ಹೋಟೆಲ್, ಧಾಬಾಗಳಲ್ಲಿ ಆಹಾರ ಸುರಕ್ಷತೆ ಕಡ್ಡಾಯ: ಸರ್ಕಾರದ ಕಠಿಣ ನಿಯಮಾವಳಿ ಜಾರಿ
x

ಹೋಟೆಲ್, ಧಾಬಾಗಳಲ್ಲಿ ಆಹಾರ ಸುರಕ್ಷತೆ ಕಡ್ಡಾಯ: ಸರ್ಕಾರದ ಕಠಿಣ ನಿಯಮಾವಳಿ ಜಾರಿ

ಹೋಟೆಲ್‌ಗಳಲ್ಲಿ ಅವಧಿ ಮೀರಿದ ಆಹಾರ ಪದಾರ್ಥಗಳ ಸಂಗ್ರಹಣೆ ಮತ್ತು ಕಳಪೆ ನೈರ್ಮಲ್ಯದಂತಹ ಗಂಭೀರ ಲೋಪಗಳು ಕಂಡುಬಂದ ಹಿನ್ನೆಲೆಯಲ್ಲಿ, ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಸರ್ಕಾರ ಬಿಡುಗಡೆ ಮಾಡಿದೆ.


Click the Play button to hear this message in audio format

ರಾಜ್ಯದ ಹೋಟೆಲ್‌ಗಳು, ಧಾಬಾಗಳು ಮತ್ತು ರೆಸ್ಟೋರೆಂಟ್‌ಗಳಲ್ಲಿ ಇನ್ನು ಮುಂದೆ ಆಹಾರ ಸುರಕ್ಷತೆ ಮತ್ತು ನೈರ್ಮಲ್ಯದ ವಿಷಯದಲ್ಲಿ ಯಾವುದೇ ರಾಜಿ ಇಲ್ಲ ಮಾಡಿಕೊಳ್ಳುವಂತಿಲ್ಲ. ಬೆಂಗಳೂರಲ್ಲಿ ಇತ್ತೀಚೆಗೆ ನಡೆದ ತಪಾಸಣೆಯ ವೇಳೆ ಹೋಟೆಲ್‌ಗಳಲ್ಲಿ ಅವಧಿ ಮೀರಿದ ಆಹಾರ ಪದಾರ್ಥಗಳ ಸಂಗ್ರಹಣೆ ಮತ್ತು ಕಳಪೆ ನೈರ್ಮಲ್ಯದಂತಹ ಗಂಭೀರ ಲೋಪಗಳು ಕಂಡುಬಂದ ಹಿನ್ನೆಲೆಯಲ್ಲಿ, ರಾಜ್ಯ ಸರ್ಕಾರದ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.

ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ-2011ರ ಅಡಿಯಲ್ಲಿ ಹೊರಡಿಸಲಾಗಿರುವ ಹೊಸ ಆದೇಶದ ಪ್ರಕಾರ, ಪ್ರತಿಯೊಬ್ಬ ಆಹಾರ ವ್ಯವಹಾರ ನಿರ್ವಾಹಕರು ತಮ್ಮ ಸಂಸ್ಥೆಯ ಆಹಾರ ಪರವಾನಗಿಯನ್ನು ಗ್ರಾಹಕರಿಗೆ ಸ್ಪಷ್ಟವಾಗಿ ಕಾಣುವಂತಹ ಪ್ರಮುಖ ಸ್ಥಳದಲ್ಲಿ ಪ್ರದರ್ಶಿಸುವುದು ಕಡ್ಡಾಯವಾಗಿದೆ. ಇದರೊಂದಿಗೆ, ವ್ಯವಹಾರದ ಚಟುವಟಿಕೆಗಳಲ್ಲಿ ಅಥವಾ ಆವರಣದಲ್ಲಿ ಯಾವುದೇ ಬದಲಾವಣೆ ಮಾಡಿದರೂ, ಆ ಕುರಿತು ಸಂಬಂಧಿತ ಪ್ರಾಧಿಕಾರಕ್ಕೆ ಕಡ್ಡಾಯವಾಗಿ ಮಾಹಿತಿ ನೀಡಬೇಕೆಂದು ಸೂಚಿಸಲಾಗಿದೆ.

