ಜಲಕ್ಷಾಮ ತಪ್ಪಿಸಲು 28.52 ಕೋಟಿ ರೂ. ವೆಚ್ಚದಲ್ಲಿ ಮೋಡ ಬಿತ್ತನೆ
x
ಬೆಂಗಳೂರಿನ ಎಚ್‌ಎಎಲ್‌ನಲ್ಲಿ ಜಲಸಂಪನ್ಮೂಲ ಸಚಿವ ಚಲುವರಾಯಸ್ವಾಮಿ ಅವರು ಮೋಡಬಿತ್ತನೆಗೆ ಚಾಲನೆ ನೀಡಿದರು

ಜಲಕ್ಷಾಮ ತಪ್ಪಿಸಲು 28.52 ಕೋಟಿ ರೂ. ವೆಚ್ಚದಲ್ಲಿ ಮೋಡ ಬಿತ್ತನೆ

ರಾಸಾಯನಿಕ ಕಣಗಳು ಮೋಡದೊಳಗಿನ ಸಣ್ಣ ನೀರಿನ ಹನಿಗಳನ್ನು ಆಕರ್ಷಿಸಿ, ಅವು ಭಾರವಾಗಿ ಮಳೆಯ ರೂಪದಲ್ಲಿ ಭೂಮಿಗೆ ಬೀಳುತ್ತವೆ. ಪ್ರಕ್ರಿಯೆ ನಡೆದ 30 ನಿಮಿಷಗಳಿಂದ 1 ಗಂಟೆಯೊಳಗೆ ಮಳೆಯಾಗುವ ಸಾಧ್ಯತೆ ಇರುತ್ತದೆ.


ರಾಜ್ಯದಲ್ಲಿ ಎದುರಾಗಿರುವ ಮಳೆ ಕೊರತೆ ಹಾಗೂ ಬರ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸುವ ಸಲುವಾಗಿ 'ಮೋಡ ಬಿತ್ತನೆ' ಕಾರ್ಯಕ್ರಮಕ್ಕೆ ಶುಕ್ರವಾರ ಬೆಂಗಳೂರಿನ ಎಚ್.ಎ.ಎಲ್ ವಿಮಾನ ನಿಲ್ದಾಣದಲ್ಲಿ ಜಲಸಂಪನ್ಮೂಲ ಸಚಿವ ಎನ್. ಚಲುವರಾಯಸ್ವಾಮಿ ಅವರು ಚಾಲನೆ ನೀಡಿದ್ದಾರೆ. ಮೋಡ ಬಿತ್ತನೆಗಾಗಿಯೇ ಸಿದ್ಧಪಡಿಸಿರುವ ವಿಶೇಷ ಲಘು ವಿಮಾನಕ್ಕೆ ರಾಷ್ಟ್ರಧ್ವಜ ಹಾಗೂ ನಾಡಧ್ವಜ ತೋರುವ ಮೂಲಕ ಚಾಲನೆ ನೀಡಿದ ಸಚಿವರು, ಯೋಜನೆ ಯಶಸ್ವಿಯಾಗಿ ರಾಜ್ಯದಲ್ಲಿ ನೀರಿನ ಹಾಹಾಕಾರ ಕಡಿಮೆಯಾಗಲಿ ಎಂದು ಆಶಿಸಿದ್ಧಾರೆ.

