ಸಾಲಬಾಧೆಯಿಂದ ರೈತರ ಆತ್ಮಹತ್ಯೆ; ಮೃತರ ಪತ್ನಿಗೆ ಮಾಸಿಕ 2 ಸಾವಿರ ಪಿಂಚಣಿ ಸೌಲಭ್ಯ
x

ಸಾಲಬಾಧೆಯಿಂದ ರೈತರ ಆತ್ಮಹತ್ಯೆ; ಮೃತರ ಪತ್ನಿಗೆ ಮಾಸಿಕ 2 ಸಾವಿರ ಪಿಂಚಣಿ ಸೌಲಭ್ಯ

ಮೃತ ರೈತರ ಕುಟುಂಬದವರು ಈಗಾಗಲೇ ಕೃಷಿ ಇಲಾಖೆ ನಿಯಮಾವಳಿಗಳಡಿ ‘ರೈತರ ಆತ್ಮಹತ್ಯೆ ಪ್ರಕರಣ’ ಎಂದು ಗುರುತಿಸಿ, ಸರ್ಕಾರದಿಂದ ಅಧಿಕೃತ ಪರಿಹಾರ ಧನ ಪಡೆದಿರಬೇಕು. ಅಂತಹ ಮೃತ ರೈತರ ಪತ್ನಿಯು ಈ ಪಿಂಚಣಿ ಯೋಜನೆಗೆ ಅರ್ಹರು.


ಆರ್ಥಿಕ ಸಂಕಷ್ಟ ಹಾಗೂ ಬರದಿಂದಾಗಿ ಆತ್ಮಹತ್ಯೆ ಮಾಡಿಕೊಂಡ ರೈತ ಕುಟುಂಬಗಳ ಹಿತರಕ್ಷಣೆಗಾಗಿ ರಾಜ್ಯ ಸರ್ಕಾರ ಧಾವಿಸಿದೆ. ಸಾಲಭಾದೆ ತಾಳದೇ ಆತ್ಮಹತ್ಯೆ ಮಾಡಿಕೊಂಡ ರೈತರ ಪತ್ನಿಗೆ ಸಾಮಾಜಿಕ ಭದ್ರತೆ ಮತ್ತು ಪಿಂಚಣಿ ನಿರ್ದೇಶನಾಲಯದ ವತಿಯಿಂದ ಮಾಸಿಕ 2 ಸಾವಿರ ಪಿಂಚಣಿ ನೀಡುವ ಯೋಜನೆ ಜಾರಿಗೊಳಿಸಿದೆ.

ಕುಟುಂಬದ ಯಜಮಾನನನ್ನು ಕಳೆದುಕೊಂಡು ಕಂಗಾಲಾಗಿರುವ ರೈತ ಮಹಿಳೆಗೆ ಆಸರೆಯಾಗುವ ನಿಟ್ಟಿನಲ್ಲಿ ಈ ಸೌಲಭ್ಯ ನೀಡಲು ತೀರ್ಮಾನಿಸಿದೆ. ಮೃತ ರೈತರ ಕುಟುಂಬದವರು ಈಗಾಗಲೇ ಕೃಷಿ ಇಲಾಖೆ ನಿಯಮಾವಳಿಗಳಡಿ ‘ರೈತರ ಆತ್ಮಹತ್ಯೆ ಪ್ರಕರಣ’ ಎಂದು ಗುರುತಿಸಿ, ಸರ್ಕಾರದಿಂದ ಅಧಿಕೃತ ಪರಿಹಾರ ಧನ ಪಡೆದಿರಬೇಕು. ಅಂತಹ ಮೃತ ರೈತರ ಪತ್ನಿಯು ಈ ಪಿಂಚಣಿ ಯೋಜನೆಗೆ ಅರ್ಹರಾಗಿರುತ್ತಾರೆ.

ಅರ್ಜಿ ಸಲ್ಲಿಕೆ ಎಲ್ಲಿ?

ಅರ್ಹ ಫಲಾನುಭವಿಗಳು ಪಿಂಚಣಿ ಸೌಲಭ್ಯಕ್ಕಾಗಿ ಅಲೆಯುವುದನ್ನು ತಪ್ಪಿಸಲು ಸರ್ಕಾರ ಇಂತಹ ಸರಳ ವ್ಯವಸ್ಥೆಯನ್ನು ಜಾರಿ ಮಾಡಿದೆ.

