ಬೇಡಿಕೆ ಈಡೇರಿಸದ ಸರ್ಕಾರ; ಮೇ 20ರಿಂದ ಸಾರಿಗೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರ
x
ಕೆಎಸ್‌ಆರ್‌ಟಿಸಿ ಬಸ್‌ಗಳು

ಬೇಡಿಕೆ ಈಡೇರಿಸದ ಸರ್ಕಾರ; ಮೇ 20ರಿಂದ ಸಾರಿಗೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರ

ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳಾದ ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ಎನ್‌ಡಬ್ಲ್ಯುಕೆಆರ್‌ಟಿಸಿ ಮತ್ತು ಕೆಕೆಆರ್‌ಟಿಸಿಯ ಸುಮಾರು 1.25 ಲಕ್ಷ ನೌಕರರು ಈ ಬೃಹತ್ ಹೋರಾಟದಲ್ಲಿ ಭಾಗಿಯಾಗಲಿದ್ದಾರೆ.


ಕರ್ನಾಟಕದ ಜನಸಾಮಾನ್ಯರ ಜೀವನಾಡಿಯಾಗಿರುವ ಸಾರಿಗೆ ಬಸ್ಗಳು ಮೇ 20ರಿಂದ ರಸ್ತೆಗಿಳಿಯಲ್ಲ. ವೇತನ ಹಿಂಬಾಕಿ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ನೌಕರರ ಜಂಟಿ ಕ್ರಿಯಾ ಸಮಿತಿ ಮೇ 20 ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ತೀರ್ಮಾನಿಸಿದೆ.

ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳಾದ ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ಎನ್‌ಡಬ್ಲ್ಯುಕೆಆರ್‌ಟಿಸಿ ಮತ್ತು ಕೆಕೆಆರ್‌ಟಿಸಿಯ ಸುಮಾರು 1.25 ಲಕ್ಷ ನೌಕರರು ಈ ಬೃಹತ್ ಹೋರಾಟದಲ್ಲಿ ಭಾಗಿಯಾಗಲಿದ್ದಾರೆ. ಇದರಿಂದಾಗಿ ರಾಜ್ಯಾದ್ಯಂತ ಸಾರ್ವಜನಿಕ ಪ್ರಯಾಣಿಕರಿಗೆ ಭಾರಿ ತೊಂದರೆಯಾಗುವ ಆತಂಕ ಎದುರಾಗಿದೆ.

ಸಾರಿಗೆ ನೌಕರರ ಪ್ರಮುಖ ಬೇಡಿಕೆಗಳೇನು?

ಬಾಕಿ ಇರುವ 38 ತಿಂಗಳ ವೇತನದ ಹಿಂಬಾಕಿಯನ್ನು ಕೂಡಲೇ ಬಿಡುಗಡೆ ಮಾಡಬೇಕು. 2024ರ ಜ. 1 ರಿಂದ ಅನ್ವಯವಾಗುವಂತೆ ಮೂಲ ವೇತನದಲ್ಲಿ ಶೇ 25ರಷ್ಟು ಏರಿಕೆ ಮಾಡಬೇಕು. ಪ್ರಸ್ತುತ ಇರುವ ಶೇ 31ರಷ್ಟು ತುಟ್ಟಿಭತ್ಯೆಯನ್ನು ಮೂಲ ವೇತನದಲ್ಲಿ ವಿಲೀನಗೊಳಿಸಬೇಕು.

ಸರ್ಕಾರ ಒಪ್ಪಿಕೊಂಡಿರುವ 26 ತಿಂಗಳ ಬಾಕಿ ಹಣವಾದ 1,272 ಕೋಟಿಯನ್ನು ಯಾವುದೇ ವಿಳಂಬವಿಲ್ಲದೆ ಒಂದೇ ಕಂತಿನಲ್ಲಿ ಪಾವತಿಸಬೇಕು. ಬಾಟಾ ಸೇರಿದಂತೆ ವಿವಿಧ ಭತ್ಯೆಗಳನ್ನು ಹೆಚ್ಚಿಸಬೇಕು. ಕೋವಿಡ್ ಸಮಯದ ಬಾಕಿ ಹಣವನ್ನು ತಕ್ಷಣವೇ ಪಾವತಿಸಬೇಕು.

ವಿಫಲವಾಗಿದ್ದ 12 ಸುತ್ತಿನ ಸಭೆಗಳು

ವೇತನ ಹೆಚ್ಚಳ ಮತ್ತು ಹಿಂಬಾಕಿ ಪಾವತಿ ಕುರಿತಂತೆ ಮುಖ್ಯಮಂತ್ರಿಗಳು ಹಾಗೂ ಸಾರಿಗೆ ಸಚಿವರ ನೇತೃತ್ವದಲ್ಲಿ ಈಗಾಗಲೇ 12 ಬಾರಿ ಮಹತ್ವದ ಮಾತುಕತೆ ನಡೆದಿದ್ದರೂ ಸಹ ಯಾವುದೇ ಪ್ರಯೋಜನವಾಗಿಲ್ಲ.ಹಾಗಾಗಿ ಮೇ 20ರಿಂದ ಸಾರಿಗೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ತೀರ್ಮಾನಿಸಿದ್ದಾರೆ.

