Internal Reservation: ಒಳ ಮೀಸಲಾತಿ ಹಂಚಿಕೆ: ಅಲೆಮಾರಿ ಸಮುದಾಯದಿಂದ ತೀವ್ರ ವಿರೋಧ
x
ಅಲೆಮಾರಿ ಸಮುದಾಯಗಳ ಮಹಾ ಒಕ್ಕೂಟದ ರಾಜ್ಯಾಧ್ಯಕ್ಷ ಶೇಷಪ್ಪ

Internal Reservation: ಒಳ ಮೀಸಲಾತಿ ಹಂಚಿಕೆ: ಅಲೆಮಾರಿ ಸಮುದಾಯದಿಂದ ತೀವ್ರ ವಿರೋಧ

ಅಲೆಮಾರಿ ಸಮುದಾಯಗಳ ಮಹಾ ಒಕ್ಕೂಟದ ರಾಜ್ಯಾಧ್ಯಕ್ಷ ಶೇಷಪ್ಪ ಹಾಗೂ ಅಸ್ಪಶ್ಯ ಸಮುದಾಯದ ಮುಖಂಡರ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಮಹತ್ವದ ಸಭೆ ನಡೆಸಲಾಗಿದೆ.


ರಾಜ್ಯ ಸರ್ಕಾರ ಇತ್ತೀಚೆಗೆ ಪ್ರಕಟಿಸಿರುವ ಒಳ ಮೀಸಲಾತಿ ಹಂಚಿಕೆ ತೀರ್ಮಾನದ ವಿರುದ್ಧ ಅಲೆಮಾರಿ ಸಮುದಾಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಸರ್ಕಾರದ ಈ ನಿರ್ಧಾರದಿಂದ ಸಮುದಾಯಕ್ಕೆ ದೊಡ್ಡ ಅನ್ಯಾಯವಾಗಿದೆ ಎಂದು ಆರೋಪಿಸಿರುವ ಮುಖಂಡರು, ಕಾನೂನು ಹೋರಾಟದ ಜೊತೆಗೆ ಬೀದಿಗಿಳಿದು ಉಗ್ರ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ.

ಅಲೆಮಾರಿ ಸಮುದಾಯಗಳ ಮಹಾ ಒಕ್ಕೂಟದ ರಾಜ್ಯಾಧ್ಯಕ್ಷ ಶೇಷಪ್ಪ ಹಾಗೂ ಅಸ್ಪಶ್ಯ ಸಮುದಾಯದ ಮುಖಂಡರ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಮಹತ್ವದ ಸಭೆ ನಡೆಸಲಾಯಿತು. ಸಭೆಯಲ್ಲಿ ಸರ್ಕಾರದ ಒಳ ಮೀಸಲಾತಿ ನಿಲುವನ್ನು ತೀವ್ರವಾಗಿ ಖಂಡಿಸಲಾಯಿತು.

"ನ್ಯಾಯಮೂರ್ತಿ ನಾಗಮೋಹನ್ ದಾಸ್ ಆಯೋಗದ ವರದಿಯ ಅನ್ವಯ ಅಲೆಮಾರಿ ಸಮುದಾಯಗಳಿಗೆ 'ಎ' ವರ್ಗದಲ್ಲಿ ಶೇಕಡಾ 1ರಷ್ಟು ಪ್ರತ್ಯೇಕ ಒಳ ಮೀಸಲಾತಿ ನೀಡಬೇಕಿತ್ತು. ಆದರೆ, ಸರ್ಕಾರ ನಮ್ಮ ಈ ನ್ಯಾಯಯುತ ಬೇಡಿಕೆಯನ್ನು ಸಂಪೂರ್ಣವಾಗಿ ಕಡೆಗಣಿಸಿದೆ. ನಮ್ಮನ್ನು 'ಸಿ' ವರ್ಗದಡಿ ಸೇರಿಸುವ ಮೂಲಕ ಸರ್ಕಾರ ನಮಗೆ ಸ್ಪಷ್ಟವಾಗಿ ಮೋಸ ಮಾಡಿದೆ," ಎಂದು ಮುಖಂಡರು ಸಭೆಯಲ್ಲಿ ಆಕ್ರೋಶ ಹೊರಹಾಕಿದ್ದಾರೆ.

ಕಾನೂನು ಹೋರಾಟ ಮತ್ತು ರಾಜ್ಯಾದ್ಯಂತ ಪ್ರತಿಭಟನೆ

ಮೀಸಲಾತಿ ವರ್ಗೀಕರಣದಲ್ಲಿನ ಈ ಅನ್ಯಾಯವನ್ನು ಪ್ರಶ್ನಿಸಿ ಸಮುದಾಯವು ಈಗಾಗಲೇ ನ್ಯಾಯಾಲಯದ ಮೆಟ್ಟಿಲೇರಿದೆ. ಇದೀಗ ಸರ್ಕಾರದ ಹೊಸ ಒಳ ಮೀಸಲಾತಿ ಹಂಚಿಕೆ ತೀರ್ಮಾನದ ವಿರುದ್ಧ ನ್ಯಾಯಾಲಯಕ್ಕೆ ಮತ್ತೊಂದು ಹೆಚ್ಚುವರಿ ಅರ್ಜಿ ಸಲ್ಲಿಸಲು ಒಕ್ಕೂಟ ತೀರ್ಮಾನಿಸಿದೆ. ಕೇವಲ ಕಾನೂನು ಹೋರಾಟಕ್ಕಷ್ಟೇ ಸೀಮಿತವಾಗದೆ, ನಮ್ಮ ಹಕ್ಕುಗಳನ್ನು ಪಡೆಯಲು ರಾಜ್ಯಾದ್ಯಂತ ಸತ್ಯಾಗ್ರಹ ಹಾಗೂ ಉಗ್ರ ಪ್ರತಿಭಟನೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಒಕ್ಕೂಟದ ಮುಖಂಡರು ಎಚ್ಚರಿಕೆ ನೀಡಿದ್ದಾರೆ.

ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸುವ ಎಚ್ಚರಿಕೆ

ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಮುಖಂಡರು, ಬೇಡಿಕೆ ಈಡೇರಿಸದಿದ್ದರೆ ಮುಂಬರುವ ಚುನಾವಣೆಗಳಲ್ಲಿ ತಕ್ಕ ಬೆಲೆ ತೆರಬೇಕಾಗುತ್ತದೆ ಎಂದು ಗುಡುಗಿದ್ದಾರೆ. "ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅಲೆಮಾರಿ ಸಮುದಾಯವು ಕಾಂಗ್ರೆಸ್ ಪಕ್ಷವನ್ನು ನಂಬಿ, ಬೆನ್ನಿಗೆ ನಿಂತು ಬಹುಮತದಿಂದ ಮತ ಚಲಾಯಿಸಿತ್ತು. ಆದರೆ, ಅಧಿಕಾರಕ್ಕೆ ಬಂದ ಬಳಿಕ ಕಾಂಗ್ರೆಸ್ ಸರ್ಕಾರ ಅಲೆಮಾರಿಗಳಿಗೆ ದ್ರೋಹ ಬಗೆದಿದೆ. ನಮ್ಮ ಬೇಡಿಕೆಯನ್ನು ಈಡೇರಿಸದಿದ್ದರೆ ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸುತ್ತೇವೆ," ಎಂದು ಎಚ್ಚರಿಸಿದ್ದಾರೆ.

Read More
Next Story