ನೂತನ ಕಡಲ ಜೈವಿಕ ತಂತ್ರಜ್ಞಾನ ನೀತಿ 2026-31ಕ್ಕೆ ಸಚಿವ ಸಂಪುಟ ಅನುಮೋದನೆ
x

ನೂತನ ಕಡಲ ಜೈವಿಕ ತಂತ್ರಜ್ಞಾನ ನೀತಿ 2026-31ಕ್ಕೆ ಸಚಿವ ಸಂಪುಟ ಅನುಮೋದನೆ

ಪ್ರಸ್ತುತ ಸುಮಾರು 2 ಬಿಲಿಯನ್ ಡಾಲರ್ ಇರುವ ರಾಜ್ಯದ ಬ್ಲೂ ಬಯೋ ಎಕಾನಮಿಯನ್ನು, 2031ರ ವೇಳೆಗೆ 6 -8 ಬಿಲಿಯನ್ ಡಾಲರ್‌ಗಳಿಗೆ ಹೆಚ್ಚಿಸುವ ಮಹತ್ವಾಕಾಂಕ್ಷೆಯ ಗುರಿಯನ್ನು ಸರ್ಕಾರ ಹೊಂದಿದೆ,


Click the Play button to hear this message in audio format

ಮಂಗಳೂರಿನಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ, ಮಹತ್ವಾಕಾಂಕ್ಷೆಯ ‘ಕರ್ನಾಟಕ ಕಡಲ ಜೈವಿಕ ತಂತ್ರಜ್ಞಾನ ನೀತಿ 2026–2031’ಕ್ಕೆ ಅಧಿಕೃತ ಅನುಮೋದನೆ ದೊರೆತಿದೆ. ಈ ನೀತಿಯು ಕೇವಲ ಮೀನುಗಾರಿಕೆಗೆ ಸೀಮಿತವಾಗಿದ್ದ ಕರಾವಳಿ ಆರ್ಥಿಕತೆಯನ್ನು, ಆಧುನಿಕ ವಿಜ್ಞಾನ ಮತ್ತು ತಂತ್ರಜ್ಞಾನದ ನೆರವಿನೊಂದಿಗೆ ಬ್ಲೂ ಬಯೋ ಎಕಾನಮಿಯನ್ನಾಗಿ ಪರಿವರ್ತಿಸುವ ಗುರಿ ಹೊಂದಿದೆ.

ಕರ್ನಾಟಕದ 343.3 ಕಿ.ಮೀ. ಉದ್ದದ ಕರಾವಳಿ ಪ್ರದೇಶವು ಅತ್ಯಮೂಲ್ಯವಾದ ಜೈವಿಕ ವೈವಿಧ್ಯತೆಯನ್ನು ಹೊಂದಿದೆ. ಈ ಸಂಪನ್ಮೂಲವನ್ನು ಕೇವಲ ಸಾಂಪ್ರದಾಯಿಕ ಮೀನುಗಾರಿಕೆಗೆ ಬಳಸುವ ಬದಲು, ಔಷಧೀಯ ಪದಾರ್ಥಗಳು, ಸೌಂದರ್ಯವರ್ಧಕಗಳು, ಜೈವಿಕ ಗೊಬ್ಬರಗಳು ಮತ್ತು ಜೈವಿಕ ವಿಘಟನೀಯ ವಸ್ತುಗಳ ತಯಾರಿಕೆಗೆ ಬಳಸಲಾಗುತ್ತದೆ. ಪ್ರಸ್ತುತ ಸುಮಾರು 2 ಬಿಲಿಯನ್ ಡಾಲರ್ ಇರುವ ರಾಜ್ಯದ ಬ್ಲೂ ಬಯೋ ಎಕಾನಮಿಯನ್ನು, 2031ರ ವೇಳೆಗೆ 6 ರಿಂದ 8 ಬಿಲಿಯನ್ ಡಾಲರ್‌ಗಳಿಗೆ ಏರಿಸುವ ಮಹತ್ವಾಕಾಂಕ್ಷೆಯ ಗುರಿಯನ್ನು ಸರ್ಕಾರ ಹೊಂದಿದೆ ಎಂದು ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಜೈವಿಕ ತಂತ್ರಜ್ಞಾನದ ಕೇಂದ್ರ

