ಬರ ಎದುರಿಸಲು ಆಸರೆಯಾಗಿದ್ದ ಕೆರೆ ನುಂಗಲು ಹೊರಟ ಸ್ಟೀಲ್ ಕಂಪೆನಿ ವಿರುದ್ಧ ರೈತರ ಆಕ್ರೋಶ
ರೈತರ ಕಿಚ್ಚು ಬರೀ ಕೊಪ್ಪಳಕ್ಕೆ ಮಾತ್ರ ಸೀಮಿತವಾಗಿಲ್ಲ. ರಾಜ್ಯದ ಎಲ್ಲೆಡೆ ಇದೇ ಪರಿಸ್ಥಿತಿ ಎದುರಾಗ್ತಾ ಇದೆ. ಒಂದೆಡೆ ಅತಿಯಾದ ನಗರೀಕರಣ, ಮತ್ತೊಂದೆಡೆ ಕೈಗಾರಿಕೀಕರಣದ ಹೆಸರಲ್ಲಿ ಫಲವತ್ತಾದ ಭೂಮಿ, ಕೆರೆಗಳನ್ನು ಆಪೋಷನ ಮಾಡಲಾಗ್ತಿದೆ.
ಇತ್ತೀಚೆಗಷ್ಟೇ ನಾವು ಬೆಂಗಳೂರು ದಕ್ಷಿಣ ಜಿಲ್ಲೆಯ ಬಿಡದಿಯಲ್ಲಿ ರೈತರ ಆಕ್ರೋಶವನ್ನು ಕಣ್ಣಾರೆ ಕಂಡಿದ್ದೆವು. ಟೌನ್‌ಶಿಪ್ ವಿರುದ್ಧ ರೈತರ ತಾಳ್ಮೆಯ ಕಟ್ಟೆ ಒಡೆದಿತ್ತು. ಜಮೀನಿನ ಸರ್ವೇಗೆ ಬಂದ ಅಧಿಕಾರಿಗಳನ್ನು ಗ್ರಾಮಸ್ಥರು ಪೊರಕೆ, ಕಲ್ಲುಗಳಿಂದ ಅಟ್ಟಾಡಿಸಿಕೊಂಡು ಹೊಡೆದಿದ್ರು. ರೈತರ ಉಗ್ರಾವತಾರ ರಾಜ್ಯ ಸರ್ಕಾರವನ್ನೇ ಬೆಚ್ಚಿ ಬೀಳಿಸಿತ್ತು. ರೈತರ ಆವೇಷ, ಆಕ್ರೋಶಗಳಿಗೆ ಮಣಿದ ರಾಜ್ಯ ಸರ್ಕಾರ, ಬಲವಂತದ ಭೂಸ್ವಾಧೀನದಿಂದ ಹಿಂದೆ ಸರಿಯಿತು. ಬಿಡದಿ ಹೋರಾಟದ ಈ ಕಾವು ಆರುವ ಮುನ್ನವೇ ರೈತರ ಮತ್ತೊಂದು ಹೋರಾಟಕ್ಕೆ ಭತ್ತದ ನಾಡು ಕೊಪ್ಪಳ ಸಾಕ್ಷಿಯಾಗಿದೆ.
