KEA | CET seat allocation mock results announced on July 6
x

ಸಾಂದರ್ಭಿಕ ಚಿತ್ರ

KEA | ಜುಲೈ 6ಕ್ಕೆ ಸಿಇಟಿ ಸೀಟು ಹಂಚಿಕೆ ಅಣಕು ಫಲಿತಾಂಶ ಪ್ರಕಟ

ಕೃಷಿ, ಪಶು ವೈದ್ಯಕೀಯ, ಬಿ.ಎಸ್ಸಿ ನರ್ಸಿಂಗ್ ಕೋರ್ಸ್ ಗಳ ಸೀಟ್ ಮ್ಯಾಟ್ರಿಕ್ಸ್ ಬಂದಿದೆ. ಎಂಜಿನಿಯರಿಂಗ್ ಕೋರ್ಸ್‌ಗಳ ಕರಡು ಸೀಟ್ ಮ್ಯಾಟ್ರಿಕ್ಸ್ ಬಂದಿದ್ದು, ಅಂತಿಮ ಪಟ್ಟಿಗೆ ಕಾಯುತ್ತಿದ್ದೇವೆ ಎಂದು ಕೆಇಎ ಹೇಳಿದೆ.


Click the Play button to hear this message in audio format

ಎಂಜಿನಿಯರಿಂಗ್, ಪಶು ವೈದ್ಯಕೀಯ, ಕೃಷಿ ಇತ್ಯಾದಿ ಕೋರ್ಸ್ ಗಳ ಪ್ರವೇಶಕ್ಕೆ ಮೊದಲ ಸುತ್ತಿನ ಸೀಟು ಹಂಚಿಕೆಯ ಭಾಗವಾಗಿ ಆಪ್ಷನ್‌ ದಾಖಲಿಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಶನಿವಾರದಿಂದಲೇ ತನ್ನ ವೆಬ್ ಸೈಟ್ ನಲ್ಲಿ ಪೋರ್ಟಲ್ ತೆರೆದಿದೆ.

ಜೂ. 30ರ ಬೆಳಿಗ್ಗೆ 10ರವರೆಗೆ ಅಭ್ಯರ್ಥಿಗಳು ತಮಗೆ ಇಚ್ಛೆ ಇರುವ ಕಾಲೇಜು ಮತ್ತು ಕೋರ್ಸ್‌ಗಳನ್ನು ಆದ್ಯತಾ ಕ್ರಮದಲ್ಲಿ ದಾಖಲಿಸಬಹುದು. ಜು. 6ರಂದು ಬೆಳಿಗ್ಗೆ 11ಕ್ಕೆ ಸೀಟು ಹಂಚಿಕೆಯ ಅಣಕು ಫಲಿತಾಂಶ ಪ್ರಕಟಿಸಲಾಗುತ್ತದೆ. ಜು. 9ರವರೆಗೆ ಆಯ್ಕೆಗಳನ್ನು ಸೇರಿಸಲು, ಬದಲಾಯಿಸಲು ಅವಕಾಶ ನೀಡಲಾಗುತ್ತದೆ. ಅದಾದ ಮೂರು ದಿನಗಳ ನಂತರ ಜು. 15ರಂದು ಸೀಟು ಹಂಚಿಕೆಯ ಅಂತಿಮ ಫಲಿತಾಂಶ ಪ್ರಕಟಿಸಲಾಗುತ್ತದೆ. ನೀಟ್ ಪರೀಕ್ಷೆ ಬರೆಯುತ್ತಿರುವ ಅಭ್ಯರ್ಥಿಗಳು ಸೋಮವಾರದ (ಜೂ.22) ನಂತರ ಆಪ್ಷನ್ಸ್ ದಾಖಲಿಸಲಿ. ಸದ್ಯ ನೀಟ್ ಪರೀಕ್ಷೆ ಕಡೆಗೆ ಗಮನ ಇರಲಿ ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದ್ದಾರೆ.