ಅಡುಗೆ ಮನೆಯು ಸದಾ ಸ್ವಚ್ಛವಾಗಿ, ಸುಸಜ್ಜಿತವಾಗಿರಬೇಕು ಮತ್ತು ಅಲ್ಲಿ ಸರಿಯಾದ ಗಾಳಿಯಾಡುವ ವ್ಯವಸ್ಥೆ ಇರಬೇಕು. ಪಾತ್ರೆ ತೊಳೆಯಲು ಮತ್ತು ಕಚ್ಚಾ ಪದಾರ್ಥಗಳನ್ನು ಸ್ವಚ್ಛಗೊಳಿಸಲು ಪ್ರತ್ಯೇಕ ಸಿಂಕ್‌ಗಳನ್ನು ಹೊಂದಿರಬೇಕು. ಪ್ರತಿ ಬಳಕೆಯ ನಂತರ ಪಾತ್ರೆಗಳನ್ನು ಡಿಟರ್ಜೆಂಟ್ ಮತ್ತು ಬಿಸಿನೀರು ಬಳಸಿ ಕ್ರಿಮಿನಾಶಕಗೊಳಿಸಬೇಕು. ತಾಜಾ ಮತ್ತು ವಿಶ್ವಾಸಾರ್ಹ ಮೂಲಗಳಿಂದ ಮಾತ್ರವೇ ಪದಾರ್ಥಗಳನ್ನು ಖರೀದಿಸಬೇಕು. ಹಣ್ಣು ತರಕಾರಿಗಳನ್ನು ಬಳಸುವ ಮುನ್ನ ಚೆನ್ನಾಗಿ ತೊಳೆಯಬೇಕು ಮತ್ತು ಹಾಳಾಗದಂತೆ ನಿಯಮಿತವಾಗಿ ಪರಿಶೀಲಿಸಬೇಕು.



ಅಡುಗೆ ಮತ್ತು ಸಂಗ್ರಹಣೆ

ಆಹಾರವನ್ನು ಸಂಪೂರ್ಣವಾಗಿ ಬೇಯಿಸಬೇಕು. ತಣ್ಣನೆಯ ಆಹಾರವನ್ನು 5°C ಗಿಂತ ಕಡಿಮೆ ತಾಪಮಾನದಲ್ಲಿ ಮತ್ತು ಬಿಸಿ ಆಹಾರವನ್ನು 60°C ಗಿಂತ ಹೆಚ್ಚಿನ ತಾಪಮಾನದಲ್ಲಿ ನಿರ್ವಹಿಸಬೇಕು. ಒಮ್ಮೆ ಬಳಸಿದ ಅಡುಗೆ ಎಣ್ಣೆಯನ್ನು ಮರುಬಳಕೆ ಮಾಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಸಸ್ಯಾಹಾರಿ ಮತ್ತು ಮಾಂಸಾಹಾರಿ ಆಹಾರಗಳನ್ನು ತಯಾರಿಸಲು ಪ್ರತ್ಯೇಕ ಕತ್ತರಿಸುವ ಫಲಕಗಳು ಮತ್ತು ಚಾಕುಗಳನ್ನು ಬಳಸಬೇಕು. ಫ್ರಿಜ್‌ನಲ್ಲಿ ಸಂಗ್ರಹಿಸುವಾಗಲೂ ಇವೆರಡನ್ನು ಪ್ರತ್ಯೇಕವಾಗಿ ಇಡಬೇಕು.