ಕೊಪ್ಪಳ ತಾಲೂಕಿನ ಬಸಾಪುರದಲ್ಲಿ ಸ್ಥಾಪನೆಯಾಗುತ್ತಿರುವ 'ಬಲ್ಡೋಟಾ ಸ್ಟೀಲ್ ಆಂಡ್ ಪವರ್ ಲಿಮಿಟೆಡ್' ಸುಮಾರು 44 ಎಕರೆ ವಿಸ್ತೀರ್ಣದ ಐತಿಹಾಸಿಕ ಬಸಾಪುರ ಕೆರೆಯನ್ನು ಸ್ವಾಧೀನ ಮಾಡಿಕೊಂಡಿದೆ. ಕಂಪನಿಯ ಈ ನಡೆಯೇ ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಉತ್ತರ ಕರ್ನಾಟಕ ಈಗಾಗಲೇ ಮಳೆ ಕೊರತೆಯಿಂದ ಕಂಗಾಲಾಗಿದೆ. ಕುಡಿಯುವ ಹನಿ ನೀರಿಗೂ ಪರದಾಡುವಂತಾಗಿದೆ. ಇಂತಹ ಪರಿಸ್ಥಿತಿಯಲ್ಲಿ ರೈತರು, ಜಾನುವಾರುಗಳಿಗೆ ಆಸರೆಯಾಗಿದ್ದ ಬಸಾಪುರ ಕೆರೆಯನ್ನು ಸೇರಿಸಿ ಕಾಂಪೌಂಡ್ ನಿರ್ಮಿಸಿದ್ದು, ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ಹೇರಿದೆ. ಇದರಿಂದ ಕುಪಿತರಾದ ನೂರಾರು ರೈತರು ಬಲ್ಡೋಟಾ ಕಂಪೆನಿಯ ಆವರಣಕ್ಕೆ ನುಗ್ಗಿ, ಕೈಗೆ ಸಿಕ್ಕ ವಸ್ತುಗಳು, ಕಾಂಪೌಂಡ್ ಗೋಡೆಯನ್ನೂ ಹೊಡೆದು ಹಾಕಿದ್ದಾರೆ.
'ಬಲ್ಡೋಟಾ ಹಠಾವೋ, ಕೊಪ್ಪಳ ಬಚಾವೋ' ಎಂಬ ಘೋಷಣೆ ಕೂಗುತ್ತಾ ರೈತನೊಬ್ಬರು ಕೆರೆಗೆ ಧುಮುಕಿ, ಎಚ್ಚರಿಕೆಯನ್ನೂ ನೀಡಿದ್ದಾರೆ. ಇದು ಕೇವಲ ಒಂದು ಪ್ರತಿಭಟನೆ ಅಂತ ಭಾವಿಸಬೇಕಿಲ್ಲ. ಬಾಯಾರಿದ ಜಮೀನುಗಳು, ಕಂಗೆಟ್ಟ ರೈತರ ಆಕ್ರೋಶದ ಸ್ಪೋಟವಾಗಿದೆ ಎಂಬುದನ್ನು ಸರ್ಕಾರಗಳು ಮನಗಾಣಬೇಕಿದೆ. ವೀಕ್ಷಕರೇ, ರೈತರ ಕಿಚ್ಚು ಬರೀ ಕೊಪ್ಪಳಕ್ಕೆ ಮಾತ್ರ ಸೀಮಿತವಾಗಿಲ್ಲ. ರಾಜ್ಯದ ಎಲ್ಲೆಡೆ ಇದೇ ಪರಿಸ್ಥಿತಿ ಎದುರಾಗ್ತಾ ಇದೆ. ಒಂದೆಡೆ ಅತಿಯಾದ ನಗರೀಕರಣ, ಮತ್ತೊಂದೆಡೆ ಕೈಗಾರಿಕೀಕರಣದ ಹೆಸರಲ್ಲಿ ಫಲವತ್ತಾದ ಭೂಮಿ, ಕೆರೆಗಳನ್ನು ಆಪೋಷನ ಮಾಡಲಾಗ್ತಿದೆ.