ಸಂಶೋಧನೆ ಮತ್ತು ವಾಣಿಜ್ಯೀಕರಣದ ನಡುವಿನ ಕಂದಕವನ್ನು ಮುಚ್ಚಲು ಸರ್ಕಾರ ‘ಕರ್ನಾಟಕ ಇನ್‌ಸ್ಟಿಟ್ಯೂಟ್ ಆಫ್ ಮೆರೈನ್ ಬಯೋಟೆಕ್ನಾಲಜಿ ಅಂಡ್ ಬ್ಲೂ ಎಕಾನಮಿ’ (ಕೆಐಎಂಬಿಇ) ಎಂಬ ವಿಶೇಷ ಸಂಸ್ಥೆಯನ್ನು ಸ್ಥಾಪಿಸಲಿದೆ. ಮೀನುಗಾರಿಕಾ ಕಾಲೇಜುಗಳ ಮೂಲಸೌಕರ್ಯಗಳನ್ನು ಬಳಸಿಕೊಂಡು ಇದನ್ನು ಅಭಿವೃದ್ಧಿಪಡಿಸಲಾಗುವುದು. ಇಲ್ಲಿ ಸುಧಾರಿತ ಪ್ರಯೋಗಾಲಯಗಳು, ಬಯೋಬ್ಯಾಂಕ್, ಜೈವಿಕ ನಾವೀನ್ಯತೆ ಮತ್ತು ಇನ್‌ಕ್ಯುಬೇಷನ್ ಸೆಂಟರ್‌ಗಳು ಇರಲಿವೆ. ಇದಕ್ಕಾಗಿ ಐದು ವರ್ಷಗಳಲ್ಲಿ 60 ಕೋಟಿ ರೂ. ವೆಚ್ಚ ಮಾಡಲಾಗುವುದು. ಇದು ಯುವ ಸಂಶೋಧಕರಿಗೆ ಮತ್ತು ಸ್ಟಾರ್ಟ್‌ಅಪ್‌ಗಳಿಗೆ ದೊಡ್ಡ ವೇದಿಕೆಯಾಗಲಿದೆ. ಕರಾವಳಿ ಪ್ರದೇಶಗಳಲ್ಲಿ ಕೇವಲ ಸಂಶೋಧನೆಯಷ್ಟೇ ಅಲ್ಲದೆ, ದೊಡ್ಡ ಮಟ್ಟದ ಉತ್ಪಾದನೆಗೆ ಅಗತ್ಯವಾದ ವಾತಾವರಣವನ್ನು ನಿರ್ಮಿಸಲು ‘ಮೆರೈನ್ ಬಯೋಟೆಕ್ನಾಲಜಿ ವಲಯ’ಗಳನ್ನು ಸ್ಥಾಪಿಸಲಾಗುವುದು. ಇವು ಸಂಶೋಧನಾ ಸಂಸ್ಥೆಗಳು, ಕೈಗಾರಿಕೆಗಳು ಮತ್ತು ಕರಾವಳಿ ಮೀನುಗಾರರ ನಡುವೆ ಸೇತುವೆಯಾಗಿ ಕೆಲಸ ಮಾಡುತ್ತವೆ ಎಂದು ವಿವರಿಸಿದರು.

