ವಿಟಿಯು ಕುಲಪತಿ ಹುದ್ದೆ ಅಬಾಧಿತ: ವಿದ್ಯಾಶಂಕರ್ ವಿರುದ್ಧದ ಅರ್ಜಿ ವಜಾಗೊಳಿಸಿದ ಹೈಕೋರ್ಟ್
x

ವಿಟಿಯು ಕುಲಪತಿ ಹುದ್ದೆ ಅಬಾಧಿತ: ವಿದ್ಯಾಶಂಕರ್ ವಿರುದ್ಧದ ಅರ್ಜಿ ವಜಾಗೊಳಿಸಿದ ಹೈಕೋರ್ಟ್

ರಾಜ್ಯಪಾಲರು ಕುಲಪತಿಗಳ ಸೇವಾ ಅವಧಿಯನ್ನು ವಿಸ್ತರಿಸುವ ವಿವೇಚನಾಧಿಕಾರವಿದೆ. ಅಧಿಕಾರವನ್ನು ಚಲಾಯಿಸುವ ಸಂದರ್ಭದಲ್ಲಿ ಹೊಸದಾಗಿ ಶೋಧನಾ ಸಮಿತಿಯನ್ನು ರಚಿಸಬೇಕು ಎಂಬ ಯಾವುದೇ ಕಡ್ಡಾಯ ನಿಯಮವಿಲ್ಲ.


Click the Play button to hear this message in audio format

ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ (ವಿಟಿಯು) ಕುಲಪತಿಯಾಗಿ ಕಾರ್ಯನಿರ್ವಹಿಸುತ್ತಿರುವ ಡಾ. ಎಸ್. ವಿದ್ಯಾಶಂಕರ್ ಅವರ ಸೇವಾ ಅವಧಿಯನ್ನು ವಿಸ್ತರಿಸಿದ ರಾಜ್ಯಪಾಲರ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ಈ ಮಹತ್ವದ ತೀರ್ಪಿನ ಮೂಲಕ, ವಿದ್ಯಾಶಂಕರ್ ಅವರ ನೇಮಕಾತಿಯು ಕಾನೂನುಬದ್ಧವಾಗಿದೆ ಎಂಬುದನ್ನು ನ್ಯಾಯಾಲಯವು ಮತ್ತೊಮ್ಮೆ ದೃಢಪಡಿಸಿದೆ.

ದಿ ಆಕ್ಸ್‌ಫರ್ಡ್ ಕಾಲೇಜ್ ಆಫ್ ಇಂಜಿನಿಯರಿಂಗ್‌ನ ಮೆಕ್ಯಾನಿಕಲ್ ವಿಭಾಗದ ಮುಖ್ಯಸ್ಥ ಡಾ. ನಾಗೇಶ್ವರ ರಾವ್ ತುಬಾಟಿ ಅವರು ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದರು. ಡಾ. ವಿದ್ಯಾಶಂಕರ್ ಅವರ ನೇಮಕಾತಿಯನ್ನು ಕ್ವೊ ವಾರಂಟೊ (ಯಾವ ಅಧಿಕಾರದಿಂದ ಈ ಹುದ್ದೆಯಲ್ಲಿದ್ದೀರಿ ಎಂದು ಪ್ರಶ್ನಿಸುವ ರಿಟ್) ಮೂಲಕ ಪ್ರಶ್ನಿಸಲಾಗಿತ್ತು. ಅರ್ಜಿದಾರರ ಪರ ವಕೀಲರು ಪ್ರಮುಖವಾಗಿ ಮೂರು ವಾದಗಳನ್ನು ಮಂಡಿಸಿದ್ದರು. ಯುಜಿಸಿ ನಿಯಮಾವಳಿ ಉಲ್ಲಂಘನೆಯಾಗಿದೆ. 2018ರ ವಿಶ್ವವಿದ್ಯಾಲಯ ಧನಸಹಾಯ ಆಯೋಗದ ನಿಯಮಗಳ ಪ್ರಕಾರ, ಶೋಧನಾ ಸಮಿತಿಯಲ್ಲಿ ಯುಜಿಸಿ ಪ್ರತಿನಿಧಿ ಇರಬೇಕಿತ್ತು, ಆದರೆ ಅದು ಇರಲಿಲ್ಲ. ವಿದ್ಯಾಶಂಕರ್ ಅವರ ವಿರುದ್ಧ ಕ್ರಿಮಿನಲ್ ಪ್ರಕರಣಗಳಿದ್ದು, ಅವರು ಸದ್ಭಾವನೆ ಇಲ್ಲದ ವ್ಯಕ್ತಿ. ಇಂತಹ ವ್ಯಕ್ತಿಯನ್ನು ಉನ್ನತ ಶೈಕ್ಷಣಿಕ ಹುದ್ದೆಯಲ್ಲಿ ಮುಂದುವರಿಸುವುದು ಕಾನೂನುಬಾಹಿರ. ಅವಧಿ ವಿಸ್ತರಣೆಗೂ ಮುನ್ನ ಹೊಸದಾಗಿ ಶೋಧನಾ ಸಮಿತಿ ರಚಿಸಿ, ನೇಮಕಾತಿ ಪ್ರಕ್ರಿಯೆ ನಡೆಸಬೇಕಿತ್ತು ಎಂಬುದು ಅರ್ಜಿದಾರರ ವಾದವಾಗಿತ್ತು.