ಕೃಷಿ, ಪಶು ವೈದ್ಯಕೀಯ, ಬಿ.ಎಸ್ಸಿ ನರ್ಸಿಂಗ್ ಕೋರ್ಸ್ ಗಳ ಸೀಟ್ ಮ್ಯಾಟ್ರಿಕ್ಸ್ ಬಂದಿದೆ. ಎಂಜಿನಿಯರಿಂಗ್ ಕೋರ್ಸ್‌ಗಳ ಕರಡು ಸೀಟ್ ಮ್ಯಾಟ್ರಿಕ್ಸ್ ಬಂದಿದ್ದು, ಅಂತಿಮ ಪಟ್ಟಿಗೆ ಕಾಯುತ್ತಿದ್ದೇವೆ. ಬಂದ ನಂತರ ಎಲ್ಲ ಮಾಹಿತಿಯನ್ನು ವೆಬ್ ಸೈಟ್ ಗೆ ಅಪ್ ಲೋಡ್ ಮಾಡಲಾಗುವುದು. ಅಲ್ಲಿಯವರೆಗೂ ಅಭ್ಯರ್ಥಿಗಳು ಕಾಯುವ ಅಗತ್ಯ ಇಲ್ಲ. ಬದಲಿಗೆ ಪರ್ಯಾಯವಾಗಿ ಕರಡು ಸೀಟ್ ಮ್ಯಾಟ್ರಿಕ್ಸ್ ಪ್ರಕಾರ ಆಪ್ಷನ್ಸ್ ದಾಖಲಿಸಬಹುದು ಎಂದು ವಿವರಿಸಿದರು.

ಪ್ರೀ ಸುತ್ತಿನ ಕೌನ್ಸೆಲಿಂಗ್ ಇಲ್ಲ

ನೀಟ್ ಮರು ಪರೀಕ್ಷೆ ಕಾರಣಕ್ಕೆ ವೈದ್ಯಕೀಯ ಅಲ್ಲದೆ ಇತರ ಕೋರ್ಸ್ ಓದುವ ಅಭ್ಯರ್ಥಿಗಳಿಗೆ ಆಗುತ್ತಿದ್ದ ವಿಳಂಬ ತಪ್ಪಿಸಲು ಪ್ರೀ ಸುತ್ತಿನ ಸೀಟು ಹಂಚಿಕೆಗೆ ಮಾಡಿದ್ದ ತೀರ್ಮಾನವನ್ನು ಕೈಬಿಟ್ಟಿದ್ದು, ಈ ಮೊದಲಿನ ಹಾಗೆಯೇ‌ ಮೊದಲ ಸುತ್ತಿನಿಂದಲೇ ಕೌನ್ಸೆಲಿಂಗ್ ಪ್ರಕ್ರಿಯೆ ಆರಂಭವಾಗಲಿದೆ. ಯಾರಿಗೆ ಇಚ್ಛೆ ಪ್ರಕಾರ ಸೀಟು ಸಿಗುತ್ತದೊ ಅಂತಹವರಿಗೆ ಹೋಗಿ ಪ್ರವೇಶ ಪಡೆಯಲು ಪ್ರೀ ಸುತ್ತಿನಲ್ಲಿ ಅವಕಾಶ ನೀಡುವ ಯೋಜನೆ ಇತ್ತು. ಆದರೆ ಈ ಬಗ್ಗೆ ಅನೇಕರು ಪ್ರೀ ಸುತ್ತಿನಲ್ಲಿ ಸೀಟು ಉನ್ನತೀಕರಣ ಸೇರಿದಂತೆ ಮೊದಲ ಸುತ್ತಿನಲ್ಲಿರುವ ಆಯ್ಕೆಗೆ ಅವಕಾಶ ನೀಡಬೇಕೆನ್ನುವ ಇಚ್ಚೆ ವ್ಯಕ್ತಪಡಿಸಿದ್ದರಿಂದ ಈ ತೀರ್ಮಾನ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಕೃಷಿ ಅಧಿಕಾರಿ: ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

ಕೃಷಿ ಅಧಿಕಾರಿ ಮತ್ತು ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ದಿನಾಂಕವನ್ನು ಜೂ. 25ರವರೆಗೆ ವಿಸ್ತರಿಸಲಾಗಿದೆ. ಬಿ.ಇ ಬಯೊಟೆಕ್ನಾಲಜಿ ಪದವಿಯನ್ನು ಬಿ.ಟೆಕ್ ಬಯೋಟೆಕ್ನಾಲಜಿ ಪದವಿಗೆ ಸಮಾನವೆಂದು ಸರ್ಕಾರ ಪರಿಗಣಿಸಿದೆ. ಹೀಗಾಗಿ ಕೃಷಿ ಅಧಿಕಾರಿ ಮತ್ತು ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳಿಗೆ ಬಿ.ಇ ಬಯೋ ಟೆಕ್ನಾಲಜಿ ಅಭ್ಯರ್ಥಿಗಳು ಕೂಡ ಅರ್ಜಿ ಸಲ್ಲಿಸಬಹುದು ಹೇಳಿದ್ದಾರೆ.

Read More
Next Story