
50 ವರ್ಷಗಳ ಪಯಣ: ಕಿಯೋನಿಕ್ಸ್ ಸಂಸ್ಥೆಯ ಸುದೀರ್ಘ ಸೇವೆಗೆ ಮನ್ನಣೆ
ಮಾಜಿ ಸಿಎಂ ದೇವರಾಜ ಅರಸು, ಸಚಿವರಾಗಿದ್ದ ವೀರಪ್ಪ ಮೊಯ್ಲಿ, ಎಸ್.ಎಂ. ಕೃಷ್ಣ ದೂರದೃಷ್ಟಿಯಿಂದ ರಾಜ್ಯದಲ್ಲಿ ತಂತ್ರಜ್ಞಾನದ ಬೀಜ ಬಿತ್ತಲ್ಪಟ್ಟಿತು ಎಂದು ಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ರಾಜ್ಯದ ತಂತ್ರಜ್ಞಾನ ಕ್ಷೇತ್ರದ ಬೆಳವಣಿಗೆಗೆ ಅಡಿಪಾಯ ಹಾಕಿದ ರಾಜ್ಯ ಸರ್ಕಾರದ ಪ್ರತಿಷ್ಠಿತ ಸಂಸ್ಥೆ ಕಿಯೋನಿಕ್ಸ್ ತನ್ನ ಸುದೀರ್ಘ 50 ವರ್ಷಗಳ ಯಶಸ್ವಿ ಪಯಣವನ್ನು ಪೂರೈಸಿದೆ. ಈ ಸಂಬಂಧ ಬೆಂಗಳೂರಿನಲ್ಲಿ ನಡೆದ ಕಿಯೋನಿಕ್ಸ್‌ನ ಸುವರ್ಣ ಮಹೋತ್ಸವ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಉದ್ಘಾಟಿಸಿ, ಸಂಸ್ಥೆಯ ಸಾಧನೆಗಳನ್ನು ಕೊಂಡಾಡಿದರು. ಈ ವೇಳೆ ಕಿಯೋನಿಕ್ಸ್ ಅಭಿವೃದ್ಧಿಪಡಿಸಿರುವ 'ಕಿಯೋ' ಎಐ ಕಂಪ್ಯೂಟರ್‌ಗಳ ಅನಾವರಣಗೊಳಿಸಲಾಯಿತು.
ಬಳಿಕ ಮಾತನಾಡಿದ ಡಿ.ಕೆ.ಶಿವಕುಮಾರ್, "ನಾನು ಶಾಲೆಯಲ್ಲಿ ಓದುತ್ತಿದ್ದ ದಿನಗಳಲ್ಲಿ ಕಿಯೋನಿಕ್ಸ್ ಆರಂಭವಾಯಿತು. ಅಂದಿನ ಮುಖ್ಯಮಂತ್ರಿ ದೇವರಾಜ ಅರಸು, ಕೈಗಾರಿಕಾ ಸಚಿವರಾಗಿದ್ದ ವೀರಪ್ಪ ಮೊಯ್ಲಿ ಮತ್ತು ಎಸ್.ಎಂ. ಕೃಷ್ಣ ಅವರ ದೂರದೃಷ್ಟಿಯಿಂದ ಕರ್ನಾಟಕದಲ್ಲಿ ತಂತ್ರಜ್ಞಾನದ ಬೀಜ ಬಿತ್ತಲ್ಪಟ್ಟಿತು. ಅಂದು 20 ಲಕ್ಷ ಜನಸಂಖ್ಯೆಯಿದ್ದ ಬೆಂಗಳೂರು ಇಂದು 1.40 ಕೋಟಿಗೆ ಬೆಳೆದಿದೆ. ಈ ವಿಕಾಸದಲ್ಲಿ ಕಿಯೋನಿಕ್ಸ್ ಪಾತ್ರ ಮಹತ್ವದ್ದು. ಗ್ರಾಮೀಣ ಭಾಗದ ಮಕ್ಕಳ ಕೈಗೆ ಆಧುನಿಕ ತಂತ್ರಜ್ಞಾನವನ್ನು ತಲುಪಿಸಲು ಕಿಯೋನಿಕ್ಸ್ ಮುಂದಾಗಿರುವುದು ಅಭಿನಂದನೀಯ. ಎಐ (ಕೃತಕ ಬುದ್ಧಿಮತ್ತೆ) ಯುಗಕ್ಕೆ ಕರ್ನಾಟಕವನ್ನು ಸಜ್ಜುಗೊಳಿಸುವ ಕೆಲಸವನ್ನು ಈ ಸಂಸ್ಥೆ ಮಾಡುತ್ತಿದೆ. ಹಳ್ಳಿಗಳ ಬಡ ವಿದ್ಯಾರ್ಥಿಗಳಿಗೂ ತಂತ್ರಜ್ಞಾನದ ಲಾಭ ಸಿಗಬೇಕು ಎಂಬುದು ನಮ್ಮ ಸರ್ಕಾರದ ಆಶಯ" ಎಂದರು.
