x

RSS, KPSC ಗದ್ದಲದ ನಡುವೆ ಕರ್ನಾಟಕದ ಕ್ರೈಂ ಡೇಟಾ- ಮಹಿಳೆಯರು, ಮಕ್ಕಳು ಎಷ್ಟು ಸುರಕ್ಷಿತ?

ಇತ್ತೀಚೆಗೆ ವಿಧಾನಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿ ಅವರು ಮಹಿಳೆಯರ ಮೇಲಿನ ದೌರ್ಜನ್ಯ, ಪೋಕ್ಸೋ, ಮತ್ತಿತರ ಪ್ರಕರಣಗಳ ಬಗ್ಗೆ ಕೇಳಿದ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಗೃಹ ಸಚಿವ ಪ್ರಿಯಾಂಕ್‌ ಖರ್ಗೆಯವರು ಉತ್ತರ ನೀಡಿದ್ದಾರೆ. ವಿಧಾನ ಪರಿಷತ್ತಿನಲ್ಲಿ ಹೊರಬಂದ ಈ ಕ್ರೈಂ ಡೇಟಾ ಏನು ಹೇಳುತ್ತದೆ? ಇಲ್ಲಿದೆ ಮಾಹಿತಿ


RSS ನೋಂದಣಿ, ಹಿಂದೂತ್ವ, KPSC ಹಗರಣ ಸೇರಿದಂತೆ ಹಲವು ರಾಜಕೀಯ ವಿಚಾರಗಳ ಸುತ್ತ ಕರ್ನಾಟಕದಲ್ಲಿ ಸರ್ಕಾರ ಮತ್ತು ಪ್ರತಿಪಕ್ಷಗಳ ನಡುವೆ ಆರೋಪ-ಪ್ರತ್ಯಾರೋಪಗಳು ನಡೆಯುತ್ತಿವೆ. ಆದರೆ ಇದೇ ರಾಜಕೀಯ ಗದ್ದಲದ ನಡುವೆ ರಾಜ್ಯದ ಕಾನೂನು ಸುವ್ಯವಸ್ಥೆ ಮತ್ತು ಮಹಿಳೆಯರು, ಮಕ್ಕಳ ಸುರಕ್ಷತೆ ಕುರಿತ ಪ್ರಶ್ನೆಗಳು ಹಿಂದೆ ಸರಿದಿವೆ.

ವಿಧಾನ ಪರಿಷತ್ತಿನಲ್ಲಿ ಸರ್ಕಾರ ನೀಡಿರುವ ಅಧಿಕೃತ ಮಾಹಿತಿಯ ಪ್ರಕಾರ, 2023ರಲ್ಲಿ ರಾಜ್ಯದಲ್ಲಿ 600 ಲೈಂಗಿಕ ದೌರ್ಜನ್ಯ ಪ್ರಕರಣಗಳು ದಾಖಲಾಗಿದ್ದರೆ, 2024ರಲ್ಲಿ 552, 2025ರಲ್ಲಿ 621 ಹಾಗೂ 2026ರ ಜುಲೈವರೆಗೆ 348 ಪ್ರಕರಣಗಳು ದಾಖಲಾಗಿವೆ. ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ ಪ್ರಕರಣಗಳೂ ಸಾವಿರಾರು ಸಂಖ್ಯೆಯಲ್ಲಿದ್ದು, 2023ರಲ್ಲಿ 6,487, 2024ರಲ್ಲಿ 6,334, 2025ರಲ್ಲಿ 5,854 ಹಾಗೂ 2026ರ ಜುಲೈವರೆಗೆ 3,778 ಪ್ರಕರಣಗಳು ದಾಖಲಾಗಿವೆ.

ಮಹಿಳೆಯರ ಮೇಲಿನ ಕೌಟುಂಬಿಕ ದೌರ್ಜನ್ಯವೂ ಗಂಭೀರ ಸವಾಲಾಗಿಯೇ ಉಳಿದಿದೆ. ಪತಿಯಿಂದ ಕಿರುಕುಳಕ್ಕೆ ಸಂಬಂಧಿಸಿದಂತೆ 2023ರಲ್ಲಿ 2,955, 2024ರಲ್ಲಿ 2,903, 2025ರಲ್ಲಿ 2,938 ಹಾಗೂ 2026ರ ಜುಲೈವರೆಗೆ 1,878 ಪ್ರಕರಣಗಳು ದಾಖಲಾಗಿವೆ. ವರದಕ್ಷಿಣೆ ನಿಷೇಧ ಕಾಯ್ದೆಯಡಿ ಕ್ರಮವಾಗಿ 2,339, 1,991, 1,918 ಮತ್ತು 1,176 ಪ್ರಕರಣಗಳು ದಾಖಲಾಗಿದ್ದು, ವರದಕ್ಷಿಣೆ ಸಾವಿನ ಪ್ರಕರಣಗಳು 2023ರಲ್ಲಿ 158, 2024ರಲ್ಲಿ 115, 2025ರಲ್ಲಿ 112 ಹಾಗೂ 2026ರ ಜುಲೈವರೆಗೆ 83ಕ್ಕೆ ತಲುಪಿವೆ. ಇನ್ನು ರಾಜ್ಯದಲ್ಲಿ 2023ರಲ್ಲಿ 1,285, 2024ರಲ್ಲಿ 1,199, 2025ರಲ್ಲಿ 1,205 ಕೊಲೆ ಪ್ರಕರಣಗಳು ದಾಖಲಾಗಿದ್ದು, 2026ರ ಜುಲೈವರೆಗೆ 689 ಕೊಲೆ ಪ್ರಕರಣಗಳು ವರದಿಯಾಗಿವೆ. ಇದೇ ಅವಧಿಯಲ್ಲಿ 11,397 ಹಲ್ಲೆ ಪ್ರಕರಣಗಳು ದಾಖಲಾಗಿವೆ.