ಕರ್ನಾಟಕದಲ್ಲಿ ಕೈಗಾರಿಕಾ ತ್ಯಾಜ್ಯದಿಂದ ಕೆರೆಗಳು ಕಲುಷಿತಗೊಂಡು ತ್ಯಾಜ್ಯ ಗುಂಡಿಗಳಾಗಿ ಬದಲಾಗಿವೆ. ಅದರಲ್ಲೂ ಬೆಂಗಳೂರು ನಗರ, ಗ್ರಾಮಾಂತರ ಜಿಲ್ಲೆ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಸಮಸ್ಯೆ ವಿಪರೀತವಾಗಿದೆ. ರಾಸಾಯನಿಕ ಮತ್ತು ಕೊಳಚೆ ನೀರು ನೇರವಾಗಿ ಕೆರೆಗಳನ್ನು ಸೇರುತ್ತಿದೆ. ಕೆಲ ಪ್ರಭಾವಿಗಳಿಂದ ಸರ್ಕಾರಿ ಕೆರೆ ಒತ್ತುವರಿಯಾಗುತ್ತಿದೆ. ನೀರಾವರಿಗೆ ಆಸರೆಯಾಗಿದ್ದ ಕೆರೆಗಳು ಕ್ರಮೇಣ ಜೀವ ಕಳೆದುಕೊಳ್ಳುತ್ತಿವೆ. ಇಂತಹ ಕೆರೆಗಳ ಮೂಲಕ ನದಿಗಳೂ ಕಲುಷಿತವಾಗುತ್ತಿವೆ. ಇಷ್ಟೆಲ್ಲಾ ಸಮಸ್ಯೆಗಳ ನಡುವೆಯೂ ಮೂಡುವ ಪ್ರಶ್ನೆ ಎಂದರೆ, ನಮಗೆ ಹೂಡಿಕೆ ಬೇಕೋ? ಅಥವಾ ಜೀವಿಸಲು ಯೋಗ್ಯ ಪರಿಸರ ಬೇಕೋ ಎಂಬುದು.
ಒಂದು ರಾಜ್ಯದ ಪ್ರಗತಿಗೆ ಅಭಿವೃದ್ಧಿಯ ನೊಗ ಕಟ್ಟಲೇಬೇಕು. ಕೈಗಾರಿಕೆಗಳೂ ಬರಬೇಕು. ಅದೇ ರೀತಿ ಬಲ್ಡೋಟಾ ಕಂಪನಿ ಸುಮಾರು 54 ಸಾವಿರ ಕೋಟಿಯ ಬೃಹತ್ ಹೂಡಿಕೆ ಮಾಡುತ್ತಿರುವುದು ರಾಜ್ಯದ ಪಾಲಿಗೆ ಆಶಾದಾಯಕ ಬೆಳವಣಿಗೆಯೇನೋ ಸರಿ. ಆದರೆ, ಮಳೆ ಕೊರತೆ, ಸತತ ಬರದಿಂದ ತತ್ತರಿಸಿರುವ ರಾಜ್ಯದಲ್ಲಿ ಜಲಮೂಲಗಳನ್ನು ಆಪೋಷನ ಮಾಡುವ, ಫಲವತ್ತಾದ ಭೂಮಿಯನ್ನೇ ನುಂಗಿಹಾಕುವ ಯೋಜನೆಗಳು ಬೇಕೆ ಎಂಬುದನ್ನು ಯೋಚಿಸಬೇಕಿದೆ.
ಕೊಪ್ಪಳದಲ್ಲಿ ಸ್ಥಾಪನೆಯಾಗುತ್ತಿರುವ ಬಲ್ಡೋಟಾ ಕಂಪನಿಯ ಹೂಡಿಕೆ ಬಗ್ಗೆ ನೋಡುವುದಾದರೆ, 18 ಸಾವಿರ ಕೋಟಿ ವೆಚ್ಚದಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಬೃಹತ್ ಉಕ್ಕು ಕಾರ್ಖಾನೆಯು ವಾರ್ಷಿಕ 3.5 ಮಿಲಿಯನ್ ಟನ್ ಉಕ್ಕು ಉತ್ಪಾದನೆ ಸಾಮರ್ಥ್ಯ ಹೊಂದಿದೆ. ಜತೆಗೆ 320 ಮೆಗಾವಾಟ್ ವಿದ್ಯುತ್ ಉತ್ಪಾದನೆ ಹಾಗೂ 'ಜಿರೋ ಲಿಕ್ವೆಡ್ ಡಿಸ್ಚಾರ್ಜ್ ತಂತ್ರಜ್ಞಾನದೊಂದಿಗೆ ಕಲ್ಯಾಣ ಕರ್ನಾಟಕದ ಆರ್ಥಿಕ ಚಿತ್ರಣವನ್ನೇ ಬದಲಿಸುವ ಆಶಾಭಾವನೆ ಸರ್ಕಾರದ್ದು.
