
ಸಾಂದರ್ಭಿಕ ಚಿತ್ರ (ಎಐ ಆಧಾರಿತ)
Minimum Wages|ಕಾರ್ಮಿಕರಿಗೆ ಬಂಪರ್ ಗಿಫ್ಟ್; ಕನಿಷ್ಠ ವೇತನ ಶೇ.60 ರಷ್ಟು ಹೆಚ್ಚಳ!
ಕನಿಷ್ಠ ವೇತನ ಹೆಚ್ಚಳವು ಇ-ಕಾಮರ್ಸ್, ಖಾಸಗಿ ಶಿಕ್ಷಣ ಸಂಸ್ಥೆಗಳಿಗೂ ಅನ್ವಯವಾಗಲಿದೆ. ಈ ಹೊಸ ವೇತನ ನಿಯಮದ ವ್ಯಾಪ್ತಿಗೆ ಮೊದಲ ಬಾರಿಗೆ ಹಲವು ಹೊಸ ವಲಯಗಳನ್ನು ಸೇರಿಸಲಾಗಿದೆ.
ರಾಜ್ಯದ ಲಕ್ಷಾಂತರ ಕಾರ್ಮಿಕರ ದೀರ್ಘಕಾಲದ ಬೇಡಿಕೆಗೆ ಕೊನೆಗೂ ಮನ್ನಣೆ ಸಿಕ್ಕಿದೆ.
ಕರ್ನಾಟಕ ಸರ್ಕಾರವು ವಿವಿಧ 81 ವಲಯಗಳ ಕಾರ್ಮಿಕರ ಕನಿಷ್ಠ ವೇತನವನ್ನು ಶೇ. 60 ರಷ್ಟು ಹೆಚ್ಚಳ ಮಾಡಿ ಐತಿಹಾಸಿಕ ಆದೇಶ ಹೊರಡಿಸಿದೆ.
ಸುಪ್ರೀಂಕೋರ್ಟ್ ನಿರ್ದೇಶನದಂತೆ ಕಾರ್ಮಿಕ ಇಲಾಖೆಯು ಈ ಅಧಿಕೃತ ಆದೇಶ ಪ್ರಕಟಿಸಿದ್ದು, ಅಸಂಘಟಿತ ವಲಯಗಳ ಕಾರ್ಮಿಕರಿಗೆ ದೊಡ್ಡ ಆರ್ಥಿಕ ಭದ್ರತೆ ಸಿಕ್ಕಂತಾಗಿದೆ.ಈ ಮಹತ್ವದ ತೀರ್ಮಾನವನ್ನು ಪ್ರಕಟಿಸಿರುವ ಕಾರ್ಮಿಕ ಸಚಿವ ಸಂತೋಷ್ ಲಾಡ್, "ಇದೇ ಮೊದಲ ಬಾರಿಗೆ ಹಳೆಯ 4 ಪ್ರತ್ಯೇಕ ವಲಯಗಳ ವರ್ಗೀಕರಣ ಪದ್ಧತಿಯನ್ನು ರದ್ದುಗೊಳಿಸಿ, ಎಲ್ಲಾ ಉದ್ಯೋಗಗಳನ್ನು ಒಂದೇ ಅಧಿಸೂಚನೆಯಡಿ ತರಲಾಗಿದೆ" ಎಂದು ತಿಳಿಸಿದ್ದಾರೆ.
