
ಒಳ ಮೀಸಲಾತಿ ಕಗ್ಗಂಟು| ಸಿಎಂ, ಸಚಿವರಿಗೆ ಕಪ್ಪುಬಾವುಟ ಪ್ರದರ್ಶಿಸಲು ನಿರ್ಣಯ
2011ರ ನಂತರ ಕೇಂದ್ರ ಸರ್ಕಾರವು ದೇಶಾದ್ಯಂತ ರಾಷ್ಟ್ರೀಯ ಜನಗಣತಿ ನಡೆಸುತ್ತಿದೆ. ಈ ಸಮೀಕ್ಷೆಯಲ್ಲಿ ಮಾದಿಗ ಸಮುದಾಯದ ಪ್ರತಿಯೊಬ್ಬರೂ ಕಡ್ಡಾಯವಾಗಿ ತಮ್ಮ ಜಾತಿಯ ಜನಸಂಖ್ಯೆಯನ್ನು ನಿಖರವಾಗಿ ದಾಖಲಿಸಲು ಮನವಿ ಮಾಡಲಾಗಿದೆ.
ಪರಿಶಿಷ್ಟ ಜಾತಿಯ ಒಳ ಮೀಸಲಾತಿ ಜಾರಿ ಮಾಡುವಲ್ಲಿ ವಿಳಂಬ ನೀತಿ ಅನುಸರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್, ಸಚಿವರು ರಾಜ್ಯದ ಯಾವುದೇ ಮೂಲೆಯಲ್ಲಿ ಸಂಚರಿಸಿದರೂ ಕಪ್ಪು ಬಾವುಟ ಪ್ರದರ್ಶಿಸಲು ಮಾದಿಗ ಸಂಘಟನೆಗಳ ಒಕ್ಕೂಟದ ರಾಜ್ಯ ಸಮಿತಿ ನಿರ್ಣಯ ತೆಗೆದುಕೊಂಡಿದೆ.
ಒಳ ಮೀಸಲಾತಿ ಜಾರಿ ವಿಳಂಬದ ಹಿನ್ನೆಲೆ ಮುಂದಿನ ಹೋರಾಟಗಳ ರೂಪುರೇಷೆ ಸಿದ್ಧಪಡಿಸುವ ಸಲುವಾಗಿ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಸಭೆಯಲ್ಲಿ ಸಮಿತಿಯ ಮುಖಂಡರು ಈ ಸಂಬಂಧ ಮಹತ್ವದ ನಿರ್ಣಯ ಕೈಗೊಂಡಿದ್ದಾರೆ.
ಒಳ ಮೀಸಲಾತಿಗಾಗಿ ಕಳೆದ 35 ವರ್ಷಗಳಿಂದ ಮಾದಿಗ ಸಮುದಾಯ ನಿರಂತರವಾಗಿ ಹೋರಾಟ ನಡೆಸುತ್ತಿದ್ದರೂ ಸರ್ಕಾರಗಳು ವಿಳಂಬ ನೀತಿ ಅನುಸರಿಸುತ್ತಿವೆ. ಇದೀಗ ಏ.24 ರಂದು ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಒಳ ಮೀಸಲಾತಿ ಕುರಿತು ತೀರ್ಮಾನ ತೆಗೆದುಕೊಳ್ಳುವುದಾಗಿ ರಾಜ್ಯ ಸರ್ಕಾರ ಹೇಳುತ್ತಿದೆ. ಈ ಹಿನ್ನೆಲೆಯಲ್ಲಿ ಏ.24ರವರೆಗೂ ರಾಜ್ಯಾದ್ಯಂತ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳು ಹಾಗೂ ಉಸ್ತುವಾರಿ ಸಚಿವರು ಭಾಗವಹಿಸುವ ಯಾವುದೇ ಸರ್ಕಾರಿ ಕಾರ್ಯಕ್ರಮಗಳಲ್ಲಿ ಕಪ್ಪುಬಾವುಟ ಪ್ರದರ್ಶಿಸಲಾಗುವುದು. ಹಂತ ಹಂತವಾಗಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಸಮಿತಿಯ ನಾಯಕರು ಎಚ್ಚರಿಕೆ ನೀಡಿದ್ದಾರೆ.
ಜನಗಣತಿಯಲ್ಲಿ ಭಾಗವಹಿಸಲು ಸಲಹೆ
2011ರ ನಂತರ ಪ್ರಸ್ತುತ ಕೇಂದ್ರ ಸರ್ಕಾರ ದೇಶಾದ್ಯಂತ ಐತಿಹಾಸಿಕ ರಾಷ್ಟ್ರೀಯ ಜನಗಣತಿ ನಡೆಸುತ್ತಿದೆ. ಈ ಸಮೀಕ್ಷೆಯಲ್ಲಿ ಮಾದಿಗ ಸಮುದಾಯದ ಪ್ರತಿಯೊಬ್ಬರೂ ಕಡ್ಡಾಯವಾಗಿ ಭಾಗವಹಿಸಿ, ತಮ್ಮ ಜಾತಿಯ ಜನಸಂಖ್ಯೆಯನ್ನು ನಿಖರವಾಗಿ ದಾಖಲಿಸಬೇಕು. ಈ ಮೂಲಕ ಸಮುದಾಯದ ಬಲವನ್ನು ಸಾಬೀತುಪಡಿಸಬೇಕು. ಇದು ಸಮುದಾಯಕ್ಕೆ ಸದಾವಕಾಶವಾಗಿದೆ. ಈ ಬಗ್ಗೆ ಜಿಲ್ಲಾ, ತಾಲ್ಲೂಕು ಮತ್ತು ಗ್ರಾಮ ಮಟ್ಟದಲ್ಲಿ ವ್ಯಾಪಕ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಹಿರಿಯ ಮುಖಂಡರ ನೇತೃತ್ವ
ಮಾದಿಗ ಸಂಘಟನೆಗಳ ಒಕ್ಕೂಟದ ರಾಜ್ಯ ಸಮಿತಿಯ ಈ ಸಭೆಯಲ್ಲಿ ಒಳ ಮೀಸಲಾತಿಗಾಗಿ ದಶಕಗಳಿಂದ ಹೋರಾಡುತ್ತಾ ಬಂದಿರುವ ರಾಜ್ಯ ಮಟ್ಟದ ಹಿರಿಯ ಮುಖಂಡರು ಹಾಗೂ ವಿವಿಧ ಮಾದಿಗ ಸಮುದಾಯಗಳ ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.
"ನಮ್ಮ ಹಕ್ಕಿಗಾಗಿ ನಡೆಯುತ್ತಿರುವ ಈ ಹೋರಾಟವು ತಾರ್ಕಿಕ ಅಂತ್ಯ ಕಾಣುವವರೆಗೂ ವಿಶ್ರಮಿಸುವುದಿಲ್ಲ" ಎಂದು ಮುಖಂಡರು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಈಗಾಗಲೇ ದಾವಣಗೆರೆ ದಕ್ಷಿಣ, ಬಾಗಲಕೋಟೆ ವಿಧಾನಸಭೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ವಿರುದ್ಧ ಮಾದಿಗ ಸಮುದಾಯದ ಸಂಘಟನೆಗಳ ಪ್ರಚಾರ ನಡೆಸಿದ್ದರು.