ಪ್ರಸ್ತುತ, ನಗರೀಕರಣ ಹಾಗೂ ಕೈಗಾರಿಕರಣ ವಿಚಾರದಲ್ಲಿ ಕರ್ನಾಟಕ ಬಹಳ ಸೂಕ್ಷ್ಮವಾದ ತಿರುವಿನಲ್ಲಿದೆ. 'ಇನ್ವೆಸ್ಟ್ ಕರ್ನಾಟಕ' ಹೆಸರಲ್ಲಿ ಜಾಗತಿಕ ಹೂಡಿಕೆದಾರರನ್ನು ಆಕರ್ಷಿಸುತ್ತಿರುವ ಸರ್ಕಾರದ ವಿರುದ್ಧ ಈಗ ಅಸ್ತಿತ್ವಕ್ಕಾಗಿ ರೈತ ಸಮುದಾಯ ಬೀದಿ ಹೋರಾಡಬೇಕಾದ ದುಸ್ಥಿತಿ ಎದುರಾಗಿದೆ.
ಸರ್ಕಾರಗಳು ಏನೇ ತಂತ್ರಜ್ಞಾನ ತಂದರೂ, ಅದರಿಂದ ಉದ್ಯೋಗ ಸೃಷ್ಟಿಯಾಗಬಹುದೇ ವಿನಃ ಕುಡಿಯಲು ನೀರು, ಆಹಾರ ಕೊಡಲು ಸಾಧ್ಯವಿಲ್ಲ. ತಂತ್ರಜ್ಞಾನ ಮತ್ತು ಕೈಗಾರಿಕೆ ಬೆಳೆಯಲು ಪರಿಸರವನ್ನು ಬಲಿ ಕೊಡುವುದು ಔಚಿತ್ಯವಲ್ಲ. ಯಾವುದೇ ಕಾರ್ಖಾನೆಗಳು ಸ್ಥಾಪನೆಗೂ ಮುನ್ನ Zero Liquid Discharge ಅಂತ ಪೇಪರ್ ಮೇಲೆ ಬರೆಯುತ್ತವೆ. ಆದರೆ, ವಾಸ್ತವದಲ್ಲಿ ನಿಯಮಗಳನ್ನು ಪಾಲಿಸುತ್ತಿವೆಯೇ ಎಂಬುದು ಮುಖ್ಯ .
ಬಲ್ಡೋಟಾ ಆರಂಭದಿಂದ ಏನೆಲ್ಲಾ ಅನುಕೂಲಗಳು
ಎಂಎಸ್ಪಿಎಲ್ ಮೂಲಕ ಗಣಿಗಾರಿಕೆ ಮತ್ತು ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ದಶಕಗಳಿಂದ ಗುರುತಿಸಿಕೊಂಡಿರುವ ಬಲ್ಡೋಟ ಗ್ರೂಪ್, ಈಗ ನೇರವಾಗಿ ಉಕ್ಕು ತಯಾರಿಕಾ ರಂಗಕ್ಕೆ ಧುಮುಕಿದೆ. ಅದಿರಿನ ಗಣಿಗಾರಿಕೆಯ ಅನುಭವ ಹಾಗೂ ಸಂಪನ್ಮೂಲ ನಿರ್ವಹಣೆಯ ಬಲದ ಮೇಲೆ ಸ್ಥಾಪನೆಯಾಗುತ್ತಿರುವ ಈ ಘಟಕವು ಸುಸ್ಥಿರ ಬೆಳವಣಿಗೆಯಲ್ಲಿ ಹೊಸ ಮೈಲಿಗಲ್ಲಾಗಲಿದೆ.