ಹೈಕೋರ್ಟ್‌ನ ಮಹತ್ವದ ಆದೇಶ

ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠವು ಈ ವಾದಗಳನ್ನು ಕೂಲಂಕಷವಾಗಿ ಪರಿಶೀಲಿಸಿತು. ಪೀಠವು ತನ್ನ ಆದೇಶದಲ್ಲಿ ಸ್ಪಷ್ಟಪಡಿಸಿದ ಅಂಶಗಳೆಂದರೆ, ವಿಟಿಯು ಕಾಯ್ದೆ 1994ರ ಸೆಕ್ಷನ್ 13(4)ರ ಪ್ರಕಾರ, ಕುಲಾಧಿಪತಿಗಳಿಗೆ (ರಾಜ್ಯಪಾಲರು) ಕುಲಪತಿಗಳ ಸೇವಾ ಅವಧಿಯನ್ನು ವಿಸ್ತರಿಸುವ ವಿವೇಚನಾಧಿಕಾರವಿದೆ. ಈ ಅಧಿಕಾರವನ್ನು ಚಲಾಯಿಸುವ ಸಂದರ್ಭದಲ್ಲಿ ಹೊಸದಾಗಿ ಶೋಧನಾ ಸಮಿತಿಯನ್ನು ರಚಿಸಬೇಕು ಅಥವಾ ಹೊಸ ನೇಮಕಾತಿ ಪ್ರಕ್ರಿಯೆಯನ್ನು ನಡೆಸಬೇಕು ಎಂಬ ಯಾವುದೇ ಕಡ್ಡಾಯ ನಿಯಮವಿಲ್ಲ. ವಿದ್ಯಾಶಂಕರ್ ಅವರ ನೇಮಕಾತಿಯನ್ನು ಈಗಾಗಲೇ ಹೈಕೋರ್ಟ್‌ನ ವಿಭಾಗೀಯ ಪೀಠ ಮತ್ತು ಸುಪ್ರೀಂ ಕೋರ್ಟ್ ಎತ್ತಿಹಿಡಿದಿವೆ. ಹೀಗಾಗಿ, ಪದೇ ಪದೆ ಒಂದೇ ವಿಷಯವನ್ನು ನ್ಯಾಯಾಲಯದ ಮುಂದೆ ತರುವುದು ಸಮಂಜಸವಲ್ಲ. ವಿದ್ಯಾಶಂಕರ್ ಅವರ ಮುಂದುವರಿಕೆಯು ಸಂವಿಧಾನಬಾಹಿರ ಅಥವಾ ಕಾನೂನುಬಾಹಿರ ಎಂಬುದನ್ನು ಸಾಬೀತುಪಡಿಸಲು ಅರ್ಜಿದಾರರು ಯಾವುದೇ ಪ್ರಬಲ ಸಾಕ್ಷ್ಯಾಧಾರಗಳನ್ನು ನೀಡಿಲ್ಲ. ಕೇವಲ ಊಹೆ ಮತ್ತು ವೈಯಕ್ತಿಕ ಸಮಾಧಾನದ ಕಾರಣಗಳನ್ನು ಇಟ್ಟುಕೊಂಡು ರಿಟ್ ಅರ್ಜಿ ಸಲ್ಲಿಸಲು ಬರುವುದಿಲ್ಲ ಎಂದು ನ್ಯಾಯಾಲಯವು ಸ್ಪಷ್ಟಪಡಿಸಿತು.

ಈ ಪ್ರಕರಣದ ವಿಚಾರಣೆಯ ವೇಳೆ ಡಾ. ವಿದ್ಯಾಶಂಕರ್ ಅವರ ಮನೆಗೆ ಹೋಗಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂಬ ಆರೋಪದಲ್ಲಿ ಅರ್ಜಿದಾರರು ಮತ್ತು ಮತ್ತೊಬ್ಬ ವ್ಯಕ್ತಿಯ ವಿರುದ್ಧ ಎಫ್‌ಐಆರ್ ದಾಖಲಾಗಿರುವ ವಿಷಯವು ನ್ಯಾಯಾಲಯದ ಗಮನಕ್ಕೆ ಬಂದಿತು. ಈ ಪ್ರಕರಣದಲ್ಲಿ ಆರೋಪಪಟ್ಟಿಯೂ ಸಲ್ಲಿಕೆಯಾಗಿದ್ದು, ಇದು ಅರ್ಜಿದಾರರ ಉದ್ದೇಶದ ಬಗ್ಗೆ ಸಂಶಯಗಳನ್ನು ಹುಟ್ಟುಹಾಕಿತು.