ಅಪರಾಧದ ಸ್ವರೂಪವೂ ವೇಗವಾಗಿ ಬದಲಾಗುತ್ತಿರುವುದು ಅಂಕಿ-ಅಂಶಗಳಿಂದ ಸ್ಪಷ್ಟವಾಗುತ್ತದೆ. 2023ರಲ್ಲಿ 22,221 ಸೈಬರ್ ಕ್ರೈಂ ಪ್ರಕರಣಗಳು ದಾಖಲಾಗಿದ್ದರೆ, 2024ರಲ್ಲಿ 22,429, 2025ರಲ್ಲಿ 14,844 ಹಾಗೂ 2026ರ ಜುಲೈವರೆಗೆ 7,063 ಪ್ರಕರಣಗಳು ದಾಖಲಾಗಿವೆ. 2026ರ ಜುಲೈವರೆಗೆ 3,270 ವಂಚನೆ ಪ್ರಕರಣಗಳೂ ದಾಖಲಾಗಿವೆ. ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳು 2023ರಲ್ಲಿ 2,160, 2024ರಲ್ಲಿ 2,114, 2025ರಲ್ಲಿ 2,409 ಹಾಗೂ 2026ರ ಜುಲೈವರೆಗೆ 1,399 ಆಗಿವೆ. ರಾಜ್ಯದ ಒಟ್ಟಾರೆ ಅಪರಾಧ ಪ್ರಕರಣಗಳು 2023ರಲ್ಲಿ 2,14,357, 2024ರಲ್ಲಿ 1,98,566, 2025ರಲ್ಲಿ 2,02,563 ಹಾಗೂ 2026ರ ಜುಲೈವರೆಗೆ 1,24,089ಕ್ಕೆ ತಲುಪಿವೆ.

ಮಾದಕ ವಸ್ತುಗಳ ಪ್ರಕರಣಗಳಲ್ಲೂ ಆತಂಕಕಾರಿ ಏರಿಕೆ ಕಂಡುಬಂದಿದೆ. NDPS ಕಾಯ್ದೆಯಡಿ 2023ರಲ್ಲಿ 6,768, 2024ರಲ್ಲಿ 4,168 ಹಾಗೂ 2025ರಲ್ಲಿ 6,817 ಪ್ರಕರಣಗಳು ದಾಖಲಾಗಿದ್ದರೆ, 2026ರ ಜುಲೈವರೆಗೆ 7,798 ಪ್ರಕರಣಗಳು ದಾಖಲಾಗಿವೆ. ಇದೇ ಅವಧಿಯಲ್ಲಿ ₹308.40 ಕೋಟಿ ಮೌಲ್ಯದ 5,844.31 ಕೆಜಿ ಮಾದಕ ವಸ್ತು ವಶಪಡಿಸಿಕೊಳ್ಳಲಾಗಿದೆ. ಇನ್ನು ಕಳೆದ ಮೂರು ವರ್ಷಗಳಲ್ಲಿ 911 ಅಕ್ರಮ ವಲಸಿಗರನ್ನು ಗುರುತಿಸಲಾಗಿದ್ದು, 552 ಮಂದಿಯನ್ನು ಗಡಿಪಾರು ಮಾಡಲಾಗಿದೆ. ಮತ್ತೊಂದೆಡೆ, ವಿಧಾನ ಪರಿಷತ್ತಿನಲ್ಲಿ ಸರ್ಕಾರ ನೀಡಿರುವ ಉತ್ತರದ ಪ್ರಕಾರ RSS ವಿರುದ್ಧ ಯಾವುದೇ ಪ್ರಕರಣ ದಾಖಲಾಗಿಲ್ಲ ಮತ್ತು RSS ಪಥಸಂಚಲನ ಅಥವಾ ಶಾಖೆಗಳಿಗೆ ಸಂಬಂಧಿಸಿದ ಅಹಿತಕರ ಘಟನೆಗಳ ಕುರಿತ ಪ್ರಕರಣಗಳೂ ವರದಿಯಾಗಿಲ್ಲ. ಹೀಗಾಗಿ RSS, ಹಿಂದೂತ್ವ ಮತ್ತು KPSC ಹಗರಣದ ರಾಜಕೀಯ ಚರ್ಚೆಗಳ ನಡುವೆ, ರಾಜ್ಯದ ಹೆಚ್ಚುತ್ತಿರುವ ಅಪರಾಧಗಳು, ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆ ಹಾಗೂ ಬದಲಾಗುತ್ತಿರುವ ಕಾನೂನು ಸುವ್ಯವಸ್ಥೆಯ ಸವಾಲುಗಳ ಬಗ್ಗೆಯೂ ಗಂಭೀರ ಚರ್ಚೆ ನಡೆಯಬೇಕಿದೆ ಎಂಬ ಪ್ರಶ್ನೆ ಎದುರಾಗಿದೆ.

Read More
Next Story