ಕರ್ನಾಟಕ ಲೋಕಾಯುಕ್ತ ದೇಶಕ್ಕೆ ಮಾದರಿ: ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ
x

ಕರ್ನಾಟಕ ಲೋಕಾಯುಕ್ತ ದೇಶಕ್ಕೆ ಮಾದರಿ: ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ

ಬದಲಾಗುತ್ತಿರುವ ಕಾಲಘಟ್ಟದಲ್ಲಿ ಲೋಕಾಯುಕ್ತವು ತಾಂತ್ರಿಕವಾಗಿ ಮತ್ತಷ್ಟು ಬಲಗೊಳ್ಳಬೇಕು. ವಿಶೇಷವಾಗಿ ತನಿಖಾ ಪ್ರಕ್ರಿಯೆಗಳಲ್ಲಿ ವಿಳಂಬವಾಗದಂತೆ ನೋಡಿಕೊಳ್ಳುವುದು ನ್ಯಾಯದಾನದ ದೃಷ್ಟಿಯಿಂದ ಅತ್ಯಗತ್ಯ.


Click the Play button to hear this message in audio format

ಭ್ರಷ್ಟಾಚಾರ ಮುಕ್ತ ಆಡಳಿತ ಹಾಗೂ ಸಾಮಾನ್ಯ ಜನರ ಹಕ್ಕುಗಳ ರಕ್ಷಣೆಯಲ್ಲಿ ಕರ್ನಾಟಕ ಲೋಕಾಯುಕ್ತ ಸಂಸ್ಥೆಯು ದೇಶಕ್ಕೆ ಮಾದರಿಯಾಗಿದೆ ಎಂದು ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್‌ ಮೆಚ್ಚುಗೆ ವ್ಯಕ್ತಪಡಿಸಿದರು.

ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದ "ಲೋಕಾಯುಕ್ತ ಸಂಸ್ಥೆಗೆ ನಲವತ್ತರ ಸಂಭ್ರಮ" ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಳೆದ ನಾಲ್ಕು ದಶಕಗಳಿಂದ ಅಧಿಕಾರ ದುರುಪಯೋಗ ಮತ್ತು ಭ್ರಷ್ಟಾಚಾರದ ವಿರುದ್ಧದ ಹೋರಾಟದಲ್ಲಿ ಈ ಸಂಸ್ಥೆಯು ನಾಗರಿಕರ ಪಾಲಿಗೆ ಭರವಸೆಯ ಬೆಳಕಾಗಿದೆ. ಸಂವಿಧಾನವು ಪ್ರತಿಪಾದಿಸುವ ಸಾಮಾಜಿಕ ನ್ಯಾಯ ಮತ್ತು ಸಮಾನತೆಯನ್ನು ಎತ್ತಿ ಹಿಡಿಯುವಲ್ಲಿ ಇಂತಹ ಸ್ವಾಯತ್ತ ಸಂಸ್ಥೆಗಳ ಪಾತ್ರ ಅತ್ಯಂತ ಪ್ರಮುಖವಾದುದು. ತಳಮಟ್ಟದ ಜನರಿಗೂ ನ್ಯಾಯ ಸಿಗುವಂತಾಗಲು ಸಂಸ್ಥೆಯು ಜನಸ್ನೇಹಿಯಾಗಿ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.

ಬದಲಾಗುತ್ತಿರುವ ಕಾಲಘಟ್ಟದಲ್ಲಿ ಲೋಕಾಯುಕ್ತವು ತಾಂತ್ರಿಕವಾಗಿ ಮತ್ತು ಕಾನೂನಾತ್ಮಕವಾಗಿ ಮತ್ತಷ್ಟು ಬಲಗೊಳ್ಳಬೇಕು. ವಿಶೇಷವಾಗಿ ತನಿಖಾ ಪ್ರಕ್ರಿಯೆಗಳಲ್ಲಿ ವಿಳಂಬವಾಗದಂತೆ ನೋಡಿಕೊಳ್ಳುವುದು ನ್ಯಾಯದಾನದ ದೃಷ್ಟಿಯಿಂದ ಅತ್ಯಗತ್ಯ. ಕೇವಲ ಶಿಕ್ಷೆಯಿಂದ ಭ್ರಷ್ಟಾಚಾರ ನಿರ್ಮೂಲನೆ ಸಾಧ್ಯವಿಲ್ಲ. ಸಮಾಜದಲ್ಲಿ ನೈತಿಕ ಮೌಲ್ಯಗಳ ಜಾಗೃತಿಯಾಗಬೇಕು. ಲೋಕಾಯುಕ್ತವು ಕೇವಲ ದಂಡಿಸುವ ಸಂಸ್ಥೆಯಾಗದೆ, ಜನರಲ್ಲಿ ಜಾಗೃತಿ ಮೂಡಿಸುವ ವೇದಿಕೆಯಾಗಬೇಕು ಎಂದು ತಿಳಿಸಿದರು.

