If Kodagu is destroyed, Bangalore will have no water! The trumpet of the fight for the survival of Cauvery
x

ಕೊಡಗು ನಾಶವಾದರೆ ಬೆಂಗಳೂರಿಗೆ ನೀರಿಲ್ಲ! ಕಾವೇರಿ ಉಳಿವಿಗಾಗಿ ಹೋರಾಟದ ಕಹಳೆ

ʼದ ಫೆಡರಲ್‌ ಕರ್ನಾಟಕʼ ನಡೆಸಿದ ವಿಶೇಷ ಚರ್ಚಾ ಕಾರ್ಯಕ್ರಮದಲ್ಲಿ ವೇದಿಕೆಯ ಸಂಚಾಲಕರು ಹಾಗೂ ನಿವೃತ್ತ ಕರ್ನಲ್ ಸಿ.ಪಿ. ಮುತ್ತಣ್ಣ ಮತ್ತು ಖ್ಯಾತ ಪರಿಸರವಾದಿ ಜೋಸೆಫ್ ಹೂವಾರ್‌ ಅವರು ಕೊಡಗಿನ ಪ್ರಸಕ್ತ ಆತಂಕಕಾರಿ ಸ್ಥಿತಿಯನ್ನು ಬಿಚ್ಚಿಟ್ಟಿದ್ದಾರೆ.


Click the Play button to hear this message in audio format

ಕರ್ನಾಟಕದ ಜೀವನಾಡಿ ಕಾವೇರಿ ನದಿಯ ಉಗಮ ಸ್ಥಾನ ಹಾಗೂ ನೈಸರ್ಗಿಕ ಸಂಪತ್ತಿನ ತಾಣವಾಗಿರುವ ಕೊಡಗು ಜಿಲ್ಲೆಯನ್ನು ವಿನಾಶದಿಂದ ರಕ್ಷಿಸಲು ಈಗ ಗಂಭೀರ ಹೋರಾಟವೊಂದು ಆರಂಭವಾಗಿದೆ. "ಕೊಡಗು ಹಾಗೂ ಕಾವೇರಿ ರಕ್ಷಣಾ ವೇದಿಕೆ" ನೇತೃತ್ವದಲ್ಲಿ ಜಿಲ್ಲೆಯ ಮೂಲನಿವಾಸಿಗಳು ಹಾಗೂ ಪರಿಸರವಾದಿಗಳು ಒಟ್ಟಾಗಿ ಕೊಡಗಿನ ಉಳಿವಿಗಾಗಿ ಸರ್ಕಾರಕ್ಕೆ ಬಿಗಿ ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ.

ʼದ ಫೆಡರಲ್‌ ಕರ್ನಾಟಕʼ ನಡೆಸಿದ ವಿಶೇಷ ಚರ್ಚಾ ಕಾರ್ಯಕ್ರಮದಲ್ಲಿ ವೇದಿಕೆಯ ಸಂಚಾಲಕರು ಹಾಗೂ ನಿವೃತ್ತ ಕರ್ನಲ್ ಸಿ.ಪಿ. ಮುತ್ತಣ್ಣ ಮತ್ತು ಖ್ಯಾತ ಪರಿಸರವಾದಿ ಜೋಸೆಫ್ ಹೂವಾರ್‌ ಅವರು ಕೊಡಗಿನ ಪ್ರಸಕ್ತ ಆತಂಕಕಾರಿ ಸ್ಥಿತಿಯನ್ನು ಬಿಚ್ಚಿಟ್ಟಿದ್ದಾರೆ.

ಕೊಡಗನ್ನು ಕಾಡುತ್ತಿರುವ ಪ್ರಮುಖ ಸಮಸ್ಯೆಗಳು

1964ರ ಕರ್ನಾಟಕ ಭೂ ಕಂದಾಯ ಕಾಯ್ದೆಯ ಉಲ್ಲಂಘನೆಯಾಗಿ ಕಾಫಿ ತೋಟ ಮತ್ತು ಗದ್ದೆಗಳನ್ನು ವಾಣಿಜ್ಯೀಕರಣಗೊಳಿಸಲಾಗುತ್ತಿದೆ. ಕೊಡಗಿನ ಒಟ್ಟು ಜನಸಂಖ್ಯೆ ಕೇವಲ 5 ರಿಂದ 6 ಲಕ್ಷ. ಆದರೆ, ಪ್ರತಿ ವರ್ಷ 40 ಲಕ್ಷಕ್ಕೂ ಅಧಿಕ ಪ್ರವಾಸಿಗರು ಭೇಟಿ ನೀಡುತ್ತಿರುವುದರಿಂದ ಕಸದ ಸಮಸ್ಯೆ, ಟ್ರಾಫಿಕ್ ಹಾಗೂ ನೀರಿನ ಅಭಾವ ತಲೆದೋರಿದೆ. ಆಂಧ್ರ, ಕೇರಳ, ಗುಜರಾತ್, ಪಂಜಾಬ್ ಸೇರಿದಂತೆ ಹೊರರಾಜ್ಯಗಳ ಶ್ರೀಮಂತರು ಕೊಡಗಿನಲ್ಲಿ ಬಂದು ಜಾಗ ಖರೀದಿಸಿ ರೆಸಾರ್ಟ್ ಹಾಗೂ ಲೇಔಟ್‌ಗಳನ್ನು ನಿರ್ಮಿಸುತ್ತಿರುವುದು ಸ್ಥಳೀಯ ಪರಿಸರಕ್ಕೆ ಧಕ್ಕೆಯುಂಟುಮಾಡಿದೆ. ಜಿಲ್ಲೆಯಲ್ಲಿ ವ್ಯಾಪಕವಾಗಿ ಮರಗಳನ್ನು ಕಡಿಯುತ್ತಿರುವುದರಿಂದ ಹವಾಮಾನ ಬದಲಾಗಿದ್ದು, ಈ ಬಾರಿ ಜೂನ್ ಮಾನ್ಸೂನ್‌ನಲ್ಲಿ ಬರಬೇಕಿದ್ದ 20 ಸೆಂಟಿಮೀಟರ್ ಮಳೆಯಲ್ಲಿ ಕೇವಲ 8 ಸೆಂಟಿಮೀಟರ್ ಮಾತ್ರ ಮಳೆಯಾಗಿದೆ ಎಂದು ತಿಳಿಸಿದರು.

