
ಎಕೋ ಟೂರಿಸಂನಲ್ಲಿ ರಾಜ್ಯವೇ ಮಾದರಿ: ಜಾರ್ಖಂಡ್ ಜತೆ ಮಹತ್ವದ ಒಪ್ಪಂದಕ್ಕೆ ಸಿದ್ಧತೆ
ರಾಜ್ಯದಲ್ಲಿ ಪ್ರವಾಸೋದ್ಯಮ ಇಲಾಖೆಯು ಜಾರಿಗೆ ತಂದಿರುವ ಎಕೋ ಟೂರಿಸಂ ಮಾದರಿಗಳು ಮತ್ತು ಪ್ರವಾಸಿ ತಾಣಗಳ ನಿರ್ವಹಣಾ ಪದ್ಧತಿಯು ದೇಶದ ಇತರ ರಾಜ್ಯಗಳಿಗೆ ಮಾದರಿಯಾಗಿದೆ.
ದೇಶದ ಪ್ರವಾಸೋದ್ಯಮ ಭೂಪಟದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ರಾಜ್ಯವು ಇದೀಗ ಇತರ ರಾಜ್ಯಗಳಿಗೂ ಪ್ರವಾಸೋದ್ಯಮದ ಮಹತ್ವ ತಿಳಿಸಲು ಸಜ್ಜಾಗಿದೆ. ಜಾರ್ಖಂಡ್ ರಾಜ್ಯದಲ್ಲಿ ಎಕೋ ಟೂರಿಸಂ (ಪರಿಸರ ಪ್ರವಾಸೋದ್ಯಮ) ಮತ್ತು ಸುಸ್ಥಿರ ಪ್ರವಾಸೋದ್ಯಮವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಕರ್ನಾಟಕದ ಅನುಭವ ಮತ್ತು ತಾಂತ್ರಿಕ ಪರಿಣತಿಯನ್ನು ಬಳಸಿಕೊಳ್ಳಲು ಉಭಯ ರಾಜ್ಯಗಳು ಮಹತ್ವದ ನಿರ್ಧಾರ ಕೈಗೊಂಡಿವೆ.
ಬೆಂಗಳೂರಿನ ಇಂಧನ ಭವನದಲ್ಲಿ ಪ್ರವಾಸೋದ್ಯಮ ಸಚಿವ ಕೆ.ಜೆ. ಜಾರ್ಜ್ ಅವರ ನೇತೃತ್ವದಲ್ಲಿ ಜಾರ್ಖಂಡ್ ಪ್ರವಾಸೋದ್ಯಮ ಸಚಿವ ಸುದಿವ್ಯ ಕುಮಾರ್ ಅವರ ನಿಯೋಗದೊಂದಿಗೆ ಉನ್ನತ ಮಟ್ಟದ ಸಭೆ ನಡೆಯಿತು. ಈ ಸಭೆಯಲ್ಲಿ ಪ್ರವಾಸೋದ್ಯಮ ಕ್ಷೇತ್ರವನ್ನು ಹೇಗೆ ಸ್ಥಳೀಯ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯೊಂದಿಗೆ ಬೆಸೆಯಬೇಕು ಎಂಬ ಕುರಿತು ಸುದೀರ್ಘ ಚರ್ಚೆ ನಡೆಯಿತು. ರಾಜ್ಯದಲ್ಲಿ ಪ್ರವಾಸೋದ್ಯಮ ಇಲಾಖೆಯು ಜಾರಿಗೆ ತಂದಿರುವ ಎಕೋ ಟೂರಿಸಂ ಮಾದರಿಗಳು ಮತ್ತು ಪ್ರವಾಸಿ ತಾಣಗಳ ನಿರ್ವಹಣಾ ಪದ್ಧತಿಯು ದೇಶದ ಇತರ ರಾಜ್ಯಗಳಿಗೆ ಮಾದರಿಯಾಗಿದೆ. ಜಾರ್ಖಂಡ್ ನಿಯೋಗವು ಕರ್ನಾಟಕದ ಯೋಜನೆಗಳಾದ - ಪ್ರವಾಸಿ ತಾಣಗಳ ಅಭಿವೃದ್ಧಿ, ಸಮುದಾಯ ಆಧಾರಿತ ಪ್ರವಾಸೋದ್ಯಮ ಮತ್ತು ಸುಸ್ಥಿರ ನಿರ್ವಹಣಾ ಕ್ರಮಗಳ ಬಗ್ಗೆ ಕೂಲಂಕಷ ಮಾಹಿತಿ ಪಡೆದುಕೊಂಡಿತು. ಜಾರ್ಖಂಡ್‌ನ ಪ್ರವಾಸೋದ್ಯಮ ಸಚಿವ ಸುದಿವ್ಯ ಕುಮಾರ್ ಅವರು, ಕರ್ನಾಟಕದ ಈ ಮಾದರಿಗಳು ಅತೀ ಹೆಚ್ಚು ಪರಿಣಾಮಕಾರಿಯಾಗಿದ್ದು, ತಮ್ಮ ರಾಜ್ಯದ ಭೌಗೋಳಿಕ ಪರಿಸರಕ್ಕೆ ಇವುಗಳನ್ನು ಅಳವಡಿಸಿಕೊಳ್ಳಲು ಉತ್ಸುಕರಾಗಿರುವುದಾಗಿ ತಿಳಿಸಿದರು.
