ಐಎಎಸ್ ಅಧಿಕಾರಿ ನಾಪತ್ತೆ ವದಂತಿಗೆ ತೆರೆ; ಕೊನೆಗೂ ಸಂಪರ್ಕಕ್ಕೆ ಬಂದ ಅಧಿಕಾರಿ
x

ಐಎಎಸ್ ಅಧಿಕಾರಿ ನಾಪತ್ತೆ ವದಂತಿಗೆ ತೆರೆ; ಕೊನೆಗೂ ಸಂಪರ್ಕಕ್ಕೆ ಬಂದ ಅಧಿಕಾರಿ

ಜ್ಞಾನೇಂದ್ರ ಕುಮಾರ್‌ ಅವರು ಕೆಪಿಎಸ್ಸಿ ಪರೀಕ್ಷಾ ನಿಯಂತ್ರಕರಾಗಿ ಕಾರ್ಯನಿರ್ವಹಿಸಿದ್ದರಿಂದ ಇತ್ತೀಚಿನ ಬೆಳವಣಿಗೆಗಳು ಅಧಿಕಾರಿಯ ನಾಪತ್ತೆ ಪ್ರಕರಣಕ್ಕೆ ತಿರುವು ನೀಡಿದ್ದವು.


ಎರಡು ದಿನಗಳಿಂದ ದಿಢೀರ್‌ ನಾಪತ್ತೆಯಾಗಿದ್ದ ಕರ್ನಾಟಕದ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್‌ ಗಂಗ್ವಾರ್ ಕೊನೆಗೂ ಸರ್ಕಾರದ ಉನ್ನತಾಧಿಕಾರಿಗಳ ಸಂಪರ್ಕಕ್ಕೆ ಬಂದಿದ್ದಾರೆ. ಆ ಮೂಲಕ ಅಧಿಕಾರಿಯ ನಿಗೂಢ ನಾಪತ್ತೆ ವದಂತಿಗಳಿಗೆ ತೆರೆ ಬಿದ್ದಂತಾಗಿದೆ.

ಈ ಹಿಂದೆ ಕರ್ನಾಟಕ ಲೋಕಸೇವಾ ಆಯೋಗದ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದ್ದ ಜ್ಞಾನೇಂದ್ರ ಕುಮಾರ್ ಅವರು ಪ್ರಸ್ತುತ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಎಂಎಸ್ಎಂಇ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕೆಪಿಎಸ್‌ಸಿ ಪರೀಕ್ಷಾ ಅಕ್ರಮ ತೀವ್ರ ಸ್ವರೂಪ ಪಡೆದುಕೊಂಡು, ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಹಾಗೂ ಆಪ್ತರ ನಿವಾಸಗಳ ಮೇಲೆ ಇಡಿ ದಾಳಿ ನಡೆಸಿದ ಬೆನ್ನಲ್ಲೇ ಐಎಎಸ್‌ ಅಧಿಕಾರಿ ನಾಪತ್ತೆಯಾಗಿದ್ದು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿತ್ತು.

ಈಗ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಅವರು ಸರ್ಕಾರದೊಂದಿಗೆ ಸಂಪರ್ಕ ಸಾಧಿಸಿದ್ದು, ಸುರಕ್ಷಿತವಾಗಿ ಇರುವುದಾಗಿ ಸ್ಪಷ್ಟಪಡಿಸಿದ್ದಾರೆ. ಕೌಟುಂಬಿಕ ಕಾರಣದಿಂದಾಗಿ ತುರ್ತು ರಜೆ ಮೇಲೆ ಊರಿಗೆ ತೆರಳಿದ್ದು, ನೆಟ್ ವರ್ಕ್ ಸಮಸ್ಯೆಯಿಂದ ಇಷ್ಟೆಲ್ಲಾ ವದಂತಿಗಳು ಸೃಷ್ಟಿಯಾಗಿದ್ದವು ಎಂದು ಹೇಳಿರುವುದಾಗಿ ಸರ್ಕಾರ ತಿಳಿಸಿದೆ.