ಜಲ ಸಂಕಟದ ಎಚ್ಚರಿಕೆ

ಮೋಡ ಬಿತ್ತನೆಗೆ ಚಾಲನೆ ನೀಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವರು, "ರಾಜ್ಯದಲ್ಲಿ ಈ ವರ್ಷ ಮಳೆಯ ಪ್ರಮಾಣ ಕಡಿಮೆಯಾಗಿದೆ. ಮುಂದಿನ ದಿನಗಳಲ್ಲಿ ತೀವ್ರ ಬರ ಎದುರಾಗುವ ಸಾಧ್ಯತೆಗಳಿದ್ದು, ಅದರ ನಿಖರ ಪ್ರಮಾಣವನ್ನು ಈಗಲೇ ಅಂದಾಜಿಸಲು ಸಾಧ್ಯವಿಲ್ಲ. ಈ ತಿಂಗಳಾಂತ್ಯಕ್ಕೆ ಮುಂಗಾರು ಮುಕ್ತಾಯಗೊಳ್ಳಲಿದೆ. ಒಂದು ವೇಳೆ ಈ ತಿಂಗಳ ಅಂತ್ಯದೊಳಗೆ ಕುಡಿಯುವ ನೀರಿನ ಶೇಖರಣೆ ಆಗದಿದ್ದರೆ, ಮುಂದಿನ ಜೂನ್ ಅಂತ್ಯದವರೆಗೂ ಅಭಾವ ಎದುರಾಗಲಿದೆ" ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

"ನೀರಿನ ಅಭಾವ ಸರಿದೂಗಿಸಲು ಹಾಗೂ ರೈತರ ಹಿತದೃಷ್ಟಿಯಿಂದ ಮೋಡ ಬಿತ್ತನೆಗೆ ಮುಂದಾಗಿದ್ದೇವೆ. ಈ ಹಿಂದೆ ನಡೆದ ಮೋಡ ಬಿತ್ತನೆ ಕಾರ್ಯಾಚರಣೆ ಶೇ. 35ರಷ್ಟು ಯಶಸ್ವಿಯಾಗಿತ್ತು. ಏನೇ ನಷ್ಟ ಅಥವಾ ಲಾಭವಾದರೂ ಯೋಜನೆಯಿಂದ ನಮ್ಮ ಜನರಿಗೆ ಒಳ್ಳೆಯದಾಗಬೇಕು ಎಂಬುದಷ್ಟೇ ನಮ್ಮ ಆಶಯ. ಇದರಿಂದ ಸರ್ಕಾರಕ್ಕೆ ಆರ್ಥಿಕ ಹೊರೆಯಾಗುವ ಬಗ್ಗೆ ನಮಗೆ ಚಿಂತೆಯಿಲ್ಲ. ನಾಡಿನ ಹಿತ ಕಾಯುವುದಷ್ಟೇ ಆದ್ಯತೆ" ಎಂದು ಸ್ಪಷ್ಟಪಡಿಸಿದ್ದಾರೆ.

ಯೋಜನೆಗೆ ತಗುಲುವ ವೆಚ್ಚವೆಷ್ಟು?

ಮೋಡ ಬಿತ್ತನೆಗೆ ಒಟ್ಟು 28.52 ಕೋಟಿ ರೂ.ಗಳನ್ನು ಖರ್ಚು ಮಾಡಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಜಲಸಂಪನ್ಮೂಲ ಇಲಾಖೆ 'ಕರ್ನಾಟಕ ನೀರಾವರಿ ನಿಗಮ ನಿಯಮಿತ' ಮತ್ತು ಕಂದಾಯ ಇಲಾಖೆಯ 'ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ' ಜಂಟಿಯಾಗಿ ಅನುಷ್ಠಾನಗೊಳಿಸಿದೆ. ಮೋಡ ಬಿತ್ತನೆಯನ್ನು ಖ್ಯಾತಿ ಕ್ಲೈಮೇಟ್ ಮಾರ್ಡಿಫಿಕೇಶನ್ ಕನ್ಸಲ್ಟೆಂಟ್ಸ್ ಗೆ ಕೆಟಿಪಿಪಿ ಕಾಯ್ದೆಯಿಂದ ವಿನಾಯಿತಿ ನೀಡಿ ಗುತ್ತಿಗೆ ನೀಡಲಾಗಿದೆ.