ಇ-ಕಾಮರ್ಸ್, ಖಾಸಗಿ ಶಿಕ್ಷಣ ಸಂಸ್ಥೆಗಳಿಗೂ ವೇತನ ಪರಿಷ್ಕರಣೆ ಅನ್ವಯ ಆಗಲಿದೆ. ಈ ಹೊಸ ವೇತನ ನಿಯಮದ ವ್ಯಾಪ್ತಿಗೆ ಮೊದಲ ಬಾರಿಗೆ ಹಲವು ಹೊಸ ವಲಯಗಳನ್ನು ಸೇರಿಸಲಾಗಿದೆ. ಖಾಸಗಿ ಶಾಲೆ-ಕಾಲೇಜುಗಳ ಬೋಧಕೇತರ ಸಿಬ್ಬಂದಿ, ಇ-ಕಾಮರ್ಸ್ ಮತ್ತು ಕೊರಿಯರ್ ಸೇವೆಗಳು, ಧಾರ್ಮಿಕ ಸಂಸ್ಥೆಗಳು, ಅಮ್ಯೂಸ್‌ಮೆಂಟ್ ಪಾರ್ಕ್‌ಗಳು, ಮೊಬೈಲ್ ಟವರ್ ನಿರ್ವಹಣೆ, ಎಲ್‌ಪಿಜಿ ವಿತರಣಾ ಘಟಕಗಳು, ಎಂ-ಸ್ಯಾಂಡ್ ಘಟಕಗಳು ಹಾಗೂ ಕಂಪ್ಯೂಟರ್ ಮತ್ತು ಸೈಬರ್ ಸೆಂಟರ್‌ಗಳ ಸಿಬ್ಬಂದಿಗೂ ಇನ್ನು ಮುಂದೆ ಪರಿಷ್ಕೃತ ಕನಿಷ್ಠ ವೇತನ ಲಭ್ಯವಾಗಲಿದೆ.
ನಾಲ್ಕು ವಿಭಾಗ ರಚನೆ
ಹೊಸ ವೇತನ ಶ್ರೇಣಿ ಹೊಸ ನಿಯಮಾವಳಿಗಳ ಪ್ರಕಾರ ಇಡೀ ರಾಜ್ಯವನ್ನು 3 ಭೌಗೋಳಿಕ ವಲಯಗಳಾಗಿ ವಿಂಗಡಿಸಲಾಗಿದೆ. ವಲಯ-1 ಬೃಹತ್ ಬೆಂಗಳೂರು ಪ್ರದೇಶ, ವಲಯ-2 ಇತರ ಮಹಾನಗರ ಪಾಲಿಕೆಗಳು ಮತ್ತು ಜಿಲ್ಲಾ ಕೇಂದ್ರಗಳು. ವಲಯ-3 ಉಳಿದ ಗ್ರಾಮೀಣ ಮತ್ತು ಸಣ್ಣ ಪಟ್ಟಣ ಪ್ರದೇಶಗಳು. ಕಾರ್ಮಿಕರ ಕೌಶಲ್ಯದ ಆಧಾರದ ಮೇಲೆ ಅಕುಶಲ, ಅರೆ-ಕುಶಲ , ಕುಶಲ ಮತ್ತು ಉನ್ನತ ಕುಶಲ ಎಂದು 4 ವಿಭಾಗಗಳಾಗಿ ವರ್ಗೀಕರಿಸಲಾಗಿದೆ.
ಯಾರಿಗೆ ಎಷ್ಟು ಸಂಬಳ ಸಿಗಲಿದೆ?
ಬೆಂಗಳೂರು (ವಲಯ-1) ವ್ಯಾಪ್ತಿಯಲ್ಲಿ ಉನ್ನತ ಕುಶಲ ಕಾರ್ಮಿಕರಿಗೆ 31,114 ರೂ. ಕುಶಲ ಕಾರ್ಮಿಕರಿಗೆ 28,285 ರೂ. ಅರೆ-ಕುಶಲ ಕಾರ್ಮಿಕರಿಗೆ 25,714 ರೂ. ಮತ್ತು ಅಕುಶಲ ಕಾರ್ಮಿಕರಿಗೆ 23,376 ರೂ. ಮಾಸಿಕ ಕನಿಷ್ಠ ವೇತನ ಸಿಗಲಿದೆ. ಗ್ರಾಮೀಣ ಮತ್ತು ಸಣ್ಣ ಪಟ್ಟಣಗಳಲ್ಲಿ ಅಕುಶಲ ಕಾರ್ಮಿಕರಿಗೆ ಕನಿಷ್ಠ ಮಾಸಿಕ ವೇತನವನ್ನು 19,319 ರೂ. ಹಾಗೂ ಉನ್ನತ ಕುಶಲ ಕಾರ್ಮಿಕರಿಗೆ 25,714 ರೂ. ನಿಗದಿಪಡಿಸಲಾಗಿದೆ.