ಬೃಹತ್ ಉಕ್ಕು ಘಟಕಗಳಿಗೆ ನಿರಂತರ ವಿದ್ಯುತ್ ಸರಬರಾಜು ಅತ್ಯಗತ್ಯ. ಇದನ್ನು ಗಮನದಲ್ಲಿ ಇಟ್ಟುಕೊಂಡೇ ಬಲ್ಡೋಟಾ ಕಂಪನಿ, 220 ಮೆಗಾವಾಟ್ ಸಾಮರ್ಥ್ಯದ ಸ್ವಂತ ವಿದ್ಯುತ್ ಸ್ಥಾವರ ಹಾಗೂ 100 MW ಸೌರ ವಿದ್ಯುತ್ ಯೋಜನೆಯನ್ನು ಅಳವಡಿಸಿಕೊಳ್ಳುತ್ತಿದೆ. ಒಟ್ಟು 320 MW ವಿದ್ಯುತ್ ಉತ್ಪಾದನಾ ಸಾಮರ್ಥ್ಯವು ಪ್ಲಾಂಟ್ನ ಸುಗಮ ಕಾರ್ಯಾಚರಣೆಗೆ ಬೆನ್ನೆಲುಬಾಗಲಿದೆ.
ಪರಿಸರ ಸಂರಕ್ಷಣೆಗೆ ವಿಶೇಷ ಒತ್ತು ನೀಡಿರುವ ಈ ಯೋಜನೆಯಲ್ಲಿ Zero Liquid Discharge ತಂತ್ರಜ್ಞಾನ ಬಳಸಲಾಗುತ್ತಿದೆ. ಇದರಿಂದ ಕಾರ್ಖಾನೆಯಿಂದ ಹೊರಬರುವ ಒಂದೇ ಒಂದು ಹನಿ ನೀರು ಕೂಡ ಕಲುಷಿತ ಆಗುವುದಿಲ್ಲ. ಸಂಪೂರ್ಣ ಮರುಬಳಕೆಯಾಗಲಿದೆ. ಜಾಗತಿಕ ಮಟ್ಟದಲ್ಲಿ ಇಂಗಾಲದ ಹೊರಸೂಸುವಿಕೆ ತಗ್ಗಿಸುವ ಗುರಿಯನ್ನು ಬಲ್ಡೋಟಾ ಹೊಂದಿದ್ದು, ಪರಿಸರ ಸ್ನೇಹಿ ಉತ್ಪಾದನೆಗೆ ಮಾದರಿಯಾಗಲಿದೆ. ಕೊಪ್ಪಳ ಮತ್ತು ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಸಾವಿರಾರು ನೇರ ಮತ್ತು ಪರೋಕ್ಷ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ. ಸ್ಥಳೀಯ ಸಣ್ಣ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕೆಗಳು, ಸಾರಿಗೆ ವಲಯ ಹಾಗೂ ಸೇವಾ ವಲಯಕ್ಕೆ ಈ ಬೃಹತ್ ಹೂಡಿಕೆಯು ಹೊಸ ಆವೇಗ ನೀಡಲಿದೆ.