'ಬಿಯಾಂಡ್ ಬೆಂಗಳೂರು' - ತಂತ್ರಜ್ಞಾನದ ವಿಕೇಂದ್ರೀಕರಣ
ಬೆಂಗಳೂರಿಗೆ ಮಾತ್ರ ಸೀಮಿತವಾಗಿದ್ದ ಮಾಹಿತಿ ತಂತ್ರಜ್ಞಾನವನ್ನು ರಾಜ್ಯದ ಇತರ ಜಿಲ್ಲೆಗಳಿಗೂ ವಿಸ್ತರಿಸುವ ಮಹತ್ವಾಕಾಂಕ್ಷೆಯನ್ನು ಡಿ.ಕೆ. ಶಿವಕುಮಾರ್ ವ್ಯಕ್ತಪಡಿಸಿದರು. ಬಿಯಾಂಡ್ ಬೆಂಗಳೂರು ಪರಿಕಲ್ಪನೆಯ ಅಡಿಯಲ್ಲಿ ಹುಬ್ಬಳ್ಳಿ, ಶಿವಮೊಗ್ಗ, ಕಲಬುರಗಿ ಮತ್ತು ಮಂಗಳೂರಿನಲ್ಲಿ ಐಟಿ ವಲಯಕ್ಕೆ ಉತ್ತೇಜನ ನೀಡಲಾಗುತ್ತಿದೆ. ಅಭಿವೃದ್ಧಿ ಎಂದರೆ ಕೇವಲ ರಾಜಧಾನಿ ಮಾತ್ರವಲ್ಲ, ರಾಜ್ಯದ ಮೂಲೆಮೂಲೆಗಳಲ್ಲೂ ಉದ್ಯೋಗ ಸೃಷ್ಟಿಯಾಗಬೇಕು ಎಂಬುದು ನಮ್ಮ ಗುರಿ ಎಂದು ಸ್ಪಷ್ಟಪಡಿಸಿದರು.
ಆಡಳಿತದಲ್ಲಿ ತಂತ್ರಜ್ಞಾನದ ಬಳಕೆ: 40 ಲಕ್ಷ ಡಿಜಿಟಲ್ ಖಾತಾ
ಆಡಳಿತದಲ್ಲಿ ಪಾರದರ್ಶಕತೆ ತರಲು ತಂತ್ರಜ್ಞಾನವನ್ನು ಅಸ್ತ್ರವನ್ನಾಗಿ ಬಳಸಲಾಗುತ್ತಿದೆ. ಬೆಂಗಳೂರಿನಲ್ಲಿ 40 ಲಕ್ಷ ಆಸ್ತಿಗಳಿಗೆ ಡಿಜಿಟಲ್ ಖಾತಾ ವಿತರಿಸುವ ಪ್ರಕ್ರಿಯೆ ನಡೆಯುತ್ತಿದೆ. ಕೇವಲ ಡಿಜಿಟಲ್ ದಾಖಲೆಗಳಲ್ಲ, ಅವುಗಳನ್ನು ಮನೆ ಮನೆಗೆ ತಲುಪಿಸುವ ವ್ಯವಸ್ಥೆ ಮಾಡಲಾಗುತ್ತಿದೆ. ಆಸ್ತಿ ದಾಖಲೆಗಳಲ್ಲಿನ ಗೊಂದಲಗಳನ್ನು ನಿವಾರಿಸಲು ತಂತ್ರಜ್ಞಾನವೇ ದಾರಿ ಎಂದು ತಿಳಿಸಿದರು. ನಮ್ಮಲ್ಲಿನ ಇಂಜಿನಿಯರಿಂಗ್ ಪದವೀಧರರು ಉದ್ಯೋಗದಾತರಾಗಬೇಕೇ ಹೊರತು ಕೇವಲ ಉದ್ಯೋಗಿಗಳಲ್ಲ ಎಂದು ತಿಳಿಸಿದರು. ರಾಜ್ಯದ 30 ಸಾವಿರಕ್ಕೂ ಹೆಚ್ಚು ಇಂಜಿನಿಯರಿಂಗ್ ಸೀಟುಗಳು ಖಾಲಿ ಉಳಿಯುತ್ತಿರುವುದು ಮತ್ತು ಪದವೀಧರರಿಗೆ ಕಡಿಮೆ ವೇತನ ಸಿಗುತ್ತಿರುವುದು ಆತಂಕಕಾರಿ. ಇದನ್ನು ಸರಿಪಡಿಸಲು ಉದ್ಯಮಗಳ ಅವಶ್ಯಕತೆಗೆ ತಕ್ಕಂತೆ ಪಠ್ಯಕ್ರಮವನ್ನು ಬದಲಿಸಲು ಸೂಚಿಸಲಾಗಿದೆ. ವಿದೇಶಗಳಲ್ಲಿ ಪದವಿಗಳಿಗಿಂತ ಕೌಶಲ್ಯಗಳಿಗೆ ಹೆಚ್ಚಿನ ಬೆಲೆ ಇದೆ. ನಮ್ಮ ಯುವಕರು ಕೌಶಲ್ಯಪೂರ್ಣರಾದರೆ ಯಾವುದೇ ಉದ್ಯೋಗ ಸಿಗುತ್ತದೆ. ನಮ್ಮ ಸರ್ಕಾರ ಉದ್ಯೋಗದಾತರನ್ನು ಬೆಳೆಸುವ ನಿಟ್ಟಿನಲ್ಲಿ ಕಾಳಜಿ ವಹಿಸಿದೆ ಎಂದರು.