ಆಗಸ್ಟ್ 20ರಿಂದ ಜ್ಞಾನೇಂದ್ರ ಕುಮಾರ್ ಯಾರ ಸಂಪರ್ಕಕ್ಕೂ ಸಿಗದೇ ವಿಮಾನ ನಿಲ್ದಾಣದಿಂದ ನಾಪತ್ತೆಯಾಗಿದ್ದರು. ಶನಿವಾರ ಬೆಳಿಗ್ಗೆ ಇದು ಮಾಧ್ಯಮಗಳಲ್ಲಿ ನಾನಾ ವದಂತಿಗಳಿಗೆ ಕಾರಣವಾಗಿತ್ತು. ಕೊನೆಯ ಬಾರಿಗೆ ಮೊಬೈಲ್ ಲೊಕೇಶನ್ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪತ್ತೆಯಾಗಿತ್ತು. ಅವರು ದೆಹಲಿಗೆ ಪ್ರಯಾಣಿಸಲು ವಿಮಾನ ಟಿಕೆಟ್ ಕಾಯ್ದಿರಿಸಿದ್ದರು ಎಂಬ ವಿಷಯ ಕೂಡ ಇದೇ ವೇಳೆ ಬೆಳಕಿಗೆ ಬಂದಿತ್ತು.

ಜ್ಞಾನೇಂದ್ರ ಕುಮಾರ್‌ ಅವರು ಕೆಪಿಎಸ್ಸಿ ಪರೀಕ್ಷಾ ನಿಯಂತ್ರಕರಾಗಿ ಕಾರ್ಯನಿರ್ವಹಿಸಿದ್ದರಿಂದ ಇತ್ತೀಚಿನ ಬೆಳವಣಿಗೆಗಳು ಅಧಿಕಾರಿಯ ನಾಪತ್ತೆ ಪ್ರಕರಣಕ್ಕೆ ತಿರುವು ನೀಡಿದ್ದವು.

ಗೃಹ ಸಚಿವರಿಂದ ಸ್ಪಷ್ಟನೆ

ಐಎಎಸ್‌ ಅಧಿಕಾರಿ ನಾಪತ್ತೆ ಕುರಿತು ಗೊಂದಲಗಳು ಸೃಷ್ಟಿಯಾದ ಹಿನ್ನೆಲೆ ಪೊಲೀಸ್‌ ಇಲಾಖೆ ಕೂಡ ಅಧಿಕಾರಿಗಾಗಿ ತೀವ್ರ ತಲಾಶ್‌ ನಡೆಸಿತ್ತು. ಶನಿವಾರ ಸಂಜೆಯೊತ್ತಿಗೆ ಗೃಹ ಸಚಿವ ಪ್ರಿಯಾಂಕ್‌ ಖರ್ಗೆ ಅವರು, ತಮ್ಮ ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ಸ್ಪಷ್ಟನೆ ನೀಡಿದ್ದಾರೆ.

ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಅವರು ಸರ್ಕಾರದ ಉನ್ನತಾಧಿಕಾರಿಗಳನ್ನು ಸಂಪರ್ಕಿಸಿದ್ದಾರೆ. ಕೌಟುಂಬಿಕ ತುರ್ತು ಪರಿಸ್ಥಿತಿ ಎದುರಾಗಿದ್ದರಿಂದ ರಜೆ ಕೋರಿ ತುರ್ತಾಗಿ ತಮ್ಮ ಸ್ವಊರಿಗೆ ತೆರಳಬೇಕಾಯಿತು ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, ಪ್ರಯಾಣದ ಸಮಯದಲ್ಲಿ ಅವರ ಅಧಿಕೃತ ಮೊಬೈಲ್ ಬಂದ್‌ ಆಗಿತ್ತು. ಅವರ ಇರುವಿಕೆಯ ಬಗ್ಗೆ ಅನಗತ್ಯ ಗೊಂದಲ ಹಾಗೂ ಊಹಾಪೋಹಗಳಿಗೆ ಕಾರಣವಾಗಿತ್ತು. ಆದರೆ ಈಗ ಅವರು ಸರ್ಕಾರದೊಂದಿಗೆ ಸಂಪರ್ಕದಲ್ಲಿದ್ದು, ಎಲ್ಲ ಗೊಂದಲಗಳು ಪರಿಹಾರವಾಗಿವೆ ಎಂದು ಸ್ಪಷ್ಟನೆ ನೀಡಿದ್ದಾರೆ.

Read More
Next Story