x

‘ಹೋಮ್‌ಮೇಕರ್’ ಕೇವಲ ಮಹಿಳೆಯರಷ್ಟೇ ಅಲ್ಲ, ಪುರುಷರೂ ಹೌದು – ಹೈಕೋರ್ಟ್ ಮಹತ್ವದ ತೀರ್ಪು

ಮನೆಯಲ್ಲಿ ಅಡುಗೆ ಮಾಡುವುದು, ಮಕ್ಕಳನ್ನು ನೋಡಿಕೊಳ್ಳುವುದು, ವೃದ್ಧರ ಆರೈಕೆ, ಮನೆಯ ಖರ್ಚು ನಿರ್ವಹಣೆ, ಸ್ವಚ್ಛತೆ... ಇವೆಲ್ಲವೂ ಕೆಲಸವೇ? ಸಂಬಳ ಸಿಗುವುದಿಲ್ಲ ಎಂಬ ಕಾರಣಕ್ಕೆ ಗೃಹಿಣಿಯ ಶ್ರಮಕ್ಕೆ ಆರ್ಥಿಕ ಮೌಲ್ಯ ಇಲ್ಲವೇ? ಈ ಪ್ರಶ್ನೆಗಳಿಗೆ ಕರ್ನಾಟಕ ಹೈಕೋರ್ಟ್‌ನ ಮಹತ್ವದ ತೀರ್ಪು ಹೊಸ ಆಯಾಮ ನೀಡಿದೆ.


ಮನೆಯಲ್ಲಿ ದಿನವಿಡೀ ದುಡಿಯುವ ಗೃಹಿಣಿಯ ಕೆಲಸಕ್ಕೆ ಸಂಬಳ ಸಿಗುವುದಿಲ್ಲ ಎಂಬ ಕಾರಣಕ್ಕೆ ಆ ಶ್ರಮಕ್ಕೆ ಆರ್ಥಿಕ ಮೌಲ್ಯವೇ ಇಲ್ಲವೇ? ಅಥವಾ ಮನೆಗೆಲಸ ನಿಭಾಯಿಸುವ ಪುರುಷನನ್ನು ಸಮಾಜ ಭಿನ್ನವಾಗಿ ನೋಡಬೇಕೇ? ಈ ಎಲ್ಲಾ ಸಮಾಜಿಕ ಹಾಗೂ ಕಾನೂನಾತ್ಮಕ ಪ್ರಶ್ನೆಗಳಿಗೆ ಕರ್ನಾಟಕ ಹೈಕೋರ್ಟ್ ಮೋಟಾರು ವಾಹನ ಅಪಘಾತ ಪರಿಹಾರ ಪ್ರಕರಣವೊಂದರ ವಿಚಾರಣೆ ನಡೆಸಿ ಮಹತ್ವದ ತೀರ್ಪು ನೀಡಿದೆ.

ಪ್ರಕರಣದ ಹಿನ್ನೆಲೆ ಮತ್ತು ಸುಪ್ರೀಂ ತೀರ್ಪಿನ ಆಧಾರ ಬಯೋಟೆಕ್ನಾಲಜಿಯಲ್ಲಿ ಸ್ನಾತಕೋತ್ತರ ಪದವಿ (M.Sc) ಪಡೆದಿದ್ದ ಪಂಪಾಪಾಲ್ ಎಂಬ ಮಹಿಳೆ 2013ರ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಶಾಶ್ವತ ದೈಹಿಕ ಅಂಗವೈಕಲ್ಯಕ್ಕೆ ಒಳಗಾಗಿದ್ದರು. 2018ರಲ್ಲಿ ಅಪಘಾತ ಪರಿಹಾರ ನ್ಯಾಯಾಧಿಕರಣವು ಅವರಿಗೆ 4,55,243 ರೂ. ಪರಿಹಾರ ನಿಗದಿಪಡಿಸಿತ್ತು. ಇದನ್ನು ಪ್ರಶ್ನಿಸಿ ಕೆಎಸ್‌ಆರ್‌ಟಿಸಿ (KSRTC) ಹಾಗೂ ಸಂತ್ರಸ್ತೆ ಇಬ್ಬರೂ ಹೈಕೋರ್ಟ್ ಮೆಟ್ಟಿಲೇರಿದ್ದರು.

• ವೈದ್ಯಕೀಯ ವಿಮೆ ಹಾಗೂ ಪರಿಹಾರ: ಪಂಪಾಪಾಲ್ ಅವರ ಆಸ್ಪತ್ರೆ ವೆಚ್ಚದ ಒಂದು ಭಾಗವನ್ನು ಅವರ ವೈಯಕ್ತಿಕ ಮೆಡಿಕ್ಲೇಮ್ ವಿಮೆ ಪಾವತಿಸಿತ್ತು. "ಅದೇ ವೆಚ್ಚವನ್ನು ಮತ್ತೆ ಪರಿಹಾರವಾಗಿ ನೀಡಿದರೆ ಇಮ್ಮಡಿ ಲಾಭವಾಗುತ್ತದೆ" ಎಂದು ಕೆಎಸ್‌ಆರ್‌ಟಿಸಿ ವಾದಿಸಿತ್ತು.