ಒಪ್ಪಂದದ ಪ್ರಮುಖ ಅಂಶಗಳು
ಶೀಘ್ರದಲ್ಲೇ ಉಭಯ ರಾಜ್ಯಗಳ ನಡುವೆ ಅಧಿಕೃತ ಒಪ್ಪಂದ ಸಹಿ ಹಾಕಲಾಗುವುದು. ಇದರಡಿ ಕರ್ನಾಟಕ ಪ್ರವಾಸೋದ್ಯಮ ಇಲಾಖೆಯು ಕೆಲವು ಕ್ಷೇತ್ರಗಳಲ್ಲಿ ಮಾರ್ಗದರ್ಶನ ನೀಡಲಿದೆ. ಎಕೋ ಟೂರಿಸಂ ಯೋಜನೆಗಳನ್ನು ಹೇಗೆ ವಿನ್ಯಾಸಗೊಳಿಸಬೇಕು ಎಂಬ ಬಗ್ಗೆ ತಾಂತ್ರಿಕ ಬೆಂಬಲ. ಪ್ರವಾಸೋದ್ಯಮದಲ್ಲಿ ಜಾರಿಗೆ ತಂದಿರುವ ಯಶಸ್ವಿ ಪದ್ಧತಿಗಳ ಕುರಿತು ಮಾಹಿತಿ ಹಂಚಿಕೆ. ಪ್ರವಾಸಿ ತಾಣಗಳ ದೀರ್ಘಕಾಲಿಕ ನಿರ್ವಹಣೆ ಮತ್ತು ಸ್ವಚ್ಛತೆ ಕಾಪಾಡುವ ತಂತ್ರಗಳು. ಪ್ರವಾಸೋದ್ಯಮದ ಲಾಭವನ್ನು ಸ್ಥಳೀಯ ಸಮುದಾಯಕ್ಕೆ ತಲುಪಿಸುವ ಕಾರ್ಯತಂತ್ರ ಕುರಿತು ಒಪ್ಪಂದಗಳು ನಡೆಯಲಿವೆ.
'ಮಾರ್ಗದರ್ಶಕ ಶಕ್ತಿಯಾದ ಕರ್ನಾಟಕ'
ಸಚಿವ ಕೆ.ಜೆ. ಜಾರ್ಜ್ ಅವರು ಮಾತನಾಡಿ, "ಕರ್ನಾಟಕವು ಕೇವಲ ಯೋಜನೆಗಳನ್ನು ಅನುಷ್ಠಾನಗೊಳಿಸುವುದಕ್ಕೆ ಮಾತ್ರ ಸೀಮಿತವಾಗದೆ, ಇತರ ರಾಜ್ಯಗಳಿಗೆ ಪ್ರವಾಸೋದ್ಯಮ ಅಭಿವೃದ್ಧಿಯಲ್ಲಿ ದಿಕ್ಸೂಚಿಯಾಗಿ ಹೊರಹೊಮ್ಮುತ್ತಿದೆ. ನಮ್ಮ ಅನುಭವ ಮತ್ತು ಉತ್ತಮ ಪದ್ಧತಿಗಳನ್ನು ಜಾರ್ಖಂಡ್‌ನಂತಹ ರಾಜ್ಯಗಳೊಂದಿಗೆ ಹಂಚಿಕೊಳ್ಳುವುದು ಸಂತೋಷದ ವಿಷಯ. ಇದು ರಾಜ್ಯಗಳ ನಡುವಿನ ಸಹಕಾರಕ್ಕೆ ಉತ್ತಮ ಉದಾಹರಣೆಯಾಗಿದೆ" ಎಂದು ಅಭಿಪ್ರಾಯಪಟ್ಟರು.
ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿ ಡಾ. ರಾಮ್ ಪ್ರಸಾತ್ ಮನೋಹರ್ ಒಪ್ಪಂದದ ಮಹತ್ವವನ್ನು ವಿವರಿಸಿ, "ಪ್ರವಾಸೋದ್ಯಮ ಯಶಸ್ವಿಯಾಗಲು ಕೇವಲ ಕಾಂಕ್ರೀಟ್ ಮೂಲಸೌಕರ್ಯ ನಿರ್ಮಿಸಿದರೆ ಸಾಲದು. ಸ್ಥಳೀಯ ಪರಿಸರ, ಸಂಸ್ಕೃತಿ ಮತ್ತು ಸಮುದಾಯವನ್ನು ಗೌರವಿಸುವುದು ಮುಖ್ಯ. ಕರ್ನಾಟಕ ಈ ವಿಷಯದಲ್ಲಿ ಬಹಳಷ್ಟು ಕಲಿತಿದೆ. ಈ ಅನುಭವವನ್ನು ಜಾರ್ಖಂಡ್‌ನ ಯೋಜನಾ ಹಂತದಿಂದಲೇ ಅಳವಡಿಸಿಕೊಳ್ಳುವುದರಿಂದ ಅಲ್ಲಿನ ಯೋಜನೆಗಳು ದೀರ್ಘಕಾಲಿಕವಾಗಿ ಯಶಸ್ವಿಯಾಗಲಿವೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಒಪ್ಪಂದದ ಮಹತ್ವವೇನು?
ಒಂದು ರಾಜ್ಯದ ಆಡಳಿತಾತ್ಮಕ ಅನುಭವ ಇನ್ನೊಂದು ರಾಜ್ಯಕ್ಕೆ ವರ್ಗಾವಣೆಯಾಗುವುದರಿಂದ ಸಮಯ ಮತ್ತು ಸಂಪನ್ಮೂಲಗಳ ಉಳಿತಾಯವಾಗುತ್ತದೆ. ಪರಿಸರಕ್ಕೆ ಹಾನಿಯಾಗದಂತೆ ಪ್ರವಾಸೋದ್ಯಮ ಅಭಿವೃದ್ಧಿಪಡಿಸುವ ಕರ್ನಾಟಕದ ನೀತಿಯು ಜಾರ್ಖಂಡ್‌ನ ದಟ್ಟಾರಣ್ಯ ಮತ್ತು ನಿಸರ್ಗ ಸಂಪತ್ತನ್ನು ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ. ಇಂತಹ ಸಾಂಸ್ಥಿಕ ಒಪ್ಪಂದಗಳು ರಾಜ್ಯಗಳ ನಡುವಿನ ಸೌಹಾರ್ದತೆಯನ್ನು ಹೆಚ್ಚಿಸುತ್ತವೆ. ಸಭೆಯ ನಂತರ, ಎರಡೂ ರಾಜ್ಯಗಳ ಅಧಿಕಾರಿಗಳು ಒಪ್ಪಂದದ ಕರಡನ್ನು ಅಂತಿಮಗೊಳಿಸಲು ಸಿದ್ಧತೆ ನಡೆಸಿದ್ದಾರೆ. ಕೆಲವೇ ದಿನಗಳಲ್ಲಿ ಉಭಯ ರಾಜ್ಯಗಳ ಪ್ರವಾಸೋದ್ಯಮ ಇಲಾಖೆಗಳು ಅಧಿಕೃತ ಸಹಿ ಹಾಕಲಿವೆ. ತದನಂತರ, ಕರ್ನಾಟಕದ ಅಧಿಕಾರಿಗಳ ತಂಡವು ಜಾರ್ಖಂಡ್‌ನಲ್ಲಿ ಕ್ಷೇತ್ರ ಭೇಟಿ ನೀಡಿ, ಅಲ್ಲಿನ ಪ್ರವಾಸೋದ್ಯಮ ತಾಣಗಳ ಅಧ್ಯಯನ ನಡೆಸಿ ವರದಿ ಸಲ್ಲಿಸಲಿದೆ.