ಸಿಬ್ಬಂದಿಯ ವೈಯಕ್ತಿಕ ನೈರ್ಮಲ್ಯ

ಸಿಬ್ಬಂದಿ ಶುಭ್ರವಾದ ಸಮವಸ್ತ್ರ, ಹೇರ್‌ನೆಟ್ ಅಥವಾ ತಲೆಗವಸು, ಮಾಸ್ಕ್ ಮತ್ತು ಕೈಗವಸುಗಳನ್ನು ಧರಿಸಬೇಕು. ಆಹಾರ ನಿರ್ವಹಿಸುವ ಎಲ್ಲಾ ಸಿಬ್ಬಂದಿಗಳಿಗೆ ವಾರ್ಷಿಕ ವೈದ್ಯಕೀಯ ಫಿಟ್‌ನೆಸ್ ಪ್ರಮಾಣಪತ್ರ ಕಡ್ಡಾಯ. ಪ್ರತಿ ಸಂಸ್ಥೆಯಲ್ಲಿ 'ಫೋಸ್ಟಾಕ್' ತರಬೇತಿ ಪಡೆದವರನ್ನು ನೇಮಿಸಬೇಕು. ಆಹಾರ ಸಾಗಿಸುವ ವಾಹನಗಳು ಸ್ವಚ್ಛವಾಗಿರಬೇಕು. ಸಾಗಾಣಿಕೆಯ ಸಂದರ್ಭದಲ್ಲಿ ಆಹಾರದ ತಾಪಮಾನವು ಬದಲಾಗದಂತೆ ಎಚ್ಚರವಹಿಸಬೇಕು. ಪ್ಯಾಕೇಜ್ ಮಾಡಿದ ಆಹಾರಗಳ ಸೀಲ್ ಹಾಳಾಗದಂತೆ ನೋಡಿಕೊಳ್ಳಬೇಕು. ಕುಡಿಯಲು ಮತ್ತು ಅಡುಗೆಗೆ ಬಳಸುವ ನೀರು ಸುರಕ್ಷಿತವಾಗಿರಬೇಕು. ಹೋಟೆಲ್‌ಗಳು ಗ್ರಾಹಕರಿಗೆ ಉಚಿತವಾಗಿ ಕುಡಿಯುವ ನೀರು ಮತ್ತು ಬಿಸಿನೀರನ್ನು ಒದಗಿಸಬೇಕು. ಗ್ರಾಹಕರಿಗೆ ಉಚಿತ ಶೌಚಾಲಯ ವ್ಯವಸ್ಥೆ ಇರಬೇಕು ಮತ್ತು ಅದನ್ನು ಸದಾ ಸ್ವಚ್ಛವಾಗಿಡಬೇಕು. ಅಲ್ಲಿ ಸೋಪು ಮತ್ತು ಕೈ ತೊಳೆಯುವ ಸೌಲಭ್ಯ ಕಡ್ಡಾಯ ಎಂದು ಮಾರ್ಗಸೂಚಿಯಲ್ಲಿ ಉಲ್ಲೇಖಿಸಲಾಗಿದೆ.

ಕೀಟ ನಿಯಂತ್ರಣ ಮತ್ತು ನಿರ್ವಹಣೆ

ಅಡುಗೆ ಮನೆಯಲ್ಲಿ ಕೀಟಗಳು, ನೊಣಗಳು, ಜಿರಳೆಗಳು ಅಥವಾ ಇಲಿಗಳು ಪ್ರವೇಶಿಸದಂತೆ ತಡೆಯಬೇಕು. ನಿಯಮಿತವಾಗಿ ಕೀಟ ನಿಯಂತ್ರಣ ಕೈಗೊಳ್ಳಬೇಕು. ಕಿಟಕಿ ಮತ್ತು ಬಾಗಿಲುಗಳಿಗೆ 'ಮೆಶ್' (ಜಾಲರಿ) ಅಳವಡಿಸಬೇಕು. ಕಸದ ಬುಟ್ಟಿಗಳನ್ನು ಮುಚ್ಚಳದೊಂದಿಗೆ ಇಡಬೇಕು ಮತ್ತು ಕಾಲಕಾಲಕ್ಕೆ ಖಾಲಿ ಮಾಡಬೇಕು. ಅಡುಗೆ ಮನೆಯ ತ್ಯಾಜ್ಯವನ್ನು ನಿಯಮಾನುಸಾರ ವಿಲೇವಾರಿ ಮಾಡಬೇಕು. ಬಳಸಿದ ಎಣ್ಣೆಯನ್ನು ಅನಧಿಕೃತವಾಗಿ ಮರುಬಳಕೆ ಮಾಡಬಾರದು ಮತ್ತು ಸರ್ಕಾರಿ ಅನುಮೋದಿತ ಮಾರ್ಗಗಳ ಮೂಲಕವೇ ವಿಲೇವಾರಿ ಮಾಡಬೇಕು ಎಂದು ಸೂಚಿಸಲಾಗಿದೆ.

Read More
Next Story