ಅರ್ಹ ರೈತ ಮಹಿಳೆಯರು ತಮ್ಮ ವಾಸಸ್ಥಳದ ವ್ಯಾಪ್ತಿಯಲ್ಲಿ ಬರುವ ಅಟಲ್ ಜೀ ಜನಸ್ನೇಹಿ ಕೇಂದ್ರಗಳ ಮೂಲಕ ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಕೃಷಿ ಇಲಾಖೆಯಿಂದ ಆತ್ಮಹತ್ಯೆ ಪರಿಹಾರ ಧನ ಪಡೆದಿರುವ ಅಧಿಕೃತ ಆದೇಶದ ಪ್ರತಿ ಕಡ್ಡಾಯವಾಗಿ ಇರಬೇಕು. ಅಟಲ್ ಜೀ ಜನಸ್ನೇಹಿ ಕೇಂದ್ರದ ನಿಗದಿತ ಅರ್ಜಿ ನಮೂನೆ ಪಡೆದು, ಅರ್ಜಿದಾರರ (ಮೃತ ರೈತನ ಪತ್ನಿ) ಆಧಾರ್ ಕಾರ್ಡ್ ಪ್ರತಿ, ಪಿಂಚಣಿ ಹಣ ನೇರವಾಗಿ ಜಮೆಯಾಗಲು ಬ್ಯಾಂಕ್ ಅಥವಾ ಅಂಚೆ ಕಚೇರಿಯ ಪಾಸ್ಬುಕ್ ಪ್ರತಿ ಹಾಗೂ ಖಾತೆ ವಿವರ ನೀಡಬೇಕು. ರಾಜ್ಯ ಸರ್ಕಾರದ ಈ ಯೋಜನೆಯು ಸಂಕಷ್ಟದಲ್ಲಿರುವ ರೈತ ಕುಟುಂಬಗಳಿಗೆ ಆರ್ಥಿಕ ಭದ್ರತೆ ನೀಡಲಿದ್ದು, ಅರ್ಹರು ತಕ್ಷಣವೇ ಅಗತ್ಯ ದಾಖಲೆಗಳೊಂದಿಗೆ ನಾಡಕಚೇರಿ ಸಂಪರ್ಕಿಸಿ ಸೌಲಭ್ಯ ಪಡೆಯಬೇಕು ಎಂದು ಪ್ರಕಟಣೆ ತಿಳಿಸಿದೆ.

3 ಸಾವಿರಕ್ಕೂ ಹೆಚ್ಚು ರೈತರ ಆತ್ಮಹತ್ಯೆ

ಕರ್ನಾಟಕದಲ್ಲಿ 2022-23 ರಿಂದ 2025 ರವರೆಗೆ ಮೂರು ವರ್ಷಗಳ ಅವಧಿಯಲ್ಲಿ ಒಟ್ಟು 3,122 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೃಷಿ ಸಂಕಷ್ಟ ಮತ್ತು ಸಾಲಬಾಧೆಗಳಿಂದಾಗಿ ಈ ಅನ್ನದಾತರು ಜೀವ ಕಳೆದುಕೊಂಡಿದ್ದಾರೆ. ಈ ಅವಧಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ.ಗಳ ಪರಿಹಾರ ನೀಡಿದೆ. ಕರ್ನಾಟಕದಲ್ಲಿ 2022-23 ನೇ ಸಾಲಿನಲ್ಲಿ 1,049 ರೈತರು, 2023-24 ನೇ ಸಾಲಿನಲ್ಲಿ 1,257 ರೈತರು ಹಾಗೂ 2024-25 ನೇ ಸಾಲಿನಲ್ಲಿ 1,194 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೂರು ವರ್ಷಗಳ ಅವಧಿಯಲ್ಲಿ 2,534 ರೈತರಿಗೆ 126.7 ಕೋಟಿ ರೂ. ಪರಿಹಾರ ನೀಡಲಾಗಿದೆ. ಉಳಿದ ರೈತರಿಗೆ ಪರಿಹಾರ ನೀಡುವ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಹಾವೇರಿ ಜಿಲ್ಲೆಯಲ್ಲಿ 280 ರೈತ ಆತ್ಮಹತ್ಯೆ ಪ್ರಕರಣಗಳು ವರದಿಯಾಗುವ ಮೂಲಕ ರಾಜ್ಯದಲ್ಲೇ ಮೊದಲ ಸ್ಥಾನದಲ್ಲಿದೆ. ನಂತರದ ಸ್ಥಾನದಲ್ಲಿ ಬೆಳಗಾವಿ ಜಿಲ್ಲೆಯಲ್ಲಿ 239 ರೈತರು ಹಾಗೂ ಕಲಬುರಗಿ ಜಿಲ್ಲೆಯಲ್ಲಿ 206 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಆತ್ಮಹತ್ಯೆ ತಡೆಗೆ ಸಹಾಯವಾಣಿ

ಆರ್ಥಿಕ ಸಂಕಷ್ಟ ಎದುರಿಸುವ ಹಾಗೂ ಸಾಲಗಾರರ ಕಾಟದಿಂದ ತೊಂದರೆ ಅನುಭವಿಸುವ ರೈತರ ನೆರವಿಗಾಗಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಹಾಯವಾಣಿ ಆರಂಭಿಸಿದೆ. ದಿನದ 24 ಗಂಟೆಯೂ ನಮ್ಮ ಸಹಾಯವಾಣಿಗೆ (9480124365, 9483124365) ಕರೆ ಮಾಡಬಹುದು.

Read More
Next Story