ಮೋಡ ಬಿತ್ತನೆ ಕಾರ್ಯವನ್ನು ವೈಜ್ಞಾನಿಕವಾಗಿ ಮತ್ತು ಪರಿಣಾಮಕಾರಿಯಾಗಿ ನಿರ್ವಹಿಸಲು ಸರ್ಕಾರ ಎರಡು ಸಮಿತಿಗಳನ್ನು ಸರ್ಕಾರ ಈಗಾಗಲೇ ರಚಿಸಿದೆ. ಮೇಲ್ವಿಚಾರಣಾ ಸಮಿತಿಯಲ್ಲಿ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮತ್ತು ಅಭಿವೃದ್ಧಿ ಆಯುಕ್ತರು ಇರಲಿದ್ದಾರೆ. ಈ ಸಮಿತಿ ಯೋಜನೆಯ ಸಮಗ್ರ ಉಸ್ತುವಾರಿ ಮತ್ತು ಪರಿಶೀಲನೆ ನಡೆಸಲಿದೆ.

ತಾಂತ್ರಿಕ ಸಲಹಾ ಮತ್ತು ಮೌಲ್ಯಮಾಪನ ಸಮಿತಿಯಲ್ಲಿ KSNDMC ನಿರ್ದೇಶಕರ ಅಧ್ಯಕ್ಷತೆಯಲ್ಲಿ 8 ಮಂದಿ ಸದಸ್ಯರ ತಂಡ ಇರಲಿದೆ. ಇದು ತಾಂತ್ರಿಕ ಮಾರ್ಗದರ್ಶನ ನೀಡಲಿದ್ದು, ಪ್ರತಿ ಎರಡು ಗಂಟೆಗೊಮ್ಮೆ ಮೋಡ ಬಿತ್ತನೆಯ ಮಾಹಿತಿ ಹಾಗೂ ಅದರ ಪರಿಣಾಮವನ್ನು ಅಪ್ಡೇಟ್ ಮಾಡಲಿದೆ.

ಮೋಡ ಬಿತ್ತನೆ ಹೇಗೆ ನಡೆಯಲಿದೆ?

ವಾತಾವರಣದಲ್ಲಿ ಮೋಡಗಳಲ್ಲಿನ ತೇವಾಂಶವು ಮಳೆಯಾಗಿ ಸುರಿಯುವಂತೆ ಮಾಡಲು, ಕೃತಕವಾಗಿ ರಾಸಾಯನಿಕಗಳನ್ನು ಸಿಂಪಡಿಸಲಾಗುತ್ತದೆ. ಮೋಡಗಳ ಸ್ವರೂಪ ಆಧರಿಸಿ ರಾಸಾಯನಿಕಗಳನ್ನು ಬಳಸಲಾಗುತ್ತದೆ. ಸಿಲ್ವರ್ ಅಯೋಡೈಡ್ ರಾಸಾಯನಿಕವು ಮೋಡದಲ್ಲಿನ ಹನಿಗಳನ್ನು ಒಟ್ಟುಗೂಡಿಸಿ ಮಂಜುಗಡ್ಡೆಯ ಹರಳುಗಳಾಗಿ ಪರಿವರ್ತಿಸಲು ಸಹಾಯ ಮಾಡುತ್ತದೆ. ಅದೇ ರೀತಿ ಪೊಟ್ಯಾಸಿಯಮ್ ಅಯೋಡೈಡ್ , ಸೋಡಿಯಂ ಕ್ಲೋರೈಡ್ ಬೆಚ್ಚಗಿನ ಮೋಡಗಳಲ್ಲಿ ನೀರಿನ ಹನಿಗಳನ್ನು ಆಕರ್ಷಿಸಿ ದಪ್ಪದಾದ ಮಳೆ ಹನಿಗಳನ್ನಾಗಿ ಪರಿವರ್ತಿಸಿ ಮಳೆ ಸುರಿಸಲಿವೆ.

ಮೋಡ ಬಿತ್ತನೆ ಕಾರ್ಯವೈಖರಿ ಹೇಗೆ?