ಪ್ರಸ್ತುತ ಹಂತ-1 ರಲ್ಲಿ ವಾರ್ಷಿಕ 3.5 ಮಿಲಿಯನ್ ಟನ್ ಉತ್ಪಾದನಾ ಸಾಮರ್ಥ್ಯದೊಂದಿಗೆ ಕಾರ್ಯಾರಂಭ ಮಾಡುತ್ತಿರುವ ಈ ಯೋಜನೆಯನ್ನು ಮುಂದಿನ ದಿನಗಳಲ್ಲಿ 10.5 ಮಿಲಿಯನ್ ಟನ್ಗೆ ವಿಸ್ತರಿಸುವ ಬೃಹತ್ ಯೋಜನೆ ಕಂಪನಿಯ ಮುಂದಿದೆ. ಇದು ಪೂರ್ಣಗೊಂಡರೆ ದಕ್ಷಿಣ ಭಾರತದ ಅತಿ ದೊಡ್ಡ ಉಕ್ಕು ಉತ್ಪಾದನಾ ಕೇಂದ್ರಗಳಲ್ಲಿ ಒಂದಾಗಿ ಕೊಪ್ಪಳ ಹೊರಹೊಮ್ಮಲಿದೆ.
ಬಲ್ಡೋಟ ವಿರುದ್ಧ ಸ್ಥಳೀಯರ ಪ್ರತಿಭಟನೆಗೆ ಪ್ರಮುಖ ಕಾರಣಗಳೇನು?
ಕೊಪ್ಪಳ ಜಿಲ್ಲೆಯಲ್ಲಿ ಬಲ್ಡೋಟ ಸ್ಟೀಲ್ ಅಂಡ್ ಪವರ್ ಲಿಮಿಟೆಡ್ (BSPL) ಕಾರ್ಖಾನೆಯ ಸ್ಥಾಪನೆ ಹಾಗೂ ವಿಸ್ತರಣೆ ವಿರೋಧಿಸಿ ಸ್ಥಳೀಯ ರೈತರು, ಸಾರ್ವಜನಿಕರು ಮತ್ತು ಗವಿಮಠದ ಶ್ರೀಗಳ ನೇತೃತ್ವದಲ್ಲಿ ಬೃಹತ್ "ಬಲ್ಡೋಟಾ ಹಠಾವೋ, ಕೊಪ್ಪಳ ಬಚಾವೋ" ಹೋರಾಟ ನಡೆಯುತ್ತಿದೆ. ಸ್ಥಳೀಯರು ಈ ಬೃಹತ್ ಯೋಜನೆ ವಿರೋಧಿಸಲು ಕಾರಣಗಳು ಸಾಕಾಷ್ಟಿವೆ.
ಒಂದು, ತೀವ್ರ ಪರಿಸರ ಮತ್ತು ವಾಯು ಮಾಲಿನ್ಯ. ಕಾರ್ಖಾನೆಯಿಂದ ಹೊರಬರುವ ತೀವ್ರ ಮಾಲಿನ್ಯ, ಕಪ್ಪು ಹೊಗೆ ಹಾಗೂ ಕೈಗಾರಿಕಾ ಧೂಳಿನಿಂದಾಗಿ ಸುತ್ತಮುತ್ತಲಿನ ಗ್ರಾಮಗಳಾದ ಹಲವರ್ತಿ, ಹಿರೇಬಗನಾಳ್, ಬಸಾಪುರ ಸೇರಿ ಹಲವು ಗ್ರಾಮಗಳ ವಾತಾವರಣ ಸಂಪೂರ್ಣ ಕಲುಷಿತಗೊಂಡಿದೆ.
ಇದಲ್ಲದೇ ಕಪ್ಪು ಧೂಳು ಕೃಷಿ ಭೂಮಿ ಹಾಗೂ ಬೆಳೆಗಳ ಮೇಲೆ ಶೇಖರಣೆಯಾಗಿ ಫಸಲು ಸಂಪೂರ್ಣ ಹಾಳಾಗುತ್ತಿದೆ. ರೈತರು ತಮ್ಮ ಒಣಗಿದ ಬೆಳೆಗಳನ್ನು ಎತ್ತಿನ ಬಂಡಿಗಳಲ್ಲಿ ತಂದು ಪ್ರತಿಭಟಿಸುವ ಮೂಲಕ ಆಕ್ರೋಶ ಹೊರಹಾಕಿದ್ದಾರೆ.
