Job News | SSLC passed? Golden opportunity in the High Court!
x

ಕರ್ನಾಟಕ ಹೈಕೋರ್ಟ್‌

ಕರ್ನಾಟಕ ಹೈಕೋರ್ಟ್‌ಗೆ 6 ಮಂದಿ ನ್ಯಾಯಮೂರ್ತಿಗಳ ನೇಮಕಕ್ಕೆ ಕೊಲಿಜಿಯಂ ಶಿಫಾರಸು

ಸುಪ್ರೀಂಕೋರ್ಟ್ ಕೊಲಿಜಿಯಂ ಶಿಫಾರಸ್ಸು ಮಾಡಿರುವ ಪಟ್ಟಿಯಲ್ಲಿ ಕಾನೂನು ಕ್ಷೇತ್ರದಲ್ಲಿ ದಶಕಗಳ ಕಾಲ ಅಪಾರ ಅನುಭವ ಹೊಂದಿರುವ ಹಾಗೂ ಸಾರ್ವಜನಿಕ ವಲಯದಲ್ಲಿ ಖ್ಯಾತಿ ಗಳಿಸಿರುವ ವಕೀಲರಿಗೆ ಆದ್ಯತೆ ನೀಡಲಾಗಿದೆ.


ಕರ್ನಾಟಕ ಹೈಕೋರ್ಟ್‌ ನ್ಯಾಯಮೂರ್ತಿಗಳ ಸಂಖ್ಯೆ ಹೆಚ್ಚಿಸುವ ಹಾಗೂ ಬಾಕಿ ಪ್ರಕರಣಗಳ ವಿಲೇವಾರಿಯನ್ನು ತ್ವರಿತಗೊಳಿಸುವ ಸಲುವಾಗಿ ಸುಪ್ರೀಂಕೋರ್ಟ್ ಕೊಲಿಜಿಯಂ ಮಹತ್ವದ ನಿರ್ಧಾರ ಕೈಗೊಂಡಿದೆ. ಜೂ.2ರಂದು ನಡೆದ ಉನ್ನತ ಮಟ್ಟದ ಕೊಲಿಜಿಯಂ ಸಭೆಯಲ್ಲಿ ರಾಜ್ಯದ ಆರು ಮಂದಿ ಹಿರಿಯ ವಕೀಲರನ್ನು ಹೈಕೋರ್ಟ್ ನ್ಯಾಯಮೂರ್ತಿಗಳಾಗಿ ನೇಮಕ ಮಾಡಲು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗಿದೆ.

ಕೇಂದ್ರ ಕಾನೂನು ಸಚಿವಾಲಯವು ಈ ಶಿಫಾರಸ್ಸಿಗೆ ಹಸಿರು ನಿಶಾನೆ ತೋರಿ, ರಾಷ್ಟ್ರಪತಿಗಳ ಅಂತಿಮ ಅನುಮೋದನೆ ದೊರೆತರೆ ಕರ್ನಾಟಕ ಹೈಕೋರ್ಟ್‌ನಲ್ಲಿ ಕಾರ್ಯನಿರ್ವಹಿಸುವ ನ್ಯಾಯಮೂರ್ತಿಗಳ ಒಟ್ಟು ಸಂಖ್ಯೆ 48 ರಿಂದ 54ಕ್ಕೆ ಏರಿಕೆಯಾಗಲಿದೆ.

ಸುಪ್ರೀಂಕೋರ್ಟ್ ಕೊಲಿಜಿಯಂ ಶಿಫಾರಸ್ಸು ಮಾಡಿರುವ ಪಟ್ಟಿಯಲ್ಲಿ ಕಾನೂನು ಕ್ಷೇತ್ರದಲ್ಲಿ ದಶಕಗಳ ಕಾಲ ಅಪಾರ ಅನುಭವ ಹೊಂದಿರುವ ಹಾಗೂ ಸಾರ್ವಜನಿಕ ವಲಯದಲ್ಲಿ ಖ್ಯಾತಿ ಗಳಿಸಿರುವ ವಕೀಲರಿಗೆ ಆದ್ಯತೆ ನೀಡಲಾಗಿದೆ.

ಯಾರ ಹೆಸರು ಶಿಫಾರಸು?

ರಾಘವೇಂದ್ರ ಸೀತಾರಾಂ ಶ್ರೀವತ್ಸ ಅವರು ಸುಪ್ರೀಂಕೋರ್ಟ್ ಹಿರಿಯ ವಕೀಲರಾಗಿದ್ದು, ಸಾಂವಿಧಾನಿಕ ಹಾಗೂ ಸಂಕೀರ್ಣ ಕಾನೂನು ಹೋರಾಟಗಳಲ್ಲಿ ಬಹುಮುಖ್ಯ ಪಾತ್ರ ವಹಿಸಿದ್ದಾರೆ. ಹೇಮಾ ಕುಲಕರ್ಣಿ ಅವರು ಹೈಕೋರ್ಟ್ ಕಲಬುರಗಿ ಪೀಠದಲ್ಲಿ ದೀರ್ಘಕಾಲದವರೆಗೆ ವಕೀಲಿಕೆ ವಕಾಲತ್ತು ನಡೆಸಿದ್ದು, ಪ್ರಾದೇಶಿಕ ಮಟ್ಟದಲ್ಲಿ ತಳಮಟ್ಟದ ಕಾನೂನು ಸಮಸ್ಯೆಗಳ ಕುರಿತು ವ್ಯಾಪಕ ಅನುಭವ ಹೊಂದಿದ್ದಾರೆ.