ಸಮುದ್ರ ಕಳೆ ಕ್ರಾಂತಿ

ಸಮುದ್ರದಲ್ಲಿ ಬೆಳೆಯುವ ಪಾಚಿ ಅಥವಾ ಕಳೆಗಳು ಅತ್ಯುತ್ತಮ ಔಷಧೀಯ ಮತ್ತು ಪೌಷ್ಟಿಕಾಂಶದ ಗುಣಗಳನ್ನು ಹೊಂದಿರುತ್ತವೆ. ಇವುಗಳನ್ನು ಬಳಸಿಕೊಂಡು ಹೈಡ್ರೋಕೊಲಾಯ್ಡ್‌ಗಳು, ನ್ಯೂಟ್ರಾಸ್ಯೂಟಿಕಲ್ಸ್‌ ಮತ್ತು ಜೈವಿಕ ರಾಸಾಯನಿಕಗಳನ್ನು ತಯಾರಿಸುವ ಉದ್ಯಮಗಳಿಗೆ ಉತ್ತೇಜನ ನೀಡಲು ʼಕಡಲಕಳೆ ಮೌಲ್ಯವರ್ಧನೆ – ಉತ್ಪಾದನೆ ಆಧಾರಿತ ಪ್ರೋತ್ಸಾಹಕʼ ಯೋಜನೆ ಜಾರಿಗೆ ತರಲಾಗುವುದು. ಇದಕ್ಕೆ 45 ಕೋಟಿ ರೂ. ಅನುದಾನವನ್ನು ಮೀಸಲಿಡಲಾಗಿದೆ. ಇದು ಮೀನುಗಾರರಿಗೆ ಪರ್ಯಾಯ ಆದಾಯದ ಮೂಲವನ್ನು ಸೃಷ್ಟಿಸಲಿದೆ. ಜಾಗತಿಕ ಹವಾಮಾನ ಬದಲಾವಣೆಯ ಹಿನ್ನೆಲೆಯಲ್ಲಿ ಇಂಗಾಲದ ಹೊರಸೂಸುವಿಕೆ ತಗ್ಗಿಸುವುದು ಅನಿವಾರ್ಯವಾಗಿದೆ. ಸಮುದ್ರ ಕಳೆ ಕೃಷಿಯು ಇಂಗಾಲವನ್ನು ಹೀರಿಕೊಳ್ಳುವ ಸಾಮರ್ಥ್ಯ ಹೊಂದಿದೆ. ಇವುಗಳ ವೈಜ್ಞಾನಿಕ ಮೌಲ್ಯಮಾಪನ ಮತ್ತು ಪ್ರಮಾಣೀಕರಣ ಮಾಡಲು ‘ಬ್ಲೂ ಕಾರ್ಬನ್ ಸರ್ಟಿಫಿಕೇಶನ್ ಪ್ರೋಗ್ರಾಂ’ ಆರಂಭಿಸಲಾಗುವುದು. ಇದರಿಂದ ಮುಂದಿನ ದಿನಗಳಲ್ಲಿ ಕರ್ನಾಟಕದ ಕರಾವಳಿ ಉದ್ಯಮಗಳು ಅಂತಾರಾಷ್ಟ್ರೀಯ ಕಾರ್ಬನ್ ಮಾರುಕಟ್ಟೆಯಲ್ಲಿ ಭಾಗವಹಿಸಿ ಹಣಗಳಿಸಲು ಸಾಧ್ಯವಾಗಲಿದೆ ಎಂದು ತಿಳಿಸಿದರು.

ಉದ್ಯೋಗ ಸೃಷ್ಟಿ ಮತ್ತು ಸಮುದಾಯದ ಏಳಿಗೆ

ಈ ನೀತಿಯು ಕೇವಲ ಲಾಭದಾಯಕ ವಲಯವಲ್ಲ, ಇದು ಉದ್ಯೋಗದ ಕಾರ್ಖಾನೆಯೂ ಹೌದು. ಸುಮಾರು 2,500ಕ್ಕೂ ಹೆಚ್ಚು ಉನ್ನತ ತಾಂತ್ರಿಕ ಉದ್ಯೋಗಗಳು ಸೃಷ್ಟಿಯಾಗಲಿವೆ. ಸ್ಥಳೀಯ ಮಟ್ಟದಲ್ಲಿ 7,500ಕ್ಕೂ ಹೆಚ್ಚು ಜೀವನೋಪಾಯ ಅವಕಾಶಗಳು ದೊರೆಯಲಿವೆ. ಮೀನುಗಾರಿಕಾ ಸಮುದಾಯಗಳಿಗೆ ಆಧುನಿಕ ತಂತ್ರಜ್ಞಾನದ ತರಬೇತಿ ನೀಡುವುದರಿಂದ ಅವರ ಜೀವನಮಟ್ಟ ಸುಧಾರಿಸಲಿದೆ. ಕರಾವಳಿಯು ವಿಜ್ಞಾನ, ತಂತ್ರಜ್ಞಾನ ಮತ್ತು ನಾವೀನ್ಯತೆಗಳ ಕೇಂದ್ರವಾಗಬೇಕು. ಕೇವಲ ಮೀನು ಹಿಡಿಯುವುದಕ್ಕೆ ಸೀಮಿತವಾಗದೆ, ಸಮುದ್ರ ಸಂಪನ್ಮೂಲಗಳನ್ನು ವೈಜ್ಞಾನಿಕವಾಗಿ ಮೌಲ್ಯವರ್ಧನೆ ಮಾಡುವುದೇ ನಮ್ಮ ಗುರಿ. ಸ್ಟಾರ್ಟ್‌ಅಪ್‌ಗಳಿಗೆ ಈ ವಲಯದಲ್ಲಿ ದೊಡ್ಡ ಅವಕಾಶಗಳಿವೆ. ಇದು ಕರ್ನಾಟಕವನ್ನು ಸಮುದ್ರ ಜೈವಿಕ ತಂತ್ರಜ್ಞಾನದ ಜಾಗತಿಕ ಕೇಂದ್ರವನ್ನಾಗಿ ಮಾಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Read More
Next Story