ಪರಿಷತ್ ಚುನಾವಣೆ: ʼಆತ್ಮಸಾಕ್ಷಿʼ ಮತ ಚಲಾಯಿಸಿದ ಹೆಬ್ಬಾರ್, ಎಸ್‌.ಟಿ. ಸೋಮಶೇಖರ್
x
ಸಿಎಂ ಡಿ.ಕೆ. ಶಿವಕುಮಾರ್‌ ಜೊತೆಗೆ ಎಸ್‌.ಟಿ. ಸೋಮಶೇಖರ್‌, ಶಿವರಾಮ್‌ ಹೆಬ್ಬಾರ್‌

ಪರಿಷತ್ ಚುನಾವಣೆ: ʼಆತ್ಮಸಾಕ್ಷಿʼ ಮತ ಚಲಾಯಿಸಿದ ಹೆಬ್ಬಾರ್, ಎಸ್‌.ಟಿ. ಸೋಮಶೇಖರ್

“ನೂರಕ್ಕೆ ನೂರರಷ್ಟು ಕಾಂಗ್ರೆಸ್‌ನ ಐದೂ ಅಭ್ಯರ್ಥಿಗಳು ಗೆಲ್ಲುವುದು ನಿಶ್ಚಿತ. ಈ ಹಿಂದೆ ನಾವು ಬಿಜೆಪಿಗೆ ಹೋಗಿದ್ದಕ್ಕೆ ಅವರ ಸರ್ಕಾರ ಬಂದಿದ್ದು, ನಮ್ಮಿಂದಲೇ ಬಿಜೆಪಿಯವರಿಗೆ ಅಧಿಕಾರ ಸಿಕ್ಕಿದ್ದು ಎಂದು ಎಸ್‌.ಟಿ. ಸೋಮಶೇಖರ್‌ ಹಾಗೂ ಹೆಬ್ಬಾರ್‌ ಹೇಳಿದ್ದಾರೆ.


ರಾಜ್ಯ ವಿಧಾನ ಪರಿಷತ್ತಿನ ಏಳು ಸ್ಥಾನಗಳಿಗೆ ನಡೆದ ಜಿದ್ದಾಜಿದ್ದಿನ ಚುನಾವಣೆಯಲ್ಲಿ ಬಿಜೆಪಿ ಉಚ್ಛಾಟಿತ ಶಾಸಕರಾದ ಶಿವರಾಮ್‌ ಹೆಬ್ಬಾರ್‌ ಹಾಗೂ ಎಸ್‌.ಟಿ.ಸೋಮಶೇಖರ್‌ ಅವರು ಆತ್ಮಸಾಕ್ಷಿಗೆ ಅನುಗುಣವಾಗಿ ಮತ ಚಲಾಯಿಸಿರುವುದಾಗಿ ಸ್ಪಷ್ಟಪಡಿಸಿದ್ದಾರೆ. ಮತದಾನದ ಪ್ರಕ್ರಿಯೆ ಮುಗಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅಡ್ಡ ಮತದಾನದ ಕುರಿತ ವದಂತಿಗಳಿಗೆ ತೆರೆ ಎಳೆದಿದ್ದಾರೆ.

"ಪರಿಷತ್ ಚುನಾವಣೆಯಲ್ಲಿ ತಮಗೆ ಮತ ಹಾಕುವಂತೆ ಬಿಜೆಪಿ ಅಥವಾ ಜೆಡಿಎಸ್‌ನ ಯಾರೊಬ್ಬರೂ ನಮ್ಮನ್ನು ಕೇಳಿಲ್ಲ. ಆದರೆ ಕಾಂಗ್ರೆಸ್ ನಾಯಕರು ಮಾತ್ರ ನಮಗೆ ಮತ ನೀಡುವಂತೆ ವಿನಂತಿಸಿದ್ದರು. ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ನಮ್ಮ ವಿವೇಚನೆಗೆ ಅನುಗುಣವಾಗಿ ಮತ ಹಾಕಿದ್ದೇವೆʼʼ ಎಂದು ಶಿವರಾಮ್‌ ಹೆಬ್ಬಾರ್ ಹಾಗೂ ಎಸ್‌.ಟಿ. ಸೋಮಶೇಖರ್ ಹೇಳಿದ್ದಾರೆ.