ವಿದ್ಯಾಶಂಕರ್‌ ಪರ ವಾದ

ಪ್ರತಿವಾದಿ ವಿದ್ಯಾಶಂಕರ್ ಅವರ ಪರ ವಕೀಲರು, "ಸೇವಾ ವಿಸ್ತರಣೆ ಎಂಬುದು ಕುಲಾಧಿಪತಿಗಳ ಹಕ್ಕು. ನೇಮಕಾತಿ ಪ್ರಕ್ರಿಯೆಯನ್ನು ಈಗಾಗಲೇ ಉನ್ನತ ನ್ಯಾಯಾಲಯಗಳು ಮಾನ್ಯ ಮಾಡಿರುವುದರಿಂದ, ಅದೇ ಹಳೆಯ ವಾದಗಳನ್ನು ಮರುಬಳಕೆ ಮಾಡಲಾಗುತ್ತಿದೆ. ಇದು ನ್ಯಾಯಾಲಯದ ಸಮಯ ವ್ಯರ್ಥ ಮಾಡುವ ಪ್ರಯತ್ನ" ಎಂದು ವಾದಿಸಿದ್ದರು. ನ್ಯಾಯಾಲಯವು ಈ ವಾದವನ್ನು ಸಂಪೂರ್ಣವಾಗಿ ಒಪ್ಪಿಕೊಂಡಿದೆ. ಈ ತೀರ್ಪಿನಿಂದಾಗಿ ಡಾ. ಎಸ್. ವಿದ್ಯಾಶಂಕರ್ ಅವರ ಕುಲಪತಿ ಹುದ್ದೆಯು ಸದ್ಯಕ್ಕೆ ಅಬಾಧಿತವಾಗಿದೆ. ಇದು ವಿಟಿಯು ಆಡಳಿತದಲ್ಲಿ ಉಂಟಾಗಬಹುದಾಗಿದ್ದ ಗೊಂದಲಗಳಿಗೆ ತೆರೆ ಎಳೆದಿದೆ. ರಾಜ್ಯಪಾಲರ ವಿವೇಚನಾಧಿಕಾರವನ್ನು ನ್ಯಾಯಾಲಯವು ಎತ್ತಿಹಿಡಿದಿರುವುದು, ಉನ್ನತ ಶಿಕ್ಷಣ ಸಂಸ್ಥೆಗಳ ಆಡಳಿತಾತ್ಮಕ ಪ್ರಕ್ರಿಯೆಯಲ್ಲಿ ರಾಜಕೀಯ ಅಥವಾ ವೈಯಕ್ತಿಕ ದ್ವೇಷದ ಅರ್ಜಿಗಳಿಗೆ ಅಡೆತಡೆ ಉಂಟಾಗಲಿದೆ.

ಸೇವಾ ವಿಸ್ತರಣೆಗೆ ಹೊಸ ಶೋಧನಾ ಸಮಿತಿಯ ಅಗತ್ಯವಿಲ್ಲ. ಕುಲಾಧಿಪತಿಗಳ ವಿವೇಚನಾಧಿಕಾರವನ್ನು ನ್ಯಾಯಾಲಯ ಗೌರವಿಸಿದೆ. ಅರ್ಜಿದಾರರು ತಮ್ಮ ಆರೋಪಗಳನ್ನು ಕಾನೂನುಬದ್ಧವಾಗಿ ಸಾಬೀತುಪಡಿಸುವಲ್ಲಿ ವಿಫಲರಾಗಿದ್ದಾರೆ. ಒಟ್ಟಾರೆ, ಈ ತೀರ್ಪು ಶೈಕ್ಷಣಿಕ ಸಂಸ್ಥೆಗಳ ಸ್ವಾಯತ್ತತೆ ಮತ್ತು ನೇಮಕಾತಿ ಪ್ರಕ್ರಿಯೆಯ ಸ್ಥಿರತೆಯನ್ನು ಎತ್ತಿಹಿಡಿದಿದೆ. ಡಾ. ವಿದ್ಯಾಶಂಕರ್ ಅವರು 2025ರ ಸೆ.3ರಿಂದ ಅನ್ವಯವಾಗುವಂತೆ ಮುಂದಿನ ಮೂರು ವರ್ಷಗಳ ಕಾಲ ವಿಟಿಯುನ ಕುಲಪತಿಯಾಗಿ ತಮ್ಮ ಕರ್ತವ್ಯವನ್ನು ಮುಂದುವರಿಸಲಿದ್ದಾರೆ.

Read More
Next Story