ಸುಬ್ರಮಣ್ಯ ರಂಗರಾವ್ ಅವರು ಸಿವಿಲ್ ಮತ್ತು ಕಾರ್ಪೊರೇಟ್ ಕಾನೂನು ವಲಯದಲ್ಲಿ ದಶಕಗಳ ಕಾಲ ಯಶಸ್ವಿಯಾಗಿ ವಕೀಲಿಕೆ ನಡೆಸಿಕೊಂಡು ಬಂದಿರುವ ಹಿರಿಯ ವಕೀಲರು. ತಡಗವಾಡಿ ಪ್ರಕಾಶ್ ವಿವೇಕಾನಂದ ಅವರು ಕರ್ನಾಟಕ ಹೈಕೋರ್ಟ್ ವಕೀಲರಾಗಿ ಕ್ರಿಮಿನಲ್ ಹಾಗೂ ಸಿವಿಲ್ ಪ್ರಕರಣಗಳನ್ನು ಯಶಸ್ವಿಯಾಗಿ ನಿರ್ವಹಿಸಿದ ಅನುಭವವಿದೆ.

ಬಕ್ಕೇಶ್ವರ ಪ್ರಮೋದ್ ಅವರು ಬೆಂಗಳೂರಿನ ಖ್ಯಾತ ಕಾನೂನು ತಜ್ಞ ಹಾಗೂ ಹಿರಿಯ ವಕೀಲರಾಗಿರುವ ಇವರು ಹೈಕೋರ್ಟ್‌ನ ಪ್ರಮುಖ ವಿವಾದಗಳಲ್ಲಿ ಗಮನಾರ್ಹ ವಾದ ಮಂಡಿಸಿದ್ದಾರೆ. ಹೊಂಬೆಗೌಡ ಶಾಂತಿ ಭೂಷಣ್ ಅವರು ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಮುಖ ಕಾನೂನು ತಜ್ಞರು. ಈ ಹಿಂದೆ ಕರ್ನಾಟಕ ಹೈಕೋರ್ಟ್‌ಗೆ ಕೇಂದ್ರ ಸರ್ಕಾರದ ಸಹಾಯಕ ಸಾಲಿಸಿಟರ್ ಜನರಲ್ ಆಗಿ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ.

ಖಾಲಿ ಹುದ್ದೆಗಳ ಭರ್ತಿಗೆ ವೇಗ

ಇತ್ತೀಚೆಗಷ್ಟೇ ಕೇಂದ್ರ ಸರ್ಕಾರವು ಕರ್ನಾಟಕ ಹೈಕೋರ್ಟ್ಗೆ ಮೂವರು ನ್ಯಾಯಾಂಗ ಅಧಿಕಾರಿಗಳನ್ನು ಹೆಚ್ಚುವರಿ ನ್ಯಾಯಮೂರ್ತಿಗಳಾಗಿ ನೇಮಕ ಮಾಡಲು ಅನುಮೋದನೆ ನೀಡಿತ್ತು. ಆ ನೇಮಕಾತಿಯ ಬಳಿಕ ಹೈಕೋರ್ಟ್‌ನ ಕಾರ್ಯನಿರ್ವಹಣಾ ನ್ಯಾಯಮೂರ್ತಿಗಳ ಸಂಖ್ಯೆ 48ಕ್ಕೆ ತಲುಪಿತ್ತು.

ರಾಜ್ಯ ಹೈಕೋರ್ಟ್ಗೆ ಒಟ್ಟು 62 ನ್ಯಾಯಮೂರ್ತಿಗಳ ಹುದ್ದೆಗಳು ಮಂಜೂರಾಗಿದ್ದು, ಸದ್ಯ 14 ಹುದ್ದೆಗಳು ಇನ್ನೂ ಖಾಲಿ ಉಳಿದಿವೆ. ಈಗ ಕೊಲಿಜಿಯಂ ಶಿಫಾರಸ್ಸು ಮಾಡಿರುವ ಆರೂ ವಕೀಲರ ನೇಮಕಾತಿ ಪ್ರಕ್ರಿಯೆ ಪೂರ್ಣಗೊಂಡರೆ, ಖಾಲಿ ಹುದ್ದೆಗಳ ಸಂಖ್ಯೆ 8ಕ್ಕೆ ಇಳಿಕೆಯಾಗಲಿದೆ. ಬಾಕಿ ಉಳಿದಿರುವ ಲಕ್ಷಾಂತರ ಪ್ರಕರಣಗಳ ಶೀಘ್ರ ವಿಲೇವಾರಿಗೆ ಇದು ನೆರವಾಗಲಿದೆ. ಕೊಲಿಜಿಯಂ ಸಲ್ಲಿಸಿರುವ ಶಿಫಾರಸುನ್ನು ಶೀಘ್ರವೇ ಕೇಂದ್ರ ಸರ್ಕಾರ ಪರಿಶೀಲಿಸಿ, ಅಧಿಕೃತ ಆದೇಶ ಹೊರಡಿಸುವ ನಿರೀಕ್ಷೆಯಿದೆ.

Read More
Next Story