ಎರಡನೇ ಕಾರಣ, ಬಸಾಪುರ ಕೆರೆಯ ಒತ್ತುವರಿ. ಕಾರ್ಖಾನೆಯ ಆವರಣದಲ್ಲಿ ಸುಮಾರು 44 ಎಕರೆ ವಿಸ್ತೀರ್ಣದ ಐತಿಹಾಸಿಕ ಬಸಾಪುರ ಕೆರೆಯೂ ಸೇರಿಕೊಂಡಿದೆ. ಈ ಕೆರೆಯನ್ನು ಸಾರ್ವಜನಿಕರು, ರೈತರು ಹಾಗೂ ಜಾನುವಾರುಗಳ ಬಳಕೆಗೆ ಮುಕ್ತಗೊಳಿಸಬೇಕು ಎಂಬುದು ಸ್ಥಳೀಯರ ಪ್ರಮುಖ ಬೇಡಿಕೆ. ಇತ್ತೀಚಿನ ಪ್ರತಿಭಟನೆಯಲ್ಲಿ ರೈತರು ಕಾಂಪೌಂಡ್ ಒಡೆದು ಒಳನುಗ್ಗಿ ಕೆರೆಗೆ ಜಿಗಿದು ಪ್ರತಿಭಟಿಸಿದ್ದು ಇದೇ ಕಾರಣಕ್ಕೆ.
ಮೂರನೇ ಕಾರಣ ನೋಡುವುದಾದರೆ ಸಾರ್ವಜನಿಕ ಆರೋಗ್ಯದ ಮೇಲಿನ ಗಂಭೀರ ಪರಿಣಾಮ. ನಿರಂತರ ಕಲುಷಿತ ಗಾಳಿಯಿಂದಾಗಿ ಸಣ್ಣ ಮಕ್ಕಳು ಮತ್ತು ವೃದ್ಧರಲ್ಲಿ ಅಸ್ತಮಾ, ಕೆಮ್ಮು ಹಾಗೂ ಶ್ವಾಸಕೋಶ ಸಂಬಂಧಿ ಕಾಯಿಲೆಗಳು ಹೆಚ್ಚುತ್ತಿವೆ. ಸ್ಥಳೀಯರು ಆಕ್ಸಿಜನ್ ಮಾಸ್ಕ್ ಧರಿಸಿ ರ‍್ಯಾಲಿ ಕೂಡ ನಡೆಸಿದ್ದರು.
ಈ ಭಾಗದಲ್ಲಿ ಗರ್ಭಪಾತ ಹಾಗೂ ಸಂತಾನೋತ್ಪತ್ತಿ ಸಮಸ್ಯೆಗಳು ಹೆಚ್ಚುತ್ತಿವೆ ಎಂದು ಆರೋಪಿಸಿ ಮಹಿಳೆಯರು ಖಾಲಿ ತೊಟ್ಟಿಲು ಹಿಡಿದು ಸಾಂಕೇತಿಕ ಪ್ರತಿಭಟಿಸಿದ್ದಾರೆ. ನಾಲ್ಕನೇ ಕಾರಣ, ಕುಡಿಯುವ ನೀರು ಮತ್ತು ನೈಸರ್ಗಿಕ ಸಂಪನ್ಮೂಲಗಳ ಕೊರತೆ. ಬೃಹತ್ ಉಕ್ಕು ಉತ್ಪಾದನೆಗೆ ಕೋಟ್ಯಂತರ ಲೀಟರ್ ನೀರು ಅಗತ್ಯವಿದೆ. ಇದರಿಂದ ಕೊಪ್ಪಳದಂತಹ ಈಗಾಗಲೇ ಒಣ ಹವೆಯಿರುವ ಪ್ರದೇಶದಲ್ಲಿ ಅಂತರ್ಜಲ ಮಟ್ಟ ಕುಸಿದು, ಭವಿಷ್ಯದಲ್ಲಿ ಕುಡಿಯುವ ನೀರು ಮತ್ತು ನೀರಾವರಿಗೆ ತೀವ್ರ ಅಭಾವ ಎದುರಾಗಲಿದೆ ಎಂಬ ಆತಂಕ ರೈತರಲ್ಲಿದೆ.