ಮೈಸೂರು ಮಹಾರಾಜರು ನೀಡಿದ 300 ಎಕರೆ ಜಮೀನು ಮತ್ತು 5 ಲಕ್ಷ ರೂಪಾಯಿ ಸಹಾಯದಿಂದ ಸ್ಥಾಪನೆಯಾದ ಐಐಎಸ್‌ಸಿ ಇಂದು ದೇಶದ ವಿಜ್ಞಾನ ಲೋಕದ ಕೇಂದ್ರಬಿಂದುವಾಗಿದೆ. ಅಂದು ಟಾಟಾ ಮತ್ತು ಸ್ವಾಮಿ ವಿವೇಕಾನಂದರು ಕಂಡ ಕನಸು ಇಂದು 250ಕ್ಕೂ ಹೆಚ್ಚು ಇಂಜಿನಿಯರಿಂಗ್ ಕಾಲೇಜುಗಳು ಮತ್ತು ಲಕ್ಷಾಂತರ ಉದ್ಯೋಗಿಗಳನ್ನು ಹೊಂದಿರುವ ಬೆಂಗಳೂರಿನ ಅಭಿವೃದ್ಧಿಗೆ ಅಡಿಪಾಯವಾಯಿತು ಎಂದು ಹೇಳಿದರು. ಎಲೆಕ್ಟ್ರಾನಿಕ್ ಸಿಟಿ ಸೇರಿದಂತೆ ನಗರದ ಪ್ರಮುಖ ರಸ್ತೆಗಳಿಗೆ ಮೇಲ್ಸೇತುವೆಗಳನ್ನು ನಿರ್ಮಿಸಿದ್ದು ಯುಪಿಎ ಸರ್ಕಾರದ ಕಾಲದಲ್ಲಿ. ಮನಮೋಹನ್ ಸಿಂಗ್ ಅವರ ಸರ್ಕಾರ ಕರ್ನಾಟಕದ ತಂತ್ರಜ್ಞಾನ ಕ್ಷೇತ್ರದ ಬೆಳವಣಿಗೆಗೆ ಭದ್ರ ಬುನಾದಿ ಹಾಕಿತು ಎಂದರು.
ತಮ್ಮ ವೈಯಕ್ತಿಕ ಅನುಭವವನ್ನು ಹಂಚಿಕೊಂಡ ಅವರು, 1981ರಲ್ಲಿ ದೂರವಾಣಿ ಸಂಪರ್ಕ ಪಡೆಯಲು ಸಂಸದರ ಶಿಫಾರಸ್ಸು ಬೇಕಿತ್ತು. ಇಂದು ಎಲ್ಲರ ಕೈಯಲ್ಲೂ ಸ್ಮಾರ್ಟ್‌ಫೋನ್ ಇದೆ. ತಂತ್ರಜ್ಞಾನ ಎಷ್ಟು ವೇಗವಾಗಿ ಬೆಳೆದಿದೆ ಎಂಬುದಕ್ಕೆ ಇದು ಸಾಕ್ಷಿ. ಕಿಯೋನಿಕ್ಸ್ ಸಂಸ್ಥೆ ತನ್ನ ತಾಂತ್ರಿಕ ಪರಂಪರೆಯನ್ನು ಮುಂದುವರಿಸಬೇಕು. ಸಂಸ್ಥೆಗೆ ಬೇಕಾದ ಜಾಗ, ಮೂಲಸೌಕರ್ಯಗಳ ಅಗತ್ಯವಿದ್ದರೆ ಸರ್ಕಾರ ನಿಮ್ಮ ಬೆಂಬಲಕ್ಕೆ ಸದಾ ಸಿದ್ಧವಿದೆ ಎಂದು ಭರವಸೆ ನೀಡಿದರು.