ಸಂಘರ್ಷಕ್ಕೆ ಕಾರಣವೇನು?

ಸರ್ಕಾರವು ಸಾರಿಗೆ ನೌಕರರಿಗೆ ಶೇ 7ರಷ್ಟು ವೇತನ ಹೆಚ್ಚಳದ ಪ್ರಸ್ತಾಪವನ್ನು ಮುಂದಿಟ್ಟು, 38 ತಿಂಗಳ ಹಿಂಬಾಕಿಯ ಬದಲಾಗಿ ಕೇವಲ 26 ತಿಂಗಳ ಬಾಕಿ ಹಣ ನೀಡಲು ಸಮ್ಮತಿಸಿದೆ. ಆದರೆ, ಈ ಪ್ರಸ್ತಾಪವನ್ನು ನೌಕರರ ಜಂಟಿ ಕ್ರಿಯಾ ಸಮಿತಿ ಸಾರಾಸಗಟಾಗಿ ತಿರಸ್ಕರಿಸಿದೆ. ನಮಗೆ ಪೂರ್ಣ ಪ್ರಮಾಣದ 38 ತಿಂಗಳ ಬಾಕಿ ಮತ್ತು ಶೇ 25ರಷ್ಟು ವೇತನ ಹೆಚ್ಚಳ ಮಾಡಲೇಬೇಕು ಎಂದು ನೌಕರರು ಪಟ್ಟು ಹಿಡಿದಿದ್ದಾರೆ.

ಸರ್ಕಾರದ ಈ ಧೋರಣೆಯನ್ನು ತೀವ್ರವಾಗಿ ಖಂಡಿಸಿರುವ ನೌಕರರ ಸಂಘಟನೆಗಳು, "ನಮ್ಮ ನ್ಯಾಯಸಮ್ಮತ ಬೇಡಿಕೆ ಈಡೇರುವವರೆಗೂ ಈ ಬಾರಿ ಹೋರಾಟದಿಂದ ಹಿಂದೆ ಸರಿಯುವ ಮಾತಿಲ್ಲ" ಎಂದು ಎಚ್ಚರಿಕೆ ನೀಡಿವೆ.

ನೌಕರರಿಗೆ ಸರ್ಕಾರದ ಖಡಕ್ ಎಚ್ಚರಿಕೆ

ಒಂದೆಡೆ ನೌಕರರು ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಸಿದ್ಧತೆ ನಡೆಸುತ್ತಿದ್ದರೆ, ಇನ್ನೊಂದೆಡೆ ಸಾರಿಗೆ ಇಲಾಖೆಯು ನೌಕರರಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದೆ. ಮುಷ್ಕರದಲ್ಲಿ ಪಾಲ್ಗೊಂಡು ಸಾರ್ವಜನಿಕರಿಗೆ ತೊಂದರೆ ಉಂಟು ಮಾಡಿದರೆ ಕಠಿಣ ಶಿಸ್ತು ಕ್ರಮ ಜರುಗಿಸುವುದಾಗಿ ಎಚ್ಚರಿಸಿದೆ.

"ಸಾರಿಗೆ ಇಲಾಖೆಯ ಆರ್ಥಿಕ ಸ್ಥಿತಿಗತಿ ಗಮನದಲ್ಲಿಟ್ಟುಕೊಂಡು ನೌಕರರು ಕೆಲಸ ಮಾಡಬೇಕು. ಈಗಾಗಲೇ ಹಿಂಬಾಕಿ ಹಣ ಬಿಡುಗಡೆ ಮಾಡಲಾಗಿದ್ದು, ಹಂತ ಹಂತವಾಗಿ ಉಳಿದ ಬೇಡಿಕೆಗಳನ್ನು ಈಡೇರಿಸಲಾಗುವುದು" ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಹಿಂದೆ ಹಲವು ಬಾರಿ ಮುಷ್ಕರದ ಸನ್ನಿವೇಶ ಎದುರಾದಾಗ ಸರ್ಕಾರವು ಕೊನೆ ಗಳಿಗೆಯಲ್ಲಿ ಮಾತುಕತೆ ನಡೆಸಿ ನೌಕರರ ಮನವೊಲಿಸುವಲ್ಲಿ ಯಶಸ್ವಿಯಾಗಿತ್ತು. ಆದರೆ, ಈ ಬಾರಿ ನೌಕರರು ತಮ್ಮ ಬೇಡಿಕೆಯಿಂದ ಸರಿಯುವಂತೆ ಕಾಣುತ್ತಿಲ್ಲ. ಹೀಗಾಗಿ ಮೇ 20ರ ನಂತರ ರಾಜ್ಯದಲ್ಲಿ ಸಾರಿಗೆ ವ್ಯವಸ್ಥೆ ಸ್ತಬ್ಧಗೊಳ್ಳುವ ಆತಂಕ ಎದುರಾಗಿದೆ.

Read More
Next Story