• ಕೋರ್ಟ್ ನೀಡಿದ ಸ್ಪಷ್ಟನೆ: ಸುಪ್ರೀಂ ಕೋರ್ಟ್‌ನ New India Assurance Company vs Dolly Satish Gandhi ಪ್ರಕರಣವನ್ನು ಉಲ್ಲೇಖಿಸಿದ ಹೈಕೋರ್ಟ್, ವೈಯಕ್ತಿಕ ಮೆಡಿಕ್ಲೇಮ್ ಎಂಬುದು ವ್ಯಕ್ತಿ ಪ್ರೀಮಿಯಂ ಪಾವತಿಸಿ ಪಡೆದ ಹಕ್ಕು. ಅಪಘಾತಕ್ಕೆ ಕಾರಣವಾದ ಸಂಸ್ಥೆಯ ಕಾನೂನುಬದ್ಧ ಹೊಣೆಗಾರಿಕೆಯಿಂದ ಇದನ್ನು ಕಡಿತಗೊಳಿಸಲು ಬರುವುದಿಲ್ಲ ಎಂದು ವಾದವನ್ನು ತಳ್ಳಿಹಾಕಿತು.

ಹೈಕೋರ್ಟ್ ನೀಡಿದ 4 ಪ್ರಮುಖ ಕಾನೂನು ವ್ಯಾಖ್ಯಾನಗಳು

• ಉನ್ನತ ಶಿಕ್ಷಣ ಪಡೆದಿದ್ದರೂ ‘ಹೋಮ್‌ಮೇಕರ್’: ಪಂಪಾಪಾಲ್ M.Sc ಮುಗಿಸಿ ಹಿಂದೆ ಉಪನ್ಯಾಸಕಿಯಾಗಿದ್ದರು ಎಂಬ ಕಾರಣಕ್ಕೆ ಅವರನ್ನು 'ಗೃಹಿಣಿ' ಎಂದು ಪರಿಗಣಿಸದಿರಲು ಸಾಧ್ಯವಿಲ್ಲ. ಒಬ್ಬ ವ್ಯಕ್ತಿ ಎಂಜಿನಿಯರ್, ವೈದ್ಯ ಅಥವಾ ಡಾಕ್ಟರೇಟ್ ಹೊಂದಿದ್ದರೂ, ಪ್ರಸ್ತುತ ಉದ್ಯೋಗದಲ್ಲಿರದೆ ಮನೆಯ ಜವಾಬ್ದಾರಿ ವಹಿಸಿಕೊಂಡಿದ್ದರೆ ಆಕೆಯನ್ನೂ 'ಹೋಮ್‌ಮೇಕರ್' ಎಂದೇ ಪರಿಗಣಿಸಬೇಕು.

• ಲಿಂಗ ತಟಸ್ಥ ಪದ (Gender-Neutral Term): ‘ಹೋಮ್‌ಮೇಕರ್’ ಎಂಬುದು ಮಹಿಳೆಗೆ ಮಾತ್ರ ಸೀಮಿತವಾದ ಪದವಲ್ಲ. ಮನೆಯ ನಿರ್ವಹಣೆ, ಅಡುಗೆ, ಮಕ್ಕಳ ಪಾಲನೆ ಹಾಗೂ ವೃದ್ಧರ ಆರೈಕೆ ಮಾಡುವ ಪುರುಷನನ್ನೂ ‘ಹೋಮ್‌ಮೇಕರ್’ ಎಂದೇ ಕರೆಯಬೇಕು.

• ಸಂಬಳವಿಲ್ಲದ ಶ್ರಮಕ್ಕೂ ಇದೆ ಆರ್ಥಿಕ ಮೌಲ್ಯ: Arun Kumar Agrawal (2010) ಮತ್ತು Kirti (2021) ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನಂತೆ, ಹೋಮ್‌ಮೇಕರ್‌ಗೆ ಸಂಬಳದ ಚೀಟಿ (Pay Slip) ಇಲ್ಲ ಎಂಬ ಕಾರಣಕ್ಕೆ ಆಕೆಯ ಶ್ರಮವನ್ನು 'ಶೂನ್ಯ ಆದಾಯ' ಎನ್ನಲಾಗುವುದಿಲ್ಲ. ಪರಿಹಾರ ಲೆಕ್ಕಾಚಾರದ ವೇಳೆ ಅದಕ್ಕೆ 'ಕಾಲ್ಪನಿಕ ಆದಾಯ' (Notional Income) ನಿಗದಿಪಡಿಸುವುದು ಕಡ್ಡಾಯ.

• 'ಹೌಸ್ ವೈಫ್' ಮತ್ತು 'ಹೌಸ್ ಹಸ್ಬೆಂಡ್' ಚರ್ಚೆ: ಮನೆಗೆಲಸ ಎಂದರೆ 'ಮಹಿಳೆಯ ಕೆಲಸ' ಎಂಬ ಸಾಂಪ್ರದಾಯಿಕ ಮನಸ್ಥಿತಿಯಿಂದಾಗಿ ಅದೇ ಕೆಲಸ ಮಾಡುವ ಪುರುಷನನ್ನು ಸಮಾಜ ಅಪವಾದದ ಕಣ್ಣಿನಿಂದ ನೋಡುತ್ತದೆ. ಆದರೆ ಹೈಕೋರ್ಟ್, 'ಹೋಮ್‌ಮೇಕರ್' ಎಂಬುದು ಲಿಂಗ ಅಥವಾ ಸಂಬಂಧದ ವ್ಯಾಖ್ಯಾನವಲ್ಲ, ಅದು ಮನೆಯ ಜವಾಬ್ದಾರಿಯ ಸಂಕೇತ ಎಂದು ಸ್ಪಷ್ಟಪಡಿಸಿದೆ.



Read More
Next Story