
ಮೆಗಾ ಲೋಕ ಅದಾಲತ್; ಸರ್ಕಾರಕ್ಕೆ 55 ಕೋಟಿ ಆದಾಯ
ಸಂಚಾರ ದಂಡದ ಮೇಲಿನ ಶೇ. 50 ರಷ್ಟು ರಿಯಾಯಿತಿಯನ್ನು ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಲು ಜೂನ್ 21 ರಿಂದ ಜುಲೈ 10 ರವರೆಗೆ ಕಾಲಾವಕಾಶ ನೀಡಲಾಗಿತ್ತು.
ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ರಾಜ್ಯ ಸರ್ಕಾರದ ವತಿಯಿಂದ ಜಾರಿಗೆ ತಂದಿದ್ದ ಸಂಚಾರ ನಿಯಮ ಉಲ್ಲಂಘನೆಯ ಬಾಕಿ ದಂಡದ ಮೇಲಿನ ಶೇ. 50 ರಷ್ಟು ರಿಯಾಯಿತಿ ನೀಡುವ ಯೋಜನೆಗೆ ಸಾರ್ವಜನಿಕರಿಂದ ಅಭೂತಪೂರ್ವ ಸ್ಪಂದನೆ ದೊರೆತಿದೆ. ಜು.11 ರಂದು ರಾಜ್ಯಾದ್ಯಂತ ಹಮ್ಮಿಕೊಂಡಿದ್ದ ಮೆಗಾ ಲೋಕ ಅದಾಲತ್ನಲ್ಲಿ ಬರೋಬ್ಬರಿ 19.13 ಲಕ್ಷಕ್ಕೂ ಅಧಿಕ ಪ್ರಕರಣಗಳು ಇತ್ಯರ್ಥಗೊಂಡಿದ್ದು, ದಂಡದ ರೂಪದಲ್ಲಿ ಸರ್ಕಾರದ ಬೊಕ್ಕಸಕ್ಕೆ ಒಟ್ಟು 55 ಕೋಟಿ ರೂ. ಆದಾಯ ಹರಿದುಬಂದಿದೆ.
20 ದಿನಗಳ ಅವಕಾಶ
ಸಂಚಾರ ದಂಡದ ಮೇಲಿನ ಶೇ. 50 ರಷ್ಟು ರಿಯಾಯಿತಿಯನ್ನು ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಲು ಜೂನ್ 21 ರಿಂದ ಜುಲೈ 10 ರವರೆಗೆ ಕಾಲಾವಕಾಶ ನೀಡಲಾಗಿತ್ತು. ಈ ರಿಯಾಯಿತಿ ಯೋಜನೆಯಡಿ ಒಟ್ಟು 19,13,659 ಸಂಚಾರ ಚಲನ್ ಪ್ರಕರಣಗಳನ್ನು ಯಶಸ್ವಿಯಾಗಿ ಇತ್ಯರ್ಥಪಡಿಸಲಾಗಿದೆ.
78.79 ಲಕ್ಷ ಪ್ರಕರಣಗಳ ಇತ್ಯರ್ಥ
ಲೋಕ ಅದಾಲತ್ನಲ್ಲಿ ಇತ್ಯರ್ಥಗೊಂಡ ಪ್ರಕರಣಗಳ ವಿವರಗಳನ್ನು ಕಾನೂನು ಸೇವೆ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಹೈಕೋರ್ಟ್ ನ್ಯಾಯಮೂರ್ತಿ ಅನು ಶಿವರಾಮನ್ ಅವರು ಈ ಮಾಹಿತಿ ಹಂಚಿಕೊಂಡಿದ್ದಾರೆ. ಈ ಬಾರಿಯ ಮೆಗಾ ಲೋಕ ಅದಾಲತ್ನಲ್ಲಿ ಒಟ್ಟು 78.79 ಲಕ್ಷ ಪ್ರಕರಣಗಳನ್ನು ಇತ್ಯರ್ಥಗೊಳಿಸಿದ್ದು, ಇದರಲ್ಲಿ 2.54 ಲಕ್ಷ ಬಾಕಿ ಇದ್ದ ಪ್ರಕರಣಗಳು ಹಾಗೂ 76.25 ಲಕ್ಷ ಪೂರ್ವ ವ್ಯಾಜ್ಯ ಪ್ರಕರಣಗಳೂ ಸೇರಿವೆ. ಇಡೀ ಪ್ರಕ್ರಿಯೆಯಲ್ಲಿ ಒಟ್ಟು 3,017 ಕೋಟಿ ರೂ.ಗಳಷ್ಟು ಭಾರಿ ಮೊತ್ತದ ವಿವಾದಗಳನ್ನು ಇತ್ಯರ್ಥಪಡಿಸಲಾಗಿದೆ.
ಸಾರಿಗೆ ಇಲಾಖೆಗೆ ಸಂಬಂಧಿಸಿದ 1,212 ಪ್ರಕರಣಗಳನ್ನು ಇತ್ಯರ್ಥಪಡಿಸುವ ಮೂಲಕ ಇಲಾಖೆಗೆ 61.99 ಲಕ್ಷ ರೂ. ಮರುಪಡೆಯಲಾಗಿದೆ. ಹಿರಿಯ ನಾಗರಿಕರಿಗೆ ಸಂಬಂಧಿಸಿದ 1,948 ಪ್ರಕರಣಗಳನ್ನು ಇತ್ಯರ್ಥಗೊಳಿಸುವ ಮೂಲಕ ವಯೋವೃದ್ಧರಿಗೆ ಕಾನೂನಾತ್ಮಕವಾಗಿ ಸೂಕ್ತ ನೆರವು ನೀಡಲಾಗಿದೆ.
ಧಾರವಾಡ ಜಿಲ್ಲೆಯಲ್ಲಿ ನಡೆದ ಮೋಟಾರು ವಾಹನ ಅಪಘಾತ ಪ್ರಕರಣದಲ್ಲಿ ಸಂತ್ರಸ್ತರಿಗೆ ಬರೋಬ್ಬರಿ 2.45 ಕೋಟಿ ರೂ.ಗಳ ಭಾರಿ ಮೊತ್ತದ ಪರಿಹಾರವನ್ನು ಪರಸ್ಪರ ಒಪ್ಪಂದದ ಮೂಲಕ ಕೊಡಿಸುವಲ್ಲಿ ಲೋಕ ಅದಾಲತ್ ಯಶಸ್ವಿಯಾಗಿದೆ.