ರಾಜಿ ಇಲ್ಲದ ಹೋರಾಟ

ಪ್ರಾಸ್ತಾವಿಕ ಭಾಷಣ ಮಾಡಿದ ಲೋಕಾಯುಕ್ತ ನ್ಯಾ.ಬಿ.ಎಸ್. ಪಾಟೀಲ್, ಸಂಸ್ಥೆಯ ಉದ್ದೇಶ ಹಾಗೂ ಈವರೆಗೆ ಸಾಧಿಸಿದ ಪ್ರಗತಿಯನ್ನು ಸವಿಸ್ತಾರವಾಗಿ ವಿವರಿಸಿದರು. ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಒದಗಿಸುವುದೇ ಲೋಕಾಯುಕ್ತದ ಪರಮ ಗುರಿ. ಕರ್ನಾಟಕ ಲೋಕಾಯುಕ್ತವು ಭ್ರಷ್ಟಾಚಾರದ ವಿರುದ್ಧ ರಾಜಿ ಇಲ್ಲದ ಹೋರಾಟ ನಡೆಸುತ್ತಾ ಬಂದಿದೆ. 40 ವರ್ಷಗಳನ್ನು ಪೂರೈಸಿರುವುದು ಅದರ ಸ್ಥಿರತೆ ಮತ್ತು ಸಾರ್ವಜನಿಕರು ಅದರ ಮೇಲಿಟ್ಟಿರುವ ನಂಬಿಕೆಗೆ ಸಾಕ್ಷಿಯಾಗಿದೆ. ನ್ಯಾಯಮೂರ್ತಿ ಎ.ಡಿ. ಕೋಶಲ್ ಅವರಿಂದ ಆರಂಭವಾಗಿ, ಎನ್. ವೆಂಕಟಾಚಲ ಮತ್ತು ಎನ್. ಸಂತೋಷ್ ಹೆಗ್ಡೆ ಅವರಂತಹ ದಿಗ್ಗಜರ ಅವಧಿಯಲ್ಲಿ ಈ ಸಂಸ್ಥೆಯು ಜನಸಾಮಾನ್ಯರ ಧ್ವನಿಯಾಗಿ ಬೆಳೆದಿದೆ ಎಂದು ನುಡಿದರು.

ಲೋಕಾಯುಕ್ತ ಸಂಸ್ಥೆಯು ಕೇವಲ ಕಚೇರಿಗೆ ಸೀಮಿತವಾಗದೆ, ಜಿಲ್ಲಾ ಪ್ರವಾಸಗಳು, ಲೋಕ್ ಅದಾಲತ್‌ಗಳ ಮೂಲಕ ಹಳ್ಳಿಗಾಡಿನ ಜನರ ಸಮಸ್ಯೆಗಳನ್ನು ಆಲಿಸುತ್ತಿದೆ. ಸರ್ಕಾರದ ಸೌಲಭ್ಯಗಳು ವಿಳಂಬವಾದಾಗ ಅಥವಾ ಅರ್ಹರಿಗೆ ತಲುಪದಿದ್ದಾಗ ಲೋಕಾಯುಕ್ತವು ಮಧ್ಯಪ್ರವೇಶಿಸಿ ನ್ಯಾಯ ಒದಗಿಸುತ್ತಿದೆ. ಸಾರ್ವಜನಿಕ ಕೆಲಸಗಳನ್ನು ಕಾರಣವಿಲ್ಲದೆ ವಿಳಂಬ ಮಾಡುವುದು ಕೂಡ ಭ್ರಷ್ಟಾಚಾರವೇ ಆಗಿದೆ. 1986 ರಿಂದ ಈವರೆಗೆ ದಾಖಲಾದ ಒಟ್ಟು 1,75,126 ಪ್ರಕರಣಗಳಲ್ಲಿ 1,51,233 ಪ್ರಕರಣಗಳನ್ನು ಯಶಸ್ವಿಯಾಗಿ ವಿಲೇವಾರಿ ಮಾಡಲಾಗಿದೆ. ಪ್ರಸ್ತುತ ಲೋಕಾಯುಕ್ತ ಮತ್ತು ಉಪಲೋಕಾಯುಕ್ತರ ಅವಧಿಯಲ್ಲಿ 24,085 ಪ್ರಕರಣಗಳನ್ನು ವಿಲೇವಾರಿ ಮಾಡುವ ಮೂಲಕ ತನಿಖೆಗೆ ವೇಗ ನೀಡಲಾಗಿದೆ. ಲೋಕಾಯುಕ್ತದ ಕಟ್ಟುನಿಟ್ಟಿನ ಕ್ರಮದಿಂದಾಗಿ ರಾಜ್ಯದ 40,299 ಕೆರೆಗಳ ಸಮೀಕ್ಷೆ ನಡೆಸಲಾಗಿದ್ದು, ಈ ಪೈಕಿ 9,825 ಕೆರೆಗಳ ಒತ್ತುವರಿಯನ್ನು ತೆರವುಗೊಳಿಸಲಾಗಿದೆ ಎಂದು ಮಾಹಿತಿ ನೀಡಿದರು.