“ನೂರಕ್ಕೆ ನೂರರಷ್ಟು ಕಾಂಗ್ರೆಸ್‌ನ ಐದೂ ಅಭ್ಯರ್ಥಿಗಳು ಗೆಲ್ಲುವುದು ನಿಶ್ಚಿತ. ಈ ಹಿಂದೆ ನಾವು ಬಿಜೆಪಿಗೆ ಹೋಗಿದ್ದಕ್ಕೆ ಅವರ ಸರ್ಕಾರ ಬಂದಿದ್ದು, ನಮ್ಮಿಂದಲೇ ಬಿಜೆಪಿಯವರಿಗೆ ಅಧಿಕಾರ ಸಿಕ್ಕಿದ್ದು ಎಂಬುದನ್ನು ಮರೆಯಬಾರದು” ಎಂದು ಕಿಡಿಕಾರಿದ್ದಾರೆ.

ಕಾಂಗ್ರೆಸ್ ನಾಯಕರೊಟ್ಟಿಗೆ ಬಂದು ಮತದಾನ

ಶಿವರಾಮ್ ಹೆಬ್ಬಾರ್ ಹಾಗೂ ಎಸ್‌.ಟಿ. ಸೋಮಶೇಖರ್‌ ಇಬ್ಬರೂ ಕಾಂಗ್ರೆಸ್ ಹಿರಿಯ ನಾಯಕ ಬಸವರಾಜ್ ರಾಯರಡ್ಡಿ ಜೊತೆಯಲ್ಲೇ ಆಗಮಿಸಿ ಮತದಾನ ಮಾಡಿದರು. ಅಷ್ಟೇ ಅಲ್ಲದೇ ಮತದಾನ ಮುಗಿದ ತಕ್ಷಣವೇ ನೇರವಾಗಿ ತೆರಳಿ ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದು ತೀವ್ರ ಕುತೂಹಲ ಮೂಡಿಸಿತು.

ʼಕೈʼ ಪಾಳಯದ ಐದನೇ ಅಭ್ಯರ್ಥಿ ಗೆಲುವಿಗೆ ಈ ಇಬ್ಬರು ನಾಯಕರ ಮತಗಳು ನಿರ್ಣಾಯಕವಾಗಿದ್ದ ಹಿನ್ನೆಲೆ ಈ ಭೇಟಿಯು ಆಡಳಿತ ಪಕ್ಷದ ರಹಸ್ಯ ಕಾರ್ಯತಂತ್ರದ ಭಾಗವಾಗಿತ್ತು ಎಂದು ವಿಶ್ಲೇಷಿಸಲಾಗುತ್ತಿದೆ.

ಮುಂದಿನ ನಡೆ ಇನ್ನೂ ನಿಗೂಢ

"ನಾವು ಸದ್ಯಕ್ಕೆ ಯಾವುದೇ ನಿರ್ದಿಷ್ಟ ರಾಜಕೀಯ ಪಕ್ಷದ ಜೊತೆ ಗುರುತಿಸಿಕೊಂಡಿಲ್ಲ," ಎಂದು ಹೆಬ್ಬಾರ್ ಪ್ರತಿಪಾದಿಸುತ್ತಿದ್ದರೂ, ಅವರ ನಡೆ ಕಾಂಗ್ರೆಸ್ ಕಡೆಗೆ ವಾಲಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ.

ಬಿಜೆಪಿಯಿಂದ ಉಚ್ಛಾಟನೆಗೊಂಡ ನಂತರ ತಮ್ಮ ಮುಂದಿನ ರಾಜಕೀಯ ಭವಿಷ್ಯ ಖಾತರಿಪಡಿಸಿಕೊಳ್ಳಲು ಹೆಬ್ಬಾರ್ ಸೂಕ್ತ ಸಮಯಕ್ಕಾಗಿ ಕಾಯುತ್ತಿದ್ದರು. ಈಗ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗೆ ಮತ ಹಾಕುವ ಮೂಲಕ ತಮ್ಮ ಮುಂದಿನ ರಾಜಕೀಯ ನಡೆಯ ವದಂತಿಗಳಿಗೆ ಇತಿಶ್ರೀ ಹಾಡಿದ್ದಾರೆ.

ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ನೀಡುವ ಭರವಸೆ ನೀಡಲಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಈ ಮಧ್ಯೆ, ಎಸ್‌.ಟಿ. ಸೋಮಶೇಖರ್‌ ಕೂಡ ತಮ್ಮ ರಾಜಕೀಯ ನಡೆಯನ್ನು ಮುಕ್ತವಾಗಿರಿಸಿಕೊಂಡಿದ್ದಾರೆ.

Read More
Next Story