ಐದನೇ ಕಾರಣ, ಸ್ಥಳೀಯರಿಗೆ ಸಿಗದ ಉದ್ಯೋಗ. ಭೂಮಿ ಮತ್ತು ಸಂಪನ್ಮೂಲ ಬಳಸಿಕೊಳ್ಳುವ ಕಂಪನಿಯು ಸ್ಥಳೀಯ ಯುವಕರಿಗೆ ಸೂಕ್ತ ತರಬೇತಿ ನೀಡಿ ಕೆಲಸಕ್ಕೆ ತೆಗೆದುಕೊಳ್ಳುತ್ತಿಲ್ಲ. ಕೌಶಲ್ಯವಿಲ್ಲ ಎಂಬ ನೆಪವೊಡ್ಡಿ ಸ್ಥಳೀಯರನ್ನು ನಿರ್ಲಕ್ಷಿಸಿ ಹೊರರಾಜ್ಯದವರರಿಗೆ ಮಣೆ ಹಾಕುತ್ತಿದೆ ಎಂಬುದು ಸ್ಥಳೀಯರ ಆರೋಪ.
ಆರನೇ ಕಾರಣ, ಈ ಹಿಂದಿನ ಭರವಸೆ ಈಡೇರಿಕೆಯಲ್ಲಿ ಸರ್ಕಾರದ ವೈಫಲ್ಯ. ಬಲ್ಡೋಟ ಕಂಪನಿಯು ಮಾಲಿನ್ಯ ನಿಯಂತ್ರಣ ಮಂಡಳಿಯ ನಿಯಮಗಳನ್ನು ಸರಿಯಾಗಿ ಪಾಲಿಸುತ್ತಿಲ್ಲ. ಆಧುನಿಕ ಫಿಲ್ಟರ್ಗಳನ್ನು ಅಳವಡಿಸಿಲ್ಲ. ಈಗಿರುವ 3.5 MTPA ಸಾಮರ್ಥ್ಯದಲ್ಲೇ ಇಷ್ಟೊಂದು ಮಾಲಿನ್ಯವಿರುವಾಗ, ಇದನ್ನು 10.5 MTPA ಗೆ ವಿಸ್ತರಿಸಿದರೆ ಕೊಪ್ಪಳ ವಾಸಿಸಲು ಯೋಗ್ಯವಲ್ಲದ 'ಸ್ಮಶಾನ'ವಾಗುತ್ತದೆ ಎಂಬುದು ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಅವರ ಆತಂಕವಾಗಿದೆ.
ಒಟ್ಟಾರೆ, ಕೊಪ್ಪಳದ ಜನರಿಗೆ ಕೈಗಾರಿಕಾ ಅಭಿವೃದ್ಧಿಗಿಂತ ತಮ್ಮ ಆರೋಗ್ಯ, ಕುಡಿಯುವ ನೀರು, ಫಲವತ್ತಾದ ಕೃಷಿ ಭೂಮಿ ಹಾಗೂ ಬಸಾಪುರ ಕೆರೆಯ ಸಂರಕ್ಷಣೆ ಮುಖ್ಯವಾಗಿದೆ. ಹೀಗಾಗಿ ಆರ್ಥಿಕ ಪ್ರಗತಿ ಮತ್ತು ಪರಿಸರ ಸಂರಕ್ಷಣೆಯ ನಡುವಿನ ಈ ಸಂಘರ್ಷ ತೀವ್ರ ಸ್ವರೂಪ ಪಡೆದುಕೊಂಡಿದೆ.