ವಿಶೇಷ ವೇತನ
ಪೌರಕಾರ್ಮಿಕರು, ಒಳಚರಂಡಿ ಸ್ವಚ್ಛಗೊಳಿಸುವ ಕಾರ್ಮಿಕರು ಹಾಗೂ ಉಷ್ಣ, ಜಲ, ಸೌರ ಮತ್ತು ಪವನ ವಿದ್ಯುತ್ ಉತ್ಪಾದನಾ ಘಟಕಗಳ ಕಾರ್ಮಿಕರಿಗೆ ಪ್ರತ್ಯೇಕ ವೇತನ ಶ್ರೇಣಿ ಇರಲಿದೆ. ಬೆಂಗಳೂರಿನಲ್ಲಿ ಯಾಂತ್ರೀಕೃತ ನೈರ್ಮಲ್ಯ ಕೆಲಸ ಮಾಡುವ ಕಾರ್ಮಿಕರ ವೇತನ 25,700 ರೂ. ದಾಟಲಿದೆ.
ಲಿಂಗ ತಾರತಮ್ಯಕ್ಕೆ ಬ್ರೇಕ್
ಈ ಹೊಸ ಅಧಿಸೂಚನೆಯಲ್ಲಿ ಲಿಂಗ ತಾರತಮ್ಯವನ್ನು ಸಂಪೂರ್ಣವಾಗಿ ನಿವಾರಿಸಲಾಗಿದೆ. ಸಮಾನ ಕೆಲಸಕ್ಕೆ ಪುರುಷರು, ಮಹಿಳೆಯರು, ತೃತೀಯ ಲಿಂಗಿಗಳು ಹಾಗೂ ವಿಕಲಚೇತನರಿಗೆ ಸಮಾನ ವೇತನ ನೀಡುವುದನ್ನು ಕಡ್ಡಾಯಗೊಳಿಸಲಾಗಿದೆ. ಇನ್ನು ಹೆಚ್ಚುವರಿ ಸಮಯ ಅಥವಾ ವಾರದ ರಜಾದಿನಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ದುಪ್ಪಟ್ಟು ವೇತನ ನೀಡಲು ಸರ್ಕಾರ ಸೂಚಿಸಿದೆ.
ಬ್ಯಾಂಕ್ ಖಾತೆಗೆ ನೇರ ಜಮೆ
ಮಾಲೀಕರು ಕಾರ್ಮಿಕರ ವೇತನವನ್ನು ನೇರವಾಗಿ ಅವರ ಬ್ಯಾಂಕ್ ಖಾತೆಗಳಿಗೆ ಅಥವಾ ಅಧಿಕೃತ ಡಿಜಿಟಲ್ ಪಾವತಿ ವ್ಯವಸ್ಥೆಗಳ ಮೂಲಕವೇ ಪಾವತಿಸಬೇಕು. ನಗದು ರೂಪದ ಸಾಲದ ಪದ್ಧಕಿಗೆ ಬ್ರೇಕ್ ಬಿದ್ದಿದೆ. ತಿಂಗಳ ದಿನಗೂಲಿಯನ್ನು 26 ಕೆಲಸದ ದಿನಗಳ ಆಧಾರದ ಮೇಲೆ ಲೆಕ್ಕ ಹಾಕಲಾಗುವುದು ಮತ್ತು ವಾರದ ರಜೆ ದಿನಗಳಿಗೂ ವೇತನ ಸಹಿತ ರಜೆ ಸೌಲಭ್ಯವಿರಲಿದೆ. ಬದಲಾಗುವ ತುಟ್ಟಿಭತ್ಯೆಯನ್ನು ಗ್ರಾಹಕ ಬೆಲೆ ಸೂಚ್ಯಂಕದ ಆಧಾರದ ಮೇಲೆ ಪ್ರತಿ ವರ್ಷ ಪರಿಷ್ಕರಿಸಲಾಗುತ್ತದೆ ಎಂದು ತಿಳಿಸಲಾಗಿದೆ.