ಕಡತಗಳಿಗೆ ಸೀಮಿತವಾಗಿಲ್ಲ

ಲೋಕಾಯುಕ್ತ ಸಂಸ್ಥೆಯು ಕೇವಲ ಕಡತಗಳಿಗೆ ಸೀಮಿತವಾಗಿಲ್ಲ. ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸುಧಾರಣೆ ತರುವ ಪ್ರಯತ್ನ ಮಾಡಲಾಗುತ್ತಿದೆ. ಯಾದಗಿರಿ, ಕಲಬುರಗಿ ಜಿಲ್ಲೆಗಳಲ್ಲಿ ಸ್ಥಗಿತಗೊಂಡಿದ್ದ ನೂರಾರು ಆರ್.ಒ ಘಟಕಗಳನ್ನು ದುರಸ್ತಿ ಮಾಡಿಸಲು ಸರ್ಕಾರದಿಂದ 14.50 ಕೋಟಿ ರೂ. ಬಿಡುಗಡೆ ಮಾಡಿಸುವಲ್ಲಿ ಲೋಕಾಯುಕ್ತ ಯಶಸ್ವಿಯಾಗಿದೆ. ಬೆಂಗಳೂರಿನ ವಿಕ್ಟೋರಿಯಾ, ಕಿದ್ವಾಯಿ ಸೇರಿದಂತೆ ವಿವಿಧ ಸರ್ಕಾರಿ ಆಸ್ಪತ್ರೆಗಳಿಗೆ ಅನಿರೀಕ್ಷಿತ ಭೇಟಿ ನೀಡಿ, ರೋಗಿಗಳಿಗೆ ಉತ್ತಮ ಚಿಕಿತ್ಸೆ ಮತ್ತು ಸೌಲಭ್ಯ ಸಿಗುವಂತೆ ಕ್ರಮ ವಹಿಸಲಾಗಿದೆ. ೪೩ ಉಪ ನೋಂದಣಾಧಿಕಾರಿ ಕಚೇರಿಗಳು ಮತ್ತು ಆರ್.ಟಿ.ಓ ಚೆಕ್‌ಪೋಸ್ಟ್‌ಗಳ ಮೇಲೆ ದಾಳಿ ನಡೆಸಿ ಲೆಕ್ಕವಿಲ್ಲದ ಹಣವನ್ನು ವಶಪಡಿಸಿಕೊಳ್ಳುವ ಮೂಲಕ ಭ್ರಷ್ಟರಿಗೆ ಸಿಂಹಸ್ವಪ್ನವಾಗಿದೆ. ಬದಲಾಗುತ್ತಿರುವ ಕಾಲಕ್ಕೆ ತಕ್ಕಂತೆ ಲೋಕಾಯುಕ್ತವು ಡಿಜಿಟಲ್ ವ್ಯವಸ್ಥೆ ಅನುಷ್ಠಾನಗೊಳಿಸಲಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಜನಪ್ರತಿನಿಧಿಗಳ ಆಸ್ತಿ ಘೋಷಣೆ ವ್ಯವಸ್ಥೆಯ ಆನ್-ಲೈನ್ ಪೋರ್ಟಲ್ ಅನ್ನು ಬಿಡುಗಡೆ ಮಾಡಲಾಯಿತು. ಇನ್ನು ಮುಂದೆ ಶಾಸಕರು ಮತ್ತು ಇತರ ಜನಪ್ರತಿನಿಧಿಗಳು ತಮ್ಮ ಆಸ್ತಿ ವಿವರಗಳನ್ನು ಆನ್‌ಲೈನ್ ಮೂಲಕವೇ ಸಲ್ಲಿಸಬಹುದಾಗಿದ್ದು, ಇದು ಆಡಳಿತದಲ್ಲಿ ಪಾರದರ್ಶಕತೆಯನ್ನು ಹೆಚ್ಚಿಸಲಿದೆ. ಇದೇ ಸಂದರ್ಭದಲ್ಲಿ ಸಂಸ್ಥೆಯ ಸಾಧನೆಗಳನ್ನು ಒಳಗೊಂಡ ವಿಶೇಷ ಪುಸ್ತಕವನ್ನು ಸಹ ಬಿಡುಗಡೆ ಮಾಡಲಾಯಿತು. ಅಲ್ಲದೇ, ಲೋಕಾಯುಕ್ತ ಸಂಸ್ಥೆಯನ್ನು ಕಟ್ಟಿ ಬೆಳೆಸಿದ ಮಹನೀಯರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು. ಈ ಹಿಂದೆ ಲೋಕಾಯುಕ್ತರಾಗಿ ಮತ್ತು ಉಪ ಲೋಕಾಯುಕ್ತರಾಗಿ ಸೇವೆ ಸಲ್ಲಿಸಿದ ಗಣ್ಯರನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು.

Read More
Next Story