ವೇದಿಕೆಯ ಪ್ರಮುಖ ಬೇಡಿಕೆಗಳೇನು ?

"ಕೊಡಗು ನಾಶವಾದರೆ ಕಾವೇರಿ ಒಣಗುತ್ತದೆ, ಕಾವೇರಿ ಒಣಗಿದರೆ ಇಡೀ ಬೆಂಗಳೂರು ಮತ್ತು ತಮಿಳುನಾಡಿನ 8 ಕೋಟಿ ಜನರಿಗೆ ಕುಡಿಯುವ ನೀರಿಲ್ಲದಂತಾಗುತ್ತದೆ." ಕೊಡಗಿನಲ್ಲಿ ವಾಣಿಜ್ಯ ಉದ್ದೇಶಗಳಿಗಾಗಿ ನಡೆಯುವ ಭೂಪರಿವರ್ತನೆಯನ್ನು ತಕ್ಷಣವೇ ಸ್ಥಗಿತಗೊಳಿಸಬೇಕು. ಪೊನ್ನಂಪೇಟೆ, ಗೋಣಿಕೊಪ್ಪದಂತಹ ಪ್ರದೇಶಗಳನ್ನು ಟೌನ್ ಪಂಚಾಯತ್ ಆಗಿ ಘೋಷಿಸಿರುವುದನ್ನು ರದ್ದುಪಡಿಸಬೇಕು. ಇಲ್ಲದಿದ್ದರೆ ಕೊಡಗು ಮತ್ತೊಂದು ಮೈಸೂರಿನಂತಹ ಕಾಂಕ್ರೀಟ್ ನಗರಿಯಾಗಲಿದೆ. ಹಿಮಾಚಲ ಪ್ರದೇಶ, ಉತ್ತರಾಖಂಡ ಹಾಗೂ ಈಶಾನ್ಯ ರಾಜ್ಯಗಳ ಮಾದರಿಯಲ್ಲಿ ಕೊಡಗಿನಲ್ಲೂ ಹೊರಗಿನವರು ಜಾಗ ಖರೀದಿಸದಂತೆ ಕಠಿಣ ಕಾನೂನು ತರಬೇಕು. ಕಾಡಿನ ಮಧ್ಯೆ ಹಾದುಹೋಗುವ ರೈಲ್ವೆ ಯೋಜನೆ ಹಾಗೂ ರಸ್ತೆ ಅಗಲೀಕರಣದಂತಹ ಪರಿಸರ ವಿರೋಧಿ ಯೋಜನೆಗಳನ್ನು ಕೈಬಿಡಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

ಮುಂದಿನ ಹೋರಾಟದ ಹಾದಿ

ನಿವೃತ್ತ ಕರ್ನಲ್ ಸಿ.ಪಿ. ಮುತ್ತಣ್ಣ ಮಾತನಾಡಿ, "ಇದು ಕೇವಲ ಒಂದು ಮನವಿ ಪತ್ರಕ್ಕೆ ಸೀಮಿತವಾದ ಹೋರಾಟವಲ್ಲ. ಮಂಡ್ಯದ ರೈತರು, ಮೈಸೂರು ಹಾಗೂ ಬೆಂಗಳೂರಿನ ನಾಗರಿಕರು, ಕೇರಳ ಮತ್ತು ತಮಿಳುನಾಡಿನ ಜನರನ್ನು ಒಗ್ಗೂಡಿಸಿ ಇದನ್ನೊಂದು ಬೃಹತ್ ಸತ್ಯಾಗ್ರಹ ಮಾದರಿಯ ಚಳವಳಿಯನ್ನಾಗಿ ರೂಪಿಸಲಾಗುವುದು," ಎಂದು ಎಚ್ಚರಿಸಿದ್ದಾರೆ. ವೇದಿಕೆಯು ಶೀಘ್ರದಲ್ಲೇ ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಲು ನಿರ್ಧರಿಸಿದೆ. ಸರ್ಕಾರ ಇಂದೇ ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ಪೀಳಿಗೆಗೆ ಕುಡಿಯುವ ನೀರು ಹನಿ ಹನಿಗೂ ಪರದಾಡಬೇಕಾದೀತು ಎಂಬುದು ಪರಿಸರವಾದಿಗಳ ಗಂಭೀರ ಎಚ್ಚರಿಕೆಯಾಗಿದೆ.

Read More
Next Story