ವಾತಾವರಣದಲ್ಲಿ ಬಿಸಿಲು, ಗಾಳಿಯ ವೇಗ ಮತ್ತು ಮೋಡಗಳ ಸಾಂದ್ರತೆಯನ್ನು ಹವಾಮಾನ ಇಲಾಖೆಯ ಡಾಪ್ಲರ್ ರಾಡಾರ್ ಮೂಲಕ ತಾಂತ್ರಿಕ ತಂಡ ನಿರಂತರವಾಗಿ ಪರಿಶೀಲಿಸುತ್ತದೆ. ಮಳೆ ಸುರಿಸುವ ಸಾಮರ್ಥ್ಯವಿರುವ ಕ್ಯುಮುಲೋನಿಂಬಸ್ ಮೋಡಗಳನ್ನು ಗುರುತಿಸಲಾಗುತ್ತದೆ. ಮೋಡಗಳನ್ನು ಗುರುತಿಸಿದ ತಕ್ಷಣ, ವಿಶೇಷ ವಿಮಾನಗಳು ಆ ಮೋಡಗಳ ಒಳಗೆ ಅಥವಾ ಕೆಳಭಾಗದಲ್ಲಿ ಹಾರಿ ರಾಸಾಯನಿಕಗಳನ್ನು ಸಿಂಪಡಿಸುತ್ತವೆ.

ರಾಸಾಯನಿಕ ಕಣಗಳು ಮೋಡದೊಳಗಿನ ಸಣ್ಣ ನೀರಿನ ಹನಿಗಳನ್ನು ಆಕರ್ಷಿಸಿ, ಅವು ಭಾರವಾಗಿ ಮಳೆಯ ರೂಪದಲ್ಲಿ ಭೂಮಿಗೆ ಬೀಳುತ್ತವೆ. ಪ್ರಕ್ರಿಯೆ ನಡೆದ 30 ನಿಮಿಷಗಳಿಂದ 1 ಗಂಟೆಯೊಳಗೆ ಮಳೆಯಾಗುವ ಸಾಧ್ಯತೆ ಇರುತ್ತದೆ.

ಎಲ್ಲೆಲ್ಲಿ ನಡೆಯಲಿದೆ?

ರಾಜ್ಯದಲ್ಲಿ ನಿರ್ದಿಷ್ಟವಾಗಿ ಇಂತಹದ್ದೇ ಜಿಲ್ಲೆ ಎಂದು ಮೊದಲೇ ನಿರ್ಧರಿಸಲಾಗುವುದಿಲ್ಲ. ಬದಲಾಗಿ, ತಾಂತ್ರಿಕ ತಂಡವು ನಿರಂತರವಾಗಿ ನೀಡುವ ವರದಿಗಳ ಆಧಾರದ ಮೇಲೆ ಮಳೆ ಕೊರತೆ ಇರುವ ಪ್ರದೇಶಗಳು, ಪ್ರಮುಖ ಜಲಾಶಯಗಳ ಜಲಾನಯನ ಪ್ರದೇಶಗಳು ಹಾಗೂ ಕೃಷಿ ಬಿಕ್ಕಟ್ಟು ಎದುರಿಸುತ್ತಿರುವ ಜಿಲ್ಲೆಗಳ ಆಕಾಶದಲ್ಲಿ ಸೂಕ್ತ ಮೋಡಗಳು ಕಂಡುಬಂದಾಗ ತಕ್ಷಣವೇ ಅಲ್ಲಿಗೆ ವಿಮಾನ ತೆರಳಿ ಬಿತ್ತನೆ ಕಾರ್ಯ ನಡೆಸುತ್ತದೆ. ಪ್ರತಿ 2 ಗಂಟೆಗೊಮ್ಮೆ ಲಭ್ಯವಾಗುವ ಹವಾಮಾನ ದತ್ತಾಂಶವೇ ಕಾರ್ಯಾಚರಣೆಯ ಸ್ಥಳವನ್ನು ನಿರ್ಧರಿಸುತ್ತದೆ.

Read More
Next Story