಂಸಿ ನೀರನ್ನು ನಿಯಮಿತವಾಗಿ ಬಿಡಲಾಗುವುದು, ಕಾವೇರಿ ನೀರು ಎಲ್ಲರಿಗೂ ಸೇರಿದ್ದು ಈ ನಿಟ್ಟಿನಲ್ಲಿ ನೆರೆ ರಾಜ್ಯದೊಂದಿಗೆ ಸೌಹಾರ್ದಯುತವಾಗಿ ಕುಳಿತು ಮಾತನಾಡಲು ಸಿದ್ಧರಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು ಕಸದ ಸಮಸ್ಯೆಗೆ ಬ್ರೇಕ್: ಎಲ್ಲೆಂದರಲ್ಲಿ ಕಸ ಹಾಕಿದರೆ ಬೀಳಲಿದೆ ದುಪ್ಪಟ್ಟು ದಂಡ

ರಾಜಕೀಯ ತ್ಯಾಜ್ಯ ನಿರ್ವಹಣೆ ಹಾಗೂ ಬೆಂಗಳೂರಿನ ಕಸದ ಸಮಸ್ಯೆ ಕುರಿತು ಬೆಂಗಳೂರು ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ ಅವರ ನೇತೃತ್ವದಲ್ಲಿ ಅಧಿಕಾರಿಗಳ ಮಹತ್ವದ ಸಭೆ ಜರುಗಿದೆ. ಸುಮಾರು ನಾಲ್ಕರಿಂದ ಐದು ಗಂಟೆಗಳ ಕಾಲ ನಡೆದ ಈ ಸುದೀರ್ಘ ಸಭೆಯಲ್ಲಿ, ರಸ್ತೆ ಬದಿಗಳಲ್ಲಿ ಅಥವಾ ಎಲ್ಲೆಂದರಲ್ಲಿ ಕಸ ಎಸೆಯುವವರಿಗೆ ದುಪ್ಪಟ್ಟು ದಂಡ ವಿಧಿಸಲು ಹಾಗೂ ಕಸದ ಸೂಕ್ತ ಉಸ್ತುವಾರಿಗೆ ಪ್ರತ್ಯೇಕ ಮಾರ್ಷಲ್ ತಂಡಗಳನ್ನು ರಚಿಸಲು ಕಟ್ಟುನಿಟ್ಟಿನ ತೀರ್ಮಾನ ಕೈಗೊಳ್ಳಲಾಗಿದೆ. ಇದರೊಂದಿಗೆ ನಗರದ ರಸ್ತೆಗಳ ನಿರ್ವಹಣೆ ಹಾಗೂ ವಿವಿಧ ನಾಗರಿಕ ಸೇವಾ ಇಲಾಖೆಗಳ ನಡುವಿನ ಸಮನ್ವಯದ ಕೊರತೆಯ ಬಗ್ಗೆಯೂ ಸಚಿವರು ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ಹೊಸದಾಗಿ ಡಾಂಬರು ಹಾಕಿದ ತಕ್ಷಣವೇ ಬಿಡಬ್ಲ್ಯೂಎಸ್‌ಎಸ್‌ಬಿ, ಬೆಸ್ಕಾಂ ಸೇರಿದಂತೆ ವಿವಿಧ ಏಜೆನ್ಸಿಗಳು ರಸ್ತೆ ಅಗೆಯುವ ಹಳೆಯ ಚಾಳಿಯನ್ನು ತರಾಟೆಗೆ ತೆಗೆದುಕೊಂಡಿರುವ ಅವರು, ಅಧಿಕಾರಿಗಳು ಪರಸ್ಪರ ಸಮನ್ವಯತೆಯಿಂದ ಕೆಲಸ ಮಾಡಬೇಕೆಂದು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ.

